ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ವಸೂಲಾಗದ ಸಾಲ ನಿರ್ವಹಣೆಗೆ ‘ಬ್ಯಾಡ್‌ ಬ್ಯಾಂಕ್‘

ಹಣಕಾಸು ವಲಯದಲ್ಲಿ ನಡೆಯುತ್ತಿದೆ ಚರ್ಚೆ
Last Updated 12 ಮೇ 2020, 7:39 IST
ಅಕ್ಷರ ಗಾತ್ರ
ADVERTISEMENT
""

ಲಾಕ್‌ಡೌನ್‌ ನಂತರದ ದಿನಗಳಲ್ಲಿ ವಸೂಲಾಗಾದ ಸಾಲದ (ಎನ್‌ಪಿಎ) ಪ್ರಮಾಣ ಹೆಚ್ಚಾಗಬಹುದು ಎಂಬ ಲೆಕ್ಕಾಚಾರದಲ್ಲಿರುವ ಬ್ಯಾಂಕ್‌ಗಳು ಇಂಥ ಸಾಲಗಳನ್ನು ನಿರ್ವಹಿಸಲೆಂದೇ ಪ್ರತ್ಯೇಕವಾದ ‘ಬ್ಯಾಡ್‌ ಬ್ಯಾಂಕ್’ ಸ್ಥಾಪಿಸಬೇಕೆಂಬ ಪ್ರಸ್ತಾಪವನ್ನು ಸರ್ಕಾರದ ಮುಂದಿಡಲು ಸಿದ್ಧತೆ ನಡೆಸಿವೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧ್ಯಕ್ಷರಾಗಿದ್ದ ಸುನಿಲ್ ಮೆಹ್ತಾ ಕೆಲ ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಮತ್ತು ರಿಸರ್ವ್‌ ಬ್ಯಾಂಕ್‌ಗೆ ಸಲ್ಲಿಸಲೆಂದು ಸಿದ್ಧಪಡಿಸಿದ್ದ ಈ ಕುರಿತ ವರದಿಯ ದೂಳು ಕೊಡವಿರುವ ‘ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್’ (ಐಬಿಎ) ಮತ್ತೆ ಈ ವಿಚಾರವನ್ನು ಸರ್ಕಾರದ ಮಟ್ಟದಲ್ಲಿ ಪ್ರಸ್ತಾಪಿಸಲು ಸಿದ್ಧತೆ ನಡೆಸಿದೆ.

ವಸೂಲಾಗದ ದೊಡ್ಡ ಮಟ್ಟದ ಸಾಲಗಳ ನಿರ್ವಹಣೆಗಾಗಿ ‘ಸಶಕ್ತ್ ಇಂಡಿಯಾ ಅಸೆಟ್ ಮ್ಯಾನೇಜ್‌ಮೆಂಟ್‌’ ಹೆಸರಿನ ಎಎಂಸಿ (ಅಸೆಟ್ ಮ್ಯಾಜೇನ್‌ಮೆಂಟ್ ಕಂಪನಿ) ಸ್ಥಾಪಿಸಬೇಕು ಎಂಬ ಅಂಶವೂ ಎರಡು ವರ್ಷಗಳ ಹಿಂದೆ ಸಿದ್ಧಪಡಿಸಿದ್ದ ಆ ವರದಿಯಲ್ಲಿತ್ತು. ಬ್ಯಾಂಕ್‌ಗಳ ವಲಯದಿಂದ ಪ್ರಸ್ತಾವನೆ ಮುನ್ನೆಲೆಗೆ ಬರುತ್ತಿದ್ದಂತೆ ಹಣಕಾಸು ಇಲಾಖೆಯ ಕೆಲ ಅಧಿಕಾರಿಗಳೂ ಬ್ಯಾಡ್‌ ಬ್ಯಾಂಕ್ ಪರ ಒಲವು ತೋರಿದ್ದರು. ಆದರೆ ಸರ್ಕಾರದ ಮಟ್ಟದಲ್ಲಿ ಇದಕ್ಕೆ ವಿರೋಧವಿತ್ತು. ‘ಸರ್ಕಾರಿ ಬ್ಯಾಂಕ್‌ಗಳ ಬಂಡವಾಳ ಪ್ರಮಾಣ ದೊಡ್ಡದು ಮತ್ತು ಈಗಾಗಲೇ ಬ್ಯಾಂಕಿಂಗ್ ವಲಯದಲ್ಲಿ ಸಾಲ ಹೊಂದಾಣಿಕೆ ವ್ಯವಸ್ಥೆ ಅಸ್ತಿತ್ವದಲ್ಲಿದೆ’ ಎನ್ನುವುದು ಸರ್ಕಾರದ ನಿಲುವಿನ ಹಿಂದಿದ್ದ ತರ್ಕವಾಗಿತ್ತು.

ಏನಿದು ‘ಬ್ಯಾಡ್ ಬ್ಯಾಂಕ್’ ಪರಿಕಲ್ಪನೆ?

ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ವಸೂಲಾಗದ ಸಾಲ ಮತ್ತು ಇತರ ಅನುತ್ಪಾದಕ ಆಸ್ತಿಗಳನ್ನು ‘ಬ್ಯಾಡ್‌ ಬ್ಯಾಂಕ್’ ಖರೀದಿಸುತ್ತದೆ. ಬ್ಯಾಂಕ್‌ಗಳ ಬ್ಯಾಲೆನ್ಸ್‌ ಶೀಟ್‌ನಲ್ಲಿ ಲೆಕ್ಕಚುಕ್ತವಾಗುತ್ತದೆ.

ಸರಳವಾಗಿ ಹೇಳಬೇಕಾದರೆ (ಇದು ಪರಿಕಲ್ಪನೆ ಮಾತ್ರ)ಎಕ್ಸ್‌ ಎಂಬ ಬ್ಯಾಂಕ್‌ ವೈ ಎಂಬ ಕಾರ್ಪೊರೇಟ್ ಸಂಸ್ಥೆಗೆ ಸಾಲ ಕೊಟ್ಟಿದೆ ಎಂದುಕೊಳ್ಳೋಣ. ವೈ ಸಂಸ್ಥೆ ಸಾಲ ಮರುಪಾವತಿ ಮಾಡುವಲ್ಲಿ ವಿಫಲವಾಗುತ್ತದೆ. ಆಗೆ ಎಕ್ಸ್‌ ಎಂಬ ಬ್ಯಾಂಕ್‌ ತನ್ನ ಇಡೀ ಸಾಲವನ್ನು (ಅಕೌಂಟ್) ಬ್ಯಾಡ್‌ ಬ್ಯಾಂಕ್‌ಗೆ ಮಾರಿಬಿಡುತ್ತದೆ. ಅಲ್ಲಿಂದಾಚೆಗೆ ವೈ ಸಂಸ್ಥೆಯಿಂದ ಸಾಲ ವಸೂಲಿ ಮಾಡಿಕೊಳ್ಳುವುದು ಬ್ಯಾಡ್‌ ಬ್ಯಾಂಕ್‌ನ ಹೊಣೆಯಾಗುತ್ತದೆ. ಸಾಲ ಕೊಟ್ಟಿದ್ದ ಮೂಲ ಬ್ಯಾಂಕ್‌ನ ಲೆಕ್ಕದ ಪುಸ್ತಕಗಳಿಂದಎನ್‌ಪಿಎ ಹೊಣೆಗಾರಿಕೆ ಮಾಯವಾಗುತ್ತದೆ.

ಬ್ಯಾಡ್‌ ಬ್ಯಾಂಕ್‌ನ ಸ್ವರೂಪ ಹೇಗಿರಬೇಕು ಎಂಬ ವಿಚಾರ ಇನ್ನೂ ಅಂತಿಮವಾಗಿಲ್ಲ. ಇದು ಮೂರು ಹಂತದ ವ್ಯವಸ್ಥೆ ಒಳಗೊಂಡಿರುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆಸ್ತಿಯ ಮರು ಹೊಂದಾಣಿಕೆ, ಆಸ್ತಿ ನಿರ್ವಹಣೆ ಮತ್ತು ಷೇರುಪೇಟೆಯ ವ್ಯವಹಾರವನ್ನು ಈ ಸಂಸ್ಥೆಯು ನೋಡಿಕೊಳ್ಳುತ್ತದೆ. ₹500 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಅನುತ್ಪಾದಕ ಅಸ್ತಿಯನ್ನು ನಿರ್ವಹಿಸಲು ಮೆಹ್ತಾ ಸಮಿತಿಯು ಪ್ರತ್ಯೇಕ ಎಎಂಸಿ ಮತ್ತು ಎಐಎಫ್ (ಪರ್ಯಾಯ ಹೂಡಿಕೆ ನಿಧಿ– (alternate investment fund) ಸ್ಥಾಪಿಸಬೇಕೆಂದು ಶಿಫಾರಸು ಮಾಡಿತ್ತು.

ಎನ್‌ಪಿಎ ಭೀತಿ

ಮುಂದಿನ ಕೆಲ ತಿಂಗಳುಗಳಲ್ಲಿ ಬ್ಯಾಂಕ್‌ಗಳ ಎನ್‌ಪಿಎ (ಅನುತ್ಪಾದಕ ಆಸ್ತಿ) 150ರಿಂದ 200 ಮೂಲಾಂಶಗಳಷ್ಟು ಏರಿಕೆಯಾಗಬಹುದು ಎಂದು ಸಾಲ ಪಡೆಯುವವರಿಗೆ ರೇಟಿಂಗ್ ಕೊಡುವ ಕ್ರಿಸಿಲ್ ಸಂಸ್ಥೆಯು ಅಂದಾಜಿಸಿದೆ. ಬ್ಯಾಂಕ್‌ಗಳು ಈಗಾಗಲೇ ಸಾಲ ಮಂಜೂರು ಮಾಡುವಾಗ ಎಚ್ಚರಿಕೆಯ ಹೆಜ್ಜೆಗಳನ್ನು ಇರಿಸಲು ಆರಂಭಿಸಿವೆ.

ಡಿಸೆಂಬರ್ 2019ರಲ್ಲಿ ಎನ್‌ಪಿಎ ಪ್ರಮಾಣ ₹9 ಲಕ್ಷ ಕೋಟಿ ಇತ್ತು. 2020ರ ಡಿಸೆಂಬರ್ ವೇಳೆಗೆ ಇದು ₹10 ಲಕ್ಷ ಕೋಟಿ ದಾಟಬಹುದು ಎಂದು ಅಂದಾಜಿಸಲಾಗಿದೆ. ಸಾಲ ಮರುಪಾವತಿಗೆ ಆರ್‌ಬಿಐ ಮೂರು ತಿಂಗಳ ವಿನಾಯ್ತಿ ನೀಡಿದೆ. ಈ ಅವಧಿಯನ್ನು ಇನ್ನೂ ಎರಡು ಅಥವಾ ಮೂರು ತಿಂಗಳಿಗೆ ವಿಸ್ತರಿಸುವ ಸಾಧ್ಯತೆಯಿದೆ.

‘ಲಾಕ್‌ಡೌನ್‌ನಿಂದಾಗಿ ಬ್ಯಾಂಕ್‌ಗಳಿಗೆ ಸಾಲ ಮರುಪಾವತಿ ಮಾಡಲು ಗ್ರಾಹಕರಿಗೆ ಕಷ್ಟವಾಗಬಹುದು. ಇದರಿಂದಾಗಿ ಅನುತ್ಪಾದಕ ಆಸ್ತಿಯ ಪ್ರಮಾಣ ಹೆಚ್ಚಾಗಬಹುದು. ಬ್ಯಾಡ್‌ ಬ್ಯಾಂಕ್ ಸ್ಥಾಪನೆ ಬಗ್ಗೆ ಬ್ಯಾಂಕ್‌ಗಳ ಹಿರಿಯ ಅಧಿಕಾರಿಗಳ ನಡುವೆ ಮಾತುಕತೆಗಳು ನಡೆಯುತ್ತಿವೆ. ಆರ್‌ಬಿಐ ಮತ್ತು ಸರ್ಕಾರ ಆಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ. ಆದರೆ ಇಂಥದ್ದೊಂದು ಎಎಂಸಿ ಸ್ಥಾಪಿಸಲು ಬೇಕಾದ ದೊಡ್ಡ ಮಟ್ಟದ ಬಂಡವಾಳ ಒದಗಿಸಲು ಸರ್ಕಾರಕ್ಕೆ ಈ ಹಂತದಲ್ಲಿ ಸಾಧ್ಯವೇ ಎಂಬುದು ಬಗೆಹರಿಯದ ಪ್ರಶ್ನೆ’ ಎಂದು ವಿದ್ಯಮಾನಗಳ ಬಗ್ಗೆ ಅರಿವಿರುವ ಹಿರಿಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ‘ಇಂಡಿಯನ್ ಎಕ್ಸ್‌ಪ್ರೆಸ್‌’ ವರದಿ ವರದಿ ಮಾಡಿದೆ.

ರಘುರಾಂ ರಾಜನ್ ವಿರೋಧಿಸಿದ್ದರು

ಆರ್‌ಬಿಐ ಗವರ್ನರ್ ಆಗಿದ್ದ ರಘುರಾಂ ರಾಜನ್ ಬ್ಯಾಡ್‌ ಬ್ಯಾಂಕ್ ಪರಿಕಲ್ಪನೆಯನ್ನು ವಿರೋಧಿಸಿದ್ದರು. ಇಂಥದ್ದೊಂದು ಸಂಸ್ಥೆಯನ್ನು ಸ್ಥಾಪಿಸುವುದು ನೈತಿಕವಾಗಿ ಸರಿಯಲ್ಲ ಎಂಬುದು ಅವರ ವಾದವಾಗಿತ್ತು. ಇಂಥ ಸಂಸ್ಥೆಗಳಿದ್ದರೆ ಬ್ಯಾಂಕ್‌ಗಳು ವಿವೇಚನೆಯಿಲ್ಲದೆ ಸಾಲ ನೀಡುವ ಪ್ರಕ್ರಿಯೆ ಮುಂದುವರಿಯಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು.

‘ಬ್ಯಾಡ್‌ ಬ್ಯಾಂಕ್ ಸ್ಥಾಪಿಸಬೇಕೆಂಬ ಪ್ರಸ್ತಾವ ಈ ಹಿಂದೆಯೂ ಚರ್ಚೆಯಾಗಿತ್ತು. ಸರ್ಕಾರಿ ಬ್ಯಾಂಕ್‌ಗಳಿಗೆ ಸರ್ಕಾರ ₹2.65 ಲಕ್ಷ ಕೋಟಿಯಷ್ಟು ಮರುಬಂಡವಾಳ ನೀಡಿತು. ಹೀಗಾಗಿ ಬ್ಯಾಡ್‌ ಬ್ಯಾಂಕ್‌ನ ಅಗತ್ಯ ಕಾಣಲಿಲ್ಲ. ಬ್ಯಾಂಕ್‌ಗಳ ಬಳಿ ಈಗ ಸಾಕಷ್ಟು ಬಂಡವಾಳವಿದೆ. ಅನುತ್ಪಾದಕ ಸಾಲಗಳನ್ನು ಮರುಹೊಂದಾಣಿಕೆ ಮಾಡಿಕೊಡುವ ಕಂಪನಿಗಳೂ ಅಸ್ತಿತ್ವದಲ್ಲಿವೆ. ಮೊದಲು ಪ್ರಸ್ತಾವ ಸಲ್ಲಿಕೆಯಾಗಲಿ ಅನಂತರ ಯೋಚಿಸೋಣ ಎಂದು ಮತ್ತೊಬ್ಬ ಅಧಿಕಾರಿ ‘ಮಿಂಟ್‌’ ಜಾಲತಾಣಕ್ಕೆ ಪ್ರತಿಕ್ರಿಯಿಸಿದ್ದಾರೆ.

ಇಲ್ಲೆಲ್ಲಾ ಈಗಾಗಲೇ ಬ್ಯಾಡ್‌ ಬ್ಯಾಂಕ್ ಇದೆ

ಈಗಾಗಲೇ ಅಮೆರಿಕ, ಫಿನ್‌ಲೆಂಡ್, ಇಂಡೊನೇಷಿಯಾ, ಬೆಲ್ಜಿಯಂ ಮತ್ತು ಸ್ವಿಡನ್‌ಗಳಲ್ಲಿ ಈಗಾಗಲೇ ಅಂಥ ಬ್ಯಾಂಕ್‌ಗಳು ಅಸ್ತಿತ್ವದಲ್ಲಿವೆ. ಬ್ಯಾಡ್‌ ಬ್ಯಾಂಕ್‌ಗಳ ಯಶಸ್ಸಿಗೆ ಅನೇಕ ಅಂಶಗಳು ಕಾರಣವಾಗುತ್ತವೆ. ಅದರಲ್ಲಿ ಮುಖ್ಯವಾದುದು ಸರ್ಕಾರದ ಪಾತ್ರ. ನೀತಿ, ಲೆಕ್ಕಪತ್ರಗಳ ನಿರ್ವಹಣೆ ಮತ್ತು ಹಣಕಾಸು ನೆರವು ಸಹ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ನಮ್ಮ ದೇಶದಲ್ಲಿ ಈ ಹಿಂದೆಯೂ ಸರ್ಕಾರ ಇಂಥ ಬ್ಯಾಂಕ್ ಸ್ಥಾಪನೆ ವಿಚಾರದಿಂದ ಹಿಂದೆ ಸರಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT