₹ 2.5 ಲಕ್ಷದವರೆಗೆ ಜಮಾ ಮಾಡಿದ್ದ ಗೃಹಿಣಿಯರಿಗೆ ಐ.ಟಿ. ಪರಿಶೀಲನೆಯಿಂದ ವಿನಾಯಿತಿ

ನವದೆಹಲಿ: ನೋಟು ರದ್ದತಿಯ ನಂತರದಲ್ಲಿ ಗೃಹಿಣಿಯವರು ತಮ್ಮ ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಿದ ₹ 2.5 ಲಕ್ಷದವರೆಗಿನ ಮೊತ್ತವು ಆದಾಯ ತೆರಿಗೆ ಪರಿಶೀಲನೆಗೆ ಒಳಪಡುವುದಿಲ್ಲ ಎಂದು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಐಟಿಎಟಿ) ಹೇಳಿದೆ.
ಗ್ವಾಲಿಯರ್ನ ಉಮಾ ಅಗರ್ವಾಲ್ ಅವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಐಟಿಎಟಿ ಆಗ್ರಾ ಪೀಠವು, ತನ್ನ ಈ ಆದೇಶವು ಇದೇ ಬಗೆಯ ಇತರ ಪ್ರಕರಣಗಳಿಗೂ ಅನ್ವಯ ಆಗುತ್ತದೆ ಎಂದು ಹೇಳಿದೆ.
ಉಮಾ ಅವರು 2016–17ನೆಯ ಸಾಲಿನ ಐ.ಟಿ. ವಿವರಗಳಲ್ಲಿ ತಮ್ಮ ಆದಾಯ ₹ 1.30 ಲಕ್ಷ ಎಂದು ಘೋಷಿಸಿಕೊಂಡಿದ್ದರು. ಆದರೆ, ನೋಟು ರದ್ದತಿ ನಂತರದಲ್ಲಿ ಅವರು ₹ 2.11 ಲಕ್ಷವನ್ನು ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಿದರು. ಇದನ್ನು ಆದಾಯ ತೆರಿಗೆ ಇಲಾಖೆಯು ಪರಿಶೀಲನೆಗೆ ಕೈಗೆತ್ತಿಕೊಂಡಿತ್ತು. ಈ ಹಣದ ಬಗ್ಗೆ ವಿವರ ನೀಡುವಂತೆ ಉಮಾ ಅವರಿಗೆ ಸೂಚಿಸಲಾಗಿತ್ತು.
ಹಿಂದೆ ಉಳಿತಾಯ ಮಾಡಿದ್ದ ಹಣ, ಪತಿ, ಮಗ, ಕೆಲವು ಸಂಬಂಧಿಕರು ತಮಗೆ ನೀಡಿದ ಹಣದಿಂದ ಇಷ್ಟು ಮೊತ್ತ ಆಗಿದೆ ಎಂದು ಉಮಾ ಹೇಳಿದ್ದರು. ಈ ವಿವರಣೆಯನ್ನು ಆದಾಯ ತೆರಿಗೆ ಆಯುಕ್ತರು (ಮೇಲ್ಮನವಿ) ಒಪ್ಪಲಿಲ್ಲ. ನಂತರ ಉಮಾ ಅವರು ಐಟಿಎಟಿ ಮೊರೆ ಹೋದರು. ‘ದೇಶದ ಎಲ್ಲೆಡೆ ಮಹಿಳೆಯರು ಮನೆಯ ಖರ್ಚುಗಳಲ್ಲೇ ಒಂದಿಷ್ಟು ಹಣ ಉಳಿತಾಯ ಮಾಡುತ್ತಿದ್ದಾರೆ. ವರ್ಷಗಳಿಂದ ಕೂಡಿಟ್ಟ ₹ 500 ಹಾಗೂ ₹ 1000ದ ಮುಖಬೆಲೆಯ ನೋಟುಗಳನ್ನು ನೋಟು ರದ್ದತಿ ನಂತರ ಅವರು ಜಮಾ ಮಾಡಬೇಕಾಯಿತು’ ಎಂದು ಐಟಿಎಟಿ ಆದೇಶದಲ್ಲಿ ಹೇಳಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.