ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಳಿ ಓಟಕ್ಕೆ ಕರಡಿ ತಡೆ: ಸೆನ್ಸೆಕ್ಸ್‌ 609, ನಿಫ್ಟಿ 150 ಅಂಶ ಇಳಿಕೆ

Published 26 ಏಪ್ರಿಲ್ 2024, 15:53 IST
Last Updated 26 ಏಪ್ರಿಲ್ 2024, 15:53 IST
ಅಕ್ಷರ ಗಾತ್ರ

ಮುಂಬೈ: ದೇಶದ ಷೇರುಪೇಟೆಯ ಸತತ ಐದು ದಿನದ ಗೂಳಿ ಓಟಕ್ಕೆ ಶುಕ್ರವಾರ ಕರಡಿ ತಡೆಯೊಡ್ಡಿದೆ. 

ಬ್ಯಾಂಕಿಂಗ್‌, ಹಣಕಾಸು ಮತ್ತು ಗ್ರಾಹಕ ವಸ್ತುಗಳ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿರುವುದು, ಕಚ್ಚಾ ತೈಲ ಬೆಲೆಯೇರಿಕೆ, ರೂಪಾಯಿ ಮೌಲ್ಯ ಇಳಿಯುತ್ತಿರುವುದು, ವಿದೇಶಿ ಬಂಡವಾಳ ಹೊರಹರಿವಿನಿಂದ ಷೇರು ಸೂಚ್ಯಂಕಗಳು ಕುಸಿತ ಕಂಡವು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 609 ಅಂಶ ಇಳಿದು 73,730ಕ್ಕೆ ಸ್ಥಿರಗೊಂಡಿತು. ದಿನದ ವಹಿವಾಟಿನಲ್ಲಿ 722 ಅಂಶ ಕುಸಿತವಾಗಿತ್ತು.  ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 150 ಅಂಶ ಕಡಿಮೆಯಾಗಿ, 22,419ಕ್ಕೆ ಅಂತ್ಯಗೊಂಡಿತು. ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ 176 ಅಂಶ ಮತ್ತು ನಿಫ್ಟಿ 50 ಅಂಶ ಏರಿಕೆಯಾಗಿದ್ದವು.

ಬಜಾಜ್‌ ಫೈನಾನ್ಸ್‌, ಇಂಡಸ್‌ಇಂಡ್‌ ಬ್ಯಾಂಕ್‌, ನೆಸ್ಲೆ, ಕೋಟಕ್‌ ಮಹೀಂದ್ರ ಬ್ಯಾಂಕ್‌ ಮತ್ತು ಮಹೀಂದ್ರ ಆ್ಯಂಡ್‌ ಮಹೀಂದ್ರ ಷೇರಿನ ಮೌಲ್ಯವು ಇಳಿಕೆಯಾದವು. ಟೆಕ್‌ ಮಹೀಂದ್ರ, ವಿಪ್ರೊ, ಅಲ್ಟ್ರಾಟೆಕ್‌ ಸಿಮೆಂಟ್‌, ಟೈಟನ್‌ ಮತ್ತು ಎಕ್ಸಿಸ್‌ ಬ್ಯಾಂಕ್‌ ಷೇರು ಮೌಲ್ಯ ಗಳಿಕೆ ಕಂಡಿವೆ. ಬಿಎಸ್‌ಇ ಮಿಡ್‌ಕ್ಯಾಪ್‌ ಸೂಚ್ಯಂಕ ಶೇ 0.83 ಮತ್ತು ಸ್ಮಾಲ್‌ಕ್ಯಾಪ್‌ ಶೇ 0.27ರಷ್ಟು ಇಳಿಕೆ ಕಂಡವು. 

ಏಷ್ಯನ್‌ ಮಾರುಕಟ್ಟೆಯಲ್ಲಿ ಸೋಲ್‌, ಟೊಕಿಯೊ, ಶಾಂಘೈ ಮತ್ತು ಹಾಂಗ್‌ಕಾಂಗ್‌ ಸಕಾರಾತ್ಮಕವಾಗಿ ಮುಕ್ತಾಯಗೊಂಡವು. ಜಾಗತಿಕ ಬ್ರೆಂಟ್‌ ಕಚ್ಚಾ ತೈಲವು ಶೇ 0.31ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 89.21 ಡಾಲರ್‌ಗೆ (₹7,445) ಮುಟ್ಟಿದೆ.

ಟೆಕ್‌ ಮಹೀಂದ್ರ ಷೇರು ಶೇ 7ರಷ್ಟು ಏರಿಕೆ: 

ಐ.ಟಿ ವಲಯದ ಟೆಕ್‌ ಮಹೀಂದ್ರ ಕಂಪನಿಯ ಷೇರಿನ ಮೌಲ್ಯ ಶೇ 7ರಷ್ಟು ಏರಿಕೆಯಾಗಿದೆ. ಇದರಿಂದ ಕಂಪನಿಯ ಮಾರುಕಟ್ಟೆ ಮೌಲ್ಯಕ್ಕೆ (ಎಂ–ಕ್ಯಾಪ್‌) ಒಂದೇ ದಿನ ₹8,537 ಕೋಟಿ ಸೇರ್ಪಡೆಯಾಗಿದ್ದು, ಒಟ್ಟು ಎಂ–ಕ್ಯಾಪ್‌ ₹1.24 ಲಕ್ಷ ಕೋಟಿಗೆ ಮುಟ್ಟಿದೆ.

ಬಿಎಸ್ಇ ಮತ್ತು ಎನ್‌ಎಸ್‌ಇಯಲ್ಲಿ ಷೇರಿನ ಬೆಲೆ ಕ್ರಮವಾಗಿ ₹1,277 ಮತ್ತು ₹1,280ಕ್ಕೆ ಮುಟ್ಟಿದೆ.  

2023–24ರ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ಕಂಪನಿಯ ಲಾಭ ಮತ್ತು ವರಮಾನದಲ್ಲಿ ಇಳಿಕೆಯಾಗಿತ್ತು. ಕಂಪನಿಯ ಸಿಇಒ ಮೋಹಿತ್‌ ಜೋಶಿ, ಕಂಪನಿಯ ವರಮಾನ ಬೆಳವಣಿಗೆಯನ್ನು ವೇಗಗೊಳಿಸಲು ಮತ್ತು ಲಾಭವನ್ನು ಹೆಚ್ಚಿಸಲು ಮಹತ್ವಾಕಾಂಕ್ಷೆಯ ಮೂರು ವರ್ಷಗಳ ಮಾರ್ಗಸೂಚಿಯನ್ನು ವಿವರಿಸಿದರು. ಇದರ ಬೆನ್ನಲೇ ಷೇರಿನ ಮೌಲ್ಯ ಏರಿಕೆಯಾಗಿದೆ.

ಬಜಾಜ್‌ ಫೈನಾನ್ಸ್‌: ₹34,914 ಕೋಟಿ ನಷ್ಟ

ಬಜಾಜ್‌ ಫೈನಾನ್ಸ್‌ ಮಾರ್ಚ್‌ ತ್ರೈಮಾಸಿಕದ ಗಳಿಕೆಯು ಹೂಡಿಕೆದಾರರನ್ನು ಮನಸ್ಸನ್ನು ಗೆಲ್ಲಲು ವಿಫಲವಾದ್ದರಿಂದ ಕಂಪನಿಯ ಷೇರಿನ ಮೌಲ್ಯ ಶೇ 8ರಷ್ಟು ಇಳಿಕೆಯಾಗಿದೆ. 

ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಪ್ರತಿ ಷೇರಿನ ಬೆಲೆ ಕ್ರಮವಾಗಿ ₹6,729 ಮತ್ತು ₹6,730ಕ್ಕೆ ಮುಟ್ಟಿತು. ಒಂದೇ ದಿನ ಕಂಪನಿಯ ಎಂ–ಕ್ಯಾಪ್‌ ₹34,914 ಕೋಟಿ ಕರಗಿ, ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯ ₹4.16 ಲಕ್ಷ ಕೋಟಿಯಾಗಿದೆ. 

ಗಳಿಕೆ ಕಂಡ ಕಂಪನಿಗಳು (ಶೇಕಡಾವಾರು)

ಟೆಕ್‌ ಮಹೀಂದ್ರ; 7.34

ವಿಪ್ರೊ; 0.79

ಐಟಿಸಿ; 0.56

ಅಲ್ಟ್ರಾಟೆಕ್‌ ಸಿಮೆಂಟ್‌; 0.53

ಟೈಟನ್‌; 0.33

ಇಳಿಕೆ ಕಂಡ ಕಂಪನಿಗಳು (ಶೇಕಡಾವಾರು) 

ಬಜಾಜ್ ಫೈನಾನ್ಸ್‌; 7.73

ಬಜಾಜ್‌ ಫಿನ್‌ಸರ್ವ್‌; 3.55

ಇಂಡಸ್‌ಇಂಡ್‌ ಬ್ಯಾಂಕ್‌; 3.36

ನೆಸ್ಲೆ ಇಂಡಿಯಾ; 3.08

ಕೋಟಕ್‌ ಬ್ಯಾಂಕ್‌; 2.11

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT