ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

New Mangaluru Port | ಸುವರ್ಣ ಮಹೋತ್ಸವಕ್ಕೆ ಹೊಸ ಸೌಕರ್ಯ

2024–25ರಲ್ಲಿ 5 ಕೋಟಿ ಟನ್‌ ಸರಕು ನಿರ್ವಹಣೆ: ಪ್ರಾಧಿಕಾರದ ಅಧ್ಯಕ್ಷ ವಿಶ್ವಾಸ
Published 7 ಮೇ 2024, 0:18 IST
Last Updated 7 ಮೇ 2024, 0:18 IST
ಅಕ್ಷರ ಗಾತ್ರ

ಮಂಗಳೂರು: ‘2024–25ರಲ್ಲಿ ಸುವರ್ಣ ಮಹೋತ್ಸವ ವರ್ಷಾಚರಣೆಯ ಸಡಗರದಲ್ಲಿರುವ ನವ ಮಂಗಳೂರು ಬಂದರು ಪ್ರಾಧಿಕಾರವು ಆ ಪ್ರಯುಕ್ತ ಅನೇಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಎ.ವಿ. ರಮಣ ತಿಳಿಸಿದರು. 

ಜಲಸಾರಿಗೆ ಬಿಕ್ಕಟ್ಟುಗಳ ನಿರ್ವಹಣೆ ಕುರಿತು ಇಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಕೆ.ಕೆ. ಗೇಟ್‌ನ ನವೀಕರಣ, ಕೆ.ಕೆ.ಗೇಟ್‌– ರಾಷ್ಟ್ರೀಯ ಹೆದ್ದಾರಿ 66 ನಡುವೆ ಚತುಷ್ಪಥ ರಸ್ತೆ ನಿರ್ಮಾಣ, ವಾಹನಗಳನ್ನು ಸ್ಕ್ಯಾನ್‌ ಮಾಡಲು ಆರ್‌ಎಫ್‌ಐಡಿ ಸೌಕರ್ಯ ಅಳವಡಿಕೆಯಂತಹ ಕಾಮಗಾರಿಗಳನ್ನು 2024ರ ಡಿಸೆಂಬರ್‌ ಒಳಗೆ ಪೂರ್ಣಗೊಳಿಸಿ, ಎನ್‌ಎಂಪಿಎಯ ಸುವರ್ಣ ಮಹೋತ್ಸವವನ್ನು ಅರ್ಥಪೂರ್ಣಗೊಳಿಸಲಾಗುತ್ತದೆ. ಈ ಯೋಜನೆಗಳಿಗೆ ದೇಶದ ಪ್ರಧಾನಿ ಅಥವಾ ರಾಷ್ಟ್ರಪತಿಯವರು 2025ರ ಜನವರಿಯಲ್ಲಿ ಚಾಲನೆ ನೀಡಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಎನ್‌ಎಂಪಿಎ 2023–24ನೇ ಸಾಲಿನಲ್ಲಿ 457.1 ಲಕ್ಷ ಟನ್‌ ಸರಕನ್ನು ನಿರ್ವಹಣೆ ಮಾಡುವ ಮೂಲಕ ಶೇ 10.36ರಷ್ಟು ಪ್ರಗತಿ ಸಾಧಿಸಿದೆ. 2022–23ರಲ್ಲಿ 414.1 ಲಕ್ಷ ಟನ್‌ ಸರಕನ್ನು ನಿರ್ವಹಣೆ ಮಾಡಲಾಗಿತ್ತು. 2023–24ರಲ್ಲಿ ಕಾರ್ಯಾಚರಣೆಯ ವರಮಾನವು ₹833 ಕೋಟಿಗೆ ಏರಿಕೆಯಾಗಿದೆ. ಹಿಂದಿನ ಸಾಲಿನಲ್ಲಿ ಇದು ₹743 ಕೋಟಿ ಇತ್ತು. 2023–24ರಲ್ಲಿ ನಿವ್ವಳ ಮಿಗತೆಯು ₹551 ಕೋಟಿಗೆ ಹೆಚ್ಚಿದೆ. ಕಳೆದ ವರ್ಷ ಇದು ₹374 ಕೋಟಿ ಇತ್ತು’ ಎಂದು ಅಂಕಿ–ಅಂಶ ನೀಡಿದರು.

‘ಪ್ರಸಕ್ತ ಆರ್ಥಿಕ ವರ್ಷ ಕಾರ್ಯಾಚರಣೆ ಅನುಪಾತದಲ್ಲಿ ಶೇ 34.55ರಷ್ಟು  ಹೆಚ್ಚಳ ಸಾಧಿಸಿರುವ ಎನ್‌ಎಂಪಿಎ 2024–25ರಲ್ಲಿ 5 ಕೋಟಿ ಟನ್‌ ಸರಕು ನಿರ್ವಹಣೆ ಮಾಡುವ ವಿಶ್ವಾಸವಿದೆ. ಈ ವರ್ಷ ಪಶ್ಚಿಮ ಘಟ್ಟದ ರಸ್ತೆಗಳ ಅಭಿವೃದ್ಧಿ ಕಾರ್ಯ ಪೂರ್ಣಗೊಳ್ಳಲಿದ್ದು, ‌ರಾಜ್ಯದ ಬೇರೆ ಬೇರೆ ಪ್ರದೇಶಗಳಿಂದ ಬಂದರಿಗೆ ರಸ್ತೆ ಸಂಪರ್ಕ ಸುಧಾರಣೆಯಾಗಲಿದೆ’ ಎಂದು ಆಶಾವಾದ ವ್ಯಕ್ತಪಡಿಸಿದರು. 

2023–24ರಲ್ಲಿ ಬಂದರು 1,476 ಹಡಗುಗಳನ್ನು ನಿರ್ವಹಣೆ ಮಾಡಿದ್ದು, ಕಳೆದ ವರ್ಷಕ್ಕೆ (1,293 ಹಡಗುಗಳನ್ನು ನಿರ್ವಹಣೆ ಮಾಡಲಾಗಿತ್ತು) ಹೋಲಿಸಿದರೆ ಗಣನೀಯ ಏರಿಕೆ ಸಾಧ್ಯವಾಗಿದೆ. 2023–24ರಲ್ಲಿ ಕಂಟೈನರ್‌ ರವಾನೆ ವಹಿವಾಟಿನಲ್ಲಿ ಗಣನೀಯ ಪ್ರಗತಿ ಸಾಧಿಸಲಾಗಿದ್ದು, ಈ ವರ್ಷ ಬಂದರು 1,96,424 ಟಿಇಯುಗಳಷ್ಟು (20 ಅಡಿಗೆ ಸಮನಾದ ಯೂನಿಟ್‌) ಕಂಟೈನರ್‌ ಸರಕನ್ನು ನಿರ್ವಹಿಸಿದೆ. ಕಳೆದ ವರ್ಷ 1,65,515 ಟಿಇಯುಗಳಷ್ಟು ಕಂಟೈನರ್ ಸರಕುಗಳನ್ನು ನಿರ್ವಹಣೆ ಮಾಡಲಾಗಿತ್ತು ಎಂದು ವಿವರಿಸಿದರು. 

‘ಸರ್ವ ಋತು ರಸ್ತೆ ಸಂಪರ್ಕ ಸಾಧ್ಯವಾದ ಬಳಿಕ ನವಮಂಗಳೂರು ಬಂದರು ವರ್ಷವೊಂದರಲ್ಲಿ 6 ಕೋಟಿ ಟನ್‌ಗಳಿಂದ 7 ಕೋಟಿ ಟನ್‌ಗಳಷ್ಟು ಸರಕು ನಿರ್ವಹಣೆ ಮಾಡಲಿದೆ. ಈ ಆರ್ಥಿಕ ವರ್ಷದಲ್ಲಿ ಬಂದರು 277 ಕಂಟೈನರ್‌ ಹಡಗುಗಳನ್ನು ನಿರ್ವಹಣೆ ಮಾಡಿದೆ’ ಎಂದು ಮಾಹಿತಿ ನೀಡಿದರು. 

ಎನ್‌ಎಂಪಿಎ ಐಷಾರಾಮಿ ಹಡಗುಗಳನ್ನೂ ನಿರ್ವಹಣೆ ಮಾಡುತ್ತಿದ್ದು, ಪ್ರತಿ ವರ್ಷ 7 ಸಾವಿರದಿಂದ 8 ಸಾವಿರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದರಿಂದ ಆಸುಪಾಸಿನ ಗ್ರಾಮಗಳಗೆ ಹಾಗೂ ಸಣ್ಣ ಕೈಗಾರಿಕೆಗಳಿಗೂ ಪ್ರಯೋಜನವಾಗುತ್ತಿದೆ ಎಂದು ಅವರು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT