ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿಪಿ ವಿಳಾಸಕ್ಕೆ 24 ಪುಟಗಳ ‘ಡೆತ್‌ನೋಟ್’ ಕಳುಹಿಸಿ ಆತ್ಮಹತ್ಯೆ !

ಪತ್ನಿ ಕುಟುಂಬದ ವಿರುದ್ಧ ಕಿರುಕುಳ ಆರೋಪ
Last Updated 4 ಮೇ 2018, 20:53 IST
ಅಕ್ಷರ ಗಾತ್ರ

ಬೆಂಗಳೂರು: ‘ಪತ್ನಿ ಕುಟುಂಬದವರ ಕಿರುಕುಳ ತಾಳಲಾರದೆ ಸಾಯುತ್ತಿದ್ದೇನೆ’ ಎಂದು ಡಿಸಿಪಿ ರವಿ ಡಿ.ಚನ್ನಣ್ಣನವರ್ ಅವರ ವಿಳಾಸಕ್ಕೆ 24 ಪುಟಗಳ ಮರಣ
ಪತ್ರ ಬರೆದು, ಖಾಸಗಿ ಕಂಪನಿ ಉದ್ಯೋಗಿ ಮೋಹನ್‌ಕುಮಾರ್ (38) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.‌

ಮಾಗಡಿ ರಸ್ತೆ ಚೋಳೂರುಪಾಳ್ಯದ ಮೋಹನ್, ಮಾದನಾಯಕನಹಳ್ಳಿಯ ಗಂಗಲಕ್ಷ್ಮಮ್ಮ ಎಂಬುವರನ್ನು 2007ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಒಂಬತ್ತು ವರ್ಷದ ಮಗಳಿದ್ದಾಳೆ. ದಾಂಪತ್ಯ ಕಲಹದಿಂದಾಗಿ ಗಂಗಲಕ್ಷ್ಮಮ್ಮ ನಾಲ್ಕು ತಿಂಗಳ ಹಿಂದೆಯೇ ಮಗಳೊಂದಿಗೆ ತವರು ಮನೆ ಸೇರಿದ್ದರು.

‘ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಸೆಲ್ಫಿ ವಿಡಿಯೊ ಮಾಡಿರುವ ಮೋಹನ್, ಗುರುವಾರ ನಸುಕಿನ ವೇಳೆ (ಸಮಯ 3.30) ಅದನ್ನು ಸೋದರ ಮಾವ ಗಂಗಣ್ಣ ಅವರಿಗೆ ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ್ದರು. ಬೆಳಿಗ್ಗೆ ಎದ್ದು ವಿಡಿಯೊ ನೋಡಿದ ಅವರು, ಕೂಡಲೇ ಮನೆಗೆ ಹೋಗಿದ್ದರು. ಅಷ್ಟರಲ್ಲಾಗಲೇ, ಮೋಹನ್ ನೇಣಿಗೆ ಶರಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಮೃತರ ಕೋಣೆಯಲ್ಲಿ ಸಿಕ್ಕ ಮರಣ ಪತ್ರದ ವಿವರ ಆಧರಿಸಿ ಗಂಗಲಕ್ಷ್ಮಮ್ಮ, ಅವರ ಅಣ್ಣ ಹನುಮಂತರಾಜು, ತಮ್ಮ ಅಂಜನಾಮೂರ್ತಿ, ತಾಯಿ ಮಂಗಳಮ್ಮ, ಚಿಕ್ಕಪ್ಪ ನಾರಾಯಣಮೂರ್ತಿ ಹಾಗೂ ಗಂಗಲಕ್ಷ್ಮಮ್ಮ ಕೆಲಸ ಮಾಡುತ್ತಿದ್ದ ಕಂಪನಿ ಮಾಲೀಕ ವಿಜೇಂದ್ರ ಆರ್‌.ಭತಿಜಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ (ಐಪಿಸಿ 306) ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ತಂದೆ ಆರೋಪ: ‘ಮಗ–ಸೊಸೆ ಮೊದಲಿನಿಂದಲೂ ಅನ್ಯೋನ್ಯವಾಗಿಯೇ ಇದ್ದರು. ವರ್ಷದ ಹಿಂದೆ ಸೊಸೆ ಆರ್‌ಪಿಸಿ ಲೇಔಟ್‌ನ ‘ಸನ್‌ಶೈನ್ ಇಂಟರ್‌ನ್ಯಾಷನಲ್’ ಕಂಪನಿಗೆ ಕೆಲಸಕ್ಕೆ ಸೇರಿಕೊಂಡಳು. ಆ ನಂತರ ಕೆಲವೇ ದಿನಗಳಲ್ಲಿ ಆಕೆಯ ವರ್ತನೆ, ಜೀವನಶೈಲಿಯೇ ಬದಲಾಯಿತು. ಕಂಪನಿ ಮಾಲೀಕ ವಿಜೇಂದ್ರ ಹೊಸಬಟ್ಟೆ, ಸ್ಕೂಟರ್ ಹಾಗೂ ಐ–ಫೋನ್‌ ಕೊಡಿಸಿ ಆಕೆಯನ್ನು ಬುಟ್ಟಿಗೆ ಹಾಕಿಕೊಂಡಿದ್ದ. ಈ ವಿಚಾರ ಮಗನಿಗೆ ಗೊತ್ತಾಗಿ ನಮ್ಮ ಬಳಿ ಅಳಲು ತೋಡಿಕೊಂಡಿದ್ದ’ ಎಂದು ಮೃತರ ತಂದೆ ಹನುಮಂತರಾಯಪ್ಪ ದೂರಿನಲ್ಲಿ ಹೇಳಿದ್ದಾರೆ.

‘ಈ ನಡುವೆ ಸೊಸೆ ತವರು ಮನೆ ಸೇರಿದಳು. ಇದರಿಂದ ಖಿನ್ನತೆಗೆ ಒಳಗಾದ ಮಗ, ಮನೆಗೆ ಬರುವಂತೆ ಆಕೆಗೆ ಪೀಡಿಸುತ್ತಿದ್ದ. ಆಗ ಕುಟುಂಬದವರೆಲ್ಲ ಒಟ್ಟಾಗಿ ಆತನನ್ನು ಬೈದು ಕಳುಹಿಸಿದ್ದರು. ಇವೆಲ್ಲ ಅಂಶಗಳನ್ನೂ ಮರಣ ಪತ್ರದಲ್ಲಿ ಆತನೇ ವಿವರಿಸಿದ್ದಾನೆ.

ಮಗನ ಸಾವಿಗೆ ಕಾರಣರಾದ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಮನವಿ ಮಾಡಿದ್ದಾರೆ.

**

‘ಪತಿ ತಪ್ಪಾಗಿ ಭಾವಿಸಿದರು’

ನಾನು ಅನಾರೋಗ್ಯದಿಂದ ಬಳಲುತ್ತಿದ್ದೆ. ಹೀಗಾಗಿ, ಗಂಡನ ಇಷ್ಟದಂತೆ ನಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಪರಿಚಿತ ವೈದ್ಯರ ಬಳಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದೆ. ಆದರೆ, ಗಂಡ ಶೀಲ ಶಂಕಿಸಿ ಮನೆಯಲ್ಲಿ ನಿತ್ಯ ಗಲಾಟೆ ಮಾಡುತ್ತಿದ್ದರು. ನಾನು ಅವರಿಂದ ಅಂತರ ಬಯಸುತ್ತಿದ್ದೇನೆ ಎಂದು ತಪ್ಪಾಗಿ ಭಾವಿಸಿದ್ದರು. ಈ ಕಾರಣದಿಂದ ಬೇಸತ್ತು ತವರು ಮನೆ ಸೇರಿದ್ದೆ’ ಎಂದು ಗಂಗಲಕ್ಷ್ಮಮ್ಮ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT