ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರಾಣಿ ಅಂಗಡಿಗೆ ‘ಡಿಜಿಟಲ್‌’ ಸ್ಪರ್ಶ

Last Updated 5 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಗ್ರಾಹಕರು ನಿಧಾನವಾಗಿ ಆಧುನಿಕ ರಿಟೇಲ್‌ ವಹಿವಾಟು ಮತ್ತು ಆನ್‌ಲೈನ್‌ ಮಾರಾಟದ (ಇ–ಕಾಮರ್ಸ್‌) ಆಕರ್ಷಣೆಗೆ ಒಳಗಾಗುತ್ತಿದ್ದಾರೆ. ಇದರಿಂದ ಬೆಂಗಳೂರು ಮಹಾನಗರದಲ್ಲಿನ ಅಸಂಖ್ಯ ಸಣ್ಣ, ಪುಟ್ಟ ಕಿರಾಣಿ ಅಂಗಡಿಗಳು, ಇಂತಹ ವಹಿವಾಟಿನ ತೀವ್ರ ಪೈಪೋಟಿ ಎದುರಿಸುತ್ತಿವೆ. ಸಣ್ಣ ವರ್ತಕರಲ್ಲಿ ವಹಿವಾಟು ಮತ್ತು ಲಾಭದ ಪ್ರಮಾಣ ಕಡಿಮೆಯಾಗುವ ಆತಂಕ ಕಂಡು ಬರುತ್ತಿದೆ. ಮಾರುಕಟ್ಟೆಯಲ್ಲಿನ ತೀವ್ರ ಪೈಪೋಟಿ ಎದುರಿಸಲು ವರ್ತಕರು ಮುಂದಾಗಿದ್ದರೂ, ಸೀಮಿತ ಸ್ಥಳಾವಕಾಶ, ಬಳಿಯಲ್ಲಿ ಸಾಕಷ್ಟು ಹಣ ಇಲ್ಲದಿರುವುದು ಅವರ ಕೈ ಕಟ್ಟಿಹಾಕಿದೆ.

ಅಂಗಡಿಯನ್ನು ಒಬ್ಬನೇ ನಿರ್ವಹಿಸುವ ಅನಿವಾರ್ಯತೆ, ಬಳಿಯಲ್ಲಿ ಇರುವ ಸೀಮಿತ ಪ್ರಮಾಣದ ಹಣ, ಮಳಿಗೆಯನ್ನು ಗ್ರಾಹಕರನ್ನು ಸೆಳೆಯುವ ರೀತಿಯಲ್ಲಿ ವ್ಯವಸ್ಥಿತವಾಗಿ ಇರಿಸಲು, ಆಧುನಿಕತೆಯ ಸ್ಪರ್ಶ ನೀಡಲು ಮುಂದಾಗಿದ್ದರೂ ಹಲವಾರು ಅಡೆತಡೆಗಳಿಂದ ಸಾಧ್ಯವಾಗುತ್ತಿಲ್ಲ. ಕಿರಾಣಿ ವರ್ತಕರ ಇಂತಹ ಪರಿಸ್ಥಿತಿ ದೂರ ಮಾಡಲು, ಅವರ ವಹಿವಾಟು ಹೆಚ್ಚಿಸುವ ಮೂಲಕ ತನ್ನ ವಹಿವಾಟನ್ನೂ ವಿಸ್ತರಿಸುವ ಉದ್ದೇಶಕ್ಕೆ ಸಗಟು ಮಾರಾಟ ವಹಿವಾಟಿನ ಮತ್ತು ವರ್ತಕರಿಗೆ ಮಾತ್ರ ಸರಕುಗಳನ್ನು ಮಾರಾಟ ಮಾಡುವ (ಬಿಟುಬಿ) ಮೆಟ್ರೊ ಕ್ಯಾಷ್‌ ಆ್ಯಂಡ್‌ ಕ್ಯಾರಿ ಸಂಸ್ಥೆ ಮುಂದಾಗಿದೆ.

ಕೇಂದ್ರ ಸರ್ಕಾರದ ‘ಡಿಜಿಟಲ್‌ ಭಾರತ’ ಕಾರ್ಯಕ್ರಮಕ್ಕೆ ಪೂರಕವಾಗಿ ಸಂಸ್ಥೆಯು ಕಿರಾಣಿ ಅಂಗಡಿಗಳಿಗೆ ತಂತ್ರಜ್ಞಾನದ ನೆರವು ಕಲ್ಪಿಸಿ ಅವುಗಳನ್ನು ಸಶಕ್ತಗೊಳಿಸಲು ಸಂಸ್ಥೆ ಯೋಜನೆ ಹಮ್ಮಿಕೊಂಡಿದೆ. ಇದರ ಅಂಗವಾಗಿ ಪಾಯಿಂಟ್ ಆಫ್‌ ಸೇಲ್ (ಪಿಒಪಿ) ಯಂತ್ರ ಅಳವಡಿಕೆ, ‘ಬಿಟುಸಿ’ ವಿಧಾನ ಮತ್ತು ಡಿಜಿಟಲ್‌ ಪಾವತಿ ಸೌಲಭ್ಯ, ಮಳಿಗೆಗೆ 48 ಗಂಟೆಗಳಲ್ಲಿ ಆಧುನಿಕತೆಯ ಸ್ಪರ್ಶ, ವಿವಿಧ ಹಣಕಾಸು ಪಾಲುದಾರರ ನೆರವಿನಿಂದ ಸಾಲ ಸೌಲಭ್ಯ ಒದಗಿಸಲು ನೆರವಾಗುತ್ತಿದೆ.

ಸಣ್ಣ ಅಂಗಡಿಗಳ ಮಾಲೀಕರು ಗ್ರಾಹಕರ ವಿವಿಧ ಅಗತ್ಯಗಳನ್ನು ಪೂರೈಸಲು ವಿಭಿನ್ನ ಸಗಟು ವರ್ತಕರ ಬಳಿಗೆ ತೆರಳಿ ಸರಕು ಖರೀದಿಸುವುದರಿಂದ ಸಮಯ ವ್ಯರ್ಥ ಮಾಡಬೇಕಾಗುತ್ತದೆ. ಕೆಲ ಸಗಟು ಪೂರೈಕೆದಾರರು ಅಂಗಡಿಗೆ ಸರಕು ಪೂರೈಸಲು ಬಂದಾಗ ಗ್ರಾಹಕರನ್ನು ನಿರ್ಲಕ್ಷಿಸಬೇಕಾಗುತ್ತದೆ. ಅದರ ಬದಲಿಗೆ ಮೆಟ್ರೊ ಜತೆ ವಹಿವಾಟು ನಡೆಸುತ್ತಿದ್ದರೆ ಈ ಎಲ್ಲ ರಗಳೆಗಳು ಇರುವುದಿಲ್ಲ. ಚಿಟಿಕೆ ಹೊಡೆದಷ್ಟು ಸುಲಭವಾಗಿ ಸಗಟು ರೂಪದಲ್ಲಿ ಸರಕನ್ನು ಕುಳಿತಲ್ಲಿಯೇ ಖರೀದಿಸಬಹುದು. ‘ಪಿಒಪಿ’ ಸಾಧನದ ಮೂಲಕ ಗ್ರಾಹಕರ ಜತೆಗಿನ ವಹಿವಾಟು ನಡೆಸುವುದರ ಜತೆಗೆ ಅಂಗಡಿಗೆ ಖರೀದಿಸಬೇಕಾದ ಸರಕುಗಳ ವಿವರ ದಾಖಲಿಸಿದರೆ ಅದು ನೇರವಾಗಿ ಮೆಟ್ರೊ ತಲುಪುತ್ತದೆ. ಕೆಲವೇ ಗಂಟೆಗಳಲ್ಲಿ ಅಂಗಡಿ ಬಾಗಿಲಿಗೆ ಸರಕನ್ನು ಕಳಿಸುವ ವ್ಯವಸ್ಥೆ ಮೆಟ್ರೊದಲ್ಲಿ ಇದೆ. ಮೆಟ್ರೊ ಜತೆ ನಿರಂತರವಾಗಿ ವ್ಯವಹರಿಸುವ ವರ್ತಕರನ್ನು ಪ್ರೋತ್ಸಾಹಿಸುವ ಪುರಸ್ಕಾರ ಯೋಜನೆಯೂ ಇದೆ.

‘ಸಣ್ಣ ವರ್ತಕರು ಮತ್ತು ಕಿರಾಣಿ ಅಂಗಡಿ ಮಾಲೀಕರ ದನಿಯಾಗಿರುವ ಸಂಸ್ಥೆಯು, ಕಿರಾಣಿ ಅಂಗಡಿಗಳ ಯಶಸ್ಸಿನಲ್ಲಿಯೇ ತನ್ನ ಯಶಸ್ಸು ಅಡಗಿದೆ ಎನ್ನುವ ತತ್ವದಲ್ಲಿ ನಂಬಿಕೆ ಇರಿಸಿ ವಹಿವಾಟು ನಡೆಸುತ್ತಿದೆ. ಆಧುನಿಕ ಕಿರಾಣಿ ಮತ್ತು ಇ–ಕಾಮರ್ಸ್‌ ವಿರುದ್ಧದ ಹೋರಾಟದಲ್ಲಿ ಕಿರಾಣಿ ಅಂಗಡಿಗಳು ತಮ್ಮ ಅಸ್ತಿತ್ವ ಉಳಿಸಿಕೊಂಡು ವಹಿವಾಟನ್ನು ಗಮನಾರ್ಹವಾಗಿ ವಿಸ್ತರಿಸಲು ನೆರವಾಗುತ್ತಿದೆ.

‘ಬೆಂಗಳೂರಿನಲ್ಲಿ ಮೆಟ್ರೊದ 6 ದೊಡ್ಡ ಮಳಿಗೆಗಳು ಇವೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಮತ್ತು ಸುತ್ತಮುತ್ತಲಿನ 100 ಕಿ. ಮೀ ವ್ಯಾಪ್ತಿಯಲ್ಲಿನ ವರ್ತಕರಿಗೆ ಈ ಸೌಲಭ್ಯ ದೊರೆಯುತ್ತಿದೆ. ಶೀಘ್ರದಲ್ಲಿಯೇ ಉತ್ತರ ಕರ್ನಾಟಕದಲ್ಲಿಯೂ ವಹಿವಾಟು ವಿಸ್ತರಿಸಲಿದೆ. ರಾಜ್ಯದಾದ್ಯಂತ ವಹಿವಾಟು ವಿಸ್ತರಣೆ ಮಾಡುವ ಆಲೋಚನೆಯೂ ಇದೆ’ ಎಂದು ಮೆಟ್ರೊದ ಮುಖ್ಯ ಕಾರ್ಯಾಚರಣೆ ಅಧಿಕಾರಿ (ಸಿಒಒ) ಮನೀಷ್‌ ಸಬ್ನಿಸ್‌ ಹೇಳುತ್ತಾರೆ.

ಡಿಜಿಟಲ್‌ ಸ್ಪರ್ಶ ಮತ್ತು ಆಧುನಿಕತೆ ಅಳವಡಿಕೆ ಸೌಲಭ್ಯ ಪಡೆಯುವುದಕ್ಕೆ ಕಿರಾಣಿ ಅಂಗಡಿ ಮಾಲೀಕರಿಗೆ ಉಚಿತ ಸದಸ್ಯತ್ವ ನೀಡಲಾಗುವುದು. ವಹಿವಾಟು ಮತ್ತು ಗುರುತಿನ ಚೀಟಿಯ ದಾಖಲೆ ಇದ್ದರೆ ಸಾಕು. ಹಣಕಾಸು ಪಾಲುದಾರರಾಗಿರುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ ಸಾಲ ಸೌಲಭ್ಯ ಪಡೆಯಲು ನೆರವು ನೀಡಲಾಗುವುದು.
₹ 20 ಸಾವಿರದಿಂದ ₹ 25 ಲಕ್ಷದವರೆಗೆ ಸಾಲ ದೊರೆಯಲಿದೆ. ಈ ನೆರವಿನ ಕಾರ್ಯಕ್ರಮಕ್ಕೆ ವರ್ತಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

‘ಸ್ವಂತ ಬ್ರ್ಯಾಂಡ್‌ನ ಸರಕುಗಳಿಗೂ ಮೆಟ್ರೊ ಮಾರುಕಟ್ಟೆ ವಿಸ್ತರಿಸುತ್ತಿದೆ. ರಾಷ್ಟ್ರೀಯ ಬ್ರ್ಯಾಂಡ್‌ನ ಗುಣಮಟ್ಟದ ಉತ್ಪನ್ನಗಳನ್ನೇ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಮೆಟ್ರೊ ಬ್ರ್ಯಾಂಡ್‌ನ ಸರಕುಗಳ ಮಾರಾಟಕ್ಕೆ ವರ್ತಕರಿಗೆ ಹೆಚ್ಚಿನ ಲಾಭಾಂಶ ನೀಡಲಾಗುತ್ತಿದೆ. ಕುರುಕಲು ತಿಂಡಿ, ಆಹಾರ ಪದಾರ್ಥ, ಸ್ನಾನದ ಮನೆಯ ಉತ್ಪನ್ನಗಳನ್ನು ಪರಿಚಯಿಸಲಾಗಿದೆ.

‘ನಾಲ್ಕು ಬ್ರ್ಯಾಂಡ್‌ಗಳಡಿ ಈ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಉತ್ಪನ್ನಗಳಿಗೂ ತುಂಬ ಬೇಡಿಕೆ ಇದೆ. ಈ ಉತ್ಪನ್ನಗಳ ತಯಾರಿಕೆಗೆ ಮಹಿಳಾ ಉದ್ಯಮಿಗಳಿಗೆ ಉತ್ತೇಜನ ನೀಡುತ್ತ ಬರಲಾಗಿದೆ. ಸಾವಯವ ಉತ್ಪನ್ನಗಳ ತಯಾರಕರ ಜತೆಗಿನ ಸಹಯೋಗದಲ್ಲಿ ಕ್ರಿಮಿನಾಶಕಗಳ ಬಳಕೆ ಮುಕ್ತವಾದ ‘ಫೈನ್‌ಲೈಫ್‌ ಬಯೊ’ ಬ್ರ್ಯಾಂಡ್‌ನ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ’ ಎಂದು ಮನೀಷ್‌ ಹೇಳುತ್ತಾರೆ.

ಈಸಿಪೇ ಸಾಫ್ಟ್‌ವೇರ್‌ ಸಂಸ್ಥೆ ಅಭಿವೃದ್ಧಿಪಡಿಸಿರುವ ‘ಪಿಒಪಿ’ ಯಂತ್ರದ ನೆರವಿನಿಂದ ಕಿರಾಣಿ ಅಂಗಡಿಗಳ ವಹಿವಾಟಿಗೂ ಡಿಜಿಟಲ್‌ ಸ್ಪರ್ಶ ನೀಡಲಾಗುತ್ತಿದೆ. ಅಂಗಡಿಗೆ ಬೇಕಾದ ಸರಕುಗಳ ಆನ್‌ಲೈನ್‌ ಖರೀದಿ ಮತ್ತು ಗ್ರಾಹಕರಿಗೆ ಸರಕುಗಳನ್ನು ಮಾರಾಟ ಮಾಡುವ ಪ್ರಕ್ರಿಯೆಯನ್ನು ಸುಲಭಗೊಳಿಸಲು ಈ ಪುಟ್ಟ ಯಂತ್ರ ನೆರವಾಗುತ್ತಿದೆ.

ಕಂತಿನ ರೂಪದಲ್ಲಿಯೂ ಈ ಯಂತ್ರ ಖರೀದಿಸಬಹುದು. ಈ ಸಾಧನದಲ್ಲಿ ಸರಕು ತಯಾರಿಕಾ ಸಂಸ್ಥೆಗಳು ತಮ್ಮ ಉತ್ಪನ್ನಗಳ ಬಗ್ಗೆ ಜಾಹೀರಾತು ನೀಡುವುದರಿಂದಲೂ ತಿಂಗಳಿಗೆ ₹ 1 ಸಾವಿರ ವರಮಾನ ಬರುತ್ತದೆ. ಈ ಹಣದಿಂದಲೇ ಯಂತ್ರದ ಖರೀದಿಯ ಸಾಲ ಮರುಪಾವತಿ ಮಾಡಬಹುದು. ಅನೇಕ ನಾಗರಿಕ ಸೇವೆಗಳ ಬಿಲ್‌ಗಳನ್ನೂ ಇಲ್ಲಿ ಪಾವತಿಸಬಹುದು. ಈ ಪುಟ್ಟ ಯಂತ್ರದ ನೆರವಿನಿಂದ ಬಿಲ್ಲಿಂಗ್‌, ಒಟ್ಟಾರೆ ವಹಿವಾಟು, ಲಾಭದ ವಿವರ ಪಡೆದುಕೊಳ್ಳಬಹುದು. ಸರಕು ನಿರ್ವಹಣೆಯ ವಿವರಗಳನ್ನೂ ಇದು ದಾಖಲಿಸುತ್ತದೆ.

‘ಕಿರಾಣಿ ಅಂಗಡಿಗಳನ್ನು ಆಧುನಿಕ ಮಾರುಕಟ್ಟೆಯ ಸ್ಪರ್ಧೆಗೆ ಅಣಿಗೊಳಿಸುವುದು, ಮಾರಾಟ ಹೆಚ್ಚಿಸಿ ಲಾಭ ಹೆಚ್ಚಿಸಿಕೊಳ್ಳಲು ನೆರವಾಗುವುದು, ಗ್ರಾಹಕರ ಗಮನ ಸೆಳೆಯುವ ರೀತಿಯಲ್ಲಿ ಸರಕುಗಳನ್ನು ಅಚ್ಚುಕಟ್ಟಾಗಿ ಇರಿಸಿ ಮಾರಾಟ ಹೆಚ್ಚಿಸುವುದು, ಅಂಗಡಿಯ ವಿಸ್ತೀರ್ಣಕ್ಕೆ ಅನುಗುಣವಾದ ಆಧುನಿಕ ವ್ಯವಸ್ಥೆ (fixtures) ಅಳವಡಿಸಲು ಬೇಕಾದ ಹಣಕಾಸು ನೆರವು ಕಲ್ಪಿಸಲಾಗುತ್ತಿದೆ. ಫಿಕ್ಚರ್ಸ್‌ಗಳಲ್ಲಿ ಸರಕುಗಳು ಸ್ಪಷ್ಟವಾಗಿ ಕಾಣುವಂತಿರಬೇಕು. ಖರೀದಿ ಸುಲಭವಾಗಿರುವಂತೆ ನೋಡಿಕೊಳ್ಳುವುದಕ್ಕೆ ಗಮನ ನೀಡಲಾಗಿದೆ. ಮೆಟ್ರೊ ಮಳಿಗೆಗಳಲ್ಲಿನ ‘ಕಿರಾಣಾ ಯಶಸ್ವಿ ಕೇಂದ್ರ’ಗಳ ಮೂಲಕ ವರ್ತಕರಿಗೆ ಮೆಟ್ರೊದ ಡಿಜಿಟಲ್‌ ಸ್ಪರ್ಶ ಸೌಲಭ್ಯಗಳನ್ನು ಪರಿಚಯಿಸಲಾಗುತ್ತಿದೆ’ ಎಂದೂ ಮನೀಷ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT