ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆ. ತ್ರೈಮಾಸಿಕದಲ್ಲಿ ಪೇಟಿಎಂ ನಷ್ಟ ₹473 ಕೋಟಿ; ಶೇ 49ರಷ್ಟು ವರಮಾನ ಹೆಚ್ಚಳ

Last Updated 27 ನವೆಂಬರ್ 2021, 10:30 IST
ಅಕ್ಷರ ಗಾತ್ರ

ನವದೆಹಲಿ: ಡಿಜಿಟಲ್‌ ಪಾವತಿ ಸೇವೆಗಳನ್ನು ನೀಡುವ ಪೇಟಿಎಂ ಕಂಪನಿಯ ಮಾತೃಸಂಸ್ಥೆ ಒನ್‌97 ಕಮ್ಯುನಿಕೇಷನ್ಸ್‌ ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ ಅಂತ್ಯದ ವೇಳೆಗೆ ₹ 473 ಕೋಟಿ ನಷ್ಟ ಅನುಭವಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 436.7 ಕೋಟಿಗಳಷ್ಟು ನಷ್ಟ ಅನುಭವಿಸಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ನಷ್ಟದ ಪ್ರಮಾಣವು ಶೇ 8.4ರಷ್ಟು ಹೆಚ್ಚಾಗಿದೆ.

ವೆಚ್ಚದಲ್ಲಿ ಏರಿಕೆ ಆಗಿರುವುದರಿಂದ ನಷ್ಟದ ಪ್ರಮಾಣ ಹೆಚ್ಚಾಗಿದೆ ಎಂದು ಅದು ಷೇರುಪೇಟೆಗೆ ಮಾಹಿತಿ ನೀಡಿದೆ. ಪೇಟಿಎಂನ ಪಾವತಿ ಪ್ರಕ್ರಿಯೆ ಶುಲ್ಕಗಳ ಮೇಲಿನ ವೆಚ್ಚವು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹ 670 ಕೋಟಿಗಳಷ್ಟಾಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ವೆಚ್ಚವು ₹ 492.4 ಕೋಟಿಗಳಷ್ಟಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ವೆಚ್ಚದಲ್ಲಿ ಶೇ 36ರಷ್ಟು ಹೆಚ್ಚಳವಾಗಿದೆ.

ಸಂಸ್ಥೆಯ ಒಟ್ಟಾರೆ ವರಮಾನವು ₹ 1,086.4 ಕೋಟಿಗಳಷ್ಟಾಗಿದೆ. ಹಿಂದಿನ ಹಣಕಾಸು ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ವರಮಾನವು ₹ 663.9 ಕೋಟಿಗಳಷ್ಟಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ವರಮಾನದಲ್ಲಿ ಶೇ 49.6ರಷ್ಟು ಏರಿಕೆ ಕಂಡುಬಂದಿದೆ.

ತಂತ್ರಜ್ಞಾನ ಮತ್ತು ವರ್ತಕರ ವ್ಯಾಪ್ತಿ ವಿಸ್ತರಿಸಲು ಹೂಡಿಕೆಯನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದೆ. ಇದರಿಂದಾಗಿ ನಮ್ಮ ವೆಚ್ಚದಲ್ಲಿ ಸುಧಾರಣೆ ಕಂಡುಬಂದಿದೆ. ಭಾರತದ ಪಾವತಿ ಮತ್ತು ಹಣಕಾಸು ಸೇವೆಗಳಲ್ಲಿ ಹೊಸತನ ತರಲು ಮತ್ತು ನಿರಂತರ ಹೂಡಿಕೆ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಪೇಟಿಎಂನ ವಕ್ತಾರರೊಬ್ಬರು ತಿಳಿಸಿದ್ದಾರೆ.

ಪೇಟಿಎಂನ ಸರಾಸರಿ ವಾಣಿಜ್ಯ ಮೌಲ್ಯವು (ಜಿಎಂವಿ) ಎರಡನೇ ತ್ರೈಮಾಸಿಕದಲ್ಲಿ ₹ 1.95 ಲಕ್ಷ ಕೋಟಿಗಳಷ್ಟಾಗಿದೆ. ಇದು ಹಿಂದಿನ ಹಣಕಾಸು ವರ್ಷದ ಇದೆ ಅವಧಿಯಲ್ಲಿ ₹ 94,700 ಕೋಟಿಗಳಷ್ಟಿತ್ತು.

ಪಾವತಿ ಮತ್ತು ಹಣಕಾಸು ಸೇವೆಗಳಿಂದ ಬಂದಿರುವ ವರಮಾನವು ಶೇ 69ರಷ್ಟು ಹೆಚ್ಚಾಗಿದ್ದು ₹ 842 ಕೋಟಿಗಳಷ್ಟಾಗಿದೆ. ವಾಣಿಜ್ಯ ಮತ್ತು ಕ್ಲೌಡ್ ಸೇವೆಗಳ ವರಮಾನವು ಶೇ 47ರಷ್ಟು ಹೆಚ್ಚಾಗಿದ್ದು ₹ 244 ಕೋಟಿಗಳಿಗೆ ತಲುಪಿದೆ. ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ವರ್ತಕರ ಸಂಖ್ಯೆಯು 1.85 ಕೋಟಿಗಳಿಂದ 2.3 ಕೋಟಿಗಳಿಗೆ ಏರಿಕೆ ಆಗಿದೆ ಎಂದು ಪೇಟಿಎಂ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT