ಜನಧನ ಖಾತೆಯಿಂದ ಏನು ಪ್ರಯೋಜನ ?

7
ಪ್ರಶ್ನೋತ್ತರ

ಜನಧನ ಖಾತೆಯಿಂದ ಏನು ಪ್ರಯೋಜನ ?

Published:
Updated:

ಸಂತೋಷ್, ಊರು ಬೇಡ
ನೀವು ಓದುಗರ ಪ್ರಶ್ನೆಗಳಿಗೆ ಕೊಡುವ ಉತ್ತರ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಪ್ರಶ್ನೆ ಕೇಳದವರಿಗೂ,ಪ್ರಶ್ನೋತ್ತರ ಓದಿದ ಇತರರಿಗೂ ಬಹಳಷ್ಟು ಸಮಸ್ಯೆಗಳು ಬಗೆಹರಿಯುತ್ತವೆ. ಎಲ್ಲಕ್ಕೂ ಮುಖ್ಯವಾಗಿ ಪ್ರಶ್ನೋತ್ತರ ಕೇಳಿದವರ ಇತರ ಸಮಸ್ಯೆ ಅವರ ಪ್ರಶ್ನೆಯಲ್ಲಿ ಇರದಿದ್ದರೂ ಅದನ್ನೂ ಆಳವಾಗಿ ಮಥಿಸಿ ಉತ್ತರಿಸುತ್ತೀರಿ. ನಿಮಗೆ ಧನ್ಯವಾದಗಳು. ನನ್ನ ಪ್ರಶ್ನೆ (1) ಓರ್ವ ವ್ಯಕ್ತಿ ಎಷ್ಟು ಬ್ಯಾಂಕ್‌ನಲ್ಲಿ ಖಾತೆ ತೆರೆಯಬಹುದು. 2) ಬ್ಯಾಂಕಿನಲ್ಲಿ ಶೂನ್ಯ ಮೊತ್ತ ಇಟ್ಟಿದ್ದರಿಂದ ₹ 1600 Minus balance ಆಗಿದೆ. ಇದನ್ನು ಕಟ್ಟಬೇಕೇ. ನಾನು ಖಾತೆ ಉಪಯೋಗಿಸುತ್ತಿಲ್ಲ.  3) ಜನಧನ ಖಾತೆಯಿಂದ ಏನು ಪ್ರಯೋಜನ. ಬ್ಯಾಂಕುಗಳಲ್ಲಿ ಹೋದರೆ ಸರಿಯಾಗಿ ತಿಳಿಸುತ್ತಿಲ್ಲ. ನಿಮ್ಮ ಮಾರ್ಗದರ್ಶನ ಬೇಕಾಗಿದೆ.

ಉತ್ತರ: ನಿಮ್ಮ ಅಭಿಮಾನಕ್ಕೆ ವಂದನೆಗಳು. ಓರ್ವ ವ್ಯಕ್ತಿ ಎಷ್ಟು ಬ್ಯಾಂಕುಗಳಲ್ಲಿಯೂ ಖಾತೆ ಹಾಗೂ ಅವಧಿ ಠೇವಣಿ ಇರಿಸಬಹುದು. ಖಾತೆ ತೆರೆಯುವಾಗ ಕೆವೈಸಿ ಪುರಾವೆಯೊಂದಿಗೆ ಪ್ಯಾನ್‌ ಮತ್ತು ಆಧಾರ್‌ ಸಂಖ್ಯೆ ಒದಗಿಸಬೇಕು. ಓರ್ವ ವ್ಯಕ್ತಿ ಬೇರೆ ಬೇರೆ ಬ್ಯಾಂಕುಗಳಲ್ಲಿ ಖಾತೆ ಹೊಂದಿದರೂ PAN ಮತ್ತು AADHAR ಕೊಡುವುದರಿಂದ, ವ್ಯಕ್ತಿಯ ಎಲ್ಲಾ ಹೂಡಿಕೆ ತಿಳಿಯಬಹುದಾಗಿದೆ. ಬ್ಯಾಂಕುಗಳಲ್ಲಿ ಕನಿಷ್ಟ ಮೊತ್ತ ಉಳಿತಾಯ ಖಾತೆಯಲ್ಲಿ ಆಯಾಯ ಬ್ಯಾಂಕುಗಳ ಪ್ರಕಾರ ಇಡಬೇಕಾಗುತ್ತದೆ.

ಶೂನ್ಯ ಮೊತ್ತದ ವಿಚಾರದಲ್ಲಿ ಅದೇ ಬ್ಯಾಂಕಿನಲ್ಲಿ ವಿಚಾರಿಸಿ. ಜನ್‌ಧನ್ ಯೋಜನೆ ಆರ್ಥಿಕವಾಗಿ ಹಿಂದುಗಳಿದ ವ್ಯಕ್ತಿಗಳಿಗೆ ಸೀಮಿತವಾಗಿದ್ದು, ಇಲ್ಲಿ ಶೂನ್ಯ ಮೊತ್ತದಿಂದಲೂ ಖಾತೆ ತೆರೆಯಬಹುದು. ಜೊತೆಗೆ ವಾರ್ಷಿಕ ಜಮಾ ಖರ್ಚು ಆಧಾರದಿಂದ, ಅವಶ್ಯ ಬಿದ್ದಾಗ ಸ್ವಲ್ಪ ಓವರ್‌ಡ್ರಾಫ್ಟ್ ಪಡೆಯಬಹುದು.

ಈ ಹಣವನ್ನು ಬಡ್ಡಿಯ ಸಮೇತ ಹಿಂತಿರುಗಿಸಬೇಕು. ಈ ಖಾತೆಯವರಿಗೆ ವಿಮಾ ಸೌಲತ್ತು ಇರುತ್ತದೆ. ಬ್ಯಾಂಕಿನಲ್ಲಿ ಕನಿಷ್ಠ ಮೊತ್ತ ಇರಿಸದಕಾರಣ ₹ 1600 ಡೆಬಿಟ್ ಬ್ಯಾಲೆನ್ಸ್ ಆಗಿರುವುದನ್ನು ಪ್ರಶ್ನೆಯಲ್ಲಿ ತಿಳಿಸಿದ್ದೀರಿ. ನೀವು ಸ್ವತಹಾ ಮ್ಯಾನೇಜರ್‌ರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ. ಇಂತಹ ಖಾತೆ ಮುಂದುವರೆಸುವ ಬದಲಾಗಿ ತಕ್ಷಣ ರದ್ದುಪಡಿಸಿರಿ.

*
ಶಿವು ರಾಜ್, ಊರು ಬೇಡ
ನಾನು ಎರಡು ಎಕರೆ ಜಮೀನು ಮಾರಾಟ ಮಾಡಿ ₹ 50 ಲಕ್ಷ ಪಡೆದಿರುತ್ತೇನೆ. ನನಗೆ ಬೇರೆ ಯಾವ ಆದಾಯವಿಲ್ಲ. ತಿಂಗಳ ಖರ್ಚಿಗೆ ಬಡ್ಡಿ ಬರುವಂತೆ ಎಲ್ಲಿ ಹೇಗೆ ಹೂಡಲಿ ತಿಳಿಸಿ.
ಉತ್ತರ: 
₹ 50 ಲಕ್ಷವನ್ನು ನಿಮ್ಮ ಮನೆಗೆ ಸಮೀಪದ ಬ್ಯಾಂಕಿನಲ್ಲಿ 5 ವರ್ಷಗಳ ಅವಧಿಗೆ ಸ್ಥಿರ ಠೇವಣಿ (FD) ಮಾಡಿರಿ. FD ಮಾಡುವಾಗ  ₹ 5 ಲಕ್ಷಗಳ  10 ಬಾಂಡ್‌ ಪಡೆಯಿರಿ. ಮಧ್ಯದಲ್ಲಿ ಅತೀ ಅವಶ್ಯಬಿದ್ದಾಗ ಒಂದೆರೆಡು ಬಾಂಡ್‌ಗಳನ್ನು ಅವಧಿಗೆ ಮುನ್ನ ಪಡೆಯಬಹುದು. ಎಲ್ಲಾ ಬಾಂಡುಗಳಿಗೆ ನಾಮ ನಿರ್ದೇಶನ ಮಾಡಿರಿ.

ಬ್ಯಾಂಕುಗಳಲ್ಲಿ ಬಡ್ಡಿ ಪ್ರತೀ ತಿಂಗಳು ಪಡೆದರೆ, ನಿರ್ಧರಿಸಿದ ಬಡ್ಡಿ ದರಗಳಲ್ಲಿ ಸ್ವಲ್ಪ ಕಡಿತವಾಗುತ್ತದೆ. ಇದೇ ವೇಳೆ ಮೂರು ತಿಂಗಳಿಗೊಮ್ಮೆ ಪಡೆದರೆ ಕಡಿತವಾಗುವುದಿಲ್ಲ. ಪ್ರಥಮ ಮೂರು ತಿಂಗಳ  ಬಡ್ಡಿ ಬಾರದಿದ್ದರೂ, ಮುಂದೆ ಬರುವ ಬಡ್ಡಿ ಉಳಿತಾಯ ಖಾತೆಯಲ್ಲಿ ಇರಿಸಿ ಪ್ರತೀ ತಿಂಗಳೂ ಪಡೆಯಬಹುದು. ನಿಮಗೊಂದು ಕಿವಿಮಾತು. ಇದು ಜಮೀನು ಮಾರಾಟ ಮಾಡಿ ಬಂದ ಹಣ. ಹೆಚ್ಚಿನ ಬಡ್ಡಿ, ಕಮೀಷನ್, ಉಡುಗೊರೆ ಆಸೆಯಿಂದ ಬಂಧು ಮಿತ್ರರಲ್ಲಾಗಲಿ ಬ್ಯಾಂಕ್ ಹೊರತುಪಡಿಸಿ ಅಭದ್ರವಾದ ಹೂಡಿಕೆಯಲ್ಲಾಗಲಿ ಇರಿಸಬೇಡಿ.

*
ರಾಜೇಂದ್ರ. ಎಸ್., ಮೈಸೂರು
ನಾನು ಭಾರತೀಯ ವಾಯುಪಡೆ ಯಿಂದ ಸ್ವಯಂ ನಿವೃತ್ತಿ ಪಡೆದು (VRS) ಪಡೆದು ತಿಂಗಳಿಗೆ ₹ 17,539 ಪಿಂಚಣಿ ಪಡೆಯುತ್ತಿದ್ದೇನೆ. ಇದೇ ವೇಳೆ ನನಗೆ ಭಾರತೀಯ ಅಂಚೆ ಇಲಾಖೆಯಲ್ಲಿ ಕೆಲಸ ಸಿಕ್ಕಿದ್ದು ₹ 43,612 ತಿಂಗಳಿಗೆ ಸಂಬಳ ಪಡೆಯುತ್ತಿದ್ದೇನೆ. ನಾನು IAFನ ಪಿಂಚಣಿ ಸಂಬಳಕ್ಕೆ ಸೇರಿಸಿ ತೆರಿಗೆ ಸಲ್ಲಿಸಬೇಕೇ ತಿಳಿಸಿ. ಮಾಜಿ ಸೈನಿಕರಿಗೆ ತೆರಿಗೆ ವಿನಾಯಿತಿ ಇದೆಯೇ. ಈ ಪ್ರಶ್ನೆಗೆ ನೀವು ಕೊಡುವ ಉತ್ತರದಿಂದ ಅನೇಕರಿಗೆ ನೆರವಾಗಲಿದೆ.
ಉತ್ತರ:
Ex Servicemen ಗಳಿಗೆ ತೆರಿಗೆ ಸಂಪೂರ್ಣ ವಿನಾಯಿತಿ ಇದೆ ಎಂಬ ಕಲ್ಪನೆ ಬಹಳಷ್ಟು ಜನರಲ್ಲಿದೆ. ದೇಶ ಸೇವೆ ಸಲ್ಲಿಸಿದ ಈ ವರ್ಗಕ್ಕೆ ಈ ಸೌಲತ್ತು ಇರಬಹುದು ಎನ್ನುವುದು ಕೂಡಾ ಹಲವರ ಅಂಬೋಣ. ವಾಸ್ತವವಾಗಿ  Ex Servicemen ಗಳಿಗೆ ಬರುವ ಪಿಂಚಣಿ ಅವರ ಇತರ ವಾರ್ಷಿಕ ಒಟ್ಟು ಆದಾಯಕ್ಕೆ ಸೇರಿಸಿ, ಅವರವರ ಮಿತಿ ದಾಟಿದಲ್ಲಿ, ಅಂತಹ ಮೊತ್ತಕ್ಕೆ ತೆರಿಗೆ ಕೊಡಬೇಕಾಗುತ್ತದೆ. ಕರ್ತವ್ಯ ವಹಿಸುವಾಗ ಅಂಗವಿಕಲರಾಗಿ (Due to Injury) ಆ ಕಾರಣದಿಂದ ಕರ್ತವ್ಯ ಮಾಡಲಾಗದೆ, ಪಿಂಚಣಿ ಪಡೆಯುತ್ತಿದ್ದರೆ ಮಾತ್ರ ವಿನಾಯಿತಿ ಪಡೆಯಬಹುದು. ನೀವು ಭಾರತೀಯ ವಾಯುಪಡೆಯಿಂದ (IAF) ಬರುವ ಮಾಸಿಕ ಪಿಂಚಣಿ ಹಾಗೂ ಅಂಚೆ ಕಚೇರಿಯಲ್ಲಿ ಪಡೆಯುವ ಸಂಬಳ ಸೇರಿಸಿ ಆದಾಯ ತೆರಿಗೆ ಸಲ್ಲಿಸಬೇಕು.

*
ದೀಪಕ್, ಕೃಷ್ಣಾ ಗ್ರಾಮೀಣ ಬ್ಯಾಂಕ್
ನಾನು ಕೃಷ್ಣಾ ಗ್ರಾಮೀಣ ಬ್ಯಾಂಕಿನಲ್ಲಿ Casual worker ಆಗಿ ಕೆಲಸ ಮಾಡುತ್ತೇನೆ. ನಿಮ್ಮ ‍ಪ್ರಶ್ನೋತ್ತರ ಸದಾ ಓದುವ ನನಗೆ ನನ್ನೊಡನೆ ಏನಾದರೂ ಹಣವಿರುತ್ತಿದ್ದರೆ, ನಿಮ್ಮ ಮಾರ್ಗದರ್ಶನ ಲಾಭ ಪಡೆಯಬಹುದಾಗಿತ್ತು ಎನಿಸುತ್ತದೆ. ನನ್ನ ದಿನದ ಸಂಬಳ ₹ 521. ತಿಂಗಳಲ್ಲಿ 6ಕ್ಕೂ ಹೆಚ್ಚು ರಜೆ ಬರುವುದರಿಂದ ಗರಿಷ್ಠ ₹ 10,500 ಬರುತ್ತದೆ. ಕಷ್ಟದಲ್ಲಿ ₹ 1,000 ಆರ್.ಡಿ. ಮಾಡುತ್ತೇನೆ. ಬೈಕ್ ಖರ್ಚು, ನನ್ನ ಖರ್ಚು, ಸ್ವಲ್ಪ ಮನೆಗೆ ಕೊಟ್ಟು ಹಣ ಎಲ್ಲಾ ಖಾಲಿಯಾಗಿ ಬಿಡುತ್ತದೆ. ಬಿಡುವಿನ ವೇಳೆಯಲ್ಲಿ ನನಗೆ ಏನಾದರೂ ಮಾಡಲು ಮಾರ್ಗದರ್ಶನ ಮಾಡಿ.
ಉತ್ತರ:
ನೀವು ಗ್ರಾಮೀಣ ಬ್ಯಾಂಕಿನಲ್ಲಿ ಕೆಲಸ ಮಾಡುವುದರಿಂದ, ಬ್ಯಾಂಕಿನ ಬಹಳಷ್ಟು ಗ್ರಾಹಕರು ನಿಮಗೆ ಪರಿಚಿತರಾಗುತ್ತಾರೆ. ಜೊತೆಗೆ ನಿಮ್ಮ ಬಂಧು ಮಿತ್ರರನ್ನೂ ಸೇರಿಸಿ ಜೀವವಿಮೆ ಮಾಡಿಸಬಹುದು. ಈ ಕೆಲಸಕ್ಕೆ ಸಮಯವೆನ್ನುವ ಪ್ರಶ್ನೆ ಇಲ್ಲ. ಯಾವಾಗಬೇಕಾದರೂ ಯಾರನ್ನಾದರೂ ನೀವು ಹೋಗಿ ಮಾತನಾಡಬಹುದು. LIC ಯವರಿಂದ ವಿಮಾ ಏಜೆಂಟ್ ಆಗಲು ಪ್ರಯತ್ನಿಸಿರಿ. ಹೀಗೆ ಏಜೆಂಟ್‌ರಾಗಲು Insurance Institute of India ನಡೆಸುವ ಆನ್‌ಲೈನ್‌ ಪರೀಕ್ಷೆಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗೆ LIC ಕಚೇರಿಯಲ್ಲಿ ವಿಚಾರಿಸಿ. ನಿಮಗೆ ಶುಭವಾಗಲಿ.

*
ಕೃಷ್ಣ ಮೂರ್ತಿ ರಾವ್, ಊರು ಬೇಡ
ನನಗೆ ಕೃಷಿ ಭೂಮಿ ಇತ್ತು. ಇದನ್ನು ನನ್ನ ತಮ್ಮನಿಗೆ ನೋಂದಾಯಿಸಿ ಕೊಟ್ಟಿರುತ್ತೇನೆ. ಈಗ ಕೃಷಿ ಭೂಮಿ ಇಲ್ಲ. ನಾನು ಕೃಷಿ ಕುಟುಂಬದ ಸದಸ್ಯನೆಂಬ ಸರ್ಟಿಫಿಕೇಟ್ ಪಡೆಯಲು ಬರುವುದೇ ಹಾಗೂ ನಾನು ಕೃಷಿ ಜಮೀನು ಕೊಳ್ಳಬಹುದೇ ತಿಳಿಸಿ.
ಉತ್ತರ:
ರೈತರಲ್ಲದವರು ಕೂಡಾ (ಕೃಷಿಕರಲ್ಲದವರು ಕೂಡಾ) ಕೃಷಿ ಜಮೀನು ಕೊಂಡು ಕೊಳ್ಳಬಹುದು. ಮೊದಲು ಹೀಗೆ ಕೃಷಿ ಜಮೀನು ಕೊಂಡು ಕೊಳ್ಳಲು ವ್ಯಕ್ತಿಯ ಗರಿಷ್ಠ ವಾರ್ಷಿಕ ಆದಾಯ ₹ 2 ಲಕ್ಷದೊಳಗಿರಬೇಕಿತ್ತು.

ಕರ್ನಾಟಕ ಸರ್ಕಾರ, ರಾಜ್ಯಪಾಲರ ಅಂಕಿತದ ಮೇರೆಗೆ ₹ 2 ಲಕ್ಷದಿಂದ ₹ 25 ಲಕ್ಷ ಆದಾಯವಿರುವ ವ್ಯಕ್ತಿಗಳಿಗೂ ಈಗ ಕೃಷಿ ಜಮೀನು ಕೊಂಡು ಕೊಳ್ಳಬಹುದು. ಕೃಷಿಯೇತರರು ಜಮೀನು ಖರೀದಿಸಿದರೆ ಅನುಮತಿ ನೀಡುವ ಹಕ್ಕು ಇದುವರೆಗೆ ವಿಭಾಗಾಧಿಕಾರಿಗಳಿಗೆ ಇದ್ದಿತ್ತು. ಈಗ ಭೂಸುಧಾರಣಾ ಅಧಿನಿಯಮದ ಕಲಂ 63, 79ಎ, 79ಬಿ ಪ್ರಕರಣದ ಉಪನಿಬಂಧನೆಗಳಿಂದ ವಿನಾಯಿತಿ ಪಡೆಯಲು ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಬೇಕು. ನೀವು ಕೃಷಿ ಜಮೀನು ಕೊಂಡು ಉತ್ತಮ ಕೃಷಿಕರಾಗಿರಿ.

*
ರುದ್ರಪ್ಪ. ಸಿ., ಊರುಬೇಡ
ನಾನು ಹಿರಿಯ ನಾಗರಿಕ. ನಾವು ಸರ್ಕಾರಿ ಬ್ಯಾಂಕುಗಳಲ್ಲಿ ಠೇವಣಿ ಇರಿಸಿದರೆ ಗರಿಷ್ಠ ಶೇ 7 ಬಡ್ಡಿ ಬರುತ್ತದೆ. ಇದೇ ವೇಳೆ ಸಹಕಾರಿ ಬ್ಯಾಂಕ್ ಹಾಗೂ ಸೊಸೈಟಿಗಳು ಗರಿಷ್ಠ ಶೇ 11.5 ಬಡ್ಡಿ ಕೊಡುತ್ತವೆ. ಇಲ್ಲಿ ಇರಿಸುವುದು ಸೂಕ್ತವೇ.
ಉತ್ತರ:
ಸರ್ಕಾರಿ ಬ್ಯಾಂಕುಗಳು ಅಥವಾ ಸಹಕಾರಿ ಬ್ಯಾಂಕುಗಳು ಭಾರತೀಯ ರಿಸರ್ವ್ ಬ್ಯಾಂಕಿನ ನಿಯಂತ್ರಣದಲ್ಲಿ ಇರುತ್ತವೆ. ಸಹಕಾರಿ ಬ್ಯಾಂಕುಗಳು ಆರ್.ಬಿ.ಐ. ಹೊರತುಪಡಿಸಿ, ರಾಜ್ಯ ಸರ್ಕಾರದ ನಿಯಂತ್ರಣಕ್ಕೂ ಒಳಪಟ್ಟಿವೆ. ಭದ್ರತೆ ದೃಷ್ಟಿಯಲ್ಲಿ ಎಲ್ಲಾ ಬ್ಯಾಂಕುಗಳು (ಸರ್ಕಾರಿ ಹಾಗೂ ಸಹಕಾರಿ ಬ್ಯಾಂಕುಗಳು) ಗ್ರಾಹಕರು ಠೇವಣಿಯಾಗಿರಿಸಿದ ಮೊತ್ತದ ಗರಿಷ್ಠ ₹ 1 ಲಕ್ಷದ ತನಕ, ಆರ್.ಬಿ.ಐ. ಅಂಗ ಸಂಸ್ಥೆಯಾದ DICGE (Deposit Insurance Credit Guarantee Corporation) ಇವರಲ್ಲಿ ವಾರ್ಷಿಕ ಪ್ರೀಮಿಯಂ ತುಂಬಿ ವಿಮೆ ಇಳಿಸುತ್ತವೆ.

ಕರ್ನಾಟಕದಲ್ಲಿ ಬಹಳಷ್ಟು ಸಹಕಾರಿ ಬ್ಯಾಂಕುಗಳು ಬಹಳ ಉತ್ತಮ ಕೆಲಸ ಮಾಡುತ್ತಿದ್ದು, ಜನರ ನಂಬಿಕೆಗೆ ಅರ್ಹವಾಗಿವೆ. ಭದ್ರತೆ ಎನ್ನುವ ಮಾತು ಆಯಾಯ ಬ್ಯಾಂಕಿಗೆ ಸಂಬಂಧಿಸಿದ್ದು, ಅಂತಹ ಬ್ಯಾಂಕುಗಳ ಹಿಂದಿನ ಚರಿತ್ರೆ, ವಸೂಲಾಗದ ಸಾಲದ (NPA) ಪ್ರಮಾಣ  ಇವುಗಳನ್ನು ಪರಿಗಣಿಸಬೇಕಾಗುತ್ತದೆ. ಅದೇ ರೀತಿ ಸೊಸೈಟಿಗಳೂ ಸಹ ಚೆನ್ನಾಗಿ ಕೆಲಸ ನಿರ್ವಹಿಸುವುದು ಕಂಡು ಬರುತ್ತದೆ. ನಿಮ್ಮ ಹೂಡಿಕೆ ಒಂದೇ ಕಡೆ ಇಡದೆ ಬೇರೆ ಬೇರೆ ಬ್ಯಾಂಕು, ಅಂಚೆ ಕಚೇರಿಗಳಲ್ಲಿ ವಿನಿಯೋಗಿಸಿರಿ.

*
ಹೆಸರು, ಊರು ಬೇಡ
ನನ್ನ ವಯಸ್ಸು 37. ಸರ್ಕಾರಿ ಶಾಲಾ ಪ್ರಾಥಮಿಕ ಶಿಕ್ಷಕಿಯಾಗಿದ್ದೇನೆ. ನಾನು ವಿಧವೆ. ನನ್ನ ಒಟ್ಟು ಸಂಬಳ ₹ 30,000. ನನ್ನ ಪತಿ ಸರ್ಕಾರಿ ನೌಕರಿಯಲ್ಲಿದ್ದು ಮರಣ ಹೊಂದಿರುವುದರಿಂದ ಅವರ ₹ 8,440 ಪಿಂಚಣಿ ನನಗೆ ಬರುತ್ತದೆ. ನನ್ನ ವೇತನದಲ್ಲಿ ಎಲ್ಲಾ ಕಡಿತದ ನಂತರ ₹ 18,000 ಕೈಗೆ ಬರುತ್ತದೆ. ಇದಲ್ಲದೆ ಎಸ್‌ಬಿಐ ಗೃಹಸಾಲ ₹ 10 ಲಕ್ಷಕ್ಕೆ ಮಾಸಿಕ ಕಂತು ₹ 9,450 ಕಟ್ಟುತ್ತೇನೆ. ಮನೆ ಖರ್ಚಿಗೆ ₹ 8,000 ಬೇಕಾಗುತ್ತದೆ. ನಾನು ನನ್ನ ತಾಯಿ ಹಾಗೂ ಮಗ ಹೀಗೆ ಮೂವರಿದ್ದೇವೆ. ನಾನು ನನ್ನ ಅಣ್ಣನ ಹೆಸರಿನಲ್ಲಿ 1300 ಚದರ ಅಡಿ ಭೂಮಿ ಖರೀದಿಸಿದ್ದೇವೆ. ಅದರಲ್ಲಿ 600 ಅಡಿ ಎರಡು ಫ್ಲ್ಯಾಟ್ ಮಾಡಿದ್ದೇವೆ. ಗೃಹಸಾಲ ಮಾಡುವಾಗ ನನ್ನ ಗಂಡನ ಮನೆ ವಿಳಾಸ ಇದೆ.
ಉದಾ:
ಸುಜಾತ ಗಂಡ ಮರಿಯಪ್ಪ ಉಮಚಗಿ. ಆದರೆ ನನ್ನ ನೌಕರಿಯಲ್ಲಿ ಸುಜಾತ ತಂದೆ ಮರಿಯಪ್ಪ ಎಂತ ಇದೆ. ತೆರಿಗೆಗೋಸ್ಕರ ನಾನು ಏನು ಮಾಡಬೇಕು. ಗೃಹಸಾಲ ತೆಗೆದುಕೊಳ್ಳುವಾಗ ಸಮವಾಗಿ ನಾನು ಮತ್ತು ಅಣ್ಣ ಒಳಪಡುತ್ತೇವೆ. ಇದರಿಂದ ಆದಾಯ ತೆರಿಗೆ ತೊಂದರೆ ಇದೆಯೇ, ನನ್ನ ಪತಿ ಮರಣದ ನಂತರ ಬಂದಿರುವ ₹ 6 ಲಕ್ಷವನ್ನು ಗೃಹ ಸಾಲಕ್ಕೆ ತುಂಬಬೇಕೆ ಅಥವಾ ಅದನ್ನು ನನ್ನ ಮಗನ (9 ವರ್ಷ) ಹೆಸರಿನಲ್ಲಿ FD ಮಾಡಬೇಕೆ. ಯಾವುದು ಸರಿ ತಿಳಿಸಿರಿ. ನನ್ನ ಗಂಡನಿಂದ ಸಿಗುವ ಪಿಂಚಣಿ 10 ವರ್ಷಗಳ ಆರ್.ಡಿ. ಮಾಡುವುದು ಸರಿಯೇ. ನಿಮ್ಮ ಸಲಹೆ ನೀಡಿರಿ. ನನ್ನ ಹಾಗೂ ನನ್ನ ಮಗನ ಭವಿಷ್ಯದ ಸಲುವಾಗಿ ದಯಮಾಡಿ ಮಾರ್ಗದರ್ಶನ ಮಾಡಿ.

ಉತ್ತರ: ನಿಮ್ಮ ಮುಖ್ಯವಾದ ಸಮಸ್ಯೆ ನೀವು ಹಾಗೂ ನಿಮ್ಮ ಅಣ್ಣ ಸೇರಿ ಕಟ್ಟಿಸಿರುವ ಅಥವಾ ಖರೀದಿಸಿದ ಫ್ಲ್ಯಾಟ್ ವಿಚಾರದಲ್ಲಿರುತ್ತದೆ. 1300 ಚ.ಅ. ಸ್ಥಳದಲ್ಲಿ ಎರಡು ಫ್ಲ್ಯಾಟ್ ನಿರ್ಮಿಸುವುದಾದರೆ, ಈ ಎರಡೂ ಫ್ಲ್ಯಾಟ್‌ಗಳಿಗೆ ಪ್ರತ್ಯೇಕ ಮನೆ ಸಂಖ್ಯೆ (Door No) ಮುನ್ಸಿ‍ಪಾಲಿಟಿಯಿಂದ ಪಡೆದು, ಸ್ಥಿರ ಆಸ್ತಿ ವಿಂಗಡಿಸಿ ಕೊಳ್ಳಿ. ಇದಕ್ಕೆ ಸರಿಯಾದ ಪತ್ರ ಕೂಡಾ ಮಾಡಿಸಿ ನೋಂದಾಯಿಸಿ ಕೊಳ್ಳಬಹುದು.

ಅದೇ ರೀತಿ ಬ್ಯಾಂಕ್ ಸಾಲ ಕೂಡಾ ಪ್ರತ್ಯೇಕವಾಗಿ ಪಡೆದು, ಇಬ್ಬರೂ ಬೇರೆ ಬೇರೆಯಾಗಿ ಸಾಲದ ಕಂತು ಕಟ್ಟಲು ಬರುತ್ತದೆ. ಈ ವಿಚಾರದಲ್ಲಿ ನಿಮ್ಮ ಊರಿನ ನುರಿತ ವಕೀಲರನ್ನು ಸಂಪರ್ಕಿಸಿರಿ. ನಿಮ್ಮ ಮದುವೆ ನಂತರ ಗಂಡನ ಹೆಸರು ಬರುವುದು ಸಹಜ. ಆದರೆ ನಿಮ್ಮ ನೌಕರಿಯಲ್ಲಿ ನಿಮ್ಮ ಹೆಸರಿನಲ್ಲಿ ತಂದೆ ಹೆಸರು ಇರುವಲ್ಲಿ ಅದನ್ನು ಈಗ ಬದಲಾಯಿಸುವ ಅವಶ್ಯವಿಲ್ಲ.

ತೆರಿಗೆ ಇಲಾಖೆ ಕೇಳಿದಲ್ಲಿ ಒಂದು ಪ್ರಮಾಣ ಪತ್ರ  ಕೊಡಬಹುದು. ನಿಮ್ಮ ಗಂಡನಿಂದ ಬರುವ ಪಿಂಚಣಿ 8440 ಮಗನ ಹೆಸರಿನಲ್ಲಿ 10 ವರ್ಷಗಳ ಆರ್.ಡಿ. ಠೇವಣಿ ಮಾಡಿರಿ, ಯಾವುದೇ ಕಾರಣಕ್ಕೂ ಬೇರೆಯವರಿಗೆ ಸಾಲ ಕೊಡಬೇಡಿ. ನಿಮಗೂ ನಿಮ್ಮ ಮಗನಿಗೂ ಉಜ್ವಲ ಭವಿಷ್ಯ ಹಾರೈಸುತ್ತೇನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !