ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ಸಾಕ್ಷರತೆ | ಐಪಿಒ: ಅರಿತು ಹೂಡಿಕೆ ಮಾಡಿದರೆ ಒಳ್ಳೆಯ ಲಾಭ

Last Updated 4 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಅಳೆದು–ತೂಗಿ, ಅರಿತು ಹೂಡಿಕೆ ಮಾಡಿದರೆ ಐಪಿಒ (ಐಪಿಒ-ಆರಂಭಿಕ ಸಾರ್ವಜನಿಕ ಹೂಡಿಕೆ) ಹೂಡಿಕೆಯಿಂದ ಅಲ್ಪಾವಧಿಯಲ್ಲಿ ಮತ್ತು ದೀರ್ಘಾವಧಿಯಲ್ಲಿ ಒಳ್ಳೆಯ ಲಾಭ ಪಡೆಯಬಹುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಸರಿಯಾದ ಅಧ್ಯಯನ ಮಾಡದೆ ಯಾರದ್ದೋ ಮಾತು ಕೇಳಿ, ಸಿಕ್ಕಸಿಕ್ಕ ಕಂಪನಿಗಳ ಐಪಿಒದಲ್ಲಿ ಹೂಡಿಕೆ ಮಾಡಿದರೆ ಲಾಭ ಮಾಡಿಕೊಳ್ಳುವ ವಿಚಾರ ಹಾಗಿರಲಿ, ನಿಮ್ಮ ಮೂಲ ಬಂಡವಾಳವೇ ಕರಗಿಹೋಗಬಹುದು.

‘ಹರುಷದ ಕೂಳಿನ ಆಸೆಗೆ ವರುಷದ ಕೂಳನ್ನು ಕಳೆದುಕೊಳ್ಳಬಾರದು’ ಎನ್ನುವ ಗಾದೆಯನ್ನು ನೀವು ಕೇಳಿರಬೇಕಲ್ಲ? ಈ ಮಾತನ್ನು ನೆನಪಿಟ್ಟುಕೊಂಡು ಐಪಿಒಗಳಲ್ಲಿ ಹೂಡಿಕೆ ಮಾಡಬೇಕು.

ಅತಿಆಸೆ ಗತಿಗೇಡು: ಸಾಲು ಸಾಲು ಐಪಿಒ ನಡೆಯುತ್ತಿರುವ ಸುದ್ದಿ ಕೇಳಿ ನನ್ನ ಸ್ನೇಹಿತನೊಬ್ಬ ಹೆಚ್ಚೆಚ್ಚು ಹಣ ಗಳಿಸಬಹುದು ಎಂದು ಬಹಳ ಉತ್ಸುಕನಾಗಿದ್ದ. ಮಾರ್ಚ್‌ನಲ್ಲಿ ನಡೆದ ಬಹುತೇಕ ಎಲ್ಲ ಕಂಪನಿಗಳ ಐಪಿಒಗೆ ಆತ ಸಾಲ ಸೋಲ ಮಾಡಿ ಬಿಡ್ ಮಾಡಿದ. ಕಂಪನಿಗಳು ಷೇರುಪೇಟೆಗೆ ಸೇರ್ಪಡೆಗೊಳ್ಳುವ ದಿನ ಬಂಪರ್ ಲಾಭ ಗಳಿಸಬಹುದು ಎಂದು ಆತ ಲೆಕ್ಕಾಚಾರ ಹಾಕಿದ್ದ. ಆದರೆ ಷೇರುಪೇಟೆಗೆ ಸೇರ್ಪಡೆಗೊಳ್ಳುವ ದಿನ ಉತ್ತಮ ಲಾಭ (Listing Gains) ಕೊಡುವಂತಿದ್ದ ಯಾವ ಕಂಪನಿಯ ಐಪಿಒಗಳು ಕೂಡ ಅವನಿಗೆ ಸಿಗಲಿಲ್ಲ. ಷೇರುಪೇಟೆಗೆ ಸೇರ್ಪಡೆಗೊಳ್ಳುವ ದಿನ ನಕಾರಾತ್ಮಕ ಫಲಿತಾಂಶ (Negative Returns) ಕೊಟ್ಟ ಬಹುತೇಕ ಕಂಪನಿಗಳ ಐಪಿಒಗಳು ಆತನಿಗೆ ಸಿಕ್ಕಿದ್ದವು.

ಬರೋಬ್ಬರಿ ₹ 10 ಸಾವಿರ ನಷ್ಟದ ಹೊರೆಯನ್ನು ಆತ ಹೊರಬೇಕಾಗಿ ಬಂತು. ದಿಢೀರ್ ಹಣ ಗಳಿಸಬೇಕು ಎನ್ನುವ ಮನಃಸ್ಥಿತಿಯೇ ಈ ಸ್ಥಿತಿಗೆ ಕಾರಣ ಎಂದು ನನ್ನ ಸ್ನೇಹಿತನಿಗೆ ಅರ್ಥವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ.

ಅರಿತು ಹೂಡಿಕೆ ಮಾಡಿದವರಿಗೆ ಲಾಭ: ನನ್ನ ಮತ್ತೊಬ್ಬ ಸ್ನೇಹಿತನೂ ಮಾರ್ಚ್‌ನಲ್ಲಿನ ಸಾಲು ಸಾಲು ಐಪಿಒಗಳ ಬಗ್ಗೆ ಉತ್ಸುಕನಾಗಿದ್ದ. ಆದರೆ ಆತ ಆತುರಾತುರವಾಗಿ ತೀರ್ಮಾನ ತೆಗೆದುಕೊಳ್ಳಲಿಲ್ಲ. ಯಾವ್ಯಾವ ಕಂಪನಿಗಳು ಐಪಿಒ ನಡೆಸುತ್ತಿವೆ? ಆ ಸಂಸ್ಥೆಗಳ ಆರ್ಥಿಕ ಸ್ಥಿತಿಗತಿ ಹೇಗಿದೆ? ಆಡಳಿತ ಮಂಡಳಿಯಲ್ಲಿ ಯಾರಿದ್ದಾರೆ? ಲಾಭ ಗಳಿಕೆ ಸ್ಥಿರವಾಗಿದೆಯಾ? ದೀರ್ಘಾವಧಿಗೆ ಈ ಷೇರುಗಳನ್ನು ಇಟ್ಟುಕೊಳ್ಳಬೇಕಾ? ಅಲ್ಪಾವಧಿಯಲ್ಲಿ ಮಾರಾಟ ಮಾಡಿದರೆ ಒಳಿತಾ?... ಹೀಗೆ ಎಲ್ಲ ಆಯಮಾಗಳಿಂದಲೂ ಆತ ಅಧ್ಯಯನ ಮಾಡಿ ಆಯ್ದ ಉತ್ತಮ ಕಂಪನಿಗಳಿಗೆ ಮಾತ್ರ ಬಿಡ್ ಮಾಡಿದ. ಒಂದು ಉತ್ತಮ ಕಂಪನಿಯ ಐಪಿಒ ಅವನಿಗೆ ಸಿಕ್ಕಿತು. ಷೇರುಪೇಟೆಗೆ ಸೇರ್ಪಡೆಗೊಳ್ಳುವ ದಿನವೇ ಆ ಐಪಿಒದಿಂದ ನನ್ನ ಸ್ನೇಹಿತನಿಗೆ ₹ 14 ಸಾವಿರ ಲಾಭ ಸಿಕ್ಕಿತು.

ಅರಿತು ಹೂಡಿಕೆ ಮಾಡಿದರೆ ಎಷ್ಟು ಅನುಕೂಲ ಎನ್ನುವುದಕ್ಕೆ ಇದೊಂದು ಉತ್ತಮ ನಿದರ್ಶನ.

ಐಪಿಒ ಹಿನ್ನೋಟ: ಐಪಿಒ ಇತಿಹಾಸವನ್ನು ಕೆದಕಿ ನೋಡಿದಾಗ, ಷೇರುಪೇಟೆಗೆ ಸೇರ್ಪಡೆಗೊಳ್ಳುವಾಗ (Listing day) ಪ್ರತಿ ಮೂರು ಕಂಪನಿಗಳ ಪೈಕಿ ಎರಡು ಕಂಪನಿಗಳು ಮಾತ್ರ ಲಾಭ ಕೊಟ್ಟಿರುವುದು ಕಂಡುಬರುತ್ತದೆ. ಆದರೆ ಲಾಭ ಕೊಟ್ಟ ಈ ಎರಡು ಕಂಪನಿಗಳಲ್ಲಿ ಒಂದು ಕಂಪನಿ ಮಾತ್ರ ದೀರ್ಘಾವಧಿಯಲ್ಲೂ ಲಾಭ ಕಾಯ್ದುಕೊಂಡಿದೆ. 2017ರ ಆಸುಪಾಸಿನಲ್ಲಿ ಷೇರುಪೇಟೆಗೆ ಸೇರ್ಪಡೆಗೊಂಡಿರುವ 266 ಕಂಪನಿಗಳ ಪೈಕಿ 37 ಕಂಪನಿಗಳು ಮಾತ್ರ ಷೇರುಪೇಟೆಗೆ ಸೇರ್ಪಡೆಗೊಳ್ಳುವ ದಿನ (Listing Day) ಶೇಕಡ 20ಕ್ಕಿಂತ ಹೆಚ್ಚು ಲಾಭ ಕೊಟ್ಟಿವೆ. ಐಪಿಒ ಹೂಡಿಕೆಯಲ್ಲಿ ಅತಿ ಹೆಚ್ಚು ಲಾಭದ ಸಾಧ್ಯತೆಯ ಜತೆಗೆ ಅತಿ ಹೆಚ್ಚು ರಿಸ್ಕ್ ಕೂಡ ಇದೆ ಎನ್ನುವುದು ಇದರಿಂದ ಮನದಟ್ಟಾಗುತ್ತದೆ.

ಮಾರ್ಚ್‌ನಲ್ಲಿ ನಡೆದ ಐಪಿಒಗಳ ಏಳು ಬೀಳು: ಮಾರ್ಚ್ ತಿಂಗಳಲ್ಲಿ ಐಪಿಒ ನಡೆಸಿ ಷೇರುಪೇಟೆಗೆ ಸೇರ್ಪಡೆಯಾಗಿರುವ ಎಂಟು ಕಂಪನಿಗಳ ಪೈಕಿ ನಾಲ್ಕು ಲಾಭ ಕೊಟ್ಟಿದ್ದು ಇನ್ನುಳಿದ ನಾಲ್ಕು ಕಂಪನಿಗಳು ನಕಾರಾತ್ಮಕ ಫಲಿತಾಂಶ ಕೊಟ್ಟಿವೆ. ಷೇರುಪೇಟೆ ಸೇರ್ಪಡೆ ದಿನದಂದು ಎಂಟಾರ್ ಟೆಕ್ನಾಲಜೀಸ್ ಶೇ 87.63ರಷ್ಟು, ನಜಾರಾ ಟೆಕ್ನಾಲಜೀಸ್ ಶೇ 44.60ರಷ್ಟು, ಲಕ್ಷ್ಮೀ ಆರ್ಗ್ಯಾನಿಕ್ಸ್ ಶೇ 26.19ರಷ್ಟು ಮತ್ತು ಈಜಿ ಟ್ರಿಪ್ ಪ್ಲಾನರ್ಸ್ ಶೇ 10.43ರಷ್ಟು ಲಾಭ ಕೊಟ್ಟಿವೆ. ಕಲ್ಯಾಣ್ ಜುವೆಲರ್ಸ್ ಶೇ (-)14.54ರಷ್ಟು, ಸೂರ್ಯೋದಯ ಸ್ಮಾಲ್ ಫೈನಾನ್ಸ್ ಶೇ (-)10.80ರಷ್ಟು, ಅನುಪನ್ ರಾಸಾಯನ್ ಶೇ (-)6.58ರಷ್ಟು ಮತ್ತು ಕ್ರಾಫ್ಟ್ಸ್‌ಮೆನ್ ಆಟೋಮೇಷನ್ ಶೇ (-)5.03ರಷ್ಟು ನಕಾರಾತ್ಮಕ ಫಲಿತಾಂಶ ಕೊಟ್ಟಿವೆ.

ಏಪ್ರಿಲ್‌ನಲ್ಲಿ ಸಂಭಾವ್ಯ ಐಪಿಒಗಳು: ಕೆಐಎಂಎಸ್ ಹಾಸ್ಪಿಟಲ್ಸ್, ಸೋನಾ ಬಿಎಲ್‌ಡಬ್ಲ್ಯೂ ಪ್ರಿಸಿಷನ್ ಫೋರ್ಜಿಂಗ್ಸ್, ಸೆವೆನ್ ಐಲ್ಯಾಂಡ್ ಶಿಪ್ಪಿಂಗ್, ಆಧಾರ್ ಹೌಸಿಂಗ್ ಫೈನಾನ್ಸ್, ಮ್ಯಾಕ್ರೋಟೆಕ್ ಡೆವಲಪ್ಪರ್ಸ್, ಡೂಡ್ಲಾ ಡೇರಿ.

ಅನಿಶ್ಚಿತತೆಯ ನಡುವೆ ಜಿಗಿದ ಷೇರುಪೇಟೆ
ಏಪ್ರಿಲ್ 1ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಶೇ 2ರಷ್ಟು ಗಳಿಕೆ ಕಂಡಿವೆ. 50,029 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 2ರಷ್ಟು ಗಳಿಕೆ ಕಂಡಿದ್ದರೆ 14,867 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 2.4ರಷ್ಟು ಗಳಿಸಿದೆ. ಬಿಎಸ್‌ಇ ಮಿಡ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇ 2.7ರಷ್ಟು ಮತ್ತು ಶೇ 4ರಷ್ಟು ಜಿಗಿದಿವೆ. ಅಮೆರಿಕದಲ್ಲಿ ಆರ್ಥಿಕ ಪ್ಯಾಕೇಜ್ ಘೋಷಣೆ, ಮಾರ್ಚ್ ತಿಂಗಳಲ್ಲಿ ವಾಹನ ಮಾರಾಟದಲ್ಲಿ ಹೆಚ್ಚಳ, ಜಿಎಸ್‌ಟಿ ಸಂಗ್ರಹದಲ್ಲಿ ದಾಖಲೆ ಏರಿಕೆ ಸೇರಿ ಹಲವು ಅಂಶಗಳು ಷೇರುಪೇಟೆ ಜಿಗಿತಕ್ಕೆ ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಲೋಹ ಮತ್ತು ಫಾರ್ಮಾ ವಲಯಗಳು ಕ್ರಮವಾಗಿ ಶೇ 8.6 ಮತ್ತು ಶೇ 4.2ರಷ್ಟು ಜಿಗಿದಿವೆ. ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 4.7ರಷ್ಟು, ನಿಫ್ಟಿ ಬ್ಯಾಂಕ್ ಶೇ 1.9ರಷ್ಟು ಹೆಚ್ಚಳ ಕಂಡಿವೆ. ಇನ್ನು ನಿಫ್ಟಿಯಲ್ಲಿ ಜೆಎಸ್‌ಡಬ್ಲ್ಯೂ ಸ್ಟೀಲ್ ಶೇ 14ರಷ್ಟು, ಟಾಟಾ ಸ್ಟೀಲ್ ಶೇ 12ರಷ್ಟು, ಯುಪಿಎಲ್ ಶೇ 11ರಷ್ಟು, ಹಿಂಡಾಲ್ಕೋ ಶೇ 7ರಷ್ಟು, ಶ್ರೀ ಸಿಮೆಂಟ್ ಶೇ 6ರಷ್ಟು, ಅದಾನಿ ಪೋರ್ಟ್ಸ್ ಶೇ 5ರಷ್ಟು, ಎಚ್‌ಸಿಎಲ್ ಟೆಕ್ ಶೇ 5ರಷ್ಟು, ಐಟಿಸಿ ಶೇ 4.3ರಷ್ಟು ಗಳಿಸಿವೆ.

ಮುನ್ನೋಟ: ಏಪ್ರಿಲ್ 7ರಂದು ಹೊರಬೀಳಲಿರುವ ಆರ್‌ಬಿಐನ ಹಣಕಾಸು ಸಮಿತಿಯ ತೀರ್ಮಾನಗಳು ಮಾರುಕಟ್ಟೆ ಮೇಲೆ ಪ್ರಭಾವ ಬೀರಲಿವೆ. ತ್ರೈಮಾಸಿಕ ಫಲಿತಾಂಶಗಳ ಸರಣಿ ಶುರುವಾಗಲಿದೆ. ಪ್ರಸಕ್ತ ತ್ರೈಮಾಸಿಕ ಫಲಿತಾಂಶದಲ್ಲಿ ಕಂಪನಿಗಳು ಯಾವ ರೀತಿ ಸಾಧನೆ ತೋರಿವೆ ಎನ್ನುವುದು ಮುಖ್ಯವಾಗಲಿದೆ. ಇದರ ಜತೆ ಕೋವಿಡ್ ವಿಚಾರವಾಗಿ ಸರ್ಕಾರ ತೆಗೆದುಕೊಳ್ಳುವ ತೀರ್ಮಾನಗಳು ಸೂಚ್ಯಂಕಗಳ ಮೇಲೆ ಪ್ರಭಾವ ಬೀರಲಿವೆ.

-ಪ್ರಮೋದ್ ಬಿ.ಪಿ., ಸುವಿಷನ್ ಹೋಲ್ಡಿಂಗ್ಸ್ ಪ್ರೈ. ಲಿ., ನ ಸಂಶೋಧನಾ ವಿಭಾಗದ ಮುಖ್ಯಸ್ಥ
-ಪ್ರಮೋದ್ ಬಿ.ಪಿ., ಸುವಿಷನ್ ಹೋಲ್ಡಿಂಗ್ಸ್ ಪ್ರೈ. ಲಿ., ನ ಸಂಶೋಧನಾ ವಿಭಾಗದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT