ಕಿರಾಣಿ ವಹಿವಾಟು ಹೆಚ್ಚಳ ನಿರೀಕ್ಷೆ

ನವದೆಹಲಿ: ಇ–ಕಾಮರ್ಸ್ ಸಂಸ್ಥೆಗಳ ವಹಿವಾಟಿಗೆ ಕಠಿಣ ಸ್ವರೂಪದ ನಿರ್ಬಂಧನೆಗಳನ್ನು ವಿಧಿಸಿರುವುದರಿಂದ ಕಿರಾಣಿ ಅಂಗಡಿಗಳ ವಹಿವಾಟು ಶೇ 1.5 ರಿಂದ ಶೇ 2ರಷ್ಟು ಹೆಚ್ಚಳ ಸಾಧಿಸಲಿದೆ ಎಂದು ಮಾನದಂಡ ನಿಗದಿ ಮಾಡುವ ಸಂಸ್ಥೆ ಕ್ರಿಸಿಲ್ ವಿಶ್ಲೇಷಿಸಿದೆ.
ಜನಪ್ರಿಯ ಇ–ಕಾಮರ್ಸ್ ಸಂಸ್ಥೆಗಳು ಸರ್ಕಾರ ನಿಗದಿಪಡಿಸಿದ ನಿರ್ಬಂಧಿತ ಕ್ರಮಗಳ ಕಾರಣಕ್ಕೆ ತಮ್ಮ ವಹಿವಾಟಿನ ಸ್ವರೂಪವನ್ನು ಬದಲಿಸಬೇಕಾಗಿದೆ. ಇದರಿಂದ 2020ರ ಹಣಕಾಸು ವರ್ಷದಲ್ಲಿ ಸಣ್ಣ – ಪುಟ್ಟ ಕಿರಾಣಿ ಅಂಗಡಿಗಳ ವಹಿವಾಟು ₹ 10 ಸಾವಿರ ಕೋಟಿಗಳಿಂದ ₹ 12 ಸಾವಿರ ಕೋಟಿಗಳವತೆಗೆ ಏರಿಕೆಯಾಗಲಿದೆ ಎಂದು ಕ್ರಿಸಿಲ್ ತಿಳಿಸಿದೆ.
ಫ್ಲಿಪ್‌ಕಾರ್ಟ್, ಅಮೆಜಾನ್‌ನಂತಹ ಸಂಸ್ಥೆಗಳು ತಾವು ಪಾಲು ಬಂಡವಾಳ ಇಲ್ಲವೆ ಆಡಳಿತಾತ್ಮಕ ನಿಯಂತ್ರಣ ಹೊಂದಿರುವ ಸಂಸ್ಥೆಗಳ ಉತ್ಪನ್ನಗಳನ್ನು ವಿಶೇಷ ಬೆಲೆಗೆ ತಾವೇ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ನಗದು ಮರುಪಾವತಿ, ಬೆಲೆ ಕಡಿತ, ಪ್ರತ್ಯೇಕ ವಿಶೇಷ ಮಾರಾಟ ಮತ್ತಿತರ ಸೌಲಭ್ಯಗಳಿಗೂ ಇನ್ನು ಮುಂದೆ ಕಡಿವಾಣ ಬೀಳಲಿದೆ.
‘ನಿರ್ಬಂಧಿತ ಕ್ರಮಗಳ ಫಲವಾಗಿ ಆನ್‌ಲೈನ್ ರಿಟೇಲ್ ಮಾರುಕಟ್ಟೆಯಲ್ಲಿ ₹ 35 ಸಾವಿರ ಕೋಟಿಗಳಿಂದ ₹ 40 ಸಾವಿರ ಕೋಟಿಗಳ ವಹಿವಾಟಿಗೆ ಧಕ್ಕೆ ಒದಗಲಿದೆ. ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಾನಿಕ್ಸ್ ಮತ್ತು ಸಿದ್ಧ ಉಡುಪುಗಳ ವಹಿವಾಟಿನ ಮೇಲೆ ಹೆಚ್ಚಿನ ಪರಿಣಾಮ ಕಂಡು ಬರಲಿದೆ. ಇದು ಸಣ್ಣ ವರ್ತಕರಿಗೆ ವರದಾನ ಆಗಿ ಪರಿಣಮಿಸಲಿದೆ’ ಎಂದು ಕ್ರಿಸಿಲ್ ರೇಟಿಂಗ್ಸ್‌ನ ಹಿರಿಯ ನಿರ್ದೇಶಕ ಅನುಜ್ ಸೇಠಿ ಹೇಳಿದ್ದಾರೆ.
ಗಡುವು ವಿಸ್ತರಣೆ; ಕೇಂದ್ರಕ್ಕೆ ಮನವಿ
ಆನ್‌ಲೈನ್ ವಹಿವಾಟಿಗೆ (ಇ–ಕಾಮರ್ಸ್) ಸಂಬಂಧಿಸಿದಂತೆ ಸರ್ಕಾರ ಇತ್ತೀಚೆಗೆ ಪ್ರಕಟಿಸಿರುವ ಹೊಸ ನಿಯಮಗಳ ಪಾಲನೆಯ ಫೆಬ್ರುವರಿ 1ರ ಗಡುವು ವಿಸ್ತರಿಸಲು ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿವೆ.
‘ಬದಲಾದ ನೀತಿಯ ಬಗ್ಗೆ ಸರ್ಕಾರದಿಂದ ವಿವರಣೆ ಕೇಳಿದ್ದೇವೆ. ನಾಲ್ಕು ತಿಂಗಳವರೆಗೆ ಕಾಲಾವಕಾಶ ನೀಡಬೇಕೆಂದು ಕೇಳಿಕೊಳ್ಳಲಾಗಿದೆ’ ಎಂದು ಅಮೆಜಾನ್ ಇಂಡಿಯಾದ ವಕ್ತಾರ ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.