ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ಕು ಸ್ಥಾವರ ಪುನಶ್ಚೇತಕ್ಕೆ ಮಿತ್ತಲ್‌ ಕ್ರಮ

Last Updated 8 ನವೆಂಬರ್ 2018, 20:16 IST
ಅಕ್ಷರ ಗಾತ್ರ

ಬೆಂಗಳೂರು: ಬಳ್ಳಾರಿ ಜಿಲ್ಲೆಯಲ್ಲಿನ ತನ್ನ ವಾರ್ಷಿಕ 60 ಲಕ್ಷ ಟನ್‌ಗಳಷ್ಟು ಉಕ್ಕು ಉತ್ಪಾದನಾ ಸಾಮರ್ಥ್ಯದ ಯೋಜನೆಗೆ ಮರು ಜೀವ ನೀಡಲು ವಿಶ್ವದ ಅತಿ ದೊಡ್ಡ ಉಕ್ಕು ತಯಾರಿಕಾ ಸಂಸ್ಥೆ ಅರ್ಸೆಲ್ಲರ್‌ ಮಿತ್ತಲ್‌ ಮುಂದಾಗಿದೆ.

ಕಚ್ಚಾ ಸರಕು ಲಭ್ಯವಾಗದ ಕಾರಣಕ್ಕೆ ಎರಡು ವರ್ಷಗಳ ಹಿಂದೆ ಕೈಬಿಟ್ಟಿದ್ದ ಯೋಜನೆಯನ್ನು ₹ 30 ಸಾವಿರ ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಸಂಸ್ಥೆ ಮತ್ತೆ ಆಸಕ್ತಿ ತಳೆದಿದೆ. ಈ ಸಂಬಂಧ ರಾಜ್ಯ ಸರ್ಕಾರವನ್ನು ಸಂಪರ್ಕಿಸಿದೆ ಎಂದು ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2010ರ ಜೂನ್‌ನಲ್ಲಿ ನಡೆದಿದ್ದ ಜಾಗತಿಕ ಹೂಡಿಕೆದಾರರ ಸಮಾವೇಶದ ಸಂದರ್ಭದಲ್ಲಿ ಅಧ್ಯಕ್ಷ ಲಕ್ಷ್ಮಿನಿವಾಸ್‌ ಮಿತ್ತಲ್‌ ಅವರ ಸಮ್ಮುಖದಲ್ಲಿ ಸಂಸ್ಥೆಯು ಈ ಉಕ್ಕು ಸ್ಥಾವರ ಯೋಜನೆಗೆ ರಾಜ್ಯ ಸರ್ಕಾರದ ಜತೆ ಒಪ್ಪಂದಕ್ಕೆ ಬಂದಿತ್ತು. ಆದರೆ, ಕಬ್ಬಿಣ ಅದಿರು ಪೂರೈಸಲು ರಾಜ್ಯ ಸರ್ಕಾರ ಯಾವುದೇ ಭರವಸೆ ನೀಡದ ಕಾರಣಕ್ಕೆ ಯೋಜನೆಯನ್ನು ಕೈಬಿಟ್ಟಿತ್ತು. ಉಕ್ಕು ಸ್ಥಾವರ ಸ್ಥಾಪನೆಗೆ ಬದಲು ಅದೇ ಸ್ಥಳದಲ್ಲಿ 600 ಮೆಗಾವಾಟ್‌ ಸಾಮರ್ಥ್ಯದ ಸೌರ ವಿದ್ಯುತ್‌ ಘಟಕ ಸ್ಥಾಪಿಸಲು ಮುಂದಾಗಿತ್ತು. ಈ ಉದ್ದೇಶಕ್ಕೆ ಸರ್ಕಾರ ಬಳ್ಳಾರಿ ಜಿಲ್ಲೆಯ ಕುಡಿತಿನಿ ಬಳಿ 2,800 ಎಕರೆಗಳಷ್ಟು ಭೂಮಿ ಮಂಜೂರು ಮಾಡಿತ್ತು.

‘ಕಂಪನಿಯು ಈಗ ಮತ್ತೆ ಉಕ್ಕು ಸ್ಥಾವರ ಸ್ಥಾಪಿಸಲು ಮುಂದೆ ಬಂದಿದೆ. ಈ ಸಂಬಂಧ ಸರ್ಕಾರಕ್ಕೆ ಔಪಚಾರಿಕವಾಗಿ ಮನವಿ ಸಲ್ಲಿಸಿದೆ. ಈ ಮನವಿ ಸದ್ಯಕ್ಕೆ ಪರಿಶೀಲನೆ ಹಂತದಲ್ಲಿ ಇದೆ. ಸರ್ಕಾರ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತಾ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಉಕ್ಕು ಸ್ಥಾವರಕ್ಕೆ ಮಂಜೂರಾಗಿದ್ದ ಭೂಮಿಯಲ್ಲಿ ಸೌರ ವಿದ್ಯುತ್‌ ಉತ್ಪಾದನಾ ಘಟಕ ಸ್ಥಾಪಿಸುವ ಪ್ರಸ್ತಾವವನ್ನು ಸಂಸ್ಥೆಯು ಮುಂದಿಟ್ಟಿತ್ತು. ಇದರಿಂದ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಅವಕಾಶಗಳು ಸೃಷ್ಟಿಯಾಗುವುದಿಲ್ಲ ಎನ್ನುವ ಕಾರಣಕ್ಕೆ ಸಂಸ್ಥೆಯ ಪ್ರಸ್ತಾವಕ್ಕೆ ಸರ್ಕಾರ ಅನುಮತಿ ನೀಡಿರಲಿಲ್ಲ’ ಎಂದು ಅವರು ಹೇಳಿದ್ದಾರೆ.

ಈ ಕಾರಣಕ್ಕೆ ಸಂಸ್ಥೆಯು ಉಕ್ಕು ಸ್ಥಾವರ ಯೋಜನೆಗೆ ಚಾಲನೆ ನೀಡಲು ಮುಂದಾಗಿದೆ. ಯೋಜನೆ ಕಾರ್ಯಗತಗೊಳಿಸಲು ಕಾಲಾವಕಾಶ ನೀಡಬೇಕು ಎಂದೂ ಮನವಿ ಮಾಡಿಕೊಂಡಿದೆ. ಇದಕ್ಕೂ ಮೊದಲು ಕೂಡ ಸಂಸ್ಥೆಯು ಒಂದೆರಡು ಬಾರಿ ಹೆಚ್ಚುವರಿ ಕಾಲಾವಕಾಶ ಕೋರಿತ್ತು. ಈ ಬೆಳವಣಿಗೆ ಬಗ್ಗೆ ಅರ್ಸೆಲ್ಲರ್‌ ಮಿತ್ತಲ್‌ ಕಂಪನಿಯು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT