ಬುಧವಾರ, ಮೇ 27, 2020
27 °C

ಮುಕೇಶ್ ಅಂಬಾನಿ ಸಂಪತ್ತು ₹3.60 ಲಕ್ಷ ಕೋಟಿ ಕುಸಿತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್‌ ಅಂಬಾನಿ ಅವರ ಸಂಪತ್ತು ಕಳೆದ ಎರಡು ತಿಂಗಳಲ್ಲಿ ₹ 3.60 ಲಕ್ಷ ಕೋಟಿಗಳಷ್ಟು ಕಡಿಮೆಯಾಗಿದೆ.

ಮುಂಬೈ ಷೇರುಪೇಟೆಯಲ್ಲಿನ ವಹಿವಾಟು ಕುಸಿತದಿಂದ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿನ ಅವರ ಸಂಪತ್ತು ಶೇ 28ರಷ್ಟು ಕರಗಿದೆ. ಬಹುಬಗೆಯ ವಹಿವಾಟಿನಲ್ಲಿ ತೊಡಗಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ನ ಅಧ್ಯಕ್ಷರಾಗಿರುವ ಮುಕೇಶ್‌ ಅಂಬಾನಿ ಅವರ ಸಂಪತ್ತು ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಗಮನಾರ್ಹ ಕುಸಿತ ಕಂಡಿದೆ. ಹೀಗಾಗಿ ವಿಶ್ವದ ಕುಬೇರರ ಪಟ್ಟಿಯಲ್ಲಿ ಅವರ ಸ್ಥಾನ 8 ರಿಂದ 17ಕ್ಕೆ ಕುಸಿದಿದೆ ಎಂದು ಹುರುನ್‌ ಗ್ಲೋಬಲ್‌ ಸಂಸ್ಥೆ ತಿಳಿಸಿದೆ.

ದೇಶದ ಪ್ರಮುಖ ಉದ್ಯಮಿಗಳಾದ ಗೌತಮ್‌ ಅದಾನಿ, ಎಚ್‌ಸಿಎಲ್‌ ಟೆಕ್ನಾಲಜೀಸ್‌ನ ಶಿವ ನಾಡಾರ್‌ ಮತ್ತು ಬ್ಯಾಂಕರ್‌ ಉದಯ್‌ ಕೋಟಕ್‌ ಅವರೂ ಗಮನಾರ್ಹ ಪ್ರಮಾಣದಲ್ಲಿ ಸಂಪತ್ತು ಕಳೆದುಕೊಂಡಿದ್ದಾರೆ. ಈ ಮೂವರೂ ವಿಶ್ವದ 100 ಮಂದಿ ಕುಬೇರರ ಪಟ್ಟಿಯಿಂದ ಹೊರಗುಳಿದಿದ್ದಾರೆ. ಮುಕೇಶ್‌ ಅಂಬಾನಿ ಅವರೊಬ್ಬರೇ ಈಗ ಈ ಪಟ್ಟಿಯಲ್ಲಿ ಸ್ಥಾನ ಉಳಿಸಿಕೊಂಡಿರುವ ಭಾರತೀಯರಾಗಿದ್ದಾರೆ.

ದೇಶಿ ಷೇರುಪೇಟೆಯ ಸಂವೇದಿ ಸೂಚ್ಯಂಕವು ಎರಡು ತಿಂಗಳಲ್ಲಿ ಶೇ 25ರಷ್ಟು ಕುಸಿತ ಕಂಡಿದೆ. ಅಮೆರಿಕದ ಡಾಲರ್‌ ಎದುರಿನ ರೂಪಾಯಿ ವಿನಿಮಯ ದರವು ಶೇ 5.2ರಷ್ಟು ಕುಸಿದಿದೆ. ಈ ಎರಡೂ ವಿದ್ಯಮಾನಗಳು ದೇಶಿ ಕುಬೇರರ ಸಂಪತ್ತು ಕರಗಲು ಕಾರಣವಾಗಿವೆ ಎಂದು ಹುರುನ್‌ ರಿಪೋರ್ಟ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಎ. ರೆಹಮಾನ್‌ ಹೇಳಿದ್ದಾರೆ.

 ಫ್ರಾನ್ಸ್‌ನ ಫ್ಯಾಷನ್‌ ದೈತ್ಯ ಕಂಪನಿ ಎಲ್‌ವಿಎಂಎಚ್‌ನ ಸಿಇಒ ಬರ್ನಾರ್ಡ್‌ ಅರ್ನಾಲ್ಟ್‌ ಸಂಪತ್ತು ₹ 2.25 ಲಕ್ಷ ಕೋಟಿ ಕರಗಿ ₹ 5.77 ಲಕ್ಷ ಕೋಟಿಗೆ ಇಳಿದಿದೆ. ಜಾಗತಿಕವಾಗಿ ಸಂಪತ್ತು ಕಳೆದುಕೊಂಡವರಲ್ಲಿ ಮುಕೇಶ್‌ ಎರಡನೆ ಅತಿದೊಡ್ಡ ಉದ್ಯಮಿಯಾಗಿದ್ದಾರೆ.

ಸಂಪತ್ತು ಕಳೆದುಕೊಂಡವರಲ್ಲಿ ಬರ್ಕ್‌ಷೈರ್‌ ಹ್ಯಾತ್‌ವೇದ ವಾರನ್‌ ಬಫೆಟ್‌, ಕಾರ್ಲೊಸ್‌ ಸ್ಲಿಮ್‌, ಬಿಲ್‌ ಗೇಟ್ಸ್‌, ಮಾರ್ಕ್‌ ಜುಕರ್‌ಬರ್ಗ್‌ ಅವರೂ ಸೇರಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು