ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘೋಷಿಸಿರುವ ಆರ್ಥಿಕ ಕೊಡುಗೆ ಜಾರಿಗೊಳಿಸಿ: ಸರ್ಕಾರಕ್ಕೆ ಜಲಾನ್‌ ಸಲಹೆ

Last Updated 8 ನವೆಂಬರ್ 2020, 20:43 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಸಾಂಕ್ರಾಮಿಕದಿಂದ ಸಂಕಷ್ಟಕ್ಕೆ ಸಿಲುಕಿರುವ ಆರ್ಥಿಕತೆಗೆ ಚೇತರಿಕೆ ನೀಡಲು ಈಗಾಗಲೇ ಘೋಷಿಸಿರುವ ಯೋಜನೆಗಳನ್ನು ಜಾರಿಗೊಳಿಸುವುದು ಮುಖ್ಯ’ಎಂದು ಆರ್‌ಬಿಐನ ಮಾಜಿ ಗವರ್ನರ್‌ ಬಿಮಲ್‌ ಜಲಾನ್‌ ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ವಿತ್ತೀಯ ಉತ್ತೇಜನ ಜಾರಿಯಲ್ಲಿ ಇರುವುದರಿಂದ ಮತ್ತೊಂದು ಸುತ್ತಿನ ಕೊಡುಗೆ ನೀಡಿ, ವಿತ್ತೀಯ ಕೊರತೆ ಹೆಚ್ಚಿಸುವುದು ಬೇಡ ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

‘ಆರ್ಥಿಕ ಚೇತರಿಕೆಗೆ ಕೇಂದ್ರ ಸರ್ಕಾರವು ಹಲವು ಯೋಜನೆಗಳನ್ನು ಘೋಷಿಸುವ ಮೂಲಕ ಮಹತ್ವದ ಕೆಲಸ ಮಾಡಿದೆ. ಯೋಜನೆಗಳ ಒಟ್ಟಾರೆ ಮೊತ್ತವನ್ನುಆದಷ್ಟೂ ಬೇಗ ವೆಚ್ಚ ಮಾಡಲು ಆರಂಭಿಸಿ’ ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅವರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಕೊರೊನಾದಿಂದಾಗಿ ಆರ್ಥಿಕತೆಯಲ್ಲಿ ಉಂಟಾಗಿರುವ ಬಿಕ್ಕಟ್ಟು ಸರಿಪಡಿಸುವ ಸಲುವಾಗಿ ಕೇಂದ್ರ ಸರ್ಕಾರ ಮೇ ತಿಂಗಳಿನಲ್ಲಿ ₹ 20 ಲಕ್ಷ ಕೋಟಿ ಮೊತ್ತದ ‘ಆತ್ಮನಿರ್ಭರ ಭಾರತ’ ಕೊಡುಗೆ ಘೋಷಿಸಿತು. ಇದುವರೆಗೆ ಒಟ್ಟಾರೆ ಮೂರು ಸುತ್ತಿನ ಆರ್ಥಿಕ ಕೊಡುಗೆಗಳನ್ನು ಘೋಷಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶೀಘ್ರದಲ್ಲೇ ಇನ್ನೊಂದು ಸುತ್ತಿನ ಆರ್ಥಿಕ ಕೊಡುಗೆ ಘೋಷಿಸಲಿದ್ದಾರೆ ಎಂದು ಆರ್ಥಿಕ ವ್ಯವಹಾರಗಳ ಸಚಿವ ತರುಣ್‌ ಬಜಾಜ್‌ ಅವರು ಈಚೆಗಷ್ಟೇ ಹೇಳಿದ್ದಾರೆ.

ದೇಶದ ಸದ್ಯದ ಆರ್ಥಿಕ ಸ್ಥಿತಿಯ ಕುರಿತು ಮಾತನಾಡಿದ ಜಲನ್‌, ‘ಕೋವಿಡ್–19 ಸಾಂಕ್ರಾಮಿಕವು ಆರ್ಥಿಕ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಉಂಟುಮಾಡಿದೆಯಾದರೂ, ಈಗ ಆರ್ಥಿಕತೆಯು ಚೇತರಿಸಿಕೊಳ್ಳುತ್ತಿದೆ. ಉದ್ಯೋಗದಲ್ಲಿ ಆಗಿರುವ ನಷ್ಟ ಹಾಗೂ ಆರ್ಥಿಕ ಬೆಳವಣಿಗೆಯಲ್ಲಿ ಕಂಡಿರುವ ಕುಸಿತವು 2021ರ ಅಂತ್ಯದ ವೇಳೆಗೆ ಸರಿಹೋಗಲಿದೆ.

‘ಮುಂದಿನ ಕೆಲವು ತಿಂಗಳುಗಳಲ್ಲಿ ಕೋವಿಡ್‌ ತರಹದ ಯಾವುದೇ ಬಿಕ್ಕಟ್ಟು ಎದುರಾಗದೇ ಇದ್ದರೆ 2021–22ರಲ್ಲಿ ಆರ್ಥಿಕ ಬೆಳವಣಿಗೆ ದರ ಶೇ 6 ರಿಂದ ಶೇ 7ರ ಮಟ್ಟದಲ್ಲಿ ಇರಲಿದೆ’ ಎಂದು ತಿಳಿಸಿದ್ದಾರೆ.

ಕೋವಿಡ್‌ನಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ 9.5ರಷ್ಟು ಇಳಿಕೆಯಾಗಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಅಂದಾಜು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT