ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗೆಟಕುವ ಬೆಲೆಗೆ ಮನೆ: ಸಾಲದ ಪ್ರಮಾಣ ಶೇ 20–25ರಷ್ಟು ಹೆಚ್ಚಿಸುವ LIC ಗುರಿ

Published 5 ಫೆಬ್ರುವರಿ 2024, 10:17 IST
Last Updated 5 ಫೆಬ್ರುವರಿ 2024, 10:27 IST
ಅಕ್ಷರ ಗಾತ್ರ

ಮುಂಬೈ: ‘ಕೈಗೆಟಕುವ ದರದ ವಸತಿ ಸಾಲ ನೀಡುವ ಕ್ಷೇತ್ರವನ್ನು ದ್ವಿಗುಣಗೊಳಿಸುವ ಯೋಜನೆ ಹೊಂದಿರುವ ಎಲ್‌ಐಸಿ ಹೌಸಿಂಗ್ ಫೈನಾನ್ಸ್‌, ಮುಂದಿನ ಎರಡು ವರ್ಷಗಳಲ್ಲಿ ಸಾಲ ನೀಡುವ ಪ್ರಮಾಣವನ್ನು ಶೇ 20ರಿಂದ 25ರಷ್ಟು ಹೆಚ್ಚಳ ಮಾಡುವ ಉದ್ದೇಶ ಹೊಂದಿದೆ’ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

‘ವಿಮೆಯ ಅತಿ ದೊಡ್ಡ ಶಕ್ತಿಯೇ ಗೃಹ ಸಾಲ ಯೋಜನೆ. ಆದರೆ ಕಳೆದ ಡಿಸೆಂಬರ್‌ನಿಂದ ಇದರ ಬೆಳವಣಿಗೆ ದರ ಶೇ 5ರ ದರದಲ್ಲಿ ಮಂದಗತಿಯಲ್ಲಿ ಸಾಗಿದೆ. ಇದಕ್ಕೆ ಸಂಸ್ಥೆಯ ಆಂತರಿಕ ಪುನರ್‌ರಚನೆ ಹಾಗೂ ವ್ಯವಸ್ಥೆಯಲ್ಲಿನ ಬದಲಾವಣೆ ಕಾರಣ. ಕಳೆದ ಆಗಸ್ಟ್‌ನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಟಿ. ಅಧಿಕಾರಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ’ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

‘ವೇತನದಾರರು ಮತ್ತು ಅಧಿಕ ಕ್ರೆಡಿಟ್ ಸ್ಕೋರ್ ಹೊಂದಿರುವವರೇ ಈ ಮೊದಲು ನೆಚ್ಚಿನ ಗ್ರಾಹಕರಾಗಿದ್ದರು. ಇದರಿಂದಾಗಿ ಕೈಗಟಕುವ ದರದ ಗೃಹ ಸಾಲದ ಮೇಲೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗಿರಲಿಲ್ಲ. ಈ ವಿಭಾಗವೂ ಶೇ 8ರಿಂದ 10ರಷ್ಟು ಬೆಳವಣಿಗೆಯನ್ನು ಹೊಂದಿದೆ. ಹೀಗಾಗಿ ಮುಂದಿನ ಎರಡು ವರ್ಷಗಳಿಗೆ ಈ ಕ್ಷೇತ್ರವನ್ನೂ ಒಳಗೊಂಡು ಶೇ 20ರಿಂದ 25ರಷ್ಟು ಸಾಲ ನೀಡುವ ಗುರಿಯನ್ನು ಹೊಂದಲಾಗಿದೆ’ ಎಂದು ಟಿ.ಅಧಿಕಾರಿ ಹೇಳಿದ್ದಾರೆ.

‘ಈ ವಿಭಾಗಕ್ಕೆ ಸರ್ಕಾರದಿಂದಲೂ ಸಾಕಷ್ಟು ನೆರವು ಸಿಗುವ ಭರವಸೆ ಇದೆ. ಪ್ರಧಾನಮಂತ್ರಿ ಆವಾಸ್ ಯೋಜನೆ ಮೂಲಕ ಕೈಗೆಟಕುವ ದರದಲ್ಲಿ ಮನೆ ನೀಡುವ ಯೋಜನೆಯಿಂದ ಕಂಪನಿಗೂ ಸಾಕಷ್ಟು ಅನುಕೂಲಗಳಿವೆ’ ಎಂದು ಅಧಿಕಾರಿ ಹೇಳಿದ್ದಾರೆ.

‘ಸದ್ಯದ ಪರಿಸ್ಥಿತಿಯಲ್ಲಿ ಮಾರುಕಟ್ಟೆ ಉತ್ತಮವಾಗಿದೆ. ರಿಯಲ್ ಎಸ್ಟೇಟ್‌ ಕ್ಷೇತ್ರಕ್ಕೆ ಬಂದಲ್ಲಿ ಹಣಕಾಸು ಸಂಸ್ಥೆಗಳ ನಡುವೆ ಬಡ್ಡಿ ದರದಲ್ಲಿ ಪೈಪೋಟಿ ಇದೆ. ಸದ್ಯ ಸಾಲವು ವಾರ್ಷಿಕ ಶೇ 8.75ರ ದರದಲ್ಲಿದೆ. ಆದರೆ ಎಲ್‌ಐಸಿ ಗೃಹ ಸಾಲ ಯೋಜನೆಯು ಸದ್ಯ ಶೇ 34ರಷ್ಟು ಎನ್‌ಪಿಎ (ವಸೂಲಾಗದ ಸಾಲ) ಎಂದಾಗಿವೆ. ಹೀಗಾಗಿ ಈ ವಿಭಾಗ ಕುರಿತು ಹೆಚ್ಚಿನ ಮುತುವರ್ಜಿ ವಹಿಸುವ ಅಗತ್ಯವಿದೆ’ ಎಂದು ವಿವರಿಸಿದ್ದಾರೆ.

‘13 ವರ್ಷಗಳ ಹಿಂದಿದ್ದ ಸಾಲ ನೀಡುವ ವ್ಯವಸ್ತೆಯನ್ನು ಡಿಜಿಟಲೀಕರಣಗೊಳಿಸಲಾಗಿದೆ. ಸಾಲದ ಮೌಲ್ಯಮಾಪನವನ್ನು ಹೊಸದಾಗಿ ತೆರೆಯಲಾಗಿದ್ದ ಕ್ಲಸ್ಟರ್‌ ಕಚೇರಿಗೆ ವರ್ಗಾಯಿಸಲಾಗಿತ್ತು. ಇದು ಬೆಳವಣಿಗೆ ದರವನ್ನು ಕುಂಠಿತಗೊಳಿಸಿತ್ತು. ವ್ಯವಸ್ಥಾಪನಾ ಮಂಡಳಿಯಲ್ಲಿನ ಬದಲಾವಣೆಗಳು ಇದಕ್ಕೆ ಸಾಥ್ ನೀಡಿದವು. ಆದರೆ ಸಾಲ ನೀಡುವ ಪ್ರಮಾಣ ಭವಿಷ್ಯದಲ್ಲಿ ಸಾಧಾರಣ ಬೆಳವಣಿಗೆ ಕಾಣಲಿದೆ’ ಎಂದು ಅಧಿಕಾರಿ ಹೇಳಿದ್ದಾರೆ.

’2025ರ ಹೊತ್ತಿಗೆ ಶೇ 15ರ ದರದಲ್ಲಿ ಸಾಲ ನೀಡುವ ಕ್ಷೇತ್ರ ಬೆಳವಣಿಗೆ ಕಾಣಲಿದೆ. HDFC ವಿಲೀನದಿಂದ ಗೃಹ ಸಾಲ ಯೋಜನೆಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ಆದರೆ ಎಲ್‌ಐಸಿ ಹೌಸಿಂಗ್ ಫೈನಾನ್ಸ್‌ಗೆ ಬಾಧ್ಯತೆಯ ವಿಷಯದಲ್ಲಿ ಒಂದಷ್ಟು ಲಾಭವಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT