ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಸಬಲೀಕರಣಕ್ಕೆ ಜೀವ ವಿಮೆ ಗುರಿ

Last Updated 23 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಮಹಿಳೆ ಇಂದು ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ದೃಢವಾದ ಹೆಜ್ಜೆಗಳನ್ನಿಡುತ್ತಿದ್ದಾಳೆ. ದುಡಿದು ಸಂಪಾದಿಸುವ ಮೂಲಕ ಮಹಿಳೆಯು ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗುತ್ತಿದ್ದಾಳೆ. ಅಥವಾ ಆಕೆಯೇ ಕುಟುಂಬದ ಮುಖ್ಯ ಆಧಾರ ಸ್ತಂಭವಾಗುತ್ತಿದ್ದಾಳೆ. ಆದರೆ, ಹಣಕಾಸು ನಿರ್ವಹಣೆಯ ವಿಚಾರದಲ್ಲಿ ಮಾತ್ರ ಆಕೆ ಹಿಂದೆ ಬಿದ್ದಿದ್ದಾಳೆ. ನಿಶ್ಚಿತ ಠೇವಣಿ, ಮ್ಯೂಚುವಲ್‌ ಫಂಡ್‌ಗಳಿಗೆ ಹೋಲಿಸಿದರೆ ಮಹಿಳೆಯರು ಜೀವವಿಮೆಯಲ್ಲಿ ಹಣ ತೊಡಗಿಸುವ ಪ್ರಮಾಣ ತೀರ ಕಡಿಮೆಯಾಗಿದೆ. ಜೀವವಿಮೆ ಖರೀದಿಸುವ ಸಂಪೂರ್ಣ ಜವಾಬ್ದಾರಿಯನ್ನು ಆಕೆ ಪತಿಗೆ ವರ್ಗಾಯಿಸಿರುತ್ತಾಳೆ.

ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಾಗ ಅಥವಾ ಕುಟುಂಬದಲ್ಲಿ ಯಾರಿಗಾದರೂ ತೀವ್ರ ಆರೋಗ್ಯ ಸಮಸ್ಯೆ ಎದುರಾದಾಗ, ಆರ್ಥಿಕ ಸಂಕಷ್ಟ ಎದುರಾಗದಂತೆ ಬದುಕಿಗೆ ಭದ್ರತೆ ಒದಗಿಸುವುದು ಜೀವವಿಮೆಯ ಪ್ರಮುಖ ಉದ್ದೇಶ. ಮಹಿಳೆಯರು ತಮ್ಮ ವಯಸ್ಸು, ವೃತ್ತಿ, ವೈವಾಹಿಕ ಸ್ಥಿತಿ ಏನೇ ಇರಲಿ, ದೀರ್ಘಾವಧಿಯ ಆರ್ಥಿಕ ಲಾಭವನ್ನು ಗಮನದಲ್ಲಿಟ್ಟುಕೊಂಡು ಜೀವವಿಮೆಯಲ್ಲಿ ಹಣ ಹೂಡಿಕೆ ಮಾಡುವುದರಿಂದ ಅನೇಕ ಅನುಕೂಲಗಳಿವೆ ಎಂಬುದನ್ನು ಮರೆಯಬಾರದು.

ಕುಟುಂಬಕ್ಕೆ ಭದ್ರತೆ: ನಿಮ್ಮ ಕುಟುಂಬದಲ್ಲಿ ನೀವೊಬ್ಬರೇ ದುಡಿಯುವ ವ್ಯಕ್ತಿಯಾಗಿದ್ದರೆ, ಕುಟುಂಬಕ್ಕೆ ಯಾವ ಸಂದರ್ಭದಲ್ಲೂ ಆರ್ಥಿಕ ಸಮಸ್ಯೆ ಎದುರಾಗಬಾರದು ಎಂಬ ನಿರೀಕ್ಷೆ ನಿಮ್ಮದಾಗಿರುತ್ತದೆ. ನೀವು ಯಾವುದಾದರೂ ವಸ್ತುವನ್ನು ಅಡಮಾನ ಇಟ್ಟಿದ್ದರೆ ಅಥವಾ ಎಲ್ಲಿಂದಲಾದರೂ ಸಾಲ ಪಡೆದಿದ್ದರೆ, ನೀವು ನಿಮ್ಮ ಅಮೂಲ್ಯ ಸೊತ್ತನ್ನು ಉಳಿಸಿಕೊಳ್ಳಲು ಮಾಡಬೇಕಾದ ಮೊದಲ ಕೆಲಸವೆಂದರೆ ‘ಅವಧಿ ವಿಮೆ’ ಮಾಡಿಸುವುದು.

ಕುಟುಂಬದಲ್ಲಿ ದುಡಿಯುವ ಇಬ್ಬರು ವ್ಯಕ್ತಿಗಳಿದ್ದರು ಸಹ ಒಬ್ಬರಿಗೆ ಅಪಾಯ ಸಂಭವಿಸಿತೆಂದರೆ ಕುಟುಂಬದ ಆರ್ಥಿಕ ಸ್ಥಿತಿ ಏರುಪೇರಾಗುತ್ತದೆ. ಇಡೀ ಕುಟುಂಬದ ಹೊಣೆಯನ್ನು ಒಬ್ಬರೇ ಹೊರಬೇಕಾದ ಅನಿವಾರ್ಯತೆ ಎದುರಾಗಬಹುದು. ಕೆಲವೊಮ್ಮೆ ಮಕ್ಕಳ ಪಾಲನೆ– ಪೋಷಣೆಗಾಗಿ ಉಳಿದ ಒಬ್ಬರು ಸಹ ಉದ್ಯೋಗವನ್ನು ಬಿಡಬೇಕಾದ ಅನಿವಾರ್ಯತೆ ಬರಬಹುದು.

ನೀವು ಕೆಲಸ ಮಾಡುವ ಕಂಪನಿಯವರೇ ನಿಮಗೆ ವಿಮೆಯ ಸೌಲಭ್ಯವನ್ನು ಒದಗಿಸುತ್ತಿರಬಹುದು. ಆದರೆ, ಕುಟುಂಬದ ಆರ್ಥಿಕ ಭದ್ರತೆಗೆ ಅದು ಸಾಕಾಗುವುದಿಲ್ಲ. ನಿಮಗೆ ಯಾವ ಪ್ರಮಾಣದ ವಿಮೆ ಬೇಕಾಗುತ್ತದೆ ಎಂಬುದನ್ನು ನಿಮ್ಮ ಜೀವನಶೈಲಿ ಮತ್ತು ಹಣಕಾಸಿನ ಬಾಧ್ಯತೆಗಳು ನಿರ್ಧರಿಸುತ್ತವೆ.

ಒಂದು ಆಸಕ್ತಿದಾಯಕ ವಿಚಾರವೆಂದರೆ ಪುರುಷರಿಗಿಂತ ಕಡಿಮೆ ವೆಚ್ಚದಲ್ಲಿ ಮಹಿಳೆಯರಿಗೆ ಅವಧಿ ವಿಮಾ ಯೋಜನೆಗಳು ಲಭ್ಯ ಇವೆ. ಇಂತಹ ವಿಮಾ ಉತ್ಪನ್ನಗಳಲ್ಲಿ ಎಲ್ಲಿಂದ, ಯಾವಾಗ ಬೇಕಾದರೂ ಹೂಡಿಕೆ ಆರಂಭಿಸಬಹುದು. ಒಮ್ಮೆಗೇ ಹಣ ಬರುವಂತೆ ಅಥವಾ ಪ್ರತಿ ತಿಂಗಳೂ ನಿರ್ದಿಷ್ಟ ಮೊತ್ತ ಬರುವ ರೀತಿಯಲ್ಲೂ ವಿಮೆ ಮಾಡಿಸಬಹುದು. ಆದರೆ, ಒಮ್ಮೆಲೇ ಒಂದಿಷ್ಟು ಹಣ ಕೈಗೆ ಬರುವಂತೆ ಮಾಡಿ ಆನಂತರ ಪ್ರತಿ ತಿಂಗಳೂ ನಿಗದಿತ ಪ್ರಮಾಣದಲ್ಲಿ ಹಣ ಬರುವಂತಹ ವಿಮೆ ಮಾಡಿಸುವುದು ಸೂಕ್ತ.

ವಾರ್ಷಿಕ ಕೇವಲ ₹ 5 ಸಾವಿರ ಕಂತು ಪಾವತಿಸುವ ಮೂಲಕ, ಧೂಮಪಾನ ಮಾಡದ, 30 ವರ್ಷ ವಯಸ್ಸಿನ ಮಹಿಳೆಯೊಬ್ಬರು ₹ 50 ಲಕ್ಷದ ವಿಮೆ ಮಾಡಿಸಬಹುದಾಗಿದೆ. ಅಂದರೆ, ಕಂತಿನ ಪ್ರಮಾಣವು ದಿನವೊಂದಕ್ಕೆ ₹ 14 ಮಾತ್ರ.

ದೀರ್ಘಾವಧಿ ಆರ್ಥಿಕ ಗುರಿ

ನಿಮ್ಮ ಆದಾಯ ಹೆಚ್ಚಿದಂತೆ ಅದಕ್ಕೆ ಅನುಗುಣವಾಗಿ ಆರ್ಥಿಕ ಜವಾಬ್ದಾರಿಗಳೂ ಹೆಚ್ಚುತ್ತವೆ. ಆದ್ದರಿಂದ ಪ್ರತಿ ವರ್ಷವೂ ನಿಮ್ಮ ಹಣಕಾಸಿನ ಯೋಜನೆಗಳನ್ನು ಮರುರೂಪಿಸುವುದು ಅಗತ್ಯ.

ಪ್ರತಿ ವರ್ಷವೂ ನೀವು ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿಯ ಯೋಜನೆಗಳನ್ನು ನಿರ್ಧರಿಸಿಕೊಂಡು ಅದಕ್ಕೆ ಅನುಗುಣವಾಗಿ ಹೂಡಿಕೆ ಮಾಡಬೇಕಾಗುತ್ತದೆ. ವೃತ್ತಿ ಜೀವನದ ಆರಂಭದಿಂದಲೇ ವ್ಯವಸ್ಥಿತವಾಗಿ ಹೂಡಿಕೆಯನ್ನು ಆರಂಭಿಸುವುದರಿಂದ ಬರುವ ಲಾಭವೂ ದೊಡ್ಡದಾಗಿರುತ್ತದೆ. ಮೊತ್ತ ಸಣ್ಣದೇ ಆಗಿದ್ದರೂ ಬುದ್ಧಿವಂತಿಕೆಯಿಂದ ಪ್ರತಿ ತಿಂಗಳೂ ವ್ಯವಸ್ಥಿತವಾಗಿ ಹೂಡಿಕೆ ಮಾಡುತ್ತಾ ಹೋದರೆ ಅದು ದೊಡ್ಡ ನಿಧಿಯನ್ನು ತಂದುಕೊಡಬಲ್ಲದು.

ಜೀವ ವಿಮಾ ಕಂಪನಿಗಳು ರೂಪಿಸಿರುವ ಷೇರುಪೇಟೆ ಆಧಾರಿತ ವಿಮಾ ಯೋಜನೆಗಳು (ಯುಲಿಪ್‌) ಜೀವನಕ್ಕೆ ಭದ್ರತೆ ಒದಗಿಸುವುದರ ಜೊತೆಗೆ ದೀರ್ಘಾವಧಿಯಲ್ಲಿ ಒಳ್ಳೆಯ ನಿಧಿಯನ್ನೂ ಸೃಷ್ಟಿಸಬಲ್ಲವು. ನಿಮ್ಮ ದೀರ್ಘಾವಧಿಯ ಗುರಿಯನ್ನು ಸಾಧಿಸಲು ಇವು ಅತ್ಯುತ್ತಮ ಸಾಧನವಾಗಬಲ್ಲವು. ಕನಿಷ್ಠ ಮಾಸಿಕ ₹ 2,000 ಪ್ರೀಮಿಯಂನೊಂದಿಗೆ ಹೂಡಿಕೆಯನ್ನು ಆರಂಭಿಸಬಹುದು. ಇವುಗಳಲ್ಲಿ ಬಹು ಫಂಡ್‌ಗಳ ಹೂಡಿಕೆ ಆಯ್ಕೆಯೂ ಇರುತ್ತದೆ. ಇವು ಹೂಡಿಕೆಗೆ ಅತ್ಯಂತ ಸರಳ ಮಾಧ್ಯಮಗಳಾಗಿವೆ.

ಆರೋಗ್ಯ ಸಮಸ್ಯೆಯಿಂದ ರಕ್ಷಣೆ

ಭಾರತದಲ್ಲಿ ಜೀವನಶೈಲಿಯಿಂದ ಬರುವ ಕಾಯಿಲೆಗಳಿಗೆ ತುತ್ತಾಗಿ ಸಣ್ಣ ವಯಸ್ಸಿನಲ್ಲೇ ಸಾವನ್ನಪ್ಪುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವರದಿಗಳು ಹೇಳುತ್ತಿವೆ.

ವಿಶ್ವ ಆರೋಗ್ಯ ಸಂಸ್ಥೆ ವರದಿಯ ಪ್ರಕಾರ, ಪ್ರತಿ ವರ್ಷ ಸುಮಾರು ಐದು ಲಕ್ಷ ಮಹಿಳೆಯರು ಗರ್ಭಕೋಶದ ಕ್ಯಾನ್ಸರ್‌ನಿಂದ ಮತ್ತು ಸುಮಾರು ಅಷ್ಟೇ ಪ್ರಮಾಣದ ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ಒಳಗಾಗಿ ಸಾಯುತ್ತಿದ್ದಾರೆ. ಇಂಥ ಕಾಯಿಲೆಗಳ ಚಿಕಿತ್ಸೆಯೂ ದೀರ್ಘಾವಧಿ ಮತ್ತು ದುಬಾರಿಯೂ ಆಗಿರುತ್ತದೆ.

ಇಂತಹ ಕಾಯಿಲೆಗೆ ತುತ್ತಾಗುವವರು ತಮ್ಮ ಜೀವಿತಾವಧಿಯಲ್ಲಿ ಮಾಡಿದ್ದ ಉಳಿತಾಯವೆಲ್ಲವನ್ನೂ ಚಿಕಿತ್ಸೆಗಾಗಿ ವ್ಯಯಿಸುವ ಪ್ರಸಂಗ ಬರುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ಇಂತಹ ಸಂದರ್ಭಗಳಲ್ಲಿ ಎಲ್ಲ ರೋಗಗಳ ಚಿಕಿತ್ಸೆಯೂ ಒಳಗೊಳ್ಳುವಂತಹ ಸಮಗ್ರವಾದ ಜೀವ ವಿಮೆಯು ಆಧಾರವಾಗಿ ನಿಲ್ಲಬಲ್ಲದು. ಅನೇಕ ಜೀವ ವಿಮೆ ಸಂಸ್ಥೆಗಳು ಈಗ ಅಪಾಯಕಾರಿ ರೋಗಗಳಿಗೂ ವಿಮೆ ಸೌಲಭ್ಯ ಒದಗಿಸುವ ಮತ್ತು ಅಂತಹ ಸಂದರ್ಭದಲ್ಲಿ ಎದುರಾಗುವ ಇತರ ಸಮಸ್ಯೆಗಳಿಗೂ ನೆರವು ನೀಡುವಂತಹ ವಿಮೆ ಉತ್ಪನ್ನಗಳನ್ನು ಕೈಗೆಟುಕುವ ಕಂತಿನಲ್ಲಿ ಒದಗಿಸುತ್ತಿವೆ. ಆದರೆ, ಇಂತಹ ವಿಮೆಯೊಂದು ಸಂಕೀರ್ಣವಾದ ಚಿಕಿತ್ಸೆಗೆ ಒಳಗಾಗುವಾಗ ಸಾವು ಸಂಭವಿಸಿದರೆ, ಅವರ ಕುಟುಂಬದವರಿಗೆ ಆರ್ಥಿಕ ನೆರವನ್ನೂ ಒದಗಿಸುತ್ತದೆಯೇ ಎಂಬುದನ್ನು ಮೊದಲೇ ಖಚಿತಪಡಿಸಿಕೊಳ್ಳುವುದು ಅಗತ್ಯ.

ಆರಾಮದಾಯಕ ನಿವೃತ್ತಿ

ನಿವೃತ್ತಿಯ ನಂತರವಾದರೂ ಹಣಕಾಸಿಗೆ ಸಂಬಂಧಿಸಿದ ಎಲ್ಲ ಚಿಂತೆಗಳಿಂದ ಮುಕ್ತರಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಸಾಂಪ್ರದಾಯಿಕ ಉಳಿತಾಯ ಯೋಜನೆಗಳು ಅಥವಾ ಆದಾಯದ ಭದ್ರತೆ ಒದಗಿಸುವ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ನಿಶ್ಚಿಂತೆಯ ನಿವೃತ್ತ ಜೀವನ ನಡೆಸಲು ಸಾಧ್ಯ. ವೃತ್ತಿ ಜೀವನದ ಆರಂಭದಲ್ಲೇ ಸರಿಯಾದ ಜೀವ ವಿಮೆ ಆಯ್ದುಕೊಂಡು ಹೂಡಿಕೆ ಮಾಡುತ್ತಾ ಹೋದರೆ ನಿವೃತ್ತಿಯ ವೇಳೆಗೆ ದೊಡ್ಡ ನಿಧಿ ಪಡೆಯಲು ಸಾಧ್ಯವಾಗುತ್ತದೆ.

ಜೀವ ವಿಮೆಗಳು ದೀರ್ಘಾವಧಿಯ ಹೂಡಿಕೆ ವಿಧಾನಗಳಾಗಿರುವುದರಿಂದ ತೆರಿಗೆ ಉಳಿತಾಯದ ಲಾಭವನ್ನೂ ತಂದುಕೊಡುತ್ತವೆ. ನೀವು ಮಾಡುವ ಹೂಡಿಕೆಯ ಮೊತ್ತ, ಆ ಹೂಡಿಕೆ ಮಾಡುವ ಗಳಿಕೆ ಮತ್ತು ಕೊನೆಯಲ್ಲಿ ನೀವು ಪಡೆಯುವ ಒಟ್ಟಾರೆ ಮೊತ್ತ– ಇವು ಮೂರೂ ತೆರಿಗೆಯಿಂದ ಮುಕ್ತವಾಗಿರುತ್ತವೆ. ಯಾವುದೇ ವಿಮೆಯನ್ನು ಖರೀದಿಸುವುದಕ್ಕೂ ಮುನ್ನ ಅದರ ಕುರಿತು ಸಾಕಷ್ಟು ಅಧ್ಯಯನ ಮಾಡಿ, ಆ ಯೋಜನೆ ನೀಡುವ ಲಾಭಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವುದು ಅಗತ್ಯ. ವಿಮೆಯನ್ನು ಮಾಡಿಸಲು ಬರುವ ಪ್ರತಿನಿಧಿಯಲ್ಲಿ ಕೇಳಬೇಕಾದ ಪ್ರಶ್ನೆಗಳ ಪಟ್ಟಿಯನ್ನು ಮೊದಲೇ ಮಾಡಿಟ್ಟುಕೊಳ್ಳುವುದು ಸೂಕ್ತ. ಅವರು ಕೇಳುವ ಎಲ್ಲ ಪ್ರಶ್ನೆಗಳಿಗೆ ವಿಶೇಷವಾಗಿ ಆರೋಗ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ನೀವು ಸಹ ಸರಿಯಾದ ಉತ್ತರ ನೀಡಬೇಕು. ಇದರಿಂದ ಭವಿಷ್ಯದಲ್ಲಿ ಆಗಬಹುದಾದ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು.

(ಲೇಖಕ: ಫ್ಯೂಚರ್‌ ಜನರಾಲಿ ಇಂಡಿಯಾ ಇನ್ಶೂರೆನ್ಸ್‌ ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT