ಭಾನುವಾರ, ಆಗಸ್ಟ್ 14, 2022
28 °C

ಹೊಸ ಐ.ಟಿ. ಪೋರ್ಟಲ್‌ನಲ್ಲಿ ಮುಂದುವರಿದ ಸಮಸ್ಯೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಆದಾಯ ತೆರಿಗೆ ವಿವರಗಳನ್ನು ಆನ್‌ಲೈನ್‌ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸುವ ಹೊಸ ಪೋರ್ಟಲ್‌ ಚಾಲನೆ ಪಡೆದು ಒಂದು ವಾರ ಕಳೆದರೂ ಸಮಸ್ಯೆಗಳು ಬಗೆಹರಿದಿಲ್ಲ. ಪೋರ್ಟಲ್‌ನಲ್ಲಿನ ಎಲ್ಲ ಆಯ್ಕೆಗಳು ಕೆಲಸ ಮಾಡುತ್ತಿಲ್ಲ ಎಂದು ಲೆಕ್ಕ ಪರಿಶೋಧಕರು ಹೇಳಿದ್ದಾರೆ.

ಹೊಸ ಜಾಲತಾಣ http://incometax.gov.inಗೆ ಜೂನ್‌ 7ರಂದು ಚಾಲನೆ ನೀಡಲಾಗಿತ್ತು. ಆದರೆ, ತಾಂತ್ರಿಕ ದೋಷಗಳ ಬಗ್ಗೆ ಬಳಕೆದಾರರು ಮೊದಲ ದಿನವೇ ದೂರು ನೀಡಿದ್ದರು. ಒಂದು ವಾರ ಕಳೆದ ನಂತರವೂ ಎಲ್ಲ ದೋಷಗಳನ್ನು ಸರಿಪಡಿಸಲಾಗಿಲ್ಲ ಎಂದು ಲೆಕ್ಕ ಪರಿಶೋಧಕರು ತಿಳಿಸಿದ್ದಾರೆ.

ತೆರಿಗೆ ಪಾವತಿದಾರರು ತಮ್ಮ ನಿಯಂತ್ರಣದಲ್ಲಿ ಇಲ್ಲದ ಕಾರಣಗಳಿಗಾಗಿ ದಂಡ ಪಾವತಿಸುವ ಸಂದರ್ಭ ಎದುರಾಗಬಹುದು. ಜಾಲತಾಣ ಆರಂಭ ಆಗಿ ಒಂದು ವಾರ ಕಳೆದಿದೆ. ತಕ್ಷಣವೇ ಇತ್ತ ಗಮನ ಹರಿಸಿ ಪರಿಹಾರ ನೀಡುವ ಅಗತ್ಯವಿದೆ ಎಂದು ನಂಗಿಯಾ ಆ್ಯಂಡ್‌ ಕೊ ಎಲ್‌ಎಲ್‌ಪಿಯ ಪಾಲುದಾರ ಶೈಲೇಶ್‌ ಕುಮಾರ್‌ ಹೇಳಿದ್ದಾರೆ.

ಹಲವು ದೋಷಗಳು ಮತ್ತು ತಾಂತ್ರಿಕ ಸಮಸ್ಯೆಗಳಿಂದಾಗಿ ತೆರಿಗೆ ಪಾವತಿದಾರರು ಮತ್ತು ತೆರಿಗೆ ವೃತ್ತಿಪರರರಿಗೆ ಸಮಸ್ಯೆ ಆಗುತ್ತಿದೆ. ಆದಷ್ಟು ಬೇಗನೆ ಇವುಗಳನ್ನು ಸರಿಪಡಿಸಬೇಕಾಗಿದೆ ಎಂದು ಎಎಂಆರ್‌ಜಿ ಆ್ಯಂಡ್ ಅಸೋಸಿಯೇಟ್ಸ್‌ನ ಪಾಲುದಾರ ರಜತ್ ಮೋಹನ್‌ ಒತ್ತಾಯಿಸಿದ್ದಾರೆ.

ಮ್ಯಾನುಯಲ್‌ ಫೈಲಿಂಗ್‌ಗೆ ಅವಕಾಶ: ಪೋರ್ಟಲ್‌ನಲ್ಲಿ ಸಮಸ್ಯೆ ಇರುವುದರಿಂದ ವಿದೇಶದಲ್ಲಿ ಕೆಲಸ ಮಾಡುತ್ತಿರುವವರು ತಾಯ್ನಾಡಿನಲ್ಲಿ ಇರುವವರಿಗೆ ಹಣ ರವಾನಿಸುವುದಕ್ಕೆ ಸಂಬಂಧಿಸಿದ 15ಸಿಎ/15ಸಿಬಿ ಫಾರಂಗಳನ್ನು ಕೈಯಿಂದಲೇ ಭರ್ತಿ ಮಾಡಿ, ಬ್ಯಾಂಕ್‌ಗಳಿಗೆ ಸಲ್ಲಿಸಲು ಆದಾಯ ತೆರಿಗೆ ಇಲಾಖೆಯು ಈ ತಿಂಗಳ ಅಂತ್ಯದವರೆಗೂ ಅವಕಾಶ ಕಲ್ಪಿಸಿದೆ. ಬಳಿಕ ಆ ಫಾರಂ ಅನ್ನು ಪೋರ್ಟಲ್‌ಗೆ ಅಪ್‌ಲೋಡ್‌ ಮಾಡುವುದಾಗಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು