ಔಷಧಿಗಳ ಡಿಜಿಟಲ್‌ ಮಾಹಿತಿಗೆ ಮೆಡಿಬಾಕ್ಸ್‌

7

ಔಷಧಿಗಳ ಡಿಜಿಟಲ್‌ ಮಾಹಿತಿಗೆ ಮೆಡಿಬಾಕ್ಸ್‌

Published:
Updated:
Deccan Herald

ಅನೇಕ ಸಂದರ್ಭಗಳಲ್ಲಿ ಕಾಯಿಲೆಪೀಡಿತರಿಗೆ ನಿರ್ದಿಷ್ಟವಾದ ಜೀವ ರಕ್ಷಕ ಔಷಧಿ ಸಿಗದೆ ಅನೇಕರು ಪರಿತಪಿಸುತ್ತಾರೆ. ಸುತ್ತಮುತ್ತಲಿನ ಔಷಧಿ ಅಂಗಡಿ, ಆಸ್ಪತ್ರೆಗಳಿಗೆ ಅಲೆದಾಡಿದರೂ ತಕ್ಷಣಕ್ಕೆ ಔಷಧ ಸಿಗದೆ ರೋಗಿಗಳ ಸಂಬಂಧಿಕರು ಹೈರಾಣಾಗುತ್ತಾರೆ. ನಿರ್ದಿಷ್ಟ ಬ್ರ್ಯಾಂಡ್‌ನ ಔಷಧಿ ತಯಾರಿಸುವ ಸಂಸ್ಥೆಗಳ, ಸಗಟು ರೂಪದಲ್ಲಿ ವಿತರಿಸುವವರ, ಸರಣಿ ಪೂರೈಕೆದಾರರ ಬಳಿ ಇರುವ ಔಷಧಿಗಳ ಮಾಹಿತಿಯು ತಕ್ಷಣಕ್ಕೆ ಮತ್ತು ಸುಲಭವಾಗಿ ಎಲ್ಲ ಭಾಗಿದಾರರಿಗೆ ದೊರೆಯುವ ವ್ಯವಸ್ಥೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅನೇಕರು ಹಲವಾರು ಬಾರಿ ಅಂದುಕೊಂಡಿರಬಹುದು. ಅಂತಹ ಅಗತ್ಯವನ್ನು ಬೆಂಗಳೂರಿನ ನವೋದ್ಯಮ ಮೆಡಿಬಾಕ್ಸ್‌ (medibox) ಒದಗಿಸುತ್ತಿದೆ. ಔಷಧಿಗಳ ಪೂರೈಕೆ ಸರಪಳಿಗೆ ಡಿಜಿಟಲ್‌ ಸ್ಪರ್ಶ ನೀಡಿರುವುದು ಇದರ ವಿಶೇಷತೆಯಾಗಿದೆ.

ಔಷಧಿ ತಯಾರಿಕಾ ಕಂಪನಿ ‘ಆರ್‌ಎಸ್‌ಎಂ ಗ್ರೂಪ್‌’ನ ಸಿಇಒ ಆಗಿದ್ದ ಭವಿಕ್‌ ಕುಮಾರ್‌ ಅವರು ಕೆಲ ವರ್ಷಗಳ ಹಿಂದೆಯೇ ತಮ್ಮ ಹುದ್ದೆ ತೊರೆದು, ಔಷಧಿ ತಯಾರಿಕೆ ಮತ್ತು ಮಾರಾಟ ಕ್ಷೇತ್ರದಲ್ಲಿನ ಇಂತಹ ದೊಡ್ಡ ಕೊರತೆ ತುಂಬುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದರು. ಅಮೆರಿಕೆಗೆ ತೆರಳಿ ಈ ಸಂಬಂಧ ಅಧ್ಯಯನವನ್ನೂ ನಡೆಸಿದ್ದರು. ಸ್ವದೇಶಕ್ಕೆ ಮರಳಿದ ನಂತರ, ಔಷಧ ಮತ್ತು ವೈದ್ಯಕೀಯ ರಂಗದ ಡಿಜಿಟಲ್ ಅಗತ್ಯ ಪೂರೈಸಲು ಈ ನವೋದ್ಯಮ ಆರಂಭಿಸಿದ್ದಾರೆ. ಇದೊಂದು ಮೊಬೈಲ್‌ ಆ್ಯಪ್‌ ಮತ್ತು ಅಂತರ್ಜಾಲ ತಾಣ ಆಧರಿಸಿ ನಡೆಯುವ ವಹಿವಾಟು ಆಗಿದೆ.

ಈ ಸ್ಟಾರ್ಟ್‌ಅಪ್‌ ಮೂಲತಃ ಸಾಫ್ಟ್‌ವೇರ್‌ ಸೇವಾ ಸಂಸ್ಥೆಯಾಗಿದೆ. ಇದು ಔಷಧಿಗಳನ್ನೇನೂ ಪೂರೈಕೆ ಮಾಡುವುದಿಲ್ಲ. ಆದರೆ, ಯಾವ ಬ್ರ್ಯಾಂಡ್‌ನ ಔಷಧಿ ಯಾವ ಹೆಸರಿನಲ್ಲಿ ಯಾರ ಬಳಿ ಅಥವಾ ಎಲ್ಲಿ ಇದೆ ಎನ್ನುವ ಮಾಹಿತಿಯನ್ನು ಖಚಿತವಾಗಿ ಒದಗಿಸುತ್ತದೆ. ವಹಿವಾಟುದಾರರಿಂದ ವಹಿವಾಟುದಾರರ ಮಧ್ಯೆ (ಬಿಟುಬಿ) ನಡೆಯುವ ವಾಣಿಜ್ಯ ಚಟುವಟಿಕೆಗೆ ಡಿಜಿಟಲ್‌ ವೇದಿಕೆ ಕಲ್ಪಿಸುವ ಸ್ಟಾರ್ಟ್‌ಅಪ್‌ ಇದಾಗಿದೆ.

‘ಯಾವ ಔಷಧಿ ಎಲ್ಲಿದೆ, ಯಾವಾಗ ಪಡೆಯಬಹುದು ಮತ್ತಿತರ ಮಾಹಿತಿಯನ್ನು ಇಲ್ಲಿ ಸುಲಭವಾಗಿ ಪಡೆಯಬಹುದು. ದೇಶದಲ್ಲಿ 45 ಸಾವಿರ ವಿತರಕರು ಇದ್ದಾರೆ. 1.7 ಲಕ್ಷದಷ್ಟು ಬ್ರ್ಯಾಂಡ್‌ ಹೆಸರಿನಲ್ಲಿ ಇರುವ ಔಷಧಿಗಳು ಯಾವ ವಿತರಕರ ಬಳಿ, ಯಾವ ಆಸ್ಪತ್ರೆಯಲ್ಲಿ ದೊರೆಯಲಿದೆ ಎನ್ನುವ ಖಚಿತ ಮಾಹಿತಿ ಇಲ್ಲಿ ಲಭ್ಯ ಇರುವುದರಿಂದ ಔಷಧಿ ತಯಾರಕರು ಮತ್ತು ವಿತರಕರಿಗೆ ಇದರಿಂದ ವ್ಯಾಪಾರ ವಿಸ್ತರಿಸಲು ಹೆಚ್ಚಿನ ಪ್ರಯೋಜನ ದೊರೆಯಲಿದೆ.  ಚಿಲ್ಲರೆ ಮಾರಾಟಗಾರರೂ ಈ ಜಾಲಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸೇರ್ಪಡೆಗೊಂಡರೆ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನ ದೊರೆಯಲಿದೆ’ ಎಂದು ಭವಿಕ್‌ ಕುಮಾರ್‌ ಹೇಳುತ್ತಾರೆ.

‘ಕೆಲವೊಮ್ಮೆ ವೈದ್ಯರು ಬರೆದುಕೊಟ್ಟ ಔಷಧಿಗೂ, ಮಳಿಗೆಗಳಲ್ಲಿ ಲಭ್ಯ ಇರುವ ಔಷಧಿಗಳ ಹೆಸರಿಗೂ ಹೋಲಿಕೆಯಾಗುವುದಿಲ್ಲ. ದೇಶದಲ್ಲಿ ಲಭ್ಯ ಇರುವ ಔಷಧಿಗಳ ಬ್ರ್ಯಾಂಡ್‌ಗಳ ಸಂಖ್ಯೆ 3 ಲಕ್ಷದಷ್ಟಿದೆ. ಆದರೆ, ಯಾವುದೇ ಒಂದು ಔಷಧಿ ಮಳಿಗೆಯಲ್ಲಿ 3 ಸಾವಿರ ಬ್ರ್ಯಾಂಡ್‌ನ ಉತ್ಪನ್ನಗಳಷ್ಟೇ ಲಭ್ಯ ಇರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಸೂಕ್ತ ಔಷಧಿಯ ಹುಡುಕಾಟ ಮತ್ತು ಖರೀದಿಗೆ ಮೆಡಿಬಾಕ್ಸ್‌ ನೆರವಿಗೆ ಬರುತ್ತದೆ. ಮೆಡಿಬಾಕ್ಸ್‌ ತಾಣದಲ್ಲಿ ಬ್ರ್ಯಾಂಡ್‌ ಹೆಸರು ಟೈಪಿಸಿದರೆ ವಿತರಕರ ಮಾಹಿತಿ ದೊರೆಯುತ್ತದೆ’ ಎಂದು ಅವರು ಹೇಳುತ್ತಾರೆ.

ಸಗಟು ವ್ಯಾಪಾರಿಗಳು, ದೊಡ್ಡ ಆಸ್ಪತ್ರೆಗಳಿಂದ ಬರುವ  ಕಮಿಷನ್ ಈ ಸ್ಟಾರ್ಟ್‌ಅಪ್‌ನ ವರಮಾನದ ಮೂಲ. ರಿಟೇಲ್‌ ವರ್ತಕರಿಗೆ ಇದರ ಸೇವೆ ಉಚಿತವಾಗಿರುತ್ತದೆ. ತಂತ್ರಜ್ಞಾನ ನೆರವಿನಿಂದ ಔಷಧಿಗಳ ಮಾರಾಟ ವಹಿವಾಟನ್ನು ಹೊಸ ಎತ್ತರಕ್ಕೆ ಒಯ್ಯುವ ನಿಟ್ಟಿನಲ್ಲಿ ಭವಿಕ್‌ ಕುಮಾರ್‌ ಕಾರ್ಯಪ್ರವೃತ್ತರಾಗಿದ್ದಾರೆ.

ಸಕಾಲದಲ್ಲಿ ಲಭ್ಯ ಇರದ ಕಾರಣಕ್ಕೆ ಮಾರಾಟಗೊಳ್ಳದೆ ಉಳಿಯುವ, ಅವಧಿ ಪೂರ್ಣಗೊಂಡ ₹ 3,000 ಕೋಟಿ ಮೊತ್ತದ  ಔಷಧಿಗಳನ್ನು ಪ್ರತಿ ವರ್ಷ ಸುಟ್ಟು ಹಾಕಲಾಗುತ್ತದೆ. ಇಂತಿಂಥ ಔಷಧಿಗಳ ಬಳಕೆ ಅವಧಿ ಕೊನೆಗೊಳ್ಳುವ ಸಮಯ ಹತ್ತಿರ ಬಂದಿದೆ. ಇಂತಿಂತಹ ಕಡೆ ಇವುಗಳಿಗೆ ಬೇಡಿಕೆ ಹೆಚ್ಚಿಗೆ ಇದೆ ಎನ್ನುವ ಮಾಹಿತಿ ಒದಗಿಸಿದರೆ, ಅವಧಿ ತೀರುವ ಮೊದಲೇ ಔಷಧಿಗಳನ್ನು ಅಗತ್ಯ ಇದ್ದವರಿಗೆ ತಲುಪಿಸಬಹುದು. ಇದರಿಂದ ಅನಗತ್ಯವಾಗಿ ಸುಡುವುದನ್ನು ತಡೆಗಟ್ಟಬಹುದು. ಈ ಸಮಸ್ಯೆಗೆ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳಲು ಮೆಡಿಬಾಕ್ಸ್‌ ನೆರವಾಗುತ್ತಿದೆ.

ಔಷಧಿ ಮತ್ತು ಆರೋಗ್ಯ ರಕ್ಷಕ ಉತ್ಪನ್ನಗಳ ಆನ್‌ಲೈನ್‌ ಮಾರುಕಟ್ಟೆ, ಆನ್‌ಲೈನ್‌ ಖರೀದಿ ಮತ್ತು ಆನ್‌ಲೈನ್‌ ವಿತರಣೆಗೆ ವಹಿವಾಟುದಾರರಿಂದ ವಹಿವಾಟುದಾರರಿಗೆ (ಬಿಟುಬಿ) ಮೆಡಿಬಾಕ್ಸ್‌  ಸ್ಟಾರ್ಟ್‌ಅಪ್‌ ಡಿಜಿಟಲ್‌ ವೇದಿಕೆ ಕಲ್ಪಿಸಿಕೊಟ್ಟಿದೆ. ಉತ್ಪನ್ನಗಳ ಖರೀದಿಗೆ ವಿತರಕರು ಮಾಡುವ ವೆಚ್ಚ ತಗ್ಗಿಸಲು ಮತ್ತು ವ್ಯಾಪಾರಿಗಳ ಮಾರಾಟ ಹೆಚ್ಚಿಸಲೂ ನೆರವಾಗುತ್ತಿದೆ. 

ನಿರ್ದಿಷ್ಟ ಸ್ಥಳ ಆಧರಿಸಿದ, ತಕ್ಷಣಕ್ಕೆ ಸರಕಿನ ಮಾಹಿತಿ ಒದಗಿಸುವ ಕ್ಲೌಡ್‌ ಸೌಲಭ್ಯ ಇದಾಗಿದೆ. ಆರೋಗ್ಯ ಕಾಳಜಿ ಕ್ಷೇತ್ರದಲ್ಲಿ ಬಳಕೆಯಾಗುವ ಔಷಧಿ, ವೈದ್ಯಕೀಯ ಸಾಧನ ಮತ್ತು ಪೂರಕ ಉತ್ಪನ್ನಗಳ ಖಚಿತ ಮಾಹಿತಿ ಪಡೆಯುವ ವಿಶಿಷ್ಟ ತಾಣವೂ ಇದಾಗಿದೆ. ವೈದ್ಯಕೀಯ ಲೋಕದ ಉತ್ಪನ್ನಗಳ ಮಾರಾಟಗಾರರು ಮತ್ತು ಖರೀದಿದಾರರು ಮೆಡಿಬಾಕ್ಸ್‌ ಅಂತರ್ಜಾಲ ತಾಣದ ಮೂಲಕ ಪರಸ್ಪರ ತಿಳಿದುಕೊಳ್ಳಲು, ಖಾತರಿದಾಯಕ ಉತ್ಪನ್ನಗಳನ್ನು ಖರೀದಿಸಲು, ಮಾರಾಟ ಮಾಡಲು  ಮತ್ತು ವಹಿವಾಟು ವಿಸ್ತರಣೆಯ ಒಳನೋಟ ಪಡೆಯಲು ನೆರವಾಗಲಿದೆ.

ಜೀವರಕ್ಷಕ ಔಷಧಿಗಳು ಯಾವುದೇ ಕಾರಣಕ್ಕೂ ಯಾರೊಬ್ಬರಿಗೂ ಸಿಗದೆ ಪರಿತಪಿಸಬಾರದು ಎನ್ನುವ ಸದುದ್ದೇಶದಿಂದ ಈ ನವೋದ್ಯಮ ಸ್ಥಾಪಿಸಲಾಗಿದೆ. ಉದ್ಯಮ ಗ್ರಾಹಕರಿಂದ ಎಲ್ಲೆಡೆ ಜೀವರಕ್ಷಕ ಔಷಧಿಗಳು ಸುಲಭವಾಗಿ ದೊರೆಯುವಂತೆ ಮಾಡುವುದೇ ಈ ಸಾಫ್ಟ್‌ವೇರ್‌ನ ಮುಖ್ಯ ಧ್ಯೇಯವಾಗಿದೆ.

ಮಾಹಿತಿಗೆ home.medibox.in ಅಂತರ್ಜಾಲ ತಾಣಕ್ಕೆ ಭೇಟಿ ನೀಡಬಹುದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !