ಪ್ರಶ್ನೋತ್ತರ

ಮಂಗಳವಾರ, ಏಪ್ರಿಲ್ 23, 2019
33 °C
ಉತ್ತರ

ಪ್ರಶ್ನೋತ್ತರ

Published:
Updated:

ಜ್ಯೋತಿ ನಾಯಕ್, ಊರು ಬೇಡ

ನಾನು ಹೈಸ್ಕೂಲ್ ಅಧ್ಯಾಪಕಿ. ಸಂಬಳ ₹ 46,000. ಜಿ.ಪಿ.ಎಫ್. ₹ 10,000 ಕಟ್ಟುತ್ತೇನೆ. ಸದ್ಯ ಜಿ.ಪಿ.ಎಫ್‌.ನಲ್ಲಿ 1.10 ಲಕ್ಷ ಹಣವಿದೆ. ಉಳಿದ ಉಳಿತಾಯ ಹಾಗೂ ತೆರಿಗೆ ಉಳಿಸುವ ಮಾರ್ಗ ತಿಳಿಸಿರಿ.

ಉತ್ತರ: ನೀವು ಜಿ.ಪಿ.ಎಫ್.ನಲ್ಲಿ ₹ 10,000 ಪ್ರತೀ ತಿಂಗಳೂ ಜಮಾ ಮಾಡುತ್ತಿದ್ದರೆ ಆ ಮಾರ್ಗ ಚೆನ್ನಾಗಿದ್ದು ಹಾಗೆಯೇ ಮುಂದುವರಿಸಿರಿ. ಉಳಿತಾಯ ಹಾಗೂ ತೆರಿಗೆ ವಿನಾಯ್ತಿ ಇವೆರಡೂ ವಿಚಾರ ಇದರಲ್ಲಿ ಅಡಕಗೊಂಡಿದೆ. ನೀವು ಇಲ್ಲಿ ವಾರ್ಷಿಕವಾಗಿ ₹ 1.20 ಲಕ್ಷ ಹೂಡುವಲ್ಲಿ, ಇನ್ನು ಪಿ.ಪಿ.ಎಫ್ ಖಾತೆ ತೆರೆದು ವಾರ್ಷಿಕವಾಗಿ ₹ 30,000 ತುಂಬಿರಿ. ನಿಮಗೆ ವಿಮೆ ಇಲ್ಲವಾದಲ್ಲಿ LICಯವರ ಜೀವನ ಆನಂದ ಪಾಲಿಸಿ ಮಾಡಿರಿ. ನಿಮ್ಮ ಒಟ್ಟು ಆದಾಯದ ಶೇ 10 ವಿಮಾ ಕಂತಿಗೆ ತೆಗೆದಿಡಿ. ಒಟ್ಟಿನಲ್ಲಿ ಜಿ.ಪಿ.ಎಫ್. ವಿಮಾ ಕಂತು ಸೇರಿ ವಾರ್ಷಿಕವಾಗಿ ಕನಿಷ್ಠ ₹ 1.50 ಲಕ್ಷ ಉಳಿಸಿರಿ ಹಾಗೂ ಸೆಕ್ಷನ್ 80C ಆಧಾರದ ಮೇಲೆ ತೆರಿಗೆ ವಿನಾಯ್ತಿ ಪಡೆಯಿರಿ. ಹೀಗೆ ಉಳಿತಾಯ ಮಾಡಿ, ನಿಮ್ಮ ಖರ್ಚು ವೆಚ್ಚ ನೋಡಿಕೊಂಡು ಎಷ್ಟಾದರಷ್ಟು 10 ವರ್ಷಗಳ ಆರ್.ಡಿಯನ್ನು ಸಂಬಳ ಪಡೆಯುವ ಬ್ಯಾಂಕಿನಲ್ಲಿ ಮಾಡಿರಿ. ಈ ರೀತಿ ಉಳಿತಾಯಕ್ಕೆ ಹೆಚ್ಚಿನ ‍ಪ್ರಾಧಾನ್ಯ ಕೊಟ್ಟಲ್ಲಿ ನಿಮ್ಮ ಜೀವನದ ಸಂಜೆ ಸುಖಮಯವಾಗಿರುತ್ತದೆ.

***

ಎಂ. ಪ್ರಭು, ಬೆಂಗಳೂರು

ಆರ್.ಡಿ. ಯಿಂದ ಏನೇನು ಪ್ರಯೋಜನ ತಿಳಿಸಿರಿ.

ಉತ್ತರ: ಆರ್.ಡಿ. ಒಂದು ಅವಧಿ ಠೇವಣಿ ಹಾಗೂ ಕ್ರಮಬದ್ಧವಾದ ಹೂಡಿಕೆ. ಇಲ್ಲಿ ಓರ್ವ ವ್ಯಕ್ತಿ ಎಷ್ಟು ಖಾತೆ ಬೇಕಾದರೂ ಹೊಂದಬಹುದು. ಖಾತೆ ಪ್ರಾರಂಭಿಸುವಾಗ ಒಂದು ಮೊತ್ತ ನಿಶ್ಚಯಿಸಿ ಅದೇ ಮೊತ್ತವನ್ನು ಪ್ರತೀ ತಿಂಗಳೂ ತುಂಬುತ್ತಾ ಬರಬೇಕು. ಈ ಖಾತೆ ಎಲ್ಲಾ ವರ್ಗದವರಿಗೆ ಬಹು ಅನುಕೂಲ. 1ರಿಂದ 10 ವರ್ಷಗಳ ಅವಧಿಗೆ ಈ ಖಾತೆ ತೆರೆಯಬಹುದು. ಕಡ್ಡಾಯವಾಗಿ ಹಣ ಉಳಿಸಲು ಈ ಮಾರ್ಗಕ್ಕಿಂತ ಮಿಗಿಲಾದ ಮಾರ್ಗ ಬೇರೊಂದಿಲ್ಲ. ಅಸಲು ಬಡ್ಡಿ ಸೇರಿ ಅವಧಿ ಮುಗಿಯುತ್ತಲೇ ಹಣ ಪಡೆಯಬಹುದು. ತೆರಿಗೆ ಪಾವತಿಸಲು, ಮಕ್ಕಳ ಸ್ಕೂಲ್ ಫೀ ಕಟ್ಟಲು, ವಾರ್ಷಿಕ ಹಬ್ಬಗಳ ಸಮಯದಲ್ಲಿ ಬರುವ ಖರ್ಚು ನಿಭಾಯಿಸಲು ಒಂದು ವರ್ಷದ ಆರ್.ಡಿ. ಮಾಡಿದಲ್ಲಿ ಅಂತಹ ಖರ್ಚು ಬಂದಾಗ ತಲೆ ನೋವಿರುವುದಿಲ್ಲ. ಅದೇ ರೀತಿ ವಾಹನ – ನಿವೇಶನ ಕೊಳ್ಳಲು, ಐದು ವರ್ಷಗಳ ಆರ್.ಡಿ. ಮಾಡಬಹುದು. ಇನ್ನು ಮಕ್ಕಳ ವಿದ್ಯಾಭ್ಯಾಸ ಮದುವೆ ಇತ್ಯಾದಿ ಖರ್ಚಿಗೆ ದೀರ್ಘಾವಧಿ ಆರ್.ಡಿ. ಮಾಡಬಹುದು. ಒಟ್ಟಿನಲ್ಲಿ ಆರ್.ಡಿ. ಠೇವಣಿ ಕಷ್ಟ ಕಾಲದಲ್ಲಿ ಸ್ಪಂದಿಸುತ್ತದೆ .ಜೊತೆಗೆ ಆರ್ಥಿಕ ಶಿಸ್ತು  ಮೂಡಿಸುತ್ತದೆ. ಪ್ರತೀ ತಿಂಗಳು ಸಂಬಳ ಪಡೆಯುವವರಿಗೆ ಇದೊಂದು ಉತ್ತಮ ಹೂಡಿಕೆ ಆಗಿದೆ. ಎಲ್ಲಾ ವರ್ಗದ ಜನರೂ ಇದರ ಉಪಯೋಗ ಪಡೆಯಬಹುದು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !