ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಫ್‍ಲೈನ್‍ ವಹಿವಾಟಿಗೆ ವಿಪುಲ ಅವಕಾಶ

Last Updated 11 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಡಿಜಿಟಲ್ ತಂತ್ರಜ್ಞಾನ ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಜಗತ್ತಿನಲ್ಲಿ ಬದಲಾವಣೆಗಳನ್ನು ತರುತ್ತಿದೆ. ಕೇವಲ ಒಂದು ಗುಂಡಿ ಒತ್ತುವುದರಿಂದಲೇ ಕಾರ್‌ ಬುಕ್ ಮಾಡಬಹುದು ಅಥವಾ ಕೆಲವೇ ಗಂಟೆಗಳಲ್ಲಿ ನೀವು ಬಯಸಿದ ವಸ್ತುಗಳು ಮನೆಗೇ ಬರುವಂತೆ ಮಾಡಬಹುದು. ಹಿಂದೆ ಇದನ್ನೆಲ್ಲ ಹೇಳಿದಾಗ ಕಟ್ಟುಕಥೆ ಎಂದು ಮೂಗು ಮುರಿದವರೆ ಹೆಚ್ಚು. ಅವುಗಳೆಲ್ಲ ಈಗ ನಿಜವಾಗುತ್ತಿವೆ.

ಆದರೆ, ನಮ್ಮ ಮನೆಯ ಪಕ್ಕದಲ್ಲೇ ಇರುವ ಕಿರಾಣಿ ಅಂಗಡಿಗಳು ಮಾತ್ರ ಇವೆಲ್ಲವುಗಳಿಗೆ ಸೊಪ್ಪು ಹಾಕುತ್ತಿಲ್ಲ. ಡಿಜಿಟಲೀಕರಣ ಏನೇ ಬದಲಾವಣೆ ತರುತ್ತಿದ್ದರೂ ಕಿರಾಣಿ ಅಂಗಡಿಗಳು ಈಗಲೂ ಬಳಕೆದಾರರ ಮಾತ್ರ ನೆಚ್ಚಿನ ತಾಣಗಳಾಗಿ ಉಳಿದುಕೊಂಡಿವೆ. ದೊಡ್ಡ ದೊಡ್ಡ ಮಾಲ್‍ಗಳು, ಸೂಪರ್ ಮಾರ್ಕೆಟ್‍ಗಳು, ಇ–ವಾಣಿಜ್ಯ ತಾಣಗಳೇನೇ ಇದ್ದರೂ ಕಿರಾಣಿ ಅಂಗಡಿಗಳು ಮಾತ್ರ ಬೆಳೆಯುತ್ತಲೇ ಇವೆ. ಗ್ರಾಹಕರ ಅಗತ್ಯಗಳನ್ನು ಅರಿತುಕೊಂಡೇ ಕಿರಾಣಿ ಅಂಗಡಿ ಮಾಲೀಕರು ಅಂಥ ವಸ್ತುಗಳನ್ನು ಮಾರಾಟ ಮಾಡುತ್ತಾರೆ.

ಸ್ಥಳೀಯ ಸಮುದಾಯದ ಅಗತ್ಯಗಳ ಕುರಿತು ಅವರಿಗೆ ಇರುವ ಜ್ಞಾನಕ್ಕೆ ಸರಿಸಾಟಿ ಇಲ್ಲ. ಕಿರಾಣಿ ಅಂಗಡಿಗಳಲ್ಲಿ ವೈವಿಧ್ಯಮಯ ವಸ್ತುಗಳು ಸಿಗುತ್ತವೆ ಎಂದೇನಲ್ಲ. ಮುಖ್ಯವಾಗಿ ಇಲ್ಲಿ ಗ್ರಾಹಕರು ಬಯಸುವ ವಸ್ತುಗಳು ಒಂದು ಗಂಟೆಯೊಳಗೆ, ಬೇಕಿದ್ದರೆ ಸುಲಭದ ಸಾಲಕ್ಕೂ ಸಿಗುತ್ತವೆ. ಆಧುನಿಕ ಚಿಲ್ಲರೆ ಮಳಿಗೆಗಳು ಸಂಘಟಿತವಾಗಿ ಎಷ್ಟೇ ಬೆಳೆದರೂ ಕಿರಾಣಿ ಅಂಗಡಿಗಳು ಮಾತ್ರ ಈಗಲೂ ತಮ್ಮ ಮಹತ್ವ ಕಾಯ್ದುಕೊಂಡಿವೆ. ರಿಯಲ್ ಎಸ್ಟೇಟ್‍ನಲ್ಲಿರುವ ಭಾರಿ ಹೂಡಿಕೆಯು ಸೂಪರ್‍ಮಾರ್ಕೆಟ್‍ಗಳಲ್ಲಿರುವ ಬೆಲೆ ಮತ್ತು ಲಾಭವನ್ನು ನಿರ್ಧರಿಸುತ್ತವೆ. ಅದೇ ನೆರೆಹೊರೆಯಲ್ಲಿರುವ ಸಣ್ಣ ಕಿರಾಣಿ ಅಂಗಡಿಗಳಿಗೆ ಈ ಸಮಸ್ಯೆ ಇಲ್ಲ.

ಇ–ವಾಣಿಜ್ಯ ತಾಣಗಳ ಅನುಕೂಲತೆ ಮತ್ತು ಅನಾನುಕೂಲತೆಗಳ ಕುರಿತು ಈಗ ಚರ್ಚೆ ನಡೆಯುತ್ತಿದೆ.ಆನ್‍ಲೈನ್‍ನಲ್ಲಿ ವಸ್ತುಗಳನ್ನು ಮಾರಿ ದುಡ್ಡು ಮಾಡುವುದು ಕೆಲಮಟ್ಟಿಗೆ ಕಠಿಣ ಕೆಲಸ. ಆನ್‍ಲೈನ್ ತಾಣಕ್ಕೆ ಗ್ರಾಹಕರನ್ನು ಸೆಳೆಯಲು ಮಾಡುವ ವೆಚ್ಚ ಗರಿಷ್ಠವಾಗಿರುತ್ತದೆ. ಇದು ಹೆಚ್ಚುತ್ತಲೇ ಇದೆ.ದೀರ್ಘಾವಧಿಯಲ್ಲಿ ಈ ಆನ್‍ಲೈನ್ ಮಳಿಗೆಗಳು ಆಹಾರೇತರ ವಸ್ತುಗಳ ಮೇಲೆ ವರಮಾನ ಪಡೆಯಬಹುದು. ಆದರೆ,ಆಹಾರ ಮತ್ತು ಬೇಳೆಕಾಳುಗಳ ಮೇಲೆ ಲಾಭಾಂಶ ಕಡಿಮೆ ಇರುವುದರಿಂದ ಹಣ ಮಾಡುವುದು ಸವಾಲಿನಕೆಲಸವೇ. ಅಲ್ಲದೇ ಈ ಉತ್ಪನ್ನಗಳನ್ನು ಮಾರಾಟ ಮಾಡಲು ಈ ತಾಣಗಳಿಗೆ ವಿಶೇಷ ಮೂಲಸೌಕರ್ಯ ಮತ್ತು
ಶೀತಲೀಕರಣ ಸೌಲಭ್ಯಗಳು ಬೇಕಾಗುತ್ತವೆ.

ಇನ್ನೂ ಕೆಲವು ವರ್ಷಗಳವರೆಗೆ ಆನ್‍ಲೈನ್ ಮತ್ತು ಆಫ್‍ಲೈನ್ ವಹಿವಾಟಿನಲ್ಲಿ ಯಾವುದು ಹೆಚ್ಚು ಲಾಭದಾಯಕ ಎನ್ನುವ ಚರ್ಚೆ ನಡೆಯುತ್ತಲೇ ಇರುತ್ತದೆ. ಆದರೆ, ಅಂತಿಮವಾಗಿ ಪರಿಸ್ಥಿತಿ ಪರಸ್ಪರ ಪೂರಕವಾಗಿರಲಿದೆ. ಆಫ್‍ಲೈನ್ ಮಳಿಗೆಗಳನ್ನು ಆನ್‍ಲೈನ್ ಮಾಡುವ ಮತ್ತು ಆ ಮೂಲಕ ಕಿರಾಣಿ ಅಂಗಡಿಗಳ ಸಂಸ್ಕೃತಿ ನಾಶಪಡಿಸುವುದಕ್ಕಿಂತ, ನಾವು ಅದರ ವಿರುದ್ಧವಾಗಿ ಕೆಲಸವ ಮಾಡಬೇಕಾಗಿದೆ. ಅಂದರೆ ಕಿರಾಣಿ ಅಂಗಡಿಗಳ ಜಾಲವನ್ನೇ ಸದೃಢಗೊಳಿಸಬೇಕಾಗಿದೆ.

ಇದಕ್ಕಾಗಿ ಕಿರಾಣಿ ಅಂಗಡಿಗಳನ್ನು ಆಧುನೀಕರಣಗೊಳಿಸಬೇಕು. ಗ್ರಾಹಕರು ಮತ್ತು ಅಂಗಡಿ ಮಾಲೀಕರಿಬ್ಬರಿಗೂ ಲಾಭದಾಯಕ ಪರಿಸ್ಥಿತಿ ನಿರ್ಮಿಸಬೇಕು. ಇದಕ್ಕಾಗಿ ತಂತ್ರಜ್ಞಾನ ಸೌಲಭ್ಯಗಳು ಸಾಕಷ್ಟಿವೆ. ಆಫ್‍ಲೈನ್ ಕಿರಾಣಿ ಅಂಗಡಿಗಳನ್ನು ಇ–ವಾಣಿಜ್ಯ ಕ್ರಾಂತಿಯ ಮುಖ್ಯವಾಹಿನಿಗೆ ತರಬೇಕಾಗಿದೆ. ದುರದೃಷ್ಟವಶಾತ್ ಕೆಲವೇ ದೊಡ್ಡ ಕಿರಾಣಿ ಅಂಗಡಿಗಳು ಮಾತ್ರ ಇದರ ಲಾಭ ಪಡೆಯುತ್ತಿವೆ. ತಂತ್ರಜ್ಞಾನ ಸೌಲಭ್ಯಗಳಾದ ಪಿಒಎಸ್ ಬಿಲ್ಲಿಂಗ್, ಆ್ಯಪ್ ಪಾವತಿ, ಚಿಲ್ಲರೆ ಕಿರಾಣಿ ಮತ್ತು ಸಗಟು ವ್ಯಾಪಾರಿಗಳ ನಡುವೆಸಮನ್ವಯ ಸಾಧಿಸಬೇಕಾಗಿದೆ. ಗ್ರಾಹಕರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಸರಿಯಾದ ಸಮಯಕ್ಕೆ ಪೂರಸಲು ತಂತ್ರಜ್ಞಾನ ನೆರವಾಗಲಿದೆ.

ಸರಕುಗಳನ್ನು ಸ್ಕ್ಯಾನ್ ಮಾಡಿ ಪ್ರಿಂಟರ್ ಮೂಲಕ ಬಿಲ್‍ಗಳನ್ನು ನೀಡುವ ಮೊಬೈಲ್ ಅಪ್ಲಿಕೇಷನ್‍ಗಳಿವೆ. ಕಿರಾಣಿ ಅಂಗಡಿಗಳ ಮುಂದಿನ ಹಂತದ ಬೆಳವಣಿಗೆ ಇದಾಗಲಿದೆ. ದೇಶದಲ್ಲಿ ಜನರ ಆಹಾರ ಅಭ್ಯಾಸಗಳು ಪ್ರತಿ ನೂರು ಕಿ.ಮೀ.ಗೆ ಬದಲಾಗುತ್ತ ಹೋಗುತ್ತವೆ. ಕಿರಾಣಿ ಅಂಗಡಿಗಳ ಜಾಲ ಇದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಹೀಗಾಗಿ ನಾವಿದನ್ನು ಬೆಂಬಲಿಸಬೇಕು. ದಾಸ್ತಾನು ಆಯ್ಕೆ,ಉತ್ಪನ್ನಗಳನ್ನು ಪ್ರದರ್ಶಿಸುವ ರೀತಿ, ಲಾಭಾಂಶ ಏರಿಕೆ ಇತ್ಯಾದಿ ವಿಷಯಗಳಲ್ಲಿ ನಾವು ಅವರಿಗೆ ನೆರವಾಗಬೇಕಾಗಿದೆ.

ಬೃಹತ್ ರಿಟೇಲ್ ಮತ್ತು ಇ ವಾಣಿಜ್ಯ ತಾಣಗಳು ದೊಡ್ಡ ಪ್ರಮಾಣದ ಲಾಭದ ಮಾರ್ಗೋಪಾಯ ಕಂಡುಕೊಂಡರೂ ಕಿರಾಣಿ ಅಂಗಡಿಗಳು ಈಗಲೂ ವಹಿವಾಟಿನಲ್ಲಿ ಶೇ 80ಕ್ಕಿಂತಲೂ ಹೆಚ್ಚು ಪಾಲು ಹೊಂದಿವೆ. ಕಿರಾಣಿ ಅಂಗಡಿಗಳು, ಇ–ಕಾಮರ್ಸ್‌ಗೆ ಪ್ರತಿಸ್ಪರ್ಧಿಯೇ ಎನ್ನುವುದು ಇಲ್ಲಿ ಮುಖ್ಯವಲ್ಲ. ಬದಲಾಗಿ ಆನ್‍ಲೈನ್, ಆಫ್‍ಲೈನ್‍ಗೆ ಎಷ್ಟು ಪೂರಕವಾಗಿರುತ್ತದೆ ಎನ್ನುವುದು ಮುಂಬರುವ ದಿನಗಳಲ್ಲಿ ಮುಖ್ಯವಾಗಿರಲಿದೆ.

ಬೇರೆ ಬೇರೆ ರೀತಿಯಲ್ಲಿ ಇವೆರಡೂ ಪ್ರಗತಿ ಕಾಣುತ್ತಿವೆ. ತಂತ್ರಜ್ಞಾನವು ವಹಿವಾಟನ್ನು ಸುಲಭವಾಗಿ ಸಬಹುದು. ಆದರೆ ಗ್ರಾಹಕರು ಪರಸ್ಪರಸಂವಹನಕ್ಕೇ ಹೆಚ್ಚು ಒಲವು ಹೊಂದಿರುತ್ತಾರೆ. ಕಿರಾಣಿ ಅಂಗಡಿಗಳು ಗ್ರಾಹಕರ ಜತೆ ವೈಯಕ್ತಿಕ ಸಂಬಂಧ ಹೊಂದಿರುತ್ತಿವೆ. ಈ ಅಂಗಡಿಗಳು ಗ್ರಾಹಕರ ಶಾಪಿಂಗ್ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸುತ್ತವೆ. ಮುಂದೆಯೂ ಅವುಗಳು ಇಂತಹದ್ದೇ ಪ್ರಭಾವ ಉಳಿಸಿಕೊಂಡು ಹೋಗಲಿವೆ. ಈ ಕಾರಣಕ್ಕಾಗಿಯೇ ಅವುಗಳು ಯಶಸ್ವಿಯಾಗಿ ವಹಿವಾಟು ನಡೆಸುತ್ತಿವೆ.

(ಲೇಖಕ, ಮೆಟ್ರೊ ಕ್ಯಾಷ್‌ ಆ್ಯಂಡ್‌ ಕ್ಯಾರಿ
ವ್ಯವಸ್ಥಾಪಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT