ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಪಿಎಸ್‌: ಕಾರ್ಪೊರೇಟ್‌ ನೌಕರರ ಮನವೊಲಿಕೆಗೆ ಕ್ರಮ

ಗೊಂದಲಗಳ ನಿವಾರಣೆ, ಅನುಮಾನಗಳಿಗೆ ಸ್ಪಷ್ಟನೆ
Last Updated 12 ಜನವರಿ 2020, 19:46 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಪಿಂಚಣಿ ಯೋಜನೆ ಬಗ್ಗೆ (ಎನ್‌ಪಿಎಸ್‌) ಖಾಸಗಿ ಉದ್ದಿಮೆ ಸಂಸ್ಥೆಗಳ ನೌಕರರಲ್ಲಿ ತಿಳಿವಳಿಕೆ ಮೂಡಿಸಲು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿಎಫ್ಆರ್‌ಡಿಎ) ಕ್ರಮ ಕೈಗೊಂಡಿದೆ.

‘ಎನ್‌ಪಿಎಸ್‌’ ಬಗ್ಗೆ ಖಾಸಗಿ ವಲಯದ ನೌಕರರಲ್ಲಿ ಇರುವ ಗೊಂದಲ ನಿವಾರಣೆ ಮಾಡಲು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕ್ಕಿ) ನೆರವಿನಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ.

‘ನೌಕರರಲ್ಲಿ ಮೂಡಿರುವ ಗೊಂದಲ ಪರಿಹರಿಸಿ ಅನುಮಾನಗಳಿಗೆ ಸ್ಪಷ್ಟೀಕರಣ ನೀಡಲಾಗುತ್ತಿದೆ. ಎರಡನೆ ಹಂತದಲ್ಲಿ ಜಿಲ್ಲಾ ಕೇಂದ್ರಗಳಿಗೂ ಇಂತಹ ಕಾರ್ಯಕ್ರಮ ವಿಸ್ತರಿಸಲಾಗುವುದು. ಈ ಪ್ರಚಾರ ಆಂದೋಲನ ಬರೀ ಕಾರ್ಪೊರೇಟ್‌ಗಳಿಗೆ ಸೀಮಿತವಾಗಿರುವುದಿಲ್ಲ. ವೈಯಕ್ತಿಕ ನೆಲೆಯಲ್ಲಿಯೂ ಇಂತಹ ಪ್ರಯತ್ನ ನಡೆಸಲಾಗುವುದು’ ಎಂದು ಪ್ರಾಧಿಕಾರದ ಪೂರ್ಣಾವಧಿ ಸದಸ್ಯ ಸುಪ್ರತಿಂ ಬಂಡೊಪಾಧ್ಯಾಯ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬಳಕೆದಾರ ಸ್ನೇಹಿ ಪಿಂಚಣಿ ಉತ್ಪನ್ನ: ‘ನಿಧಿ ನಿರ್ವಾಹಕರ ಆಯ್ಕೆ, ಹೂಡಿಕೆಯ ಪ್ರಯೋಜನ, ತೆರಿಗೆ ಲಾಭ ಮತ್ತಿತರ ಸಂಗತಿಗಳ ಬಗ್ಗೆ ನೌಕರರ ಗೊಂದಲಗಳನ್ನು ದೂರ ಮಾಡ
ಲಾಗುತ್ತಿದೆ. ಇದೊಂದು ಬಳಕೆದಾರ ಸ್ನೇಹಿ ಪಿಂಚಣಿ ಉತ್ಪನ್ನವಾಗಿದೆ. ಇತರ ಹೂಡಿಕೆಗಳಿಗೆ ಹೋಲಿಸಿದರೆ ದೀರ್ಘಾವಧಿಯಲ್ಲಿ ಬರುವ ಲಾಭ ಹೆಚ್ಚಿನ ಮಟ್ಟದಲ್ಲಿ ಇದೆ. ಸದ್ಯಕ್ಕೆ ಶೇ 9.8
ರಷ್ಟು ಪ್ರತಿಫಲ ದೊರೆಯುತ್ತಿದೆ. ಪ್ರಾಧಿಕಾರವು ಸರ್ಕಾರಿ ಮತ್ತು ಕಾರ್ಪೊರೇಟ್‌ ಬಾಂಡ್‌ಗಳಲ್ಲಿ ಹಣ ತೊಡಗಿಸುತ್ತದೆ. ಠೇವಣಿ ಮೇಲಿನ ಬಡ್ಡಿ ದರಗಳು ಇಳಿಯುತ್ತಿರುವಾಗ, ಬಾಂಡ್‌ಗಳಲ್ಲಿನ ಹೂಡಿಕೆಯ ಆದಾಯ ಏರುಗತಿಯಲ್ಲಿ ಇರುತ್ತದೆ. ಎನ್‌ಪಿಎಸ್‌ ಚಂದಾದಾರರಿಗೆ ಇದರ ಪ್ರಯೋಜನ ದೊರೆಯುತ್ತಿದೆ.

‘ಇದೊಂದು ಪಿಂಚಣಿ ಉತ್ಪನ್ನವಾಗಿದ್ದರೂ ಇದರಲ್ಲಿ ತೆರಿಗೆ ಪ್ರಯೋಜನವೂ ಇದೆ. ಆದಾಯ ತೆರಿಗೆಯಲ್ಲಿ ಇತರ ತೆರಿಗೆ ವಿನಾಯ್ತಿಗಳ ಜತೆ ಹೆಚ್ಚುವರಿಯಾಗಿ ₹ 50 ಸಾವಿರ ವಿನಾಯ್ತಿಯೂ ಇಲ್ಲಿ ಲಭ್ಯ ಇದೆ. ನಿವೃತ್ತಿ ಸಂದರ್ಭದಲ್ಲಿ ನೌಕರರು ತಮ್ಮ ಒಟ್ಟಾರೆ ಕೊಡುಗೆಯಲ್ಲಿನ ಶೇ 60ರಷ್ಟನ್ನು ತೆರಿಗೆ ಹೊರೆ ಇಲ್ಲದೇ ಹಿಂದೆ ಪಡೆಯಬಹುದು. ಬೇರೆ ಯಾವ ಹೂಡಿಕೆಯಲ್ಲಿಯೂ ಈ ಸೌಲಭ್ಯ ಇಲ್ಲ.

‘ನಿವೃತ್ತಿ ಬದುಕಿಗೆ ಹೆಚ್ಚಿನ ಸುರಕ್ಷತೆ ಒದಗಿಸಲು ತೆರಿಗೆ ವಿನಾಯ್ತಿ ಹೆಚ್ಚಳ ಸೇರಿದಂತೆ ಹಣಕಾಸು ಸಚಿವಾಲಯಕ್ಕೆ ಕೆಲ ಹೊಸ ಪ್ರಸ್ತಾವಗಳನ್ನು ಸಲ್ಲಿಸಲಾಗಿದೆ. ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಈ ಹೊಸ ಪ್ರಸ್ತಾವಗಳಿಗೆ ಅಂಗೀಕಾರ ಸಿಗುವ ನಿರೀಕ್ಷೆ ಇದೆ’ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಸರ್ಕಾರಿ ನೌಕರರು ‘ಎನ್‌ಪಿಎಸ್‌’ ಅನ್ನು ಹಳೆಯ ಪಿಂಚಣಿ ಯೋಜನೆಗೆ ಹೋಲಿಸಿ ನೋಡುತ್ತಿದ್ದಾರೆ. ಹಳೆಯ ಯೋಜನೆ ಬೊಕ್ಕಸಕ್ಕೆ ಹೊರೆಯಾಗಿ ಪರಿಣಮಿಸಿದ ಕಾರಣಕ್ಕೆ ಇದನ್ನು ಪರಿಚಯಿಸಲಾಗಿದೆ. ಇದೊಂದು ನೌಕರ ಸ್ನೇಹಿ ಯೋಜನೆಯಾಗಿದೆ.

‘ಕಾರ್ಪೊರೇಟ್‌ಗಳ ಸಿಬ್ಬಂದಿ ಸಂಖ್ಯೆ 1,000 ಇದ್ದರೆ ಅವರಲ್ಲಿ ಕೇವಲ 50 ಜನ ಮಾತ್ರ ಎನ್‌ಪಿಎಸ್‌ ಚಂದಾದಾರರಾಗಿದ್ದಾರೆ. ಉಳಿದವರನ್ನೆಲ್ಲ ‘ಎನ್‌ಪಿಎಸ್‌’ಗೆ ಸೇರ್ಪಡೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಾಧಿಕಾರವು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 2019–20ರಲ್ಲಿ ಹೊಸ ಚಂದಾದಾರರ ಸೇರ್ಪಡೆಯು ಶೇ 60ರಷ್ಟು ಪ್ರಗತಿ ಕಂಡಿದೆ. ವೈಯಕ್ತಿಕ ನೆಲೆಗಟ್ಟಿನಲ್ಲಿಯೂ ಎನ್‌ಪಿಎಸ್‌ ಸಾಕ್ಷರತೆ ಮೂಡಿಸಲಾಗುತ್ತಿದೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT