ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಕುಲವೃತ್ತಿಗೆ ‘ಭಾರ’ವಾದ ಬಂಗಾರ ದರ

ಕಾರವಾರದಲ್ಲಿ ಸಾಂಪ್ರದಾಯಿಕ ಚಿನ್ನಾಭರಣ ಮಾಡುವವರ ಸಂಖ್ಯೆ ಗಣನೀಯ ಇಳಿಕೆ
Last Updated 21 ಫೆಬ್ರುವರಿ 2020, 20:42 IST
ಅಕ್ಷರ ಗಾತ್ರ

ಕಾರವಾರ: ನಗರವು ಪ್ರವಾಸೋದ್ಯಮಕ್ಕೆ ಪ್ರಸಿದ್ಧವಾದಷ್ಟೇಸಾಂಪ್ರದಾಯಿಕ ಚಿನ್ನಾಭರಣಗಳಿಗೂ ಹೆಸರುವಾಸಿಯಾಗಿದೆ. ಒಂದು ಕಾಲದಲ್ಲಿ ಉತ್ತುಂಗದಲ್ಲಿದ್ದ ಇಲ್ಲಿನ ‘ಸೋನಾರ್’ (ಚಿನ್ನಾಭರಣ ಮಾಡುವವರು) ವೃತ್ತಿ ಈಗ ಕ್ಷೀಣಿಸುತ್ತಿದೆ. ಬಂಗಾರದ ದರ ಏರಿಕೆಯು ಇಲ್ಲಿನ ಸಾವಿರಾರು ಮಂದಿಯ ಕುಲವೃತ್ತಿಯನ್ನೇಕಸಿದುಕೊಂಡಿದೆ.

ನಗರದ ಸೋನಾರ್‌ ವಾಡಾ, ಕೋಡಿಬಾಗ, ಕಾಜುಬಾಗ ಬಡಾವಣೆಗಳನೂರಾರು ಕುಟುಂಬಗಳಿಗೆಆಭರಣ ತಯಾರಿಕೆಯೇ ಜೀವನಾಧಾರ.ಚಿನ್ನಾಭರಣ ಉದ್ಯಮಿಗಳು ನೀಡುವ ಬಂಗಾರದಬಿಸ್ಕತ್ತನ್ನು ಕರಗಿಸಿ ಮನೆಗಳಲ್ಲೇ ಒಡವೆಗಳನ್ನು ಸಿದ್ಧಪಡಿಸುವುದು ಹಲವು ತಲೆಮಾರುಗಳಿಂದ ಮಾಡುತ್ತಿರುವ ವೃತ್ತಿಯಾಗಿದೆ. ಆದರೆ, ಬದಲಾದ ಪರಿಸ್ಥಿತಿಯಲ್ಲಿ ವೃತ್ತಿ ಬದಲಿಸಬೇಕಾದ ಅನಿವಾರ್ಯತೆ ಒದಗಿದೆ.

‘ಐದಾರು ವರ್ಷಗಳ ಹಿಂದೆ 10 ಗ್ರಾಂ ಬಂಗಾರದದರವು ₹ 28 ಸಾವಿರದ ಆಸುಪಾಸಿನಲ್ಲಿತ್ತು. ಚಿನ್ನಾಭರಣದ ಉದ್ಯಮಿಗಳಿಂದ ನಮಗೆ ತಿಂಗಳಿಗೆ ಕನಿಷ್ಠವೆಂದರೂ ಅರ್ಧ ಕೆ.ಜಿ.ಯಷ್ಟು ಒಡವೆ ಸಿದ್ಧಪಡಿಸಲು ಸೂಚನೆಯಿರುತ್ತಿತ್ತು. ಆಗ ನಮ್ಮ ಆದಾಯ ತಿಂಗಳಿಗೆ ಸರಾಸರಿ ₹ 25 ಸಾವಿರವಿತ್ತು. ಚಿನ್ನದದರ ₹ 35 ಸಾವಿರ ದಾಟಿದ ಬಳಿಕ ಕೆಲಸ ಕಡಿಮೆಯಾಯಿತು. ಈಗ ತಿಂಗಳಿಗೆ 50 ಗ್ರಾಂನ ಕೆಲಸ ಸಿಕ್ಕರೂ ಅದೃಷ್ಟ ಎಂಬಂತಾಗಿದೆ’ ಎನ್ನುತ್ತಾರೆ ಕಾಜುಬಾಗದ ರಮೇಶ ಶೇಟ್.

‘ಮೊದಲು ಐದು ಗ್ರಾಂ ತೂಕದ ಒಡವೆಖರೀದಿಸುತ್ತಿದ್ದ ಮಧ್ಯಮ ವರ್ಗದವರು ಈಗ ಎರಡು ಗ್ರಾಂಗೆ ಸೀಮಿತವಾಗಿದ್ದಾರೆ. ಇಲ್ಲಿ ತಯಾರಾದ ಆಭರಣಗಳು ದುಬೈ, ಮುಂಬೈ, ಕೇರಳದ ವಿವಿಧೆಡೆ, ದಾವಣಗೆರೆ, ಹಾವೇರಿಯಲ್ಲಿ ಮಾರಾಟವಾಗುತ್ತಿದ್ದವು. ಪ್ರಸ್ತುತ ಅತ್ಯಲ್ಪಬೇಡಿಕೆಯಿದೆ.ಸ್ಥಳೀಯ ಅಂಗಡಿಗಳಲ್ಲೂ ವ್ಯಾಪಾರವಿಲ್ಲ’ಎಂದು ಚಿನ್ನಾಭರಣ ತಯಾರಕ ರಮೇಶ ರೇವಣಕರ್ ಬೇಸರಿಸುತ್ತಾರೆ.ಗೃಹೋದ್ಯಮದ ಮಾದರಿಯಲ್ಲಿ ವೃತ್ತಿ ನಡೆಸುತ್ತಿದ್ದ ಅವರಿಗೂಸದ್ಯ ಕೆಲಸವಿಲ್ಲ.

ಬೇರೆ ವೃತ್ತಿಗಳತ್ತ ಚಿತ್ತ: ‘ಕೆಲವು ವರ್ಷಗಳ ಹಿಂದೆ ಕೆ.ಜಿ.ಗಟ್ಟಲೆ ಚಿನ್ನಾಭರಣ ತಯಾರಿಸುತ್ತಿದ್ದಹಲವರು ಈಗ ಜೀವನೋಪಾಯಕ್ಕಾಗಿಹೋಟೆಲ್‌ಗಳಲ್ಲಿ ಸಪ್ಲೈಯರ್ ಆಗಿದ್ದಾರೆ. ಲಿಂಬುಸೋಡಾ ಅಂಗಡಿ, ಆಮ್ಲೆಟ್ ವ್ಯಾಪಾರ ಮಾಡುತ್ತಿದ್ದಾರೆ. ಕೆಲವರು ಒಂದು ಗ್ರಾಂ ಚಿನ್ನಾಭರಣ (ಒನ್ ಗ್ರಾಂ ಗೋಲ್ಡ್) ಮಾಡಲೂ ಆರಂಭಿಸಿದ್ದಾರೆ’ ಎನ್ನುತ್ತಾರೆ ದೈವಜ್ಞ ಸೇವಾ ಸಂಘದ ಕಾರ್ಯದರ್ಶಿ ಶ್ರೀಕಾಂತ.

ಕೆಲವು ವರ್ಷಗಳ ಹಿಂದೆ ವಿಶೇಷ ಆರ್ಥಿಕ ವಲಯದಡಿ ಕಾರವಾರದಲ್ಲಿ‘ಜುವೆಲ್ಲರಿ ಪಾರ್ಕ್‌’ ಸ್ಥಾಪಿಸಲು ಕೇಂದ್ರಸರ್ಕಾರ ಮುಂದಾಗಿತ್ತು. ಆದರೆ, ಬೇರೆ ರಾಜ್ಯಗಳ ಆಭರಣ ತಯಾರಕರಿಂದ ಪೈಪೋಟಿ ಹೆಚ್ಚುವ ಆತಂಕದಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಬಳಿಕ ಪ್ರಸ್ತಾವ ನನೆಗುದಿಗೆ ಬಿದ್ದಿದೆ.

‘ಬಂಗಾಳಿಗಳ ಪ್ರಭಾವ’
‘ಪಶ್ಚಿಮ ಬಂಗಾಳದವ್ಯಾಪಾರಿಗಳೂ ಇಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಆವರು ಕಡುಬಡ ಕುಟುಂಬದ ಯುವಕರನ್ನು ಕೆಲಸಕ್ಕೆ ಕರೆದುಕೊಂಡು ಬರುತ್ತಾರೆ. ಅವರಿಗೆ ಊಟ, ವಸತಿ ಒದಗಿಸಿಕನಿಷ್ಠವೇತನಕ್ಕೆ ದುಡಿಸಿಕೊಳ್ಳುತ್ತಾರೆ’ ಎಂದುದೈವಜ್ಞ ಸೇವಾ ಸಂಘದ ಕಾರ್ಯದರ್ಶಿ ಶ್ರೀಕಾಂತ ದೂರುತ್ತಾರೆ.

‘ಕುಲವೃತ್ತಿಯನ್ನಾಗಿ ಮಾಡುತ್ತಿರುವನಮ್ಮ ತಂಡದಲ್ಲಿ ಒಬ್ಬರು ಅಥವಾ ಇಬ್ಬರೇಇರುತ್ತೇವೆ. ನಾವು 10 ದಿನಗಳಲ್ಲಿ ಮಾಡುವ ಕೆಲಸವನ್ನು ಅವರು ಮೂರೇದಿನದಲ್ಲಿಮಾಡುತ್ತಾರೆ’ ಎಂದೂ ಹೇಳುತ್ತಾರೆ.

*
ಜಿಎಸ್‌ಟಿ ಜಾರಿಯಾದ ಬಳಿಕ ಚಿನ್ನದ ಮೇಲಿನ ತೆರಿಗೆಯು ಸುಮಾರು ಶೇ 14ರಷ್ಟಾಗಿದೆ. ಮೊದಲು ಶೇ 12.4ರಷ್ಟಿತ್ತು. ಇದು ಕೂಡ ವೃತ್ತಿಯಲ್ಲಿ ಹಿನ್ನಡೆಗೆ ಕಾರಣವಾಗಿದೆ.
-ಶ್ರೀಕಾಂತ, ದೈವಜ್ಞ ಸೇವಾ ಸಂಘದ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT