ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

58 ಸಾವಿರದ ಗಡಿ ದಾಟಿದ ಸೆನ್ಸೆಕ್ಸ್

Last Updated 3 ಸೆಪ್ಟೆಂಬರ್ 2021, 16:24 IST
ಅಕ್ಷರ ಗಾತ್ರ

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಶುಕ್ರವಾರ ಇದೇ ಮೊದಲ ಬಾರಿಗೆ 58 ಸಾವಿರದ ಗಡಿಯನ್ನು ದಾಟಿ ವಹಿವಾಟು ಕೊನೆಗೊಳಿಸಿದೆ. ವಿದೇಶಿ ಬಂಡವಾಳ ಹೂಡಿಕೆ ನಿರಂತರವಾಗಿ ಆಗುತ್ತಿರುವುದು, ಅರ್ಥ ವ್ಯವಸ್ಥೆಯ ಆರೋಗ್ಯವನ್ನು ಹೇಳುವ ಕೆಲವು ಸೂಚಕಗಳು ಶುಭ ಸಮಾಚಾರ ನೀಡಿದ್ದರಿಂದ ಹೂಡಿಕೆದಾರರು ಉತ್ತೇಜಿತರಾಗಿರುವುದು ಹಾಗೂ ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌ ಷೇರು ಮೌಲ್ಯ ಏರಿಕೆ ಕಂಡಿದ್ದು ಶುಕ್ರವಾರದ ಜಿಗಿತಕ್ಕೆ ಕಾರಣವಾದವು.

277 ಅಂಶ ಏರಿಕೆ ಕಂಡ ಸೆನ್ಸೆಕ್ಸ್ 58,129 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು. ದಿನದ ವಹಿವಾಟಿನ ನಡುವಿನಲ್ಲಿ 58,194 ಅಂಶಗಳಿಗೆ ಏರಿಕೆ ಕಂಡಿತ್ತು. 57 ಸಾವಿರದ ಗಡಿಯಿಂದ 58 ಸಾವಿರಕ್ಕೆ ತಲುಪಲು ಸೆನ್ಸೆಕ್ಸ್ ಕೇವಲ ಮೂರು ದಿನ ತೆಗೆದುಕೊಂಡಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 89 ಅಂಶ ಏರಿಕೆ ಕಂಡು, 17,340ರಲ್ಲಿ ವಹಿವಾಟು ಕೊನೆಗೊಂಡಿತು.

ಈ ವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ ಒಟ್ಟು 2,005 ಅಂಶ ಏರಿದೆ. ನಿಫ್ಟಿ 618 ಅಂಶ ಏರಿದೆ. ಲೋಹ ಮತ್ತು ಆಟೊಮೊಬೈಲ್ ವಲಯದ ಷೇರುಗಳ ಮೌಲ್ಯ ಹೆಚ್ಚಾಗಿದ್ದು ಸೂಚ್ಯಂಕಗಳ ಗಳಿಕೆಯ ಓಟಕ್ಕೆ ನೆರವಾಯಿತು ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಬಿನೋದ್ ಮೋದಿ ಹೇಳಿದ್ದಾರೆ. ಮಿಡ್‌ ಕ್ಯಾಪ್ ಹಾಗೂ ಸ್ಮಾಲ್ ಕ್ಯಾಪ್ ಕಂಪನಿಗಳ ಷೇರುಗಳ ಖರೀದಿ ಕೂಡ ಜೋರಾಗಿ ನಡೆದಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇಕಡ 0.51ರಷ್ಟು ಹೆಚ್ಚಳವಾಗಿದೆ. ಪ್ರತಿ ಬ್ಯಾರೆಲ್‌ಗೆ 73.40 ಅಮೆರಿಕನ್ ಡಾಲರ್‌ಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT