ಭಾನುವಾರ, ಅಕ್ಟೋಬರ್ 24, 2021
25 °C

ಬ್ಯಾಂಕ್ ಅಸ್ತಿತ್ವವೇ ಇಲ್ಲದ ಜಿಲ್ಲೆಗಳು ಇಂದಿಗೂ ಇವೆ: ನಿರ್ಮಲಾ ಕಳವಳ

ಪಿಟಿಐ Updated:

ಅಕ್ಷರ ಗಾತ್ರ : | |

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಮುಂಬೈ: ಆರ್ಥಿಕ ಒಳಗೊಳ್ಳುವಿಕೆಗೆ ಹೆಚ್ಚಿನ ಆದ್ಯತೆ ನೀಡಿದ್ದರೂ, ದೇಶದ ಹಲವು ಜಿಲ್ಲೆಗಳಲ್ಲಿ ಇಂದಿಗೂ ಬ್ಯಾಂಕಿಂಗ್ ಅಸ್ತಿತ್ವವೇ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳವಳ ವ್ಯಕ್ತಪಡಿಸಿದ್ದಾರೆ.

ದೇಶದ ನೀತಿ ನಿರೂಪಕರು ಆರ್ಥಿಕ ಒಳಗೊಳ್ಳುವಿಕೆಯ ಬಗ್ಗೆ ದಶಕಕ್ಕೂ ಹೆಚ್ಚಿನ ಅವಧಿಯಿಂದ ಆದ್ಯತೆ ನೀಡುತ್ತಿದ್ದಾರೆ. ಎರಡು ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ಪ್ರತಿ ಹಳ್ಳಿಯಲ್ಲಿಯೂ ಬ್ಯಾಂಕ್ ಅಸ್ತಿತ್ವ ಇರಬೇಕು ಎಂಬ ಗುರಿಯನ್ನು ನಿಗದಿ ಮಾಡಿದ್ದಾರೆ. ಕೆಲವು ವರ್ಷಗಳ ಹಿಂದೆ ಆರ್‌ಬಿಐ, ಶಾಖೆ ತೆರೆಯುವುದಕ್ಕೆ ಸಂಬಂಧಿಸಿದಂತೆ ಇರುವ ನಿಯಮಗಳನ್ನು ಸಡಿಲಿಸಿದೆ.

‘ದೊಡ್ಡ ಪಂಚಾಯಿತಿಗಳಲ್ಲಿ ಬ್ಯಾಂಕ್‌ನ ಭೌತಿಕ ಶಾಖೆ ಇಲ್ಲದ ಹಲವು ಜಿಲ್ಲೆಗಳು ಇಂದಿಗೂ ಇವೆ. ಒಂದೇ ಒಂದು ಬ್ಯಾಂಕಿಂಗ್ ಸಂಸ್ಥೆಯ ಅಸ್ತಿತ್ವವನ್ನು ಭೌತಿಕವಾಗಿ ಹೊಂದಿಲ್ಲದ ಹಲವು ಜಿಲ್ಲೆಗಳು ಇಂದಿಗೂ ಇವೆ’ ಎಂದು ನಿರ್ಮಲಾ ಅವರು ಭಾರತೀಯ ಬ್ಯಾಂಕ್‌ಗಳ ಒಕ್ಕೂಟದ (ಐಬಿಎ) ವಾರ್ಷಿಕ ಮಹಾಸಭೆಯಲ್ಲಿ ಹೇಳಿದ್ದಾರೆ.

‘ಆರ್ಥಿಕ ಚಟುವಟಿಕೆಯ ಕೇಂದ್ರಗಳನ್ನು ಗಮನಿಸಲು ನಿಮಗೆ ಸಾಧ್ಯವಾಗಬೇಕು. ಗ್ರಾಮೀಣ ಪ್ರದೇಶಗಳಲ್ಲಿಯೂ ಆರ್ಥಿಕ ಚಟುವಟಿಕೆಗಳು ಜೋರಾಗಿ ಇದ್ದರೆ, ಅಲ್ಲಿ ಬ್ಯಾಂಕ್‌ ಅಸ್ತಿತ್ವ ಇರಬೇಕಲ್ಲವೇ’ ಎಂದು ಅವರು ಪ್ರಶ್ನಿಸಿದ್ದಾರೆ.

ನಿರ್ಮಲಾ ಅವರ ಕಾರ್ಯಕ್ರಮದ ನಂತರ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಎಚ್‌ಡಿಎಫ್‌ಸಿ ಬ್ಯಾಂಕ್, ಮುಂದಿನ ಎರಡು ವರ್ಷಗಳಲ್ಲಿ ಎರಡು ಲಕ್ಷ ಹಳ್ಳಿಗಳನ್ನು ತಲುಪಲಾಗುತ್ತದೆ ಮತ್ತು ಮುಂದಿನ ಆರು ತಿಂಗಳುಗಳಲ್ಲಿ ಎರಡೂವರೆ ಸಾವಿರ ಜನರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದೆ.

ರಾಷ್ಟ್ರೀಯ ಆಸ್ತಿ ಪುನರ್‌ರಚನಾ ಕಂಪನಿಯನ್ನು (ಎನ್‌ಎಆರ್‌ಸಿಎಲ್‌) ‘ಬ್ಯಾಡ್ ಬ್ಯಾಂಕ್’ ಎಂದು ಕರೆಯಬಾರದು ಎಂದೂ ನಿರ್ಮಲಾ ಅವರು ಮನವಿ ಮಾಡಿದರು.

ಅರ್ಥ ವ್ಯವಸ್ಥೆ ಹಾಗೂ ಉದ್ಯಮ ವಲಯದ ಅಗತ್ಯಗಳನ್ನು ಪೂರೈಸಲು ದೇಶಕ್ಕೆ ಎಸ್‌ಬಿಐ ಗಾತ್ರದ ನಾಲ್ಕರಿಂದ ಐದು ಬ್ಯಾಂಕ್‌ಗಳ ಅಗತ್ಯ ಇದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು