ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯೂಚುವಲ್‌ ಫಂಡ್‌ ಜತೆಗೆ ವಿಮೆ

Last Updated 8 ಜನವರಿ 2019, 19:30 IST
ಅಕ್ಷರ ಗಾತ್ರ

ಇತ್ತೀಚಿನ ವರ್ಷಗಳಲ್ಲಿ ಭಾರತದ ಕೆಲವು ಮ್ಯೂಚುವಲ್‌ ಫಂಡ್‌ ಸಂಸ್ಥೆಗಳು ತಮ್ಮ ಆಯ್ದ ಉತ್ಪನ್ನಗಳಲ್ಲಿ ಹೂಡಿಕೆ ಮಾಡುವ ಗ್ರಾಹಕರಿಗೆ ಗುಂಪು ವಿಮೆ ಒದಗಿಸುವ ಯೋಜನೆಯನ್ನು ಜಾರಿ ಮಾಡಿವೆ. ವ್ಯವಸ್ಥಿತ ಹೂಡಿಕೆ ಯೋಜನೆಗಳಲ್ಲಿ (ಎಸ್‌ಐಪಿ) ಮಾತ್ರ ಈ ವಿಮಾ ಸೌಲಭ್ಯ ಲಭ್ಯವಿದ್ದು, ಅದು ಕಡ್ಡಾಯವಲ್ಲ. ಹೂಡಿಕೆದಾರರು ಅರ್ಜಿ ತುಂಬುವ ಸಂದರ್ಭದಲ್ಲೇ ವಿಮೆಯನ್ನು ಬೇಕೆನಿಸಿದರೆ ಆಯ್ಕೆ ಮಾಡಿಕೊಳ್ಳಬಹುದು. ಈ ಹೊಸ ಯೋಜನೆಯಿಂದಾಗಿ ಮ್ಯೂಚುವಲ್‌ ಫಂಡ್‌ಗಳು ಬರಿಯ ಹೂಡಿಕೆಯ ಸಾಧನಗಳಾಗಿ ಮಾತ್ರ ಉಳಿಯದೆ, ಹೂಡಿಕೆಯ ಅವಧಿ ಇರುವಷ್ಟು ದಿನಗಳವರೆಗೂ ವಿಮೆಯ ಭದ್ರತೆಯನ್ನೂ ಒದಗಿಸುವ ಹಣಕಾಸು ಉತ್ಪನ್ನಗಳೂ ಆಗಿವೆ.

ಹೂಡಿಕೆದಾರರಿಗೆ ತಮ್ಮ ಹಣವನ್ನು ವೃದ್ಧಿಸುವ ಅವಕಾಶದ ಜೊತೆ ಜೊತೆಗೇ ವಿಮೆಯೂ ಲಭ್ಯವಾಗುವುದರಿಂದ ಮ್ಯೂಚುವಲ್‌ ಫಂಡ್‌ ಉದ್ದಿಮೆಯ ಈ ಹೊಸ ಯೋಜನೆ ನಿಜವಾಗಿಯೂ ಆಕರ್ಷಕವೆನಿಸುತ್ತದೆ. ವಿಮೆಗೆ ತಗುಲುವ ಸಂಪೂರ್ಣ ವೆಚ್ಚವನ್ನು ಮ್ಯೂಚುವಲ್‌ ಫಂಡ್‌ ಸಂಸ್ಥೆಗಳೇ ಭರಿಸುವುದರಿಂದ ಗ್ರಾಹಕರಿಗೆ ಇದು ಉಚಿತವಾಗಿ ಲಭಿಸುವ ಹೆಚ್ಚುವರಿ ಸೌಲಭ್ಯವೇ ಆಗಿದೆ.

ಆದರೆ, ಈ ಯೋಜನೆ ಎಲ್ಲಾ ಮ್ಯೂಚುವಲ್‌ ಫಂಡ್‌ ಸಂಸ್ಥೆಗಳಲ್ಲಿ ಒಂದೇ ರೀತಿಯಾಗಿಲ್ಲ. ಒಂದೊಂದು ಸಂಸ್ಥೆ ಒಂದೊಂದು ರೀತಿಯ ನಿಯಮಾವಳಿ ರೂಪಿಸಿರುವುದಲ್ಲದೆ ಬೇರೆ ಬೇರೆ ಪ್ರಮಾಣದ ವಿಮಾ ಮೊತ್ತವನ್ನು ನಿರ್ಧರಿಸಿವೆ. ಅದೇನೇ ಇದ್ದರೂ ಇಂತಹ ಯೋಜನೆಯೊಂದನ್ನು ಆಯ್ಕೆ ಮಾಡುವುದಕ್ಕೂ ಮುನ್ನ ಹೂಡಿಕೆದಾರರು ತಿಳಿದುಕೊಳ್ಳಬೇಕಾದ ಕೆಲವು ಸಂಗತಿಗಳಿವೆ. ಅವುಗಳ ಮಾಹಿತಿ ಇಲ್ಲಿದೆ.

ಗರಿಷ್ಠ ವಿಮೆ ಮೊತ್ತ

ಹೂಡಿಕೆಯ ಮೊದಲ ವರ್ಷದಲ್ಲಿ, ಪ್ರತಿ ತಿಂಗಳು ಮಾಡುವ ಹೂಡಿಕೆಯ (ಎಸ್‌ಐಪಿ ಕಂತಿನ) ಹತ್ತು ಪಟ್ಟು ಮೊತ್ತದಷ್ಟು ವಿಮೆಯನ್ನು ಗ್ರಾಹಕರಿಗೆ ನಿಗದಿ ಮಾಡಲಾಗುತ್ತದೆ. ಅಂದರೆ, ವ್ಯಕ್ತಿಯೊಬ್ಬ ಪ್ರತೀ ತಿಂಗಳು ₹10,000 ಹೂಡಿಕೆ ಮಾಡುತ್ತಾನೆ ಎಂದಾದರೆ, ಮೊದಲ ವರ್ಷದಲ್ಲಿ ಅವನ ‍ಪಾಲಿನ ವಿಮೆಯ ಮೊತ್ತ ₹ 1ಲಕ್ಷ ಆಗಿರುತ್ತದೆ. ಎರಡನೇ ವರ್ಷದಲ್ಲಿ ಆ ಪ್ರಮಾಣ ಎಸ್‌ಐಪಿಯ 50 ಪಟ್ಟು (ಅಂದರೆ ₹5 ಲಕ್ಷ) ಹಾಗೂ ಮೂರನೇ ವರ್ಷದಲ್ಲಿ ಅದು ನೂರು ಪಟ್ಟಾಗುತ್ತದೆ (₹10,000 ಹೂಡಿಕೆಗೆ ₹10 ಲಕ್ಷ).

ಆದರೆ, ಹೂಡಿಕೆ ಹೆಚ್ಚಾದಂತೆ ಈ ಪ್ರಮಾಣವೂ ಹೆಚ್ಚುತ್ತದೆ ಎಂದಲ್ಲ. ಮ್ಯೂಚುವಲ್‌ ಫಂಡ್‌ ಸಂಸ್ಥೆಗಳು ಇಂಥ ವಿಮೆಗೆ ಗರಿಷ್ಠ ಪ್ರಮಾಣವನ್ನು ನಿಗದಿ ಮಾಡಿದ್ದು, ಅದು ₹20 ಲಕ್ಷದಿಂದ ₹ 50 ಲಕ್ಷದವರೆಗೂ ಇದೆ. ಇಂತಹ ಕೆಲವು ವಿಮೆ ಯೋಜನೆಗಳಲ್ಲಿ ವಿಮೆಯು ಜಾರಿಯಾದ ಮೊದಲ 45 ದಿನಗಳ ಅವಧಿಯಲ್ಲಿ ಅಪಘಾತದಲ್ಲಿ ಸಂಭವಿಸಿದ ಸಾವಿಗೆ ಮಾತ್ರ ವಿಮೆ ಸೌಲಭ್ಯ ದೊರೆಯುತ್ತದೆ.

ವಯೋಮಾನ ನಿಗದಿ

18 ವರ್ಷದಿಂದ 51 ವರ್ಷದೊಳಗಿನ ಹೂಡಿಕೆದಾರರಿಗೆ ಮಾತ್ರ ಈ ವಿಮಾ ಸೌಲಭ್ಯವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇರುತ್ತದೆ. 60ವರ್ಷ ಮೀರಿದವರಿಗೆ ವಿಮೆಯ ಸೌಲಭ್ಯ ಲಭಿಸುವುದಿಲ್ಲ. ಒಂದು ವೇಳೆ ಜಂಟಿಯಾಗಿ ಹೂಡಿಕೆ ನಡೆಸುವವರಿದ್ದರೆ, ಅವರಲ್ಲಿ ಮೊದಲ ಹೂಡಿಕೆದಾರರಿಗೆ ಮಾತ್ರ ವಿಮೆ ಅನ್ವಯವಾಗುತ್ತದೆ.

ತಪಾಸಣೆ ಬೇಕಿಲ್ಲ

ಸಾಮಾನ್ಯವಾಗಿ ಯಾವುದೇ ವಿಮೆ ಮಾಡಿಸುವಾಗ ಗ್ರಾಹಕರು ವೈದ್ಯಕೀಯ ತಪಾಸಣೆಗೆ ಒಳಗಾಗಬೇಕಾಗುತ್ತದೆ. ಆದರೆ, ಮ್ಯೂಚುವಲ್‌ ಫಂಡ್‌ ಸಂಸ್ಥೆಗಳು ಒದಗಿಸುವ ಈ ವಿಮೆಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಅಗತ್ಯವಿಲ್ಲ. ಆದರೆ, ತನ್ನ ಆರೋಗ್ಯ ಚೆನ್ನಾಗಿರುವ ಬಗ್ಗೆ ತಾವೇ ಸಹಿ ಮಾಡಿರುವ ಒಂದು ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ.

ವಿಮೆ ರದ್ದತಿ

ಇಂಥ ವಿಮೆಯನ್ನು ಆಯ್ಕೆ ಮಾಡಿಕೊಂಡು ಹೂಡಿಕೆ ಆರಂಭಿಸಿದರೆ ಮೂರು ಕಾರಣಗಳಿಗೆ ಮಾತ್ರ ವಿಮೆಯು ರದ್ದಾಗುವ ಸಾಧ್ಯತೆ ಇರುತ್ತದೆ. 1. ಹೂಡಿಕೆದಾರರು 60ನೇ ವರ್ಷಕ್ಕೆ ಕಾಲಿಟ್ಟಾಗ, 2. ಹೂಡಿಕೆದಾರರು ಅವಧಿಗೂ ಮುನ್ನ ಹೂಡಿಕೆ ಸ್ಥಗಿತಗೊಳಿಸಿದರೆ, 3. ಅವಧಿ ಮುಗಿಯುವುದಕ್ಕೂ ಮುನ್ನ ಹೂಡಿಕೆ ಹಿಂತೆಗೆದುಕೊಂಡರೆ ಅಥವಾ ಹೂಡಿಕೆಯನ್ನು ಬೇರೆ ಯೋಜನೆಗೆ ಪರಿವರ್ತಿಸಿದರೆ.

ಒಂದು ವೇಳೆ, ಮೂರು ವರ್ಷಗಳ ಕಾಲ ಹೂಡಿಕೆ ನಡೆಸಿದ ನಂತರವೂ ಹಣವನ್ನು ಹಿಂತೆಗೆದುಕೊಳ್ಳದಿದ್ದರೆ ವಿಮೆ ಜಾರಿಯಲ್ಲಿರುತ್ತದೆ. ಆದರೆ ಅದರ ಮೊತ್ತವು ಹೂಡಿಕೆ ಆರಂಭಿಸಿದ ವರ್ಷದಲ್ಲಿ ವಿತರಿಸಲಾದ ಯೂನಿಟ್‌ಗಳ ಮೌಲ್ಯಕ್ಕೆ ಸಮಾನ ಆಗಿರುತ್ತದೆ. ಅದು ‘ಎಸ್‌ಐಪಿ’ಯ 100 ಪಟ್ಟಿಗಿಂತ ಹೆಚ್ಚು ಇರಬಾರದು. ನೇರವಾಗಿ ಹೇಳಬೇಕೆಂದರೆ, ಹೂಡಿಕೆಯ ಅವಧಿ ಮುಗಿದ ನಂತರವೂ ವಿಮೆ ಮುಂದುವರಿಸಿದರೆ ಅದರಿಂದ ಲಾಭವೇನೂ ಇಲ್ಲ.

ಯೋಜನೆಯ ಮೇಲೆ ಪರಿಣಾಮ ಇಲ್ಲ

ಗ್ರಾಹಕರಿಗೆ ವಿಮೆಯ ಸೌಲಭ್ಯ ನೀಡುವುದರಿಂದ ಮ್ಯೂಚುವಲ್‌ ಫಂಡ್‌ನ ಗಳಿಕೆಯ ಮೇಲೆ ಪರಿಣಾಮ ಉಂಟಾಗುವುದಿಲ್ಲವೇ ಎಂಬ ಪ್ರಶ್ನೆ ಹೂಡಿಕೆದಾರರಲ್ಲಿ ಮೂಡುವುದು ಸಹಜ. ವಿಮೆಯು ಆಯಾ ಸಂಸ್ಥೆಯವರೇ ಉಚಿತವಾಗಿ ನೀಡುವ ಹೆಚ್ಚುವರಿ ಸೌಲಭ್ಯವಾಗಿರುವುದರಿಂದ ಹೂಡಿಕೆದಾರರ ಹಣವನ್ನು ಇದಕ್ಕೆ ಬಳಸುವುದಿಲ್ಲ. ಆದ್ದರಿಂದ ಫಂಡ್‌ನ ನಿರ್ವಹಣೆಯ ಮೇಲೆ ಇದರಿಂದ ಯಾವುದೇ ವ್ಯತಿರಿಕ್ತ ಪರಿಣಾಮ ಆಗುವುದಿಲ್ಲ.

ಹೂಡಿಕೆ ಅವಧಿಯಲ್ಲೇ ಸಾವು ಸಂಭವಿಸಿದರೆ?

ಹೂಡಿಕೆಯ ಅವಧಿಯು ಪೂರ್ಣಗೊಳ್ಳುವ ಮೊದಲೇ ಹೂಡಿಕೆದಾರರು ಸಾವನ್ನಪ್ಪಿದರೆ ವಿಮೆಯ ಮೊತ್ತ ಹಾಗೂ ಅಲ್ಲಿಯವರೆಗೆ ಮಾಡಿದ ಹೂಡಿಕೆಯ ಮೌಲ್ಯದ ಮೊತ್ತವನ್ನು ನಾಮನಿರ್ದೇಶಿತ ವ್ಯಕ್ತಿಗೆ ನೀಡಲಾಗುವುದು. ‘ಎಸ್‌ಐಪಿ’ಯನ್ನು ಅಲ್ಲಿಗೇ ಸ್ಥಗಿತಗೊಳಿಸಲಾಗುವುದು. ಹೀಗೆ ಅನಿವಾರ್ಯವಾಗಿ ಯೋಜನೆಯಿಂದ ಹೊರ ನಡೆಯುವ ಸಂದರ್ಭದಲ್ಲಿ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಹೂಡಿಕೆ ಆರಂಭಿಸಿದ ಮೊದಲ ವರ್ಷದಲ್ಲೇ ಹೂಡಿಕೆದಾರ ಆತ್ಮಹತ್ಯೆ ಮಾಡಿಕೊಂಡರೆ, ಮೊದಲ 45 ದಿನದೊಳಗೆ ಅಪಘಾತವಲ್ಲದೆ, ಬೇರೆಯ ಕಾರಣದಿಂದ ಸಾವನ್ನಪ್ಪಿದರೆ ಅಥವಾ ಹೂಡಿಕೆ ಆರಂಭಿಸುವುದಕ್ಕೂ ಮೊದಲು ಇದ್ದ ಯಾವುದಾದರೂ ಕಾಯಿಲೆಯ ಕಾರಣದಿಂದ ಹೂಡಿಕೆದಾರ ಮೃತಪಟ್ಟಿದ್ದರೆ ವಿಮೆಯ ಹಣ ಲಭ್ಯವಾಗುವುದಿಲ್ಲ.

(ಲೇಖಕ: ಬ್ಯಾಂಕ್‌ಬಜಾರ್‌ನ ಸಿಇಒ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT