ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರು ಹಣಕಾಸು ಉದ್ದಿಮೆಯ ಚೇತರಿಕೆಗೆ ಬೇಕು ಬೆಂಬಲ

Last Updated 18 ಜುಲೈ 2021, 4:53 IST
ಅಕ್ಷರ ಗಾತ್ರ

ಬೆಂಗಳೂರು:ಕೋವಿಡ್‌ ಪಿಡುಗು ಮತ್ತು ಲಾಕ್‌ಡೌನ್‌ ದೇಶಿ ಕಿರು ಹಣಕಾಸು ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರಿದ್ದು,ಈ ವಲಯವು ಪುನಶ್ಚೇತನದ ಹಾದಿಯಲ್ಲಿ ಸಾಗಲು ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ ಇನ್ನೂ ಹೆಚ್ಚಿನ ನೆರವಿನ ಅಗತ್ಯ ಇದೆ ಎಂಬುದುಭಾರತದ ಕಿರು ಹಣಕಾಸು ಸಂಸ್ಥೆಗಳ ಸಂಘಟನೆಯ ಬೇಡಿಕೆಯಾಗಿದೆ.

‘ಈ ಸಂಕಷ್ಟದ ಸಮಯದಲ್ಲಿ ಕಿರು ಹಣಕಾಸು ಉದ್ದಿಮೆಗೆ ನೆರವಾಗಲು ಆರ್‌ಬಿಐ ಮತ್ತು ಕೇಂದ್ರ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿವೆ. ಆದರೆ, ಈ ಕ್ರಮಗಳು ಸಾಲುತ್ತಿಲ್ಲ‘ ಎಂದುಮೈಕ್ರೊಫೈನಾನ್ಸ್ ಇನ್‌ಸ್ಟಿಟ್ಯೂಷನ್ಸ್ ನೆಟ್‌ವರ್ಕ್ (ಎಂಎಫ್‌ಐಎನ್) ಸಿಇಒಡಾ.ಅಲೋಕ್ ಮಿಶ್ರಾ ಅವರು ಹೇಳಿದ್ದಾರೆ.

ಕಳೆದ ವರ್ಷ, ದೇಶದಾದ್ಯಂತ ಲಾಕ್‌ಡೌನ್ ಜಾರಿಗೊಳಿಸಿದಾಗ, ಕಿರು ಹಣಕಾಸು ಉದ್ಯಮದ ಬಗ್ಗೆ ಹಲವಾರು ಪ್ರಶ್ನೆಗಳು ಸಹಜವಾಗಿ ಉದ್ಭವಿಸಿದ್ದವು. ತಮ್ಮ ಗ್ರಾಹಕರ ಮರುಪಾವತಿಯ ಮೇಲೆಯೇ ಹೆಚ್ಚು ಅವಲಂಬಿತವಾಗಿರುವ ಕಿರು ಹಣಕಾಸು ಸಂಸ್ಥೆಗಳು ಕೋವಿಡ್ ಮೊದಲ ಲಾಕ್‌ಡೌನ್ ಸಂದರ್ಭದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದವು. ಸಾಲ ಮರುಪಾವತಿಯ ತಾತ್ಕಾಲಿಕ ಮುಂದೂಡಿಕೆಗೆ ಆರ್‌ಬಿಐ ಅವಕಾಶ ನೀಡಿದ್ದರಿಂದ ಉದ್ದಿಮೆಯಲ್ಲಿ ಆತಂಕ ಉಂಟಾಗಿತ್ತು. ಉದ್ಯಮವು ತನ್ನ ಗ್ರಾಹಕರಿಗೂ ಸಾಲ ಮರುಪಾವತಿ ಮುಂದೂಡುವ ಅವಕಾಶವನ್ನು ವಿಸ್ತರಿಸಿತ್ತು. ಆದರೆ ಕಿರು ಹಣಕಾಸು ಸಂಸ್ಥೆಗಳಿಗೆ ಸಾಲ ನೀಡುವ ಸಂಸ್ಥೆಗಳಿಂದ ಇಂತಹ ಯಾವುದೇ ವಿನಾಯ್ತಿಯು ಉದ್ದಿಮೆಗೆ ದೊರೆತಿರಲಿಲ್ಲ. ಹಣಕಾಸು ಸಂಸ್ಥೆಗಳಿಗೆ ಮೈಕ್ರೊ ಫೈನಾನ್ಸ್ ಕಂಪನಿಗಳು ಮರುಪಾವತಿ ಮಾಡುವ ಅನಿವಾರ್ಯತೆಯು ಗಂಭೀರ ಸಮಸ್ಯೆಗೆ ಎಡೆಮಾಡಿಕೊಟ್ಟಿತ್ತು. ನಗದು ಲಭ್ಯತೆಯ ಸಮಸ್ಯೆಯು ಮುಂಚೂಣಿಗೆ ಬಂದಿತ್ತು.

‘ಆರ್‌ಬಿಐ ಕೈಗೊಂಡ ಹಲವಾರು ನೆರವಿನ ಕಾರ್ಯಕ್ರಮಗಳ ಫಲವಾಗಿ ಕಿರು ಹಣಕಾಸು ವಲಯದಲ್ಲಿ ನಗದು ಲಭ್ಯತೆ ಹೆಚ್ಚಾಗಿತ್ತು. ಸಾಲ ಮರುಪಾವತಿ ಮತ್ತು ವಿತರಣೆಗಳು ಸಾಮಾನ್ಯ ಸ್ಥಿತಿ ತಲುಪಿ ವಲಯವು ಚೇತರಿಕೆ ಹಾದಿಯಲ್ಲಿ ಇರುವಾಗಲೇ, ಕೋವಿಡ್‌ನ ಎರಡನೇ ಅಲೆಯು ಈ ಉದ್ದಿಮೆಯನ್ನು ತೀವ್ರವಾಗಿ ಬಾಧಿಸಿದೆ. ವಿವಿಧ ಸವಾಲುಗಳ ಮಧ್ಯೆಯೂ ಕಿರು ಹಣಕಾಸು ಸಂಸ್ಥೆಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ದೊಡ್ಡ ಸಾಧನೆಯಾಗಿದೆ’ ಎಂದು ಅಲೋಕ್ ಮಿಶ್ರಾ ಹೇಳಿದ್ದಾರೆ.

‘ಬಿಕ್ಕಟ್ಟಿನ ಸಂದರ್ಭದಲ್ಲಿ ಗ್ರಾಹಕರಿಗೆ ಹಣಕಾಸಿನ ಬೆಂಬಲ ಒದಗಿಸಲು ಕಿರು ಹಣಕಾಸು ಸಂಸ್ಥೆಗಳು ವಿವಿಧ ಕ್ರಮಗಳನ್ನು ಕೈಗೊಂಡವು. ಹೆಚ್ಚುವರಿ ಸಾಲ, ಸಾಲ ಮರುಪಾವತಿ ಅವಧಿ ವಿಸ್ತರಣೆ, ಇಎಂಐ ಕಡಿತ ಮತ್ತು ಸಾಲ ಮರುಪಾವತಿಯ ತಾತ್ಕಾಲಿಕ ಸ್ಥಗಿತದಂತಹ ಹಲವು ಕ್ರಮಗಳನ್ನು ಜಾರಿಗೆ ತರಲಾಯಿತು. ಸಾಲ ನೀಡಿಕೆ ಮತ್ತು ಪಡೆಯುವುದರಲ್ಲಿ ಶಿಸ್ತು ಅಳವಡಿಸಲು ಪರಿಹಾರಕ್ಕೆ ಅರ್ಹರಾಗುವವರನ್ನು ವಿವಿಧ ಮಾನದಂಡಗಳಡಿ ವರ್ಗಿಕರಿಸಲಾಯಿತು.

‘ಲಾಕ್‌ಡೌನ್‌ನಿಂದಾಗಿ ಸಾಲ ಮರುಪಾವತಿ ಸಮರ್ಪಕವಾಗಿರದೆ ನಗದು ಕೊರತೆ ಕಂಡು ಬಂದಿದೆ. ಅರ್ಹತಾ ನಿಬಂಧನೆಗಳಲ್ಲಿ ಇನ್ನೂ ಸಡಿಲಿಕೆ ಇರದಿರುವುದರಿಂದ ಹೊಸ ಸಾಲ ನೀಡಿಕೆಗೆ ಅಡಚಣೆ ಉಂಟಾಗಿದೆ. ತಮ್ಮ ವಹಿವಾಟು ಮತ್ತು ಅಸ್ತಿತ್ವ ಉಳಿಸಿಕೊಳ್ಳಲು ಅನೇಕ ಕಿರು ಹಣಕಾಸು ಸಂಸ್ಥೆಗಳು ಹರಸಾಹಸ ಪಡುತ್ತಿವೆ. ಇನ್ನೂ ಕೆಲ ತಿಂಗಳವರೆಗೆ ಸರ್ಕಾರ ಮತ್ತು ಆರ್‌ಬಿಐನ ಬೆಂಬಲ ಮುಂದುವರೆಯಬೇಕಾಗಿದೆ.

‘ನೀತಿ ನಿರೂಪಕರು ಈಗಾಗಲೇ ನೀಡುತ್ತಿರುವ ಬೆಂಬಲದ ಕ್ರಮಗಳನ್ನು ಉಳಿಸಿಕೊಳ್ಳಬೇಕು. ಸಣ್ಣ ಮತ್ತು ಮಧ್ಯಮ ಗಾತ್ರದ ಎಂಎಫ್‌ಐಗಳಿಗೆ ಸಾಲ ನೀಡುವುದನ್ನು ಖಾತರಿಪಡಿಸಬೇಕು. ಭಾಗಶಃ ಸಾಲ ಖಾತರಿ ಯೋಜನೆಯನ್ನು ಮರುಪ್ರಾರಂಭಿಸಬೇಕು. ಪರಿಹಾರ ಯೋಜನೆ ಅಡಿಯಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ಎನ್‌ಬಿಎಫ್‌ಸಿ-ಎಂಎಫ್‌ಐಗಳನ್ನು ಸೇರಿಸಬೇಕು.

‘ಕಿರು ಹಣಕಾಸು ಕ್ಷೇತ್ರವು ಪುನಃ ಪುಟಿದೇಳಲು ಮುಂದಿನ ಮೂರು ತಿಂಗಳುಗಳವರೆಗೆ ರೂ 15 ಸಾವಿರ ಕೋಟಿಗಳ ನೆರವಿನ ಅಗತ್ಯ ಇದೆ. 6 ಕೋಟಿ ಮಹಿಳಾ ಗ್ರಾಹಕರ ಸಾಲದ ಅಗತ್ಯಗಳಿಗೆ ಹೋಲಿಸಿದರೆ ಈ ಮೊತ್ತ ತೀರ ಕಡಿಮೆ. ತಾಂತ್ರಿಕ ಕಾರಣಗಳಿಗಾಗಿ 6 ಕೋಟಿ ಮಹಿಳೆಯರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಾಗಿದೆ. ನಿರ್ದಿಷ್ಟ ಉದ್ದೇಶದ ಬೆಂಬಲ ಕ್ರಮಗಳನ್ನು ಅನುಷ್ಠಾನಗೊಳಿಸಿದರೆ ಸಂಕಷ್ಟದ ಸಮಯವು ಶೀಘ್ರದಲ್ಲಿಯೇ ದೂರವಾಗಲಿದೆ. ಜನಜೀವನ ಮತ್ತು ವಹಿವಾಟಿನಲ್ಲಿ ಸಾಮಾನ್ಯ ಸ್ಥಿತಿ ಮರಳುವುದಕ್ಕೆ ಈ ಕಿರು ಹಣಕಾಸು ವಲಯವು ಪ್ರಮುಖ ಪಾತ್ರ ನಿರ್ವಹಿಸಲಿದೆ‘ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT