ಗುರುವಾರ , ಅಕ್ಟೋಬರ್ 1, 2020
27 °C

ಪಾರದರ್ಶಕ ತೆರಿಗೆ, ಪ್ರಾಮಾಣಿಕ ತೆರಿಗೆದಾರರಿಗೆ ಗೌರವ: ನರೇಂದ್ರ ಮೋದಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Modi

ನವದೆಹಲಿ: ಪಾರದರ್ಶಕ ತೆರಿಗೆ ವೇದಿಕೆಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಚಾಲನೆ ನೀಡಿದ್ದಾರೆ. ಹೊಸ ವೇದಿಕೆಗೆ ಪ್ರಧಾನಿ ಚಾಲನೆ ನೀಡುವ ಮುನ್ನ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಇದು ಕೇವಲ ಪಾರದರ್ಶಕ ವ್ಯವಸ್ಥೆಯನ್ನು ಪರಿಚಯಿಸುವುದಲ್ಲ. ತೆರಿಗೆದಾರರಿಗೆ ಸುಧಾರಣೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದಿದ್ದಾರೆ.

ತೆರಿಗೆ ಆಡಳಿತದ ಇತಿಹಾಸದಲ್ಲಿ ಇಂದು ಒಂದು ಮಹತ್ತರ ದಿನವಾಗಿದೆ. ತೆರಿಗೆದಾರರನ್ನು ಸಬಲೀಕರಣಗೊಳಿಸುವ ಪ್ರಧಾನ ಮಂತ್ರಿಯ ದೃಷ್ಟಿಕೋನವನ್ನು ಸಾಕಾರಗೊಳಿಸಲು, #HonoringTheHonest ಎಂಬ ಪಾರದರ್ಶಕ ವ್ಯವಸ್ಥೆಯ ಮೂಲಕ ಇಂದು ಪ್ರಾರಂಭಿಸಲಾಗುತ್ತಿರುವ ವೇದಿಕೆಯನ್ನು ಜಾರಿಗೆ ತಂದಿದ್ದೇವೆ.

ಆದಾಯ ತೆರಿಗೆ ಇಲಾಖೆಯು ಹೊಣೆಗಾರಿಕೆಯನ್ನು ಒದಗಿಸುವುದಕ್ಕಾಗಿ  ಡಾಕ್ಯುಮೆಂಟ್ ಐಡೆಂಟಿಫಿಕೇಶನ್ ನಂಬರ್‌ನ್ನು (ಡಿಐಎನ್) ಪರಿಚಯಿಸಿದೆ, ಇದು ಎಲ್ಲ ರೀತಿಯ ಸಂವಹನಕ್ಕಾಗಿದ್ದು, ಡಿಐಎನ್ ಇಲ್ಲದೆ, ಐಟಿ ಇಲಾಖೆಯಿಂದ ನೀಡುವ ದಾಖಲೆಗಳು ಅಮಾನ್ಯವಾಗಿದೆ ಎಂದು ವಿತ್ತ ಸಚಿವೆ ಹೇಳಿದ್ದಾರೆ.

ಪ್ರಾಮಾಣಿಕ ತೆರಿಗೆದಾರರಿಗೆ ಉತ್ತೇಜನ ನೀಡುವ ಹೊಸ ವೇದಿಕೆಗೆ ಚಾಲನೆ ನೀಡಿದ ಮೋದಿ ವಿಡಿಯೊ ಕಾನ್ಫರೆನ್ಸ್  ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ.

ಮೋದಿ ಮಾತು

* ಕಳೆದ ಕೆಲವು ವರ್ಷಗಳಿಂದ ಬ್ಯಾಂಕಿಂಗ್ ವಲಯದಲ್ಲಿ ಮಹತ್ತರ ಬದಲಾವಣೆ ತರಲಾಗಿದೆ

ಪ್ರಾಮಾಣಿಕ  ತೆರಿಗೆದಾರರಿಂದ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಪ್ರಾಮಾಣಿಕ ತೆರಿಗೆ ಪಾವತಿ ಎಲ್ಲರ ಕರ್ತವ್ಯ. ತೆರಿಗೆ ವಂಚನೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬೇಡಿ. ಪ್ರಾಮಾಣಿಕ ತೆರಿಗೆದಾರರನ್ನು ಸರ್ಕಾರ ಗುರುತಿಸಿ ಗೌರವಿಸುತ್ತದೆ.  

ಕಳೆದ ಆರು ವರ್ಷಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರವನ್ನು ವಿಸ್ತರಿಸಿ ಈವರೆಗೆ ಬ್ಯಾಂಕಿಂಗ್ ಸೌಲಭ್ಯದಿಂದ ವಂಚಿತರಾಗಿರುವವರಿಗೆ ಸೌಲಭ್ಯ ಕಲ್ಪಿಸಿಕೊಟ್ಟಿದ್ದೇವೆ. ತೆರಿಗೆ ಆಡಳಿತದಲ್ಲಿ ಹೊಸ ಆಡಳಿತ ಮಾದರಿಯ ವಿಕಾಸಕ್ಕೆ ಭಾರತ ಸಾಕ್ಷಿಯಾಗಿದೆ. ನಾವು ಸಂಕೀರ್ಣತೆ, ತೆರಿಗೆ, ವ್ಯಾಜ್ಯಗಳನ್ನು ಕಡಿಮೆ ಮಾಡಿದ್ದೇವೆ ಮತ್ತು ಪಾರದರ್ಶಕತೆ, ತೆರಿಗೆ ಪಾಲನೆ ಮತ್ತು ತೆರಿಗೆದಾರರ ಮೇಲಿನ ನಂಬಿಕೆಯನ್ನು ಹೆಚ್ಚಿಸಿದ್ದೇವೆ

ಇಂದು, ಇದು ಹೊಸ ಪ್ರಯಾಣದ ಪ್ರಾರಂಭವಾಗಿದೆ  #HonoringTheHonest. ಪ್ರಾಮಾಣಿಕ ತೆರಿಗೆದಾರನು ರಾಷ್ಟ್ರದ ಬೆಳವಣಿಗೆಯಲ್ಲಿ ಭಾರಿ ಪಾತ್ರ ವಹಿಸುತ್ತಾನೆ.

ದೇಶದಲ್ಲಿ ಸುಧಾರಣೆ ಹೊಸ ಹಂತಕ್ಕೆ ತಲುಪಿದೆ. ಇಂದಿನಿಂದ ಹೊಸ ಪ್ರಯಾಣ ಆರಂಭವಾಗಿದೆ. ತೆರಿಗೆ ನೀತಿಯಲ್ಲಿ ಬದಲಾವಣೆ ಮಾಡಲಾಗಿದೆ 

ತೆರಿಗೆ ಪಾವತಿ ಮತ್ತಷ್ಟು ಜನಸ್ನೇಹಿ ಆಗಿದೆ. ತೆರಿಗೆ ಪಾವತಿ ಸುಲಲಿತ ಮತ್ತು ಸುರಕ್ಷಿತವಾಗಿದೆ. 

ಇಂದು ಆರಂಭವಾಗಿರುವ ಈ ವೇದಿಕೆಯು  'ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ' ಕಡೆಗೆ ನಮ್ಮ ಕನಸನ್ನು ಪ್ರತಿಬಿಂಬಿಸುತ್ತವೆ. ಪ್ರತಿಯೊಂದು ನಿಯಮ, ನಿಯಂತ್ರಣ ಮತ್ತು ನೀತಿಯನ್ನು ಪ್ರಕ್ರಿಯೆ ಮತ್ತು  ಆಡಳಿತ ಕೇಂದ್ರಿತ ವಿಧಾನದಿಂದ ನಾಗರಿಕ ಕೇಂದ್ರಿತ ಮತ್ತು ಸಾರ್ವಜನಿಕ ಸ್ನೇಹಿಯಾಗಿ ಬದಲಾಯಿಸಲಾಗುತ್ತದೆ.

 

2012-13 ರಲ್ಲಿ ಎಲ್ಲಾ ತೆರಿಗೆ ರಿಟರ್ನ್‌ಗಳ 0.94% ಪರಿಶೀಲನೆ ನಡೆಸಲಾಯಿತು. 2018-19ರಲ್ಲಿ ಈ ಅಂಕಿ ಅಂಶವು 0.26% ಕ್ಕೆ ಇಳಿದಿದೆ. ಇದರರ್ಥ,  ಪರಿಶೀಲನೆಯು ಸುಮಾರು ನಾಲ್ಕು ಪಟ್ಟು ಕಡಿಮೆಯಾಗಿದೆ.

ಸುಧಾರಣೆಗಳ ಬಗ್ಗೆ ಸಾಕಷ್ಟು ಮಾತುಕತೆ ನಡೆಸುತ್ತಿದ್ದ ಕಾಲವೊಂದಿತ್ತು. ಕೆಲವೊಮ್ಮೆ ನಿರ್ಧಾರಗಳನ್ನು ಬಲವಂತ ಅಥವಾ ಒತ್ತಡದಿಂದ ತೆಗೆದುಕೊಳ್ಳಲಾಗುತ್ತಿತ್ತು ಮತ್ತು ಅವುಗಳನ್ನು ಸುಧಾರಣೆಗಳು ಎಂದು ಕರೆಯಲಾಗುತ್ತಿತ್ತು. ಈ ಕಾರಣದಿಂದಾಗಿ, ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಈಗ ಈ ಯೋಚನೆ ಮತ್ತು ವಿಧಾನ ಎರಡೂ ಬದಲಾಗಿದೆ.

ಈ ವೇದಿಕೆಯು ಆನ್‌ಲೈನ್ ಮೌಲ್ಯಮಾಪನ, ಆನ್‌ಲೈನ್ ಮನವಿ ಮತ್ತು ತೆರಿಗೆದಾರರ ಚಾರ್ಟರ್‌ನಂತಹ  ದೊಡ್ಡ ಸುಧಾರಣೆಗಳನ್ನು ಹೊಂದಿದೆ. ಈ ರೀತಿಯ ಮೌಲ್ಯಮಾಪನ ಮತ್ತು ತೆರಿಗೆದಾರರ ಚಾರ್ಟರ್ ಇಂದಿನಿಂದ ಜಾರಿಗೆ ಬಂದರೆ, ಆನ್‌ಲೈನ್ ಮೇಲ್ಮನವಿ ಸೇವೆ ಸೆಪ್ಟೆಂಬರ್ 25 ರಿಂದ ಲಭ್ಯವಿರುತ್ತದೆ: ಪ್ರಧಾನಿ ನರೇಂದ್ರ ನರೇಂದ್ರ ಮೋದಿ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು