ಶನಿವಾರ, ಫೆಬ್ರವರಿ 27, 2021
19 °C

ಬೃಹತ್ ಅಭಿವೃದ್ಧಿ ಪ್ರಯತ್ನಕ್ಕೆ ಶ್ರೀಕಾರ?

ಡಾ. ಜಿ.ವಿ. ಜೋಶಿ Updated:

ಅಕ್ಷರ ಗಾತ್ರ : | |

Prajavani

ಅಭಿವೃದ್ಧಿಯ ಹೆಸರಿನಲ್ಲೇ ಈ ಹಿಂದೆ ಅರುಣ್‌ ಜೇಟ್ಲಿ ಮತ್ತು ಪೀಯೂಷ್ ಗೋಯಲ್ ಅವರು ಮಂಡಿಸಿದ ಮುಂಗಡಪತ್ರಗಳು, ಇದೇ 5ರಂದು ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ ಕೇಂದ್ರ ಮುಂಗಡ ಪತ್ರಕ್ಕೆ ಹಿನ್ನೆಲೆಯಾಗಿ ನಿಲ್ಲುತ್ತವೆ. ರಿಸರ್ವ್ ಬ್ಯಾಂಕಿನ ಗವರ್ನರ್ ಶಕ್ತಿಕಾಂತ ದಾಸ್ ಅವರು ಹಿಂದೆ ಕೇಂದ್ರ ಹಣಕಾಸು ಸಚಿವಾಲಯದಲ್ಲಿ ಪ್ರಮುಖ ಹುದ್ದೆಗಳಲ್ಲಿದ್ದು, ಬಜೆಟ್ ನೀತಿ ನಡೆದು ಬಂದ ದಾರಿಯನ್ನು ಹತ್ತಿರದಿಂದ ಬಲ್ಲವರು. ‘ಮುಂದಾಲೋಚನೆಯುಳ್ಳ ಬಜೆಟ್ ನೀತಿ ಬೇಕು’ ಎಂದು, ಜೂನ್‌ 6ರಂದು ಬಡ್ಡಿ ಕಡಿತ ಮಾಡಿದ ನಂತರ ಅವರು ಒತ್ತಿ ಹೇಳಿದ್ದು ಸಮಂಜಸವಾಗಿದೆ.

ಮಧ್ಯಂತರ ಬಜೆಟ್ ಭಾಷಣದಲ್ಲಿ ಗೋಯಲ್, ‘ಭಾರತ ತನ್ನ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಮಾಡಲಿರುವ 2022ರಲ್ಲಿ ನವಭಾರತದ ಕನಸನ್ನು ಸಾಕಾರಗೊಳಿಸಲು ನಮ್ಮ ಸರ್ಕಾರ ದೃಢ ಹೆಜ್ಜೆ ಇಟ್ಟಿದೆ’ ಎಂದಿದ್ದರು. 2015-16ನೇ ವಿತ್ತೀಯ ವರ್ಷದಲ್ಲಿ ಬೆಳವಣಿಗೆ ದರ 7.6ಕ್ಕೆ ಜಿಗಿಯಿತೆಂದು ಕೇಂದ್ರೀಯ ಸಾಂಖ್ಯಿಕ ಸಂಸ್ಥೆ ಘೋಷಿಸಿದಾಗ ಜೇಟ್ಲಿ ಎರಡಂಕಿ ಬೆಳವಣಿಗೆ ದರ ದೂರವಿಲ್ಲವೆಂದು ಹೇಳಿ ಸಂಭ್ರಮಿಸಿದ್ದರು. ನವಭಾರತ ನಿರ್ಮಾಣದ ಕನಸಿಗೆ ಒಂದಿಷ್ಟು ಅರ್ಥ ಬರಬೇಕಾದರೆ 2022ರ ಹೊತ್ತಿಗಾದರೂ ದೇಶ ಎರಡಂಕಿ ಬೆಳವಣಿಗೆ ದರ ಕಾಣಬೇಕು, ಉದ್ಯೋಗಾವಕಾಶಗಳು ಸೃಷ್ಟಿಯಾಗಿ ಬಡತನದ ನಿರ್ಮೂಲನೆಯಾಗಬೇಕು. ಆಗ ಸಮಾಜಕ್ಕೆ ಬೇಕಾದ ಒಳಗೊಳ್ಳುವಿಕೆಯುಳ್ಳ ಅಭಿವೃದ್ಧಿಯ ಪರಿಕಲ್ಪನೆಯು ಸಾಧನೆಯಾಗಿ ಪರಿವರ್ತನೆಯಾಗಲಿದೆ. ಕೇಂದ್ರದ ನಿರೀಕ್ಷಿತ ಬಜೆಟ್‌ ತೀರಾ ಅವಶ್ಯವಾದ ಬೃಹತ್ ಅಭಿವೃದ್ಧಿ ಪ್ರಯತ್ನಕ್ಕೆ ಶ್ರೀಕಾರ ಹಾಕಬೇಕಾಗಿದೆ.

ಮೂಲ ಸೌಕರ್ಯಗಳ ರಂಗದಲ್ಲಿ ಹೆಚ್ಚು ಹೂಡಿಕೆ ಮಾಡಿದರೆ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಸಾಧ್ಯತೆಯನ್ನು ಜೇಟ್ಲಿ ಗಮನಿಸಿದ್ದರು. ನೋಟು ಅಮಾನ್ಯೀಕರಣದಿಂದ ಆರ್ಥಿಕ ಬೆಳವಣಿಗೆ ದರದಲ್ಲಾದ ಹಿನ್ನಡೆಯನ್ನು ತಡೆಗಟ್ಟಲು ಮುಂದಾದ ಅವರು, 2018-19ರ ಬಜೆಟ್ ಭಾಷಣದಲ್ಲಿ ‘ಮೂಲ ಸೌಕರ್ಯಗಳ ವಲಯವು ದೇಶದ ಆರ್ಥಿಕತೆಯ ಅಭಿವೃದ್ಧಿಯ ಚಾಲಕ ಶಕ್ತಿಯಾಗಿದೆ’ ಎಂದಿದ್ದರು. ಈ ವಲಯದ ವಿಕಾಸಕ್ಕೆ ₹ 5.97 ಲಕ್ಷ ಕೋಟಿ ಅನುದಾನ ನೀಡಿದ್ದರು. ಗೋಯಲ್ ಅವರ ಬಜೆಟ್ ಪೂರ್ಣ ಪ್ರಮಾಣದ ಬಜೆಟ್ ಆಗಿರಲಿಲ್ಲವಾದ್ದರಿಂದ ಸಹಜವಾಗಿ ಮೂಲ ಸೌಕರ್ಯಗಳ ವಲಯಕ್ಕೆ ಹೆಚ್ಚು ಗಮನ ನೀಡಲಿಲ್ಲ.

ಮುಂದಿನ ಐದು ವರ್ಷಗಳ ಅವಧಿಯಲ್ಲಿ ಮೂಲ ಸೌಕರ್ಯ ವಲಯದಲ್ಲಿ ₹ 100 ಲಕ್ಷ ಕೋಟಿಯಷ್ಟು ಹೂಡಿಕೆ ಮಾಡುವ ಮಹತ್ವಾಕಾಂಕ್ಷೆಯ ಮುನ್ನೋಟ ನೀಡುವ ಬಜೆಟ್‌ ಮಂಡನೆಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಕರ್ನಾಟಕಕ್ಕೆ ಸರ್ಕಾರಿ- ಖಾಸಗಿ ಸಹಭಾಗಿತ್ವವುಳ್ಳ ಒಂದೆರಡು ವಿಮಾನ ನಿಲ್ದಾಣಗಳು ದೊರೆಯಬಹುದೇನೋ. ರಾಜ್ಯದಲ್ಲಿ ಹೊಸ ರೈಲು ಮಾರ್ಗಗಳ ಮಂಜೂರಾತಿಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಧೈರ್ಯ ಹೊಸ ಸಂಸದರಿಗೆ ಇರಲಿಕ್ಕಿಲ್ಲ. ಮೈತ್ರಿ ಸರ್ಕಾರಕ್ಕೆ ರಾಜ್ಯದ ಹಿತರಕ್ಷಣೆ ಮಾಡಲು ಪುರಸೊತ್ತು ಕೂಡ ಇಲ್ಲ!

ಕೇಂದ್ರ ಸರ್ಕಾರದ ಪ್ರತಿಷ್ಠೆಯ ಹೆದ್ದಾರಿ ಅಭಿವೃದ್ಧಿ ಮತ್ತು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗಳಿಗೆ ಬಜೆಟ್ ಧಾರಾಳವಾಗಿ ಅನುದಾನ ನೀಡುವುದು ಬಹುತೇಕ ಖಚಿತ. ಈಗಾಗಲೇ 100 ನಗರಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡ ಸ್ಮಾರ್ಟ್ ಸಿಟಿ ಯೋಜನೆಯ ವಿಸ್ತರಣೆಯಾಗಬಹುದು. ನಗರೀಕರಣ ಮತ್ತು ಅದರ ನಿರ್ವಹಣೆ ತಮ್ಮ ಸರ್ಕಾರದ ಆದ್ಯತೆ ಎಂದು ಬಜೆಟ್ ಭಾಷಣವೊಂದರಲ್ಲಿ ಜೇಟ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬೇಕು.

ಶಿಕ್ಷಣವನ್ನು ಸಾಮಾಜಿಕ ಮೂಲ ಸೌಕರ್ಯವೆಂದು ಪರಿಗಣಿಸಲಾಗಿದೆ. ಅಭಿವೃದ್ಧಿ ಪ್ರಕ್ರಿಯೆಗೂ, ಉನ್ನತ ಶಿಕ್ಷಣಕ್ಕೂ ಇರುವ ಸಂಬಂಧ ನೇರವಾದದ್ದು. ಮೋದಿ ನೇತೃತ್ವದ ಮೊದಲ ಅವಧಿಯ ಸರ್ಕಾರ ಉನ್ನತ ಶಿಕ್ಷಣ ರಂಗದಲ್ಲಿ ಹೇಳಿಕೊಳ್ಳುವಂತಹ ಯಾವ ಸುಧಾರಣೆಯನ್ನೂ ಮಾಡಿಲ್ಲ. ಸದ್ಯ ಸಂಶೋಧನೆಗೆ ಬಜೆಟ್ ಗಿಂಡಿಯಿಂದ ಹರಿಯುತ್ತಿರುವ ಅನುದಾನ ತೀರಾ ಕಡಿಮೆ. ಸಂಶೋಧನೆ ಮತ್ತು ಅಭಿವೃದ್ಧಿ ರಂಗಕ್ಕೆ ಸಲ್ಲುತ್ತಿರುವ ಸಾರ್ವಜನಿಕ ವೆಚ್ಚದ ಪ್ರಮಾಣ ಜಿಡಿಪಿಯ ಶೇ 0.7ರಷ್ಟು ಮಾತ್ರ. ನಮ್ಮೊಡನೆ ಯಾವಾಗಲೂ ಪೈಪೋಟಿಯಲ್ಲಿರುವ ಚೀನಾದಲ್ಲಿ ಈ ಪ್ರಮಾಣ ಶೇ 2.1ರಷ್ಟು, ಇಸ್ರೇಲ್ ದೇಶದಲ್ಲಂತೂ ಅದು ಶೇ 4.3ರಷ್ಟು. ಸ್ಪರ್ಧಾತ್ಮಕ ಯುಗದಲ್ಲಿ ನವ ಭಾರತದ ಕನಸು ಈಡೇರಬೇಕಾದರೆ ಉನ್ನತ ಶಿಕ್ಷಣದ ಉನ್ನತೀಕರಣಕ್ಕೆ ಬಜೆಟ್ ಹೆಚ್ಚು ಅವಕಾಶ ಮಾಡಲೇಬೇಕಾಗಿದೆ.

2022ರಲ್ಲಿ ಕೃಷಿಕರ ಆದಾಯವನ್ನು ದ್ವಿಗುಣಗೊಳಿಸುವ ಆಶ್ವಾಸನೆಯನ್ನು ಬಿಜೆಪಿಯ 2019ರ ಚುನಾವಣಾ ಪ್ರಣಾಳಿಕೆ ಪುನರುಚ್ಚರಿಸಿದ್ದು, ಅದು ಸಾಕಾರಗೊಳ್ಳಬೇಕಾದರೆ ಕೃಷಿ ರಂಗದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯ ಮೂಲಕ ಗಣನೀಯ ಸುಧಾರಣೆಯಾಗಬೇಕು.

ಮುಂದಿನ ಐದು ವರ್ಷಗಳಲ್ಲಿ ₹ 25 ಲಕ್ಷ ಕೋಟಿಯಷ್ಟು ಬಂಡವಾಳ ತೊಡಗಿಸುವ ಸರ್ಕಾರದ ಹೆಮ್ಮೆಯ ಯೋಜನೆಗೆ ನಿರ್ಮಲಾ ಅವರ ಬಜೆಟ್ ಮೊದಲ ಸಾಕ್ಷಿಯಾಗಲಿದೆ. ಜೇಟ್ಲಿ 2018-19ನೇ ಸಾಲಿನ ಬಜೆಟ್‌ನಲ್ಲಿ ‘ಕೃಷಿಯನ್ನು ಒಂದು ಉದ್ಯಮವನ್ನಾಗಿ ಪರಿಗಣಿಸಲು ಸರ್ಕಾರ ಬಯಸುತ್ತಿದೆ’ ಎಂದು ಸಾರಿದ್ದರು. ಅದನ್ನು ನಿರ್ಮಲಾ ಅವರು ಮರೆತಿರಲಿಕ್ಕಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು