ಮಂಗಳವಾರ, ಏಪ್ರಿಲ್ 13, 2021
25 °C

ತೈಲ ಉತ್ಪಾದನೆ: ಭಾರತದ ಮನವಿ ಕಡೆಗಣಿಸಿದ ಒಪೆಕ್‌

ಪಿಟಿಐ Updated:

ಅಕ್ಷರ ಗಾತ್ರ : | |

DH File

ನವದೆಹಲಿ (ಪಿಟಿಐ): ಕಚ್ಚಾ ತೈಲ ಉತ್ಪಾದನೆ ಮೇಲೆ ಹೇರಿರುವ ನಿಯಂತ್ರಣಗಳನ್ನು ಸಡಿಲಿಸಬೇಕು ಎಂದು ಭಾರತ ಮಾಡಿದ್ದ ಮನವಿಯನ್ನು ತೈಲ ರಫ್ತು ರಾಷ್ಟ್ರಗಳ ಒಕ್ಕೂಟವು (ಒಪೆಕ್‌) ಗಂಭೀರವಾಗಿ ಪರಿಗಣಿಸಿಲ್ಲ. ಅಲ್ಲದೆ, ಸೌದಿ ಅರೇಬಿಯಾ ದೇಶವು ಭಾರತಕ್ಕೆ, ‘ಕಳೆದ ವರ್ಷ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿದ್ದ ತೈಲವನ್ನೇ ಬಳಸಿಕೊಳ್ಳಿ’ ಎಂದು ಸಲಹೆ ಮಾಡಿದೆ.

ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶುಕ್ರವಾರ ಪ್ರತಿ ಬ್ಯಾರೆಲ್‌ಗೆ ಶೇಕಡ 1ರಷ್ಟು ಹೆಚ್ಚಳವಾಗಿ, 67.44 ಅಮೆರಿಕನ್‌ ಡಾಲರ್‌ಗೆ ತಲುಪಿದೆ. ತೈಲೋತ್ಪನ್ನಗಳ ಬೇಡಿಕೆಯಲ್ಲಿ ಇನ್ನಷ್ಟು ಗಟ್ಟಿಯಾದ ಸುಧಾರಣೆ ಕಂಡುಬರುವವರೆಗೂ ಉತ್ಪಾದನೆಯನ್ನು ಹೆಚ್ಚಿಸುವುದು ಬೇಡ ಎಂದು ಒಪೆಕ್‌+ (ಒಪೆಕ್‌ ರಾಷ್ಟ್ರಗಳು ಹಾಗೂ ಆ ರಾಷ್ಟ್ರಗಳ ಮಿತ್ರ ರಾಷ್ಟ್ರಗಳ ಒಕ್ಕೂಟ) ಸಂಘಟನೆ ತೀರ್ಮಾನಿಸಿದ ನಂತರ ಈ ಹೆಚ್ಚಳ ಆಗಿದೆ.

ಗುರುವಾರ ನಡೆದ ಒಪೆಕ್‌ ಸಭೆಗೂ ಮೊದಲು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ‘ತೈಲ ಬೆಲೆ ಸ್ಥಿರವಾಗಿರುವಂತೆ ನೋಡಿಕೊಳ್ಳಲಾಗುತ್ತದೆ ಎಂಬ ಮಾತಿಗೆ ಬದ್ಧರಾಗಿ ನಡೆದುಕೊಳ್ಳಬೇಕು, ಉತ್ಪಾದನೆಯ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ಸಡಿಲಿಸಬೇಕು’ ಎಂದು ಆ ಒಕ್ಕೂಟದ ರಾಷ್ಟ್ರಗಳನ್ನು ಆಗ್ರಹಿಸಿದ್ದರು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಳ ಆಗುತ್ತಿರುವುದು ಆರ್ಥಿಕ ಪುನಶ್ಚೇತನಕ್ಕೆ ಅಡ್ಡಿಯಾಗಿದೆ ಎಂದು ಪ್ರಧಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಭಾರತ ಮಾಡಿಕೊಂಡಿರುವ ಮನವಿಯ ಕುರಿತು ಸೌದಿ ಅರೇಬಿಯಾದ ಇಂಧನ ಸಚಿವ ರಾಜಕುಮಾರ ಅಬ್ದುಲ್‌ಅಜೀಜ್‌ ಬಿನ್ ಸಲ್ಮಾನ್‌ ಅವರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಲಾಯಿತು. ಆಗ ಅವರು, ‘ಹಿಂದಿನ ವರ್ಷ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿದ್ದ ತೈಲವನ್ನು ಭಾರತವು ತನ್ನ ಸಂಗ್ರಹಾಗಾರದಿಂದ ಹೊರಗೆ ತೆಗೆಯಬೇಕು’ ಎಂದು ಉತ್ತರಿಸಿದ್ದಾರೆ.

2020ರ ಏಪ್ರಿಲ್‌–ಮೇ ಅವಧಿಯಲ್ಲಿ ಭಾರತವು 1.67 ಕೋಟಿ ಬ್ಯಾರೆಲ್‌ ಕಚ್ಚಾ ತೈಲವನ್ನು ಬ್ಯಾರೆಲ್‌ಗೆ ಸರಾಸರಿ 19 ಅಮೆರಿಕನ್‌ ಡಾಲರ್‌ ಪಾವತಿಸಿ ಖರೀದಿಸಿತ್ತು. ಈ ತೈಲ ಬಳಸಿ ವಿಶಾಖಪಟ್ಟಣ ಮತ್ತು ಮಂಗಳೂರಿನಲ್ಲಿರುವ ತೈಲ ಸಂಗ್ರಹಾಗಾರಗಳನ್ನು ಭರ್ತಿ ಮಾಡಲಾಗಿತ್ತು. ಈ ಸಂಗತಿಯನ್ನು ಪ್ರಧಾನ್‌ ಅವರು 2020ರ ಸೆಪ್ಟೆಂಬರ್‌ನಲ್ಲಿ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು