ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತವೈಭವದತ್ತ ಕೆಐಒಸಿಎಲ್‌

₹3,500 ಕೋಟಿ ಹೂಡಿಕೆ, ರಫ್ತು ಮಾರುಕಟ್ಟೆ ವಿಸ್ತರಣೆಗೆ ಯೋಜನೆ
Last Updated 20 ಸೆಪ್ಟೆಂಬರ್ 2019, 19:40 IST
ಅಕ್ಷರ ಗಾತ್ರ

ಮಂಗಳೂರು: ಕುದುರೆಮುಖದಲ್ಲಿ ಗಣಿಗಾರಿಕೆ ಸ್ಥಗಿತದ ನಂತರ ನಷ್ಟದ ಹಾದಿಯಲ್ಲಿದ್ದ ಕುದುರೆಮುಖ ಕಬ್ಬಿಣ ಅದಿರು ಮತ್ತು ಖನಿಜ ಕಂಪನಿ (ಕೆಐಒಸಿಎಲ್‌), ಹಿಂದಿನ ವೈಭವಕ್ಕೆ ಮರಳುತ್ತಿದೆ. ಕಬ್ಬಿಣದ ಉಂಡೆಗಳ ಉತ್ಪಾದನೆ ಹೆಚ್ಚಿಸಲು ಯೋಜನೆ ರೂಪಿಸಿರುವ ಕೆಐಒಸಿಎಲ್‌, ರಫ್ತು ಮಾರುಕಟ್ಟೆ ವಿಸ್ತಾರಕ್ಕೆ ಮುಂದಾಗಿದೆ.

ಈಗಾಗಲೇ ಚೀನಾದ ಮಾರುಕಟ್ಟೆಗಳಿಗೆ ಕಬ್ಬಿಣದ ಉಂಡೆಗಳನ್ನು ಪೂರೈಸಲಾಗುತ್ತಿದ್ದು, ಹೆಚ್ಚುವರಿಯಾಗಿ ಜಪಾನ್, ದಕ್ಷಿಣ ಕೊರಿಯಾ, ವಿಯೆಟ್ನಾಂ, ಮಲೇಷ್ಯಾ, ಚಿಲಿಯಂತಹ ಜಾಗತಿಕ ಮಾರುಕಟ್ಟೆಗಳಿಗೆ ವಹಿವಾಟು ವಿಸ್ತರಿಸಲು ಕೆಐಒಸಿಎಲ್ ಸತತ ಪ್ರಯತ್ನ ಮಾಡುತ್ತಿದೆ.

ಕೇಂದ್ರ ಸಾರ್ವಜನಿಕ ಉದ್ಯಮ (ಸಿಪಿಎಸ್ಇ) ಸಮಾವೇಶದಲ್ಲಿ ನೀಡಿದ ಗುರಿಯಂತೆಕೆಐಒಸಿಎಲ್‌ ಇಂಗ್ಲೆಂಡ್‌ ಮಾರುಕಟ್ಟೆ ಪ್ರವೇಶಿಸಿದೆ.

₹3,500 ಕೋಟಿ ಬಂಡವಾಳ: ಮುಂದಿನ 2-3 ವರ್ಷಗಳ ಅವಧಿಯಲ್ಲಿ ₹3,500 ಕೋಟಿ ಬಂಡವಾಳ ಹೂಡಿಕೆ ಗುರಿಯೊಂದಿಗೆ ಕಂಪನಿ ಹಲವು ವಿಸ್ತರಣಾ ಯೋಜನೆಗಳನ್ನು ರೂಪಿಸಿದೆ.

ಒಡಿಶಾದ ಒಎಂಸಿ ಕಂಪನಿ ಮತ್ತು ವಿವಿಧ ಕಬ್ಬಿಣದ ಅದಿರು ಪೆಲೆಟ್ ಘಟಕ ಹೊಂದಿರುವ ಉದ್ಯಮಗಳೊಂದಿಗೆ ಉತ್ಪಾದನಾ ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡುವ ಮೂಲಕ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸಲಾಗಿದೆ.

ಆರ್ಥಿಕ ಸಬಲಿಕರಣದ ಅಂಗವಾಗಿ, ವಾರ್ಷಿಕ 2 ಲಕ್ಷ ಟನ್‌ ಸಾಮರ್ಥ್ಯದ ಡಕ್ಟೈಲ್‌ ಐರನ್‌ ಸ್ಪನ್‌ ಪೈಪ್‌ (ಡಿಐಎಸ್‌ಪಿ) ಘಟಕ ಹಾಗೂ ವಾರ್ಷಿಕ 1.79 ಲಕ್ಷ ಟನ್‌ ಸಾಮರ್ಥ್ಯದ ಕೋಕ್ ಓವನ್ ಪ್ಲಾಂಟ್ ಅನ್ನು ನಿರ್ಮಾಣ ಮಾಡಲಾಗುತ್ತಿದೆ. ಜತೆಗೆ ಬ್ಲಾಸ್ಟ್ ಫರ್ನೇಸ್ ಘಟಕದ ಆಧುನೀಕರಣಕ್ಕೂ ಯೋಜನೆ ರೂಪಿಸಿದ್ದು, ಅಧ್ಯಯನ ವರದಿಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಲ್ಲಿಸಲಾಗಿದೆ. ಅಕ್ಟೋಬರ್ ಎರಡನೇ ವಾರದಲ್ಲಿ ಸಾರ್ವಜನಿಕ ವಿಚಾರಣೆಯನ್ನೂ ನಿಗದಿಪಡಿಸಲಾಗಿದೆ.

ಜಂಟಿ ಒಪ್ಪಂದಕ್ಕೆ ಶೀಘ್ರದಲ್ಲೇ ಸಹಿ: ‘ಕೆಐಒಸಿಎಲ್ ಹಾಗೂ ವಿಶಾಖಪಟ್ಟಣದ ರಾಷ್ಟ್ರೀಯ ಇಸ್ಪಾತ್ ನಿಗಮ ಲಿಮಿಟೆಡ್‌ (ಆರ್‌ಐಎನ್‌ಎಲ್‌) ಜಂಟಿಯಾಗಿ ವಾರ್ಷಿಕ 20 ಲಕ್ಷ ಟನ್‌ ಸಾಮರ್ಥ್ಯದ ಬಂದರು ಆಧಾರಿತ ಪೆಲೆಟ್ ಘಟಕವನ್ನು ಸ್ಥಾಪಿಸಲು ಸಿದ್ಧತೆ ನಡೆಸಿವೆ. ಈ ಒಪ್ಪಂದದ ಪ್ರಕಾರ ಆರ್‌ಐಎನ್‌ಎಲ್‌, ಕಚ್ಚಾವಸ್ತು ಮತ್ತು ಮಾರುಕಟ್ಟೆಗೆ ಭದ್ರತೆಯನ್ನು ಒದಗಿಸಲಿದೆ. ಈ ನಿಟ್ಟಿನಲ್ಲಿ ಜಂಟಿ ಒಪ್ಪಂದಕ್ಕೆ ಶೀಘ್ರದಲ್ಲೇ ಸಹಿ ಹಾಕಲಾಗುವುದು’ ಎಂದು ಕೆಐಒಸಿಎಲ್‌ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಎಂ.ವಿ. ಸುಬ್ಬಾರಾವ್ ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನಲ್ಲಿ ಗಣಿಗಾರಿಕೆ ಪ್ರಾರಂಭಿಸಲು ಕೆಐಒಸಿಎಲ್‌ ಅನುಮತಿಗಾಗಿ ಕಾಯುತ್ತಿದೆ. ಅನುಮತಿಯ ನಂತರ, ವಾರ್ಷಿಕ 20 ಲಕ್ಷ ಟನ್‌ ಕಬ್ಬಿಣದ ಅದಿರು ಘಟಕ ಮತ್ತು ವಾರ್ಷಿಕ 20 ಲಕ್ಷ ಟನ್‌ ಐರನ್ ಆಕ್ಸೈಡ್ ಪೆಲ್ಲೆಟೈಸೇಶನ್ ಘಟಕವನ್ನು ಅಲ್ಲಿ ಸ್ಥಾಪಿಸಲಾಗುವುದು. ಇದಕ್ಕಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸಾರ್ವಜನಿಕ ವಿಚಾರಣೆಯನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ.

ಗರಿಷ್ಠ ರಫ್ತು
2005 ರಲ್ಲಿ ಕುದುರೆಮುಖದಲ್ಲಿ ಸ್ವಂತ ಗಣಿಗಾರಿಕೆ ಸ್ಥಗಿತಗೊಂಡ ನಂತರ, ಇದೇ ಮೊದಲಿಗೆ ಗರಿಷ್ಠ 15.2 ಲಕ್ಷ ಟನ್‌ ಕಬ್ಬಿಣದ ಉಂಡೆಗಳನ್ನು ಕೆಐಒಸಿಎಲ್‌ ರಫ್ತು ಮಾಡಿದೆ.

ಒಟ್ಟು 22.4 ಲಕ್ಷ ಟನ್ ಉತ್ಪಾದಿಸಿದ್ದು, 22.1 ಲಕ್ಷ ಟನ್ ಉಂಡೆಗಳನ್ನು ಮಾರಾಟ ಮಾಡಲಾಗಿದೆ. ಕೆಐಒಸಿಎಲ್ ಉನ್ನತ ದರ್ಜೆಯ ಹೊಸ ಪೆಲೆಟ್ ಮಾರುಕಟ್ಟೆಗೆ ಪ್ರವೇಶಿಸಿದ್ದು, ಗುಣಮಟ್ಟದ ಉಕ್ಕನ್ನು ತಯಾರಿಸಲು ಈ ಪೆಲೆಟ್ ಅನ್ನು ಬಳಸಲಾಗುತ್ತದೆ. ಅಲ್ಲದೇ, ದೇಶೀಯ ಮಾರುಕಟ್ಟೆಯ ಬೇಡಿಕೆಗಳನ್ನು ಕೆಐಒಸಿಎಲ್ ಪೂರೈಸುತ್ತಿದೆ.

*
ಕೆಐಒಸಿಎಲ್‌ ಕಬ್ಬಿಣದ ಉಂಡೆಗಳ ಉತ್ಪಾದನೆಯ ಜತೆಗೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಣಿ ಇಲಾಖೆಯಡಿ ಖನಿಜ ಪತ್ತೆ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದೆ.
-ಎಂ.ವಿ. ಸುಬ್ಬಾರಾವ್, ಕೆಐಒಸಿಎಲ್‌ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT