ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ತೀರಿಸಲು ಈ ಮಾರ್ಗ

Last Updated 11 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ದೀಪಾವಳಿ ಹಬ್ಬದ ಖರೀದಿಯು ನಿಮ್ಮ ಕೈಮೀರಿ ಹೋಗಿದೆ ಎಂದಾದರೆ ಆ ಸಾಲವನ್ನು ತೀರಿಸಲು ನೀವೀಗ ಕಷ್ಟಪಡುತ್ತಿರಬಹುದು ಅಲ್ಲವೇ. ಹಬ್ಬದ ಸಂದರ್ಭದಲ್ಲಿ ಹೊಸ ಬಟ್ಟೆ, ಬರೆ, ಗೃಹೋಪಯೋಗಿ ಸಲಕರಣೆ, ಸ್ಮಾರ್ಟ್‌ಫೋನ್‌, ಚಿನ್ನಾಭರಣ ಖರೀದಿ, ಔತಣಕೂಟ ಎಂದೆಲ್ಲ ಮಾಡಿದ್ದ ವೆಚ್ಚಗಳನ್ನು ಭರಿಸುವ ಸಂದರ್ಭ ಇದಾಗಿರುವುದರಿಂದ ಹಬ್ಬದಲ್ಲಿ ಅನುಭವಿಸಿದ ಖುಷಿಯು ಈಗ ದುಬಾರಿಯಾಗಿ ಕಾಣಿಸುತ್ತಿರಬಹುದು.

ಸಾಲವನ್ನೆಲ್ಲ ಒಮ್ಮೆಲೇ ತೀರಿಸಿಬಿಡೋಣ ಎಂದರೆ ಕೈಯಲ್ಲಿ ಅಷ್ಟು ಹಣವೂ ಇರಲಾರದು. ಇಂತಹ ಹಣಕಾಸು ಬಿಕ್ಕಟ್ಟನ್ನು ನಿಭಾಯಿಸುವುದಾದರೂ ಹೇಗೆ? ಇಲ್ಲಿವೆ ಒಂದಷ್ಟು ಸಲಹೆಗಳು...

ಪರಿಸ್ಥಿತಿ ಅರಿತುಕೊಳ್ಳಿ
ಆರ್ಥಿಕ ಪರಿಸ್ಥಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡು, ಸಮಸ್ಯೆಗಳನ್ನು ಒಂದೊಂದಾಗಿ ಪರಿಹರಿಸುತ್ತ ಬರುವುದೇ ಸರಿಯಾದ ಮಾರ್ಗ. ಸಾಲದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಮುಖ್ಯವಾಗಬೇಕು. ಸುಸ್ತಿದಾರ ಎನ್ನಿಸಿಕೊಳ್ಳುವುದರಿಂದ ಭವಿಷ್ಯದಲ್ಲಿ ಆಗುವ ಅಪಾಯದ ಬಗ್ಗೆ ಹೇಳಬೇಕಾಗಿಲ್ಲವಲ್ಲ. ಸುಸ್ತಿದಾರರಾದರೆ ನಿಮ್ಮ ‘ಕ್ರೆಡಿಟ್‌ ಸ್ಕೋರ್‌’ ಕಡಿಮೆಯಾಗಿ ಮುಂದಿನ ದಿನಗಳಲ್ಲಿ ತುರ್ತು ಸಂದರ್ಭದಲ್ಲೂ ಸಾಲ ಲಭಿಸಲಾರದು. ನಿಮಗೆ ಯಾರೂ ಹೊಸ ಕ್ರೆಡಿಟ್‌ ಕಾರ್ಡ್‌ ಕೊಡಲಾರರು. ಆದ್ದರಿಂದ ಸುಸ್ತಿದಾರರಾಗದಂತೆ ಅತಿ ಎಚ್ಚರ ವಹಿಸುವುದು ಅಗತ್ಯ.

ಹಾಗೆಂದು ಮಾಡಿರುವ ಸಾಲಗಳನ್ನು ತೀರಿಸಲು ಇನ್ನೊಂದು ಸಾಲ ಮಾಡುವುದೂ ಸರಿಯಲ್ಲ. ಇದರಿಂದ ನೀವು ಸಾಲದ ಬಲೆಗೆ ಸಿಲುಕುವ ಅಪಾಯವೇ ಹೆಚ್ಚು. ಅದರ ಬದಲು, ನಿಮ್ಮ ಕುಟುಂಬ ವರ್ಗದಲ್ಲೇ ಯಾರಾದರೂ ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಅಥವಾ ಬಡ್ಡಿ ರಹಿತವಾಗಿ ಆರ್ಥಿಕ ನೆರವು ಕೊಡುವವರು ಇದ್ದಾರೆಯೇ ಎಂಬುದನ್ನು ಪತ್ತೆ ಮಾಡಿ. ಅಂಥವರು ಯಾರೂ ಇಲ್ಲ ಎಂದಾದರೆ ಸಾಲ ತೀರಿಸಲು ಈ ಕೆಳಗಿನ ಮಾರ್ಗಗಳನ್ನು ಅನುಸರಿಸಿ.

ಇಎಂಐ ಆಗಿ ಪರಿವರ್ತಿಸಿ
ಬಾಕಿ ಸಾಲವನ್ನು ಸಮಾನ ಮಾಸಿಕ ಕಂತುಗಳ (ಇಎಂಐ) ರೂಪದಲ್ಲಿ ಪಾವತಿಸಲು ಬ್ಯಾಂಕ್‌ಗಳು ಅವಕಾಶ ಕೊಡುತ್ತವೆ. ಅದಕ್ಕೆ ತಿಂಗಳಿಗೆ ಶೇ 1.49 ರಿಂದ ಶೇ 1.99ರಷ್ಟು ಬಡ್ಡಿ ವಿಧಿಸುತ್ತವೆ (ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಬಡ್ಡಿ ದರ ಬೇರೆ ಬೇರೆ ಯಾಗಿರುತ್ತದೆ). ವಿಶೇಷ ಮಾರಾಟ ಸಂದರ್ಭದಲ್ಲಿ ಬಡ್ಡಿ ರಹಿತ ‘ಇಎಂಐ’ ಸೌಲಭ್ಯವೂ ಇರುತ್ತದೆ. ಅದನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡಿ.

ಒಂದು ವೇಳೆ ಒಂದಕ್ಕಿಂತ ಹೆಚ್ಚು ಕಡೆ ಸಾಲ ಮಾಡಿದ್ದು, ಮರುಪಾವತಿ ಕಷ್ಟವಾಗುತ್ತಿದ್ದರೆ, ಅತಿ ಹೆಚ್ಚು ಬಡ್ಡಿಯ ಸಾಲ ಯಾವುದೆಂದು ನೋಡಿ, ಅದನ್ನು ತೀರಿಸಲು ಆದ್ಯತೆ ಕೊಡಿ. ಉಳಿದ ಸಾಲಗಳನ್ನು ಸ್ವಲ್ಪ ಸ್ವಲ್ಪವಾಗಿ ಮರುಪಾವತಿ ಮಾಡುತ್ತ ಬನ್ನಿರಿ. ದುಬಾರಿ ಬಡ್ಡಿ ದರದ ಸಾಲ ತೀರಿದ ಬಳಿಕ, ಉಳಿದವುಗಳಲ್ಲಿ ಯಾವುದು ದುಬಾರಿ ಬಡ್ಡಿ ಎಂಬುದನ್ನು ತಿಳಿದು ಅದನ್ನು ತೀರಿಸಲು ಮುಂದಾಗಬೇಕು. ಹೀಗೆ ಕ್ರಮ ಪ್ರಕಾರ ಸಾಲಗಳನ್ನು ತೀರಿಸುತ್ತ ಬರುವುದರಿಂದ ಸಾಲದ ಹೊರೆಯನ್ನು ಬೇಗ ಕಳಚಿಕೊಳ್ಳಲು ಸಾಧ್ಯವಾಗುತ್ತದೆ.

ಹೆಚ್ಚುವರಿ ಹಣ ಮರುಪಾವತಿಗೆ ಬಳಸಿ
ನಿಮ್ಮ ಅಗತ್ಯ ಖರ್ಚು–ವೆಚ್ಚಗಳನ್ನು ಮಾಡಿದ ನಂತರವೂ ಒಂದಿಷ್ಟು ಹಣ ಉಳಿದರೆ, ಬೋನಸ್‌ ಅಥವಾ ನಗದು ಬಹುಮಾನದ ರೂಪದಲ್ಲಿ ನಿಮಗೆ ಹಣವೇನಾದರು ಲಭಿಸಿದರೆ ಅದನ್ನು ದುಂದುವೆಚ್ಚ ಮಾಡದೆ, ಸಾಲ ಮರುಪಾವತಿಗೆ ಬಳಸಿಕೊಳ್ಳಿ. ಅವಧಿಗೂ ಮುನ್ನವೇ ಸಾಲವನ್ನು ತೀರಿಸಲೂ ಇಂಥ ಹಣವನ್ನು ಬಳಸಬಹುದು (ಅವಧಿಗೂ ಮುನ್ನ ಮರುಪಾವತಿಗೆ ದಂಡ ಶುಲ್ಕ ಇಲ್ಲ ಎಂಬುದನ್ನು ಬ್ಯಾಂಕ್‌ನಿಂದ ಖಚಿತಪಡಿಸಿಕೊಳ್ಳಿ). ಅವಧಿಗೂ ಮುನ್ನ ಸಾಲ ಮರುಪಾವತಿಯಿಂದ ಲಾಭ ಇದೆಯೇ ಎಂಬುದನ್ನು ತಿಳಿದುಕೊಂಡು ಮುಂದಡಿ ಇಡಿರಿ.

(ಲೇಖಕ: ಬ್ಯಾಂಕ್‌ ಬಜಾರ್‌ನ ಸಿಇಒ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT