ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಆರ್‌ಪಿಎಲ್: ವರಮಾನ ಶೇ 36.32ರಷ್ಟು ಹೆಚ್ಚಳ

Published 4 ಮೇ 2024, 23:44 IST
Last Updated 4 ಮೇ 2024, 23:44 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್‌ ಪೆಟ್ರೊಕೆಮಿಕಲ್ಸ್‌ ಲಿಮಿಟೆಡ್ (ಎಂಆರ್‌ಪಿಎಲ್‌), 2023–24ನೇ ಆರ್ಥಿಕ ವರ್ಷದಲ್ಲಿ ತೆರಿಗೆ ಕಳೆದು ₹3,596 ಕೋಟಿ ವರಮಾನ ಗಳಿಸಿದೆ. 2022–23ನೇ ಸಾಲಿಗೆ ಹೋಲಿಸಿದರೆ, ಕಂಪನಿಯ ವಾರ್ಷಿಕ ವರಮಾನವು ₹958 ಕೋಟಿಯಷ್ಟು (ಶೇ 36.32) ಹೆಚ್ಚಾಗಿದೆ.

2022–23ನೇ ಸಾಲಿನಲ್ಲಿ ಕಂಪನಿಯು ₹2,638 ಕೋಟಿ ವರಮಾನ ಗಳಿಸಿತ್ತು. 

ಕಂಪನಿಯು 2023–24ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ತೆರಿಗೆ ಕಳೆದು ₹‌1,137 ಕೋಟಿ ಲಾಭ ಗಳಿಸಿದೆ. 2022–23ರ ಇದೇ ಅವಧಿಯಲ್ಲಿ ₹1908 ಕೋಟಿ ಲಾಭ ಗಳಿಸಿತ್ತು.  

ಕಂಪನಿಯು 2024ರ ಜನವರಿ 22ರಂದು ಪ್ರತಿ ಷೇರಿಗೆ ₹1ರಂತೆ ಮಧ್ಯಂತರ ಡಿವಿಡೆಂಡ್‌ (ಷೇರಿನ ಶೇ 10ರಷ್ಟು) ಪಾವತಿಸಿತ್ತು. ಪ್ರತಿ ಷೇರಿಗೆ ₹2 ಡಿವಿಡೆಂಡ್‌ ನೀಡುವ ಬಗ್ಗೆ ಇದೇ 3ರಂದು ನಡೆದ ಕಂಪನಿಯ ನಿರ್ದೇಶಕರ ಮಂಡಳಿ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ವಾರ್ಷಿಕ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

2023–24ರ ನಾಲ್ಕನೇ ತ್ರೈಮಾಸಿಕದಲ್ಲಿ ಪ್ರತಿ ಬ್ಯಾರೆಲ್ ಕಚ್ಚಾತೈಲದಿಂದ ಬರುವ ನಿವ್ವಳ ಸಂಸ್ಕರಣಾ ಲಾಭದ ಪ್ರಮಾಣವು ₹946.38ಕ್ಕೆ (11.35 ಡಾಲರ್ ) ಕುಸಿದಿದೆ. 2022–23ರ ಇದೇ ಅವಧಿಯಲ್ಲಿ ನಿವ್ವಳ ಸಂಸ್ಕರಣಾ ಲಾಭದ ಪ್ರಮಾಣ ₹1,260.73 ರಷ್ಟಿತ್ತು (15.12 ಡಾಲರ್).

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ಕಾರ್ಯಾಚರಣೆ ವರಮಾನವೂ ₹29,190 ಕೋಟಿಗೆ ಇಳಿಕೆಯಾಗಿದೆ. 2022–23ರ ನಾಲ್ಕನೇ ತ್ರೈಮಾಸಿಕದಲ್ಲಿ ಕಾರ್ಯಾಚರಣೆಯ ವರಮಾನವು ₹ 29,401 ಕೋಟಿ ಇತ್ತು. 2022–23ರಲ್ಲಿ ಕಾರ್ಯಾಚರಣೆಯಿಂದ 1,24,736 ಕೋಟಿ ವರಮಾನ ಗಳಿಸಿದ್ದ ಕಂಪನಿಯು, 2023–24ನೇ ಸಾಲಿನಲ್ಲಿ ₹1,05,223 ಕೋಟಿ ಗಳಿಸಿದೆ.

ಕಂಪನಿಯ ಸಾಲ– ಬಂಡವಾಳ ಹೂಡಿಕೆ ಅನುಪಾತದಲ್ಲಿ ಸುಧಾರಣೆಯಾಗಿದ್ದು, 2023ರ ಮಾರ್ಚ್‌ 31ರಂದು 1.70ರಷ್ಟಿದ್ದ ಈ ಅನುಪಾತವು, ಪ್ರಸಕ್ತ ವರ್ಷದ ಮಾರ್ಚ್‌ 31ಕ್ಕೆ 0.94ರಷ್ಟಾಗಿದೆ ಎಂದು ಕಂಪನಿ ತಿಳಿಸಿದೆ.

ಕಂಪನಿಯು ನಾಲ್ಕನೇ ತ್ರೈಮಾಸಿಕದಲ್ಲಿ 45.1 ಲಕ್ಷ ಟನ್ ಕಚ್ಚಾತೈಲ ಸಂಸ್ಕರಿಸುವ ಮೂಲಕ 2015–16ನೇ ಸಾಲಿನ ದಾಖಲೆಯನ್ನು (44.2 ಲಕ್ಷ ಟನ್‌)  ಸುಧಾರಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT