ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಕುಸಿತ: ಉಳ್ಳಾಗಡ್ಡಿ ಕಟಾವಿಗೇ ಹಿಂದೇಟು

ಹುಬ್ಬಳ್ಳಿ ತಾಲ್ಲೂಕಿನ ರೈತರಲ್ಲಿ ಕಣ್ಣೀರು ತರಿಸಿದ ಬೆಳೆ l ಹಾಕಿದ ಬಂಡವಾಳವೂ ಕೈಗೆ ಸಿಗಲಿಲ್ಲ
Last Updated 8 ಅಕ್ಟೋಬರ್ 2018, 20:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಜವಾರಿ ಉಳ್ಳಾಗಡ್ಡಿ ಬೆಳೆಯುವ ರೈತರ ಬೆನ್ನಿಗೆ ಬೆಲೆ ಕುಸಿತದ ಬಾಸುಂಡೆ ಬಿದ್ದಿದೆ. ಮಾರುಕಟ್ಟೆಯಲ್ಲಿ ಕ್ವಿಂಟಲ್‌ ಜವಾರಿ ಉಳ್ಳಾಗಡ್ಡಿ ಬೆಲೆ ₹300–700ಕ್ಕೆ ಕುಸಿದ ಕಾರಣ ಹೊಲದಲ್ಲಿ ಬೆಳೆದು ನಿಂತಿರುವ ಬೆಳೆ ಕಟಾವಿಗೆ ರೈತರು ಹಿಂದೇಟು ಹಾಕುತ್ತಿದ್ದಾರೆ.

‘ಒಂದು ಕ್ವಿಂಟಲ್‌ ಉಳ್ಳಾಗಡ್ಡಿಯನ್ನು ಹೊಲದಿಂದ ಮಾರುಕಟ್ಟೆಗೆ ಸಾಗಿಸಲು ₹1,500 ಖರ್ಚಾಗುತ್ತದೆ (ಕಟಾವು, ಗ್ರೇಡಿಂಗ್‌,ಸಾಗಣೆ, ಚೀಲದವೆಚ್ಚ). ಆದರೆ, ಮಾರುಕಟ್ಟೆ ದರ ₹ 700 ಇದೆ. ಹೀಗಿರುವಾಗ ನಾವೇ ಕೈಯ್ಯಾರೆ ಇನ್ನಷ್ಟು ಹಣ ವ್ಯಯಿಸಬೇಕಿದೆ. ಬೆಳೆಗೆ ಹಾಕಿದ ಬಂಡವಾಳವೇ ತಲೆ ಮೇಲೆ ಬೆಟ್ಟದಷ್ಟಿದೆ. ಹೀಗಾಗಿ ಕಟಾವಿನ ಉಸಾಬರಿಗೆ ಹೋಗಿಲ್ಲ. ಕೊಳೆತು ಗೊಬ್ಬರವಾದರೂ ಆಗಲಿ ಅಂತ ಬಿಟ್ಟಿದ್ದೇವೆ’ ಎಂದು ಕುಸುಗಲ್‌ ಗ್ರಾಮದ ರೈತ ಮಂಜುನಾಥ ಅಸಹಾಯಕರಾಗಿ ನುಡಿದರು.

ರಸ್ತೆ ಪಕ್ಕದಲ್ಲಿ ಉಳ್ಳಾಗಡ್ಡಿ ರಾಶಿ ಹಾಕಿಕೊಂಡು ಗ್ರೇಡಿಂಗ್‌ ಮಾಡುತ್ತಿದ್ದ ರೈತ ಷರೀಫ್‌ ಸಾಬ್‌ ಮಾತಿಗೆ ಸಿಕ್ಕರು. ‘ಐದು ಎಕರೆಯಲ್ಲಿ ಉಳ್ಳಾಗಡ್ಡಿ ಬೆಳೆಯಲು ಬೀಜ, ಗೊಬ್ಬರ ಬಿಟ್ಟು ₹80 ಸಾವಿರ ಖರ್ಚಾಗಿದೆ. ಫಸಲು ಕೈಗೆ ಬರುವ ಹೊತ್ತಿಗೆ ಮಳೆ ಕೈಕೊಟ್ಟಿತು. ಹೀಗಾಗಿ ಗೆಡ್ಡೆ ಗಾತ್ರಕಡಿಮೆಯಾಗಿದೆ. ಸಣ್ಣ ಉಳ್ಳಾಗಡ್ಡಿಗೆ ಹರಾಜಿನಲ್ಲಿ ಬೇಕಾಬಿಟ್ಟಿ ಬೆಲೆ ಕೂಗುತ್ತಾರೆ. ಕ್ವಿಂಟಲ್‌ಗೆ ₹100 ಕೊಡುವುದಾಗಿ ಹೇಳಿದರೆ ನಮ್ಮ ಹೊಟ್ಟೆ ಪಾಡೇನು’ ಎಂದು ಅಳಲು ತೋಡಿಕೊಂಡರು.

ಬ್ಯಾಹಟ್ಟಿ ದಾರಿಗುಂಟ ಹೊಲದಲ್ಲೇ ಒಣಗುತ್ತಿರುವ ಉಳ್ಳಾಗಡ್ಡಿ ರೈತರ ದೈನ್ಯ ಸ್ಥಿತಿಯನ್ನು ಬಿಚ್ಚಿಡುವಂತಿತ್ತು. ದಾರಿಯಲ್ಲಿ ಮಾತಿಗೆ ಸಿಕ್ಕ ಬ್ಯಾಹಟ್ಟಿಯ ಚಾಂದ್‌ಸಾಬ್‌ ಮುಲ್ಲಾ ಅವರಲ್ಲಿ ಈರುಳ್ಳಿ ಕಥೆ ಕೇಳುತ್ತಿದ್ದಂತೆ ಆಕಾಶದತ್ತ ದಿಟ್ಟಿಸಿ ‘ಕಥೆ ಏನು ಇಲ್ಲಾರಿ. ಎಲ್ಲಾ ನಮ್ಮ ವ್ಯಥೆ’ ಎಂದು ತಲೆ ಮೇಲೆ ಕೈಇಟ್ಟುಕೊಂಡು ಕೂತರು.

‘ಎರಡು ಎಕರೆಯಲ್ಲಿ ಉಳ್ಳಾಗಡ್ಡಿ ಬೆಳೆ ಇದೆ. ಬಿತ್ತನೆಗೆ ₹8 ಸಾವಿರ ಖರ್ಚಾಗಿದೆ. ಎರಡು ಬಾರಿ ಕಳೆ ಕೀಳಲು ₹10 ಸಾವಿರ ಖರ್ಚಾಗಿದೆ. ಅರ್ಧದಲ್ಲೇ ಮಳೆ ಹೋಯ್ತು. ಈಗ 15 ಚೀಲ ಉಳ್ಳಾಗಡ್ಡಿ ಸಿಕ್ಕರೆ ದುರ್ಲಭ. ಅದನ್ನು ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸುವ ಶಕ್ತಿ ‌ನಮಗೆ ಇಲ್ಲ. ಗೊಬ್ಬರವಾದರೂ ಆಗಲಿ ಅಂತ ಬಿಟ್ಟು ಬಿಟ್ಟಿದ್ದೇವೆ.

ಬ್ಯಾಹಟ್ಟಿಯ ಪಂಚಾಯ್ತಿ ಬಯಲಲ್ಲಿ ರಾಶಿ ಹಾಕಿದ್ದ ಉಳ್ಳಾಗಡ್ಡಿ ಲಾಟಿನತ್ತ ತೆರಳಿ ರೈತರೊಂದಿಗೆ ಮಾತಿಗಿಳಿಯುತ್ತಿದ್ದಂತೆ ಏಳೆಂಟು ಮಂದಿ ರೈತರು ಜಮಾವಣೆಯಾದರು. ‘ಸರ್ಕಾರದಿಂದ ಬೆಂಬಲ ಬೆಲೆಯಾದರೂ ಕೊಡಿಸಿ’ ಎಂದು ಅಲವತ್ತುಕೊಂಡರು.

‘ನಾಲ್ಕು ಎಕರೆ ನೀರಾವರಿ ಭೂಮಿಯಲ್ಲಿ 300 ಚೀಲ ಈರುಳ್ಳಿ ಫಸಲು ಬಂದಿದೆ. ಬೆಲೆ ಕುಸಿತದಿಂದ ಹಾಕಿದ ಬಂಡವಾಳವೂ ಹುಟ್ಟುತ್ತಿಲ್ಲ. ಸರ್ಕಾರ ಬೆಳೆಗಾರರ ರಕ್ಷಣೆಗೆ ಧಾವಿಸಬೇಕು’ ಎಂದು ರಾಶಿಯ ಮಾಲೀಕ ಈಶ್ವರ್‌ಗೌಡ ಜೀವನ್‌ಗೌಡರ್‌ ಮನವಿ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT