ಗುರುವಾರ , ಡಿಸೆಂಬರ್ 5, 2019
22 °C
ಜಿಡಿಪಿ ಶೇ 5ರಷ್ಟಕ್ಕೆ ಕುಸಿತ ಕಂಡಿಲ್ಲ: ಅನುರಾಗ್‌ ಠಾಕೂರ್‌

ಆರ್ಥಿಕ ವೃದ್ಧಿ ದರ ಕುಸಿದಿಲ್ಲ

Published:
Updated:
Prajavani

ನವದೆಹಲಿ (ಪಿಟಿಐ): ದೇಶಿ ಆರ್ಥಿಕತೆಯ ವೃದ್ಧಿ ದರವು (ಜಿಡಿಪಿ) ವಿಶ್ವದಲ್ಲಿಯೇ ಅತ್ಯಂತ ತ್ವರಿತ ಪ್ರಗತಿ ದಾಖಲಿಸುತ್ತಿದ್ದು, ಕನಿಷ್ಠ ಮಟ್ಟವಾಗಿರುವ ಶೇ 5ರಷ್ಟಕ್ಕೆ ಕುಸಿದಿದೆ ಎಂದು ಪ್ರತಿಪಾದಿಸುವುದು ವಾಸ್ತವಾಂಶ ಆಧರಿಸಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.

ಲೋಕಸಭೆಯ ಪ್ರಶ್ನೋತ್ತರ ಕಲಾಪ ವೇಳೆಯಲ್ಲಿ ಮಾತನಾಡಿದ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್‌ ಅವರು, ‘ಆರ್ಥಿಕತೆಯನ್ನು ಬಲಪಡಿಸಲು ಕೈಗಾರಿಕೆಗಳಿಗೆ ತೆರಿಗೆ ಕಡಿತ, ಬ್ಯಾಂಕ್‌ಗಳ ವಿಲೀನದಂತಹ ಹಲವಾರು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ’ ಎಂದು ಹೇಳಿದರು.

‘ಆರ್ಥಿಕ ವೃದ್ಧಿ ದರವು ಶೇ 5ರ ಕನಿಷ್ಠ ಮಟ್ಟಕ್ಕೆ ಕುಸಿದಿಲ್ಲ. ನೀವು ಎಲ್ಲಿಂದ ಈ ಮಾಹಿತಿ ಪಡೆದಿರುವಿರಿ. ಅದನ್ನು ತೋರಿಸಿ’ ಎಂದು ಅವರು ಆಮ್ ಆದ್ಮಿ ಪಾರ್ಟಿಯ ಭಗ್ವಂತ್‌ ಮಾನ್‌ ಅವರಿಗೆ ಸವಾಲು ಎಸೆದರು. ದೇಶಿ ಜಿಡಿಪಿ ಶೇ 5ರಷ್ಟಕ್ಕೆ ಕುಸಿದಿದೆ ಎಂಬ ಮಾನ್‌ ಅವರ ಹೇಳಿಕೆಗೆ ಠಾಕೂರ್ ಪ್ರತಿಕ್ರಿಯಿಸುತ್ತಿದ್ದರು.

‘ವಿಶ್ವದಲ್ಲಿನ ಅನೇಕ ದೇಶಗಳು ಕುಂಠಿತ ಆರ್ಥಿಕ ಪ್ರಗತಿ ಎದುರಿಸುತ್ತಿರುವಾಗ ಭಾರತದ ಆರ್ಥಿಕತೆ ಅತ್ಯಂತ ತ್ವರಿತ ಪ್ರಗತಿ ದಾಖಲಿಸುತ್ತಿದೆ. 2025ರ ವೇಳೆಗೆ ಭಾರತವು ₹ 350 ಲಕ್ಷ ಕೋಟಿ ಮೊತ್ತದ ಆರ್ಥಿಕತೆಯಾಗಿ ಬೆಳೆಯಲಿದೆ’ ಎಂದು ಹೇಳಿದರು.

‘ಆರ್ಥಿಕತೆಯನ್ನು ಬಲಪಡಿಸಲು ಸರ್ಕಾರವು ಉದ್ದಿಮೆಗಳಿಗೆ, ವಿದೇಶಿ ನೇರ ಹೂಡಿಕೆಗೆ, ಕಿರು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ತೆರಿಗೆ ವಿನಾಯ್ತಿ ನೀಡಿದೆ. ಹಲವಾರು ಬ್ಯಾಂಕ್‌ಗಳನ್ನು ವಿಲೀನಗೊಳಿಸಲಾಗುತ್ತಿದೆ. ನಾಲ್ಕು ಬಲಿಷ್ಠ ಬ್ಯಾಂಕ್‌ಗಳನ್ನು ಸದೃಢಗೊಳಿಸಿ  ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡುವುದು ಸರ್ಕಾರದ ಉದ್ದೇಶವಾಗಿದೆ’ ಎಂದರು.

‘ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಪ್ರಕಟಿಸಿದ ಅಂಕಿ ಅಂಶಗಳ ಪ್ರಕಾರ,  2014ರಿಂದ 2019ರ ಅವಧಿಯಲ್ಲಿ ಜಿ–20 ದೇಶಗಳ ಪೈಕಿ ಭಾರತದ ಜಿಡಿಪಿಯ ಸರಾಸರಿ ಬೆಳವಣಿಗೆಯು ಶೇ 7.5ರಷ್ಟಿದೆ.

‘2019ರಲ್ಲಿ ಜಾಗತಿಕ ಉತ್ಪಾದನೆ ಮತ್ತು ವ್ಯಾಪಾರ ಗಮನಾರ್ಹವಾಗಿ ಕುಂಠಿತಗೊಳ್ಳಲಿದೆ ಎಂದು ಜಾಗತಿಕ ಆರ್ಥಿಕ ಮುನ್ನೋಟದಲ್ಲಿ (ಡಬ್ಲ್ಯುಇಒ) ಅಂದಾಜಿಸಲಾಗಿದೆ. ಭಾರತದ ಜಿಡಿಪಿಯಲ್ಲಿ ಇತ್ತೀಚೆಗೆ ಮಂದಗತಿ ದಾಖಲಾಗಿದ್ದರೂ, 2019–20ರ ಹಣಕಾಸು ವರ್ಷದಲ್ಲಿ ಜಿ–20 ದೇಶಗಳ ಪೈಕಿ ಭಾರತದ ಆರ್ಥಿಕ ವೃದ್ಧಿ ದರ ಗರಿಷ್ಠ ವೇಗದಲ್ಲಿ ಇರಲಿರುವುದು ಮುನ್ನೋಟದಲ್ಲಿ ದಾಖಲಾಗಿದೆ’ ಎಂದೂ ಠಾಕೂರ್‌ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು