ಬೆಂಗಳೂರು: 2023–24ನೇ ಹಣಕಾಸು ವರ್ಷದ ಅಕ್ಟೋಬರ್–ಡಿಸೆಂಬರ್ ತ್ರೈಮಾಸಿಕದಲ್ಲಿ ಖಾಸಗಿ ವಲಯದ ಕರೂರ್ ವೈಶ್ಯ ಬ್ಯಾಂಕ್ ಶೇ 42.56ರಷ್ಟು ನಿವ್ವಳ ಲಾಭ ಗಳಿಸಿದೆ.
2022–23ರ ಮೂರನೇ ತ್ರೈಮಾಸಿಕದಲ್ಲಿ ₹289 ಕೋಟಿ ನಿವ್ವಳ ಲಾಭ ದಾಖಲಿಸಿದ್ದ ಬ್ಯಾಂಕ್, ಡಿಸೆಂಬರ್ ತ್ರೈಮಾಸಿಕದಲ್ಲಿ ₹412 ಕೋಟಿ ಲಾಭ ಗಳಿಸಿದೆ.
2023ರ ಡಿಸೆಂಬರ್ 31ಕ್ಕೆ ಕೊನೆಗೊಂಡ ಪ್ರಸಕ್ತ ಹಣಕಾಸು ವರ್ಷದ 9ನೇ ತಿಂಗಳಲ್ಲಿ ಬ್ಯಾಂಕ್‌ನ ನಿವ್ವಳ ಲಾಭವು ಹಿಂದಿನ ಅವಧಿಯಲ್ಲಿದ್ದ ₹768 ಕೋಟಿಯಿಂದ ₹1,149 ಕೋಟಿಗೆ (ಶೇ 49.61) ಹೆಚ್ಚಳವಾಗಿದೆ.
ಬ್ಯಾಂಕ್ ವರಮಾನವು ಈ ತ್ರೈಮಾಸಿಕದಲ್ಲಿ ₹2,012 ಕೋಟಿಯಿಂದ ₹2,497 ಕೋಟಿಗೆ ಏರಿಕೆಯಾಗಿದೆ. ಒಟ್ಟಾರೆ ವ್ಯವಹಾರವು ₹1.38 ಲಕ್ಷ ಕೋಟಿಯಿಂದ ₹1.58 ಲಕ್ಷ ಕೋಟಿಗೆ (ಶೇ 14.74) ಹೆಚ್ಚಳವಾಗಿದೆ ಎಂದು ಬ್ಯಾಂಕ್ ತಿಳಿಸಿದೆ.
ಒಟ್ಟು ಅನುತ್ಪಾದಕ ಆಸ್ತಿಗಳು (ಜಿಎನ್‌ಪಿಎ) 112 ಅಂಶಗಳಷ್ಟು ಸುಧಾರಿಸಿದೆ. ವಸೂಲಾಗದ ಸಾಲದ ಸರಾಸರಿ ಪ್ರಮಾಣವು (ಎನ್‌ಪಿಎ) ₹550 ಕೋಟಿಯಿಂದ ₹305 ಕೋಟಿಗೆ ಇಳಿಕೆಯಾಗಿದೆ.
‘ಡಿಸೆಂಬರ್ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಬೆಳವಣಿಗೆ, ಲಾಭ ಮತ್ತು ಆಸ್ತಿ ಗುಣಮಟ್ಟದ ವಿಷಯದಲ್ಲಿ ಸ್ಥಿರವಾದ ಕಾರ್ಯಕ್ಷಮತೆ ಪ್ರದರ್ಶಿಸಿದ್ದೇವೆ’ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಬಿ. ರಮೇಶ್ ಬಾಬು ತಿಳಿಸಿದ್ದಾರೆ.