ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಈರುಳ್ಳಿ ರಫ್ತು ನಿರ್ಬಂಧ ಮುಂದುವರಿಸಿದ ಕೇಂದ್ರ

Published 23 ಮಾರ್ಚ್ 2024, 10:27 IST
Last Updated 23 ಮಾರ್ಚ್ 2024, 10:27 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರವು ಈರುಳ್ಳಿ ರಫ್ತು ನಿಷೇಧವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಿದೆ.

ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿಯ ಲಭ್ಯತೆ ಹಾಗೂ ಬೆಲೆ ಏರಿಕೆ ನಿಯಂತ್ರಿಸಲು ಮಾರ್ಚ್‌ 31ರ ವರೆಗೂ ರಫ್ತಿಗೆ ನಿಷೇಧ ಹೇರಿತ್ತು. ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಬೆನ್ನಲ್ಲೇ ಸರ್ಕಾರದ ಈ ನಿರ್ಧಾರವು ವರ್ತಕರಲ್ಲಿ ಅಚ್ಚರಿ ಮೂಡಿಸಿದೆ. ಇದರಿಂದ ಕೆಲವು ಸಾಗರೋತ್ತರ ಮಾರುಕಟ್ಟೆಗಳಲ್ಲಿ ಈರುಳ್ಳಿ ಧಾರಣೆ ಏರಿಕೆಗೆ ಕಾರಣವಾಗಬಹುದು ಎಂದು ಹೇಳಲಾಗಿದೆ.

ಭಾರತವು ಅತಿಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ರಫ್ತು ಮಾಡುವ ದೇಶಗಳ ಪೈಕಿ ಒಂದಾಗಿದೆ. ಕಳೆದ ವರ್ಷದ ಡಿಸೆಂಬರ್‌ 8ರಂದು ರಫ್ತು ನಿಷೇಧದ ಆದೇಶ ಹೊರಡಿಸಿತ್ತು.

ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆಯು ಅರ್ಧದಷ್ಟು ಇಳಿಕೆ ಕಡಿಮೆಯಾಗುವವರೆಗೆ  ಹಾಗೂ ಹೊಸ ಸರಕು ಮಾರುಕಟ್ಟೆಗೆ ಪೂರೈಕೆಯಾಗುವ ತನಕ ಈ ಆದೇಶ ಜಾರಿಯಲ್ಲಿ ಇರಲಿದೆ ಎಂದು ವರ್ತಕರು ನಿರೀಕ್ಷಿಸಿದ್ದರು.

ಆದರೆ, ಮುಂದಿನ ಸೂಚನೆವರೆಗೂ ರಫ್ತು ನಿಷೇಧ ಆದೇಶ ಜಾರಿಯಲ್ಲಿರುತ್ತದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಅಧೀನದಲ್ಲಿ ಬರುವ ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ (ಡಿಜಿಎಫ್‌ಟಿ) ತಿಳಿಸಿದೆ. 

‘ಸದ್ಯ ಹೊಸ ಸರಕು ಮಾರುಕಟ್ಟೆಗೆ ಬರುತ್ತಿದೆ. ಈ ನಡುವೆಯೇ ಧಾರಣೆ ಕೂಡ ಕುಸಿದಿದೆ. ಇಂತಹ ಸಂದಿಗ್ಧತೆಯಲ್ಲಿ ಸರ್ಕಾರ ಕೈಗೊಂಡಿರುವ ನಿರ್ಧಾರವು ಸೋಜಿಗ ತಂದಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಮುಂಬೈನ ಈರುಳ್ಳಿ ರಫ್ತು ಕಂಪನಿಯೊಂದರ ಕಾರ್ಯ ನಿರ್ವಾಹಕರೊಬ್ಬರು ಅಸಮಾಧಾನ ತೋಡಿಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಈರುಳ್ಳಿ ಬೆಳೆಯಲಾಗುತ್ತಿದೆ. ಡಿಸೆಂಬರ್‌ನಲ್ಲಿ ಒಂದು ಕ್ವಿಂಟಲ್‌ಗೆ ₹4,500 ಇದ್ದ ಧಾರಣೆಯು, ಈಗ ₹1,200ಕ್ಕೆ ಕುಸಿದಿದೆ ಎಂದು ತಿಳಿಸಿದ್ದಾರೆ.

‘ಚೀನಾ ಮತ್ತು ಈಜಿಫ್ಟ್‌ನಿಂದ ಏಷ್ಯಾದ ಇತರೆ ದೇಶಗಳು ಈರುಳ್ಳಿಯನ್ನು ಆಮದು ಮಾಡಿಕೊಳ್ಳುತ್ತವೆ. ಪ್ರಸ್ತುತ ಭಾರತದ ನಡೆಯಿಂದಾಗಿ ಈರುಳ್ಳಿ ಆಮದಿಗೆ ಹೆಚ್ಚಿನ ದರ ನಿಗದಿಪಡಿಸುವ ಸಾಧ್ಯತೆಯಿದೆ. ಹಾಗಾಗಿ, ಚೀನಾ, ಈಜಿಫ್ಟ್‌ನಿಂದ ಖರೀಸುವ ದೇಶಗಳಿಗೆ ಈಗ ಬೇರೆ ಆಯ್ಕೆ ಇಲ್ಲದಂತಾಗಿದೆ’ ಎಂದು ಹೇಳಿದ್ದಾರೆ.

ಆದರೆ, ಮಿತ್ರ ರಾಷ್ಟ್ರಗಳಾದ ಬಾಂಗ್ಲಾದೇಶ, ಮಲೇಷ್ಯಾ, ನೇಪಾಳ ಹಾಗೂ ಯುಎಇಗೆ ರಫ್ತು ನಿಷೇಧ ಆದೇಶವು ಅನ್ವಯಿಸುವುದಿಲ್ಲ.

ಬೆಲೆ ನಿಯಂತ್ರಣಕ್ಕೆ ಹಲವು ಕ್ರಮ

ಕೇಂದ್ರ ಸರ್ಕಾರವು ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಂಡಿತ್ತು. 2023ರ ಅಕ್ಟೋಬರ್‌ ವೇಳೆ ದೇಶದಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಿತ್ತು. ಆಗ ಕಾಪು ದಾಸ್ತಾನಿಟ್ಟಿದ್ದ ಈರುಳ್ಳಿಯನ್ನು ಪ್ರತಿ ಕೆ.ಜಿಗೆ ₹25ರಂತೆ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಿತ್ತು. ಅಕ್ಟೋಬರ್‌ 28ರಿಂದ ಡಿಸೆಂಬರ್ 31ರ ವರೆಗೆ ಈರುಳ್ಳಿ ರಫ್ತು ದರವನ್ನು ಪ್ರತಿ ಟನ್‌ಗೆ ₹66875 (800 ಡಾಲರ್‌) ನಿಗದಿಪಡಿಸಿತ್ತು. ಡಿಸೆಂಬರ್‌ ಅಂತ್ಯದವರೆಗೆ ರಫ್ತಿನ ಮೇಲೆ ಶೇ 40ರಷ್ಟು ಸುಂಕ ವಿಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT