ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಯಂ ಉದ್ಯೋಗಿಗಳ ಆದಾಯ ನಷ್ಟ: ಬೆಂಗಳೂರಿಗೆ 2ನೇ ಸ್ಥಾನ

ಪೈಸಾಬಜಾರ್‌ಡಾಟ್‌ಕಾಂ ಸಮೀಕ್ಷೆ
Last Updated 31 ಅಕ್ಟೋಬರ್ 2020, 4:50 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಪಿಡುಗಿನಿಂದಾಗಿ ಸ್ವಯಂ ಉದ್ಯೋಗಿಗಳು ಆದಾಯ ನಷ್ಟ ಕಂಡ ಮತ್ತು ಸಾಲ ಮರುಪಾವತಿ ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮವು ತೀವ್ರ ಸ್ವರೂಪದಲ್ಲಿ ಕಂಡುಬಂದಿರುವುದರಲ್ಲಿ ಬೆಂಗಳೂರು, ದೇಶದಲ್ಲಿ ಎರಡನೇ ಸ್ಥಾನದಲ್ಲಿ ಇದೆ.

ಸಾಲ ನೀಡುವ ಅತಿದೊಡ್ಡ ಡಿಜಿಟಲ್‌ ಮಾರುಕಟ್ಟೆ ತಾಣವಾಗಿರುವ ಪೈಸಾಬಜಾರ್‌ಡಾಟ್‌ಕಾಂ (Paisabazaar.com) ಆರು ಮಹಾನಗರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಆದಾಯ ನಷ್ಟ ಮತ್ತು ಸಾಲ ಮರುಪಾವತಿಯಲ್ಲಿ ಜನರು ವಿವಿಧ ಬಗೆಯ ಹಣಕಾಸು ಸಮಸ್ಯೆಗಳನ್ನು ಎದುರಿಸಿದ ವಿಷಯದಲ್ಲಿ ಚೆನ್ನೈ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಾಧಿತವಾಗಿದೆ. ದೆಹಲಿ (ರಾಷ್ಷ್ರೀಯ ರಾಜಧಾನಿ ಪ್ರದೇಶ) ಮೊದಲ, ಹೈದರಾಬಾದ್‌ (ತೃತೀಯ) ಮತ್ತು ಮುಂಬೈ ನಾಲ್ಕನೇ ಸ್ಥಾನದಲ್ಲಿ ಇವೆ.

ದೇಶದ 35 ನಗರಗಳಲ್ಲಿನ ‘ಪಾಲಿಸಿಬಜಾರ್‌ಡಾಟ್‌ಕಾಂ‘ನ 8,500 ಕ್ಕೂ ಹೆಚ್ಚು ಗ್ರಾಹಕರು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ₹ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಸಾಲ ಪಡೆದ 24ರಿಂದ 57 ವರ್ಷದ ಒಳಗಿನವರು ವ್ಯಕ್ತಪಡಿಸಿದ ಅಭಿಪ್ರಾಯ ಆಧರಿಸಿ ಈ ಸಮೀಕ್ಷಾ ಫಲಿತಾಂಶ ಪ್ರಕಟಿಸಲಾಗಿದೆ.

ಕೋವಿಡ್‌ಗೆ ಸಂಬಂಧಿಸಿದ ನಿರ್ಬಂಧನೆಗಳಿಂದಾಗಿ ಶೇ 86ಕ್ಕೂ ಹೆಚ್ಚು ಸ್ವಯಂ ಉದ್ಯೋಗಿಗಳು ಆದಾಯ ನಷ್ಟಕ್ಕೆ ಗುರಿಯಾಗಿದ್ದಾರೆ. ತಮ್ಮ ತಿಂಗಳ ಸಂಬಳದ ಮೇಲೆ ಕೋವಿಡ್‌ ಪಿಡುಗು ಪ್ರತಿಕೂಲ ಪರಿಣಾಮ ಬೀರಿರುವುದಾಗಿ ಶೇ 56ರಷ್ಟು ಉದ್ಯೋಗಿಗಳು ಹೇಳಿಕೊಂಡಿದ್ದಾರೆ.

ಲಾಕ್‌ಡೌನ್‌ ಆರಂಭಿಕ ದಿನಗಳಲ್ಲಿ ಆರ್ಥಿಕ ಪ್ರತಿಕೂಲ ಪರಿಣಾಮಗಳು ವ್ಯಾಪಕ ಪ್ರಮಾಣದಲ್ಲಿ ಇದ್ದವು. ಜುಲೈನಿಂದೀಚೆಗೆ ಚೇತರಿಕೆ ಕಂಡು ಬರುತ್ತಿದೆ. ಸಾರಿಗೆ, ಪ್ರವಾಸ, ವಿಮಾನಯಾನ, ಮನರಂಜನೆ, ಹೋಟೆಲ್‌ ಮತ್ತಿತರ ಕ್ಷೇತ್ರಗಳಲ್ಲಿ ಪರಿಸ್ಥಿತಿ ಕ್ರಮೇಣ ಸುಧಾರಣೆ ಕಾಣುತ್ತಿದೆ. ಬ್ಯಾಂಕ್‌ಗಳ ಸಾಲ ನೀಡಿಕೆಯಲ್ಲಿಯೂ ಹೆಚ್ಚಳ ಕಂಡು ಬರುತ್ತಿದೆ. ಸ್ವಯಂ ಉದ್ಯೋಗಿಗಳು ಮತ್ತು ಕಡಿಮೆ ಆದಾಯದ ವರ್ಗದವರಿಗೆ ಸಾಲ ಸೌಲಭ್ಯದಲ್ಲಿ ಹೆಚ್ಚಳಗೊಳ್ಳಲು ಕೆಲಮಟ್ಟಿಗೆ ವಿಳಂಬವಾಗಲಿದೆ ಎಂದು ಪೈಸಾಬಜಾರ್‌ಡಾಟ್‌ಕಾಂನ ಸಹಸ್ಥಾಪಕ ಮತ್ತು ಸಿಇಒ ನವೀನ್‌ ಕುಕ್ರೆಜಾ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT