ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನಿಸಿ: ಪಿ.ಎಫ್‌, ಐಟಿಆರ್ ಸೇರಿ ನಾಳೆಯಿಂದ ನಿಯಮಗಳಲ್ಲಿ ಕೆಲವು ಬದಲಾವಣೆ

Last Updated 31 ಮಾರ್ಚ್ 2021, 14:07 IST
ಅಕ್ಷರ ಗಾತ್ರ

ಬೆಂಗಳೂರು: ಗುರುವಾರದಿಂದ ಹೊಸ ಹಣಕಾಸು ವರ್ಷ ಆರಂಭವಾಗಿದ್ದು, ನೌಕರರ ಭವಿಷ್ಯ ನಿಧಿ (ಪಿ.ಎಫ್‌.), ಆದಾಯ ತೆರಿಗೆ ವಿವರ ಸಲ್ಲಿಕೆ (ಐಟಿಆರ್‌) ನಿಯಮಗಳಲ್ಲಿ ಕೆಲವು ಬದಲಾವಣೆ ಆಗಿದೆ. ಕೆಲವು ಉತ್ಪನ್ನಗಳ ಬೆಲೆ ಏರಿಕೆ ಜಾರಿಗೆ ಬಂದಿದೆ. ಈ ಕುರಿತ ಸಂಕ್ಷಿಪ್ತ ವಿವರ ಇಲ್ಲಿದೆ.

* ಪಿ.ಎಫ್. ಖಾತೆಗೆ ನೌಕರರ ಕಡೆಯಿಂದ ಜಮಾ ಆಗುವ ವಾರ್ಷಿಕ ₹ 2.5 ಲಕ್ಷದವರೆಗಿನ ಮೊತ್ತದ ಮೇಲಿನ ಬಡ್ಡಿಗೆ ಮಾತ್ರ ತೆರಿಗೆ ವಿನಾಯಿತಿ ಇರಲಿದೆ. ಕಂಪನಿ ಕಡೆಯಿಂದ ಕೊಡುಗೆ ಇಲ್ಲದಿದ್ದರೆ, ಅಂತಹ ನೌಕರರಿಂದ ಜಮಾ ಆಗುವ ₹ 5 ಲಕ್ಷದವರೆಗಿನ ಕೊಡುಗೆಯ ಮೇಲಿನ ಬಡ್ಡಿಗೆ ತೆರಿಗೆ ವಿನಾಯಿತಿ ಇರುತ್ತದೆ.

* ನಾಲ್ಕು ಕಾರ್ಮಿಕ ಸಂಹಿತೆಗಳು ಹೊಸ ಆರ್ಥಿಕ ವರ್ಷದಿಂದ ಜಾರಿಗೆ ಬರಬೇಕಿತ್ತು. ಆದರೆ, ಅವು ಸದ್ಯಕ್ಕೆ ಜಾರಿಗೆ ಬರುವುದಿಲ್ಲ. ಈ ಸಂಹಿತೆಗಳಿಗೆ ಸಂಬಂಧಿಸಿದಂತೆ ಅಗತ್ಯ ನಿಯಮಾವಳಿಗಳನ್ನು ರಾಜ್ಯ ಸರ್ಕಾರಗಳು ಅಂತಿಮಗೊಳಿಸದೆ ಇರುವ ಕಾರಣ, ಸಂಹಿತೆಗಳನ್ನು ಜಾರಿಗೊಳಿಸದಿರುವ ತೀರ್ಮಾನಕ್ಕೆ ಬರಲಾಗಿದೆ. ಇದರ ಪರಿಣಾಮವಾಗಿ, ನೌಕರರಿಗೆ ಎಲ್ಲ ಕಡಿತಗಳ ನಂತರ ಕೈಗೆ ಸಿಗುವ ವೇತನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ, ಉದ್ಯೋಗ ನೀಡಿದ ಕಂಪನಿಗಳು ನೌಕರರ ಭವಿಷ್ಯ ನಿಧಿ (ಪಿ.ಎಫ್‌) ಖಾತೆಗಳಿಗೆ ಹೆಚ್ಚುವರಿ ಕೊಡುಗೆ ನೀಡುವ ಅಗತ್ಯ ಸದ್ಯಕ್ಕೆ ಇಲ್ಲ.

* ಮಾರ್ಚ್‌ 31ರೊಳಗೆ ಪ್ಯಾನ್‌ ಸಂಖ್ಯೆಗೆ ಆಧಾರ್‌ ಜೋಡಿಸದೇ ಇದ್ದರೆ, ಅಂತಹ ಪ್ಯಾನ್‌ ಸಂಖ್ಯೆಗಳು ಗುರುವಾರದಿಂದ ನಿಷ್ಕ್ರಿಯ ಆಗಲಿವೆ.

* ಮಾರುತಿ, ನಿಸಾನ್‌, ಟೊಯೋಟಾ ಕಿರ್ಲೋಸ್ಕರ್‌ ಕಂಪನಿಗಳ ಕಾರುಗಳ ಬೆಲೆಯಲ್ಲಿ ಏರಿಕೆ.

* ಮನೆಗಳಲ್ಲಿ ಬಳಸುವ ಹವಾನಿಯಂತ್ರಕಗಳ (ಎ.ಸಿ.) ಬೆಲೆ ಶೇಕಡ 5ರಿಂದ ಶೇ 8ರವರೆಗೆ ಹೆಚ್ಚಳ

* ಎಲ್‌ಇಡಿ ಟಿ.ವಿ. ಬೆಲೆ ಏರಿಕೆ

* 75 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಐ.ಟಿ. ರಿಟರ್ನ್ಸ್‌ ಸಲ್ಲಿಕೆಯಿಂದ ವಿನಾಯಿತಿ

* ವಿದ್ಯುತ್‌ ಶುಲ್ಕ, ಒಟಿಟಿ ಚಂದಾದಾರಿಕೆ ಹಣ, ಪೋಸ್ಟ್‌ಪೇಯ್ಡ್‌ ಮೊಬೈಲ್‌ ಶುಲ್ಕ... ಇಂಥ ಪಾವತಿಗಳನ್ನು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌, ಯುಪಿಐ ಮೂಲಕ ಸ್ವಯಂಚಾಲಿತವಾಗಿ ನಡೆಯುವಂತೆ ಮಾಡುವ ಸೌಲಭ್ಯವು ಏಪ್ರಿಲ್‌ 1ರಿಂದ ಇರುವುದಿಲ್ಲ ಎಂದು ಈ ಮೊದಲು ತಿಳಿಸಲಾಗಿತ್ತು. ಆದರೆ, ಈ ಸೌಲಭ್ಯವು ಆರು ತಿಂಗಳ ಮಟ್ಟಿಗೆ ಸ್ಥಗಿತಗೊಳ್ಳುವುದಿಲ್ಲ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಬುಧವಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT