ಮಂಗಳೂರು: ಕರ್ಣಾಟಕ ಬ್ಯಾಂಕ್ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಶೇ 19.79 ರಷ್ಟು ಪ್ರಗತಿ ಸಾಧಿಸಿದ್ದು, ₹111.86 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ನಿವ್ವಳ ಲಾಭ ₹93.38 ಕೋಟಿ ಇತ್ತು.
ಎರಡನೇ ತ್ರೈಮಾಸಿಕದಲ್ಲಿ ಬ್ಯಾಂಕ್ ಒಟ್ಟು ₹1.13 ಲಕ್ಷ ಕೋಟಿ ಮೊತ್ತದ ವಹಿವಾಟು ನಡೆಸಿದ್ದು, ಶೇ 16.63 ರಷ್ಟು ವೃದ್ಧಿ ಸಾಧಿಸಿದೆ. ಬ್ಯಾಂಕಿನ ಠೇವಣಿ ₹63,885 ಕೋಟಿಯಾಗಿದ್ದು, ₹49,970 ಕೋಟಿ ಸಾಲ ವಿತರಣೆ ಮಾಡಲಾಗಿದೆ.
ಬ್ಯಾಂಕಿನ ಕ್ರೆಡಿಟ್ ಡೆಪಾಸಿಟ್ (ಸಿಡಿ) ಅನುಪಾತ ಶೇ 78.22 ರಷ್ಟಾಗಿದ್ದು, ಸಾರ್ವಕಾಲಿಕ ದಾಖಲೆಯಾಗಿದೆ. ನಿರ್ವಹಣಾ ವೆಚ್ಚಗಳನ್ನು ಗಮನಾರ್ಹ ರೀತಿಯಲ್ಲಿನಿಯಂತ್ರಿಸಲಾಗಿದೆ. ಈ ತ್ರೈಮಾಸಿಕದಲ್ಲಿ ಅನುತ್ಪಾದಕ ಸ್ವತ್ತುಗಳು (ಎನ್‌ಪಿಎ)ಶೇ 4.66 ರಷ್ಟಿದೆ.
ಕಳೆದ ತ್ರೈಮಾಸಿಕದಲ್ಲಿ ಇದು ಶೇ 4.72 ರಷ್ಟಿತ್ತು. ಬ್ಯಾಂಕಿನ ಗ್ರಾಹಕರ ಸಂಖ್ಯೆಯು ಒಂದು ಕೋಟಿ ದಾಟಿದೆ.
‘ಬ್ಯಾಂಕಿನ ಎರಡನೇ ತ್ರೈಮಾಸಿಕದ ವಹಿವಾಟು ನಮ್ಮ ನಿರೀಕ್ಷೆಗೆ ಅನುಗುಣವಾಗಿ ಉತ್ತಮವಾಗಿದೆ. ನಾವು ಉತ್ತಮ ಸ್ವತ್ತುಗಳು ಹಾಗೂ ಆರೋಗ್ಯಕರ ವಹಿವಾಟಿನೆಡೆಗೆ ಹೆಚ್ಚಿನ ಗಮನ ನೀಡಿರುವುದರಿಂದ ಈ ಸಾಧನೆ ಸಾಧ್ಯವಾಗಿದೆ’ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ತಿಳಿಸಿದ್ದಾರೆ.
‘ದಿನದಿಂದ ದಿನಕ್ಕೆ ಅನುತ್ಪಾದಕ ಸ್ವತ್ತು (ಎನ್‌ಪಿಎ)ಗಳು ಕಡಿಮೆಯಾಗುತ್ತಿರುವ ಸಮಾಧಾನಕರ ಸಂಗತಿ. ಮುಂದೆಯೂ ಬ್ಯಾಂಕ್ ಶ್ರದ್ಧೆ, ಪರಿಶ್ರಮದಿಂದ ಕಾರ್ಯನಿರ್ವಹಿಸಿ, ಸರ್ವಾಂಗೀಣ ಬೆಳವಣಿಗೆಯತ್ತ ಗಮನ ನೀಡಲಿದೆ’ ಎಂದೂ ಅವರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.