ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೋದ್ಯಮ: ಭಾರತಕ್ಕೆ 3ನೇ ಸ್ಥಾನ

ದೇಶದಲ್ಲಿ 1.25 ಲಕ್ಷ ಸ್ಟಾರ್ಟ್‌ಅಪ್‌: ಶೇ 45ರಷ್ಟು ಮಹಿಳೆಯರ ಒಡೆತನ
Published 20 ಮಾರ್ಚ್ 2024, 14:37 IST
Last Updated 20 ಮಾರ್ಚ್ 2024, 14:37 IST
ಅಕ್ಷರ ಗಾತ್ರ

ನವದೆಹಲಿ: ‘ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ನವೋದ್ಯಮ (ಸ್ಟಾರ್ಟ್‌ಅಪ್) ಹೊಂದಿರುವ ದೇಶಗಳ ಪೈಕಿ ಭಾರತವು ಮೂರನೇ ಸ್ಥಾನ ಪಡೆದಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇಲ್ಲಿನ ಭಾರತ ಮಂಟಪಂನಲ್ಲಿ ಬುಧವಾರ ನಡೆದ ‘ಸ್ಟಾರ್ಟ್‌ಅಪ್‌ ಮಹಾಕುಂಭ’ದ ಸಮಾರೋಪದಲ್ಲಿ ಪಾಲ್ಗೊಂಡು ಮಾತನಾಡಿದರು.

‘ದೇಶದಲ್ಲಿ 2014ರ ವೇಳೆ ಕೇವಲ 100 ನವೋದ್ಯಮಗಳಿದ್ದವು. ಪ್ರಸ್ತುತ ಅವುಗಳ ಸಂಖ್ಯೆ 1.25 ಲಕ್ಷಕ್ಕೆ ಮುಟ್ಟಿದೆ. ಈ ಪೈಕಿ ಶೇ 45ರಷ್ಟು ನವೋದ್ಯಮಗಳನ್ನು ಮಹಿಳೆಯರು ಮುನ್ನಡೆಸುತ್ತಿದ್ದಾರೆ. 12 ಲಕ್ಷ ಯುವಜನರು ಇವುಗಳಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ವಿವರಿಸಿದರು.

ಒಂದು ಬಿಲಿಯನ್ ಅಮೆರಿಕನ್ ಡಾಲರ್‌ಗಿಂತ (ಅಂದಾಜು ₹8,300 ಕೋಟಿ) ಹೆಚ್ಚಿನ ಮಾರುಕಟ್ಟೆ ಬಂಡವಾಳ ಹೊಂದಿರುವ 110 ನವೋದ್ಯಮ ಕಂಪನಿಗಳಿವೆ (ಯೂನಿಕಾರ್ನ್‌). ನವೋದ್ಯಮಗಳು 12 ಸಾವಿರಕ್ಕೂ ಹೆಚ್ಚು ಪೇಟೆಂಟ್‌ಗಳಿಗೆ ಅರ್ಜಿ ಸಲ್ಲಿಸಿವೆ ಎಂದು ತಿಳಿಸಿದರು.

‘ಜಾಗತಿಕ ಮಟ್ಟದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಮುನ್ನಡೆಸುವ ಶಕ್ತಿ ಭಾರತಕ್ಕಿದೆ. ಹಾಗಾಗಿ, ಜಾಗತಿಕ ಸವಾಲುಗಳಿಗೆ ಪರಿಹಾರ ಹುಡುಕುವತ್ತ ನವೋದ್ಯಮ ಹಾಗೂ ನವೋದ್ಯಮಿಗಳು ಕೆಲಸ ನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

ಕೇಂದ್ರ ಸರ್ಕಾರವು ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್‌ ಹಾಗೂ ಕ್ವಾಂಟಮ್‌ ಕಂಪ್ಯೂಟಿಂಗ್‌ಗೆ ಚಾಲನೆ ನೀಡಿದೆ. ಇದರಿಂದ ಬಂಡವಾಳ ಹೂಡಲು ಜಾಗತಿಕ ಹೂಡಿಕೆದಾರರಿಗೆ ನೆರವಾಗಲಿದೆ. ಜೊತೆಗೆ, ಯುವಜನರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಹೇಳಿದರು.

‘ನಾವಿಂದು ಕೃತಕ ಬುದ್ಧಿಮತ್ತೆಯ ಯುಗದಲ್ಲಿದ್ದೇವೆ. ಭಾರತವು ಈ ತಂತ್ರಜ್ಞಾನದಲ್ಲಿ ಮುಂಚೂಣಿ ಸ್ಥಾನಕ್ಕೇರಲಿದೆ ಎಂಬುದು ಇಡೀ ವಿಶ್ವಕ್ಕೆ ತಿಳಿದಿದೆ. ಇಂತಹ ಅವಕಾಶವನ್ನು ಕಳೆದುಕೊಳ್ಳಬಾರದು’ ಎಂದು ತಿಳಿಸಿದರು.

ರಾಹುಲ್‌ ವಿರುದ್ಧ ಟೀಕೆ:

‘ನವೋದ್ಯಮ ವಿಫಲವಾದರೆ ನೀವು ಅದನ್ನು ಮರುಸ್ಥಾಪಿಸುತ್ತೀರಿ. ಆದರೆ, ರಾಜಕೀಯದಲ್ಲಿ ಕೆಲವರು ಪದೇ ಪದೇ ಮರುಸ್ಥಾಪನೆಯಾಗುತ್ತಿದ್ದಾರೆ. ಆದರೆ, ಪ್ರತಿ ಬಾರಿಯೂ ವೈಫಲ್ಯ ಅನುಭವಿಸುತ್ತಿದ್ದಾರೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಹೆಸರನ್ನು ಉಲ್ಲೇಖಿಸದೆ ಟೀಕಿಸಿದರು.

ಜಾಗತಿಕ ಸವಾಲುಗಳಿಗೆ ಪರಿಹಾರ ಹುಡುಕಲು ಸಲಹೆ ದೇಶದಲ್ಲಿರುವ ಯೂನಿಕಾರ್ನ್‌ ಸಂಖ್ಯೆ 110  ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಸದ್ಬಳಕೆ ಅಗತ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT