ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹18,300 ಕೋಟಿ ಮೊತ್ತದ ಪೇಟಿಎಂ ಐಪಿಒ; ಹೆಚ್ಚಿದ ಬೇಡಿಕೆ, ಬಿಡ್‌ ಸಲ್ಲಿಕೆ ಪೂರ್ಣ

Last Updated 10 ನವೆಂಬರ್ 2021, 14:36 IST
ಅಕ್ಷರ ಗಾತ್ರ

ನವದೆಹಲಿ: ಪೇಟಿಎಂ ಕಂಪನಿಯ ₹ 18,300 ಕೋಟಿ ಮೊತ್ತದ ಐಪಿಒಗೆ ಹೂಡಿಕೆದಾರರಿಂದ ಉತ್ತಮ ಸ್ಪಂದನ ದೊರೆತಿದ್ದು, ಇದುವರೆಗಿನ ಅತಿದೊಡ್ಡ ಮೊತ್ತದ ಐಪಿಒ ಎನ್ನುವ ದಾಖಲೆ ಬರೆದಿದೆ.

ಷೇರು ವಿನಿಮಯ ಕೇಂದ್ರದಲ್ಲಿ ಇರುವ ಮಾಹಿತಿಯ ಪ್ರಕಾರ, ಪೇಟಿಎಂನ ಮಾತೃಸಂಸ್ಥೆ ಒನ್‌97 ಕಮ್ಯುನಿಕೇಷನ್ಸ್‌ ಲಿಮಿಟೆಡ್‌, 4.83 ಕೋಟಿ ಷೇರುಗಳನ್ನು ಖರೀದಿಗೆ ಬಿಡುಗಡೆ ಮಾಡಿತ್ತು. ಒಟ್ಟಾರೆ 9.14 ಕೋಟಿ ಷೇರುಗಳಿಗೆ ಬಿಡ್‌ ಸಲ್ಲಿಕೆ ಆಗಿದೆ.

ಅರ್ಹ ಸಾಂಸ್ಥಿಕ ಖರೀದಿದಾರರಿಗೆ (ಕ್ಯುಐಬಿ) 2.63 ಕೋಟಿ ಷೇರುಗಳನ್ನು ಮೀಸಲಿಡಲಾಗಿತ್ತು, ಈ ವಿಭಾಗದಲ್ಲಿ 7.36 ಕೋಟಿ ಷೇರುಗಳಿಗೆ ಬಿಡ್‌ ಸಲ್ಲಿಕೆ ಆಗಿದೆ. ಸಣ್ಣ ಹೂಡಿಕೆದಾರರಿಗೆ 87.98 ಲಕ್ಷ ಷೇರುಗಳನ್ನು ಮೀಸಲಿಡಲಾಗಿತ್ತು, ಈ ವಿಭಾಗದಲ್ಲಿ 1.28 ಕೋಟಿ ಷೇರುಗಳಿಗೆ ಬಿಡ್‌ ಸಲ್ಲಿಕೆ ಆಗಿದೆ.

ಷೇರು ವಿನಿಮಯ ಕೇಂದ್ರದಲ್ಲಿ ಇರುವ ಅಂಕಿ–ಅಂಶಗಳ ಪ್ರಕಾರ, ಕ್ಯುಐಬಿ, ದೇಶಿ ಸಾಂಸ್ಥಿಕ ಹೂಡಿಕೆದಾರರು ಮತ್ತು ಮ್ಯೂಚುವಲ್‌ ಫಂಡ್‌ಗಳು ಅಂತಿಮ ದಿನ ಹೆಚ್ಚಿನ ಉತ್ಸಾಹದಿಂದ ಭಾಗವಹಿಸಿದವು. ಇದರಿಂದಾಗಿ ಪೇಟಿಎಂ ಐಪಿಒಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಯಿತು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಗೆ 2.63 ಕೋಟಿ ಷೇರುಗಳು ಮೀಸಲಾಗಿದ್ದು, 4.17 ಕೋಟಿ ಷೇರುಗಳಿಗೆ ಬಿಡ್‌ ಸಲ್ಲಿಕೆಯಾಗಿದೆ. ರಿಟೇಲ್‌ ಹೂಡಿಕೆದಾರರಿಗೆ 87 ಲಕ್ಷ ಷೇರುಗಳು ಮೀಸಲಿದ್ದು, ಅದಕ್ಕಿಂತಲೂ 1.46 ಪಟ್ಟು ಹೆಚ್ಚು ಷೇರುಗಳಿಗೆ (1.28 ಕೋಟಿ ಷೇರುಗಳು) ಬೇಡಿಕೆ ಇಟ್ಟಿದ್ದಾರೆ.

ಸಾಂಸ್ಥಿಕೇತರ ಹೂಡಿಕೆದಾರರಿಗೆ 1.31 ಕೋಟಿ ಷೇರುಗಳು ಮೀಸಲಿದ್ದು, ಅದರಲ್ಲಿ ಕೇವಲ ಶೇ 8ರಷ್ಟು ಷೇರುಗಳಿಗೆ ಬಿಡ್‌ ಸಲ್ಲಿಕೆಯಾಗಿದೆ. ಕಂಪನಿಯು ಒಟ್ಟು ₹ 18,300 ಕೋಟಿ ಸಂಗ್ರಹಿಸುವ ನಿರೀಕ್ಷೆ ಇಟ್ಟುಕೊಂಡಿದೆ.

ಪ್ರತಿ ಷೇರಿಗೆ ₹ 2,080 ರಿಂದ ₹ 2,150 ದರ ನಿಗದಿ ಮಾಡಲಾಗಿದೆ. ಐಪಿಒ ಬಳಿಕ ಕಂಪನಿಯ ಮೌಲ್ಯ ₹1.39 ಲಕ್ಷ ಕೋಟಿಗೆ ತಲುಪಬಹುದಾಗಿದೆ. ಪೇಟಿಎಂ ಐಪಿಒ ದೇಶದಲ್ಲಿ ಇದುವರೆಗೆ ನಡೆದಿರುವ ಐಪಿಒಗಳ ಪೈಕಿ ಅತಿ ದೊಡ್ಡ ಮೊತ್ತದ್ದಾಗಿದೆ. ಈ ಹಿಂದೆ 2010ರಲ್ಲಿ ಕೋಲ್‌ ಇಂಡಿಯಾ ಕಂಪನಿಯು ಐಪಿಒ ಮೂಲಕ ₹ 15,200 ಕೋಟಿ ಸಂಗ್ರಹಿಸಿತ್ತು.

ಪೇಟಿಎಂ ಷೇರುಗಳು ಮುಂದಿನ ವಾರದಿಂದ ಷೇರುಪೇಟೆಯಲ್ಲಿ ವಹಿವಾಟು ನಡೆಸಲಿದ್ದು, ದೇಶದ ಅತ್ಯಂತ ಮೌಲ್ಯಯುತ ಕಂಪನಿಗಳಲ್ಲಿ ಒಂದಾಗಲಿದೆ. ನವೆಂಬರ್ 15ರಂದು ಷೇರು ಹಂಚಿಕೆ ನಡೆಯುವ ಸಾಧ್ಯತೆ ಇದೆ. ನವೆಂಬರ್‌ 18ರಂದು ಷೇರು ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT