ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ : ತೆರಿಗೆ ಅಥವಾ ಕಾನೂನಿನ ಬಗ್ಗೆ?

Last Updated 17 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ರಾಜೇಂದ್ರ, ವಿಜಯನಗರ, ಬೆಂಗಳೂರು

ನಾನು ನಿವೃತ್ತ ಸರ್ಕಾರಿ ಅಧಿಕಾರಿ. ನನಗೆ ಪಿಂಚಣಿ ಹಾಗೂ ಮನೆ ಬಾಡಿಗೆ ಬರುತ್ತದೆ. ನಾನು ಹಾಗೂ ನನ್ನ ಹೆಂಡತಿ ಇಬ್ಬರೂ ಆದಾಯ ತೆರಿಗೆಗೆದಾರರಾಗಿದ್ದೇವೆ. ತೆರಿಗೆ ಪಾವತಿಸಿ ಐ.ಟಿ ರಿಟರ್ನ್ಸ್‌ ತುಂಬುತ್ತೇವೆ. ನನ್ನ ತಂದೆ ನನ್ನ ಮಗನಿಗೆ ಒಂದು ನಿವೇಶನವನ್ನು ವಿಲ್‌ ಮುಖಾಂತರ ಹಸ್ತಾಂತರಿಸಿದ್ದಾರೆ. ಆ ನಿವೇಶನದಲ್ಲಿ ನಾವು ಮನೆ ಕಟ್ಟಲು, ನಾವು ಉಳಿಸಿದ ಹಣ ವಿನಿಯೋಗಿಸಿದರೆ ನಮಗೆ ತೆರಿಗೆ ಅಥವಾ ಕಾನೂನಿನ ಅಡಚಣೆ ಇದೆಯೇ ತಿಳಿಸಿ.

ಉತ್ತರ: ನಿಮ್ಮ ಮಗನು, ನಿಮ್ಮ ತಂದೆಯಿಂದ ಪಡೆದ ನಿವೇಶನದಲ್ಲಿ ನಿಮ್ಮ ಉಳಿತಾಯದಿಂದ ಮನೆ ಕಟ್ಟಿಸಲು ಯಾವುದೇ ತೊಂದರೆ ಇಲ್ಲ. ಹಣವನ್ನು ಮಗನ ಖಾತೆಗೆ ವರ್ಗಾಯಿಸಿ ನಂತರ ನಿಮ್ಮ ಮಗ ಮನೆ ಕಟ್ಟಿಸಲಿ. ಈ ಎರಡೂ ಮಾರ್ಗ ಸರಿ ಇದ್ದು, ಯಾವುದು ಸೂಕ್ತವೋ ಅದನ್ನು ಆರಿಸಿಕೊಳ್ಳಿ.

ಹೀಗೆ ನೀವು ಹಣ ವರ್ಗಾಯಿಸುವಾಗ ಗಿಫ್ಟ್‌ ಟ್ಯಾಕ್ಸ್‌, ಇನ್‌ಕಂ ಟ್ಯಾಕ್ಸ್‌ ಅಥವಾ ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ ಬರುವುದಿಲ್ಲ. ಇದೇ ವೇಳೆ ನಿಮ್ಮ ಮಗನಿಗೆ ಉತ್ತಮ ಆದಾಯ ಇರದಿದ್ದರೂ ಕೂಡಾ ಅವರು ನಿಮ್ಮನ್ನು (ತಂದೆ – ತಾಯಿ) ಸಾಲಗಾರರನ್ನಾಗಿ ಮಾಡಿ ಬ್ಯಾಂಕ್‌ನಿಂದ ಗೃಹ ಸಾಲ ಪಡೆಯಬಹುದು. ನೀವು ತಿಳಿಸಿದ ಮಾಹಿತಿ ಪ್ರಕಾರ, ನಿಮಗೆ ಇದರಲ್ಲಿ ಕಾನೂನು ಮತ್ತು ತೆರಿಗೆ ಭಯ ಇರುವುದಿ‌ಲ್ಲ. ಆದರೆ, ಇಂತಹ ಆಸ್ತಿಯ ಮೇಲೆ ನಿಮಗೆ ಹಕ್ಕು ಇರುವುದಿಲ್ಲ.

ನಾಗನಗೌಡ ಎನ್. ಕೊಟ್ಟೂರು

ನಾನು ವೃತ್ತಿಯಲ್ಲಿ ಶಿಕ್ಷಕ. 4 ವರ್ಷಗಳ ಹಿಂದೆ 30X40 ಅಳತೆಯ ನಿವೇಶನ ಕೊಂಡಿದ್ದೆ. N.A ಆಗಿದೆ. ಬೇರೆ ಸಾಲ ಇಲ್ಲ. ನನ್ನ ಒಟ್ಟು ವೇತನ ₹ 33,450. ಕಡಿತ ₹ 11,000. ಮನೆ ಖರ್ಚು ₹ 12,000. ಎಲ್ಲ ಹೋಗಿ ಸುಮಾರು ₹10,000 ಉಳಿಯುತ್ತದೆ. ನನಗೆ ಮನೆ ಕಟ್ಟಲು ₹ 15 ರಿಂದ ₹ 18 ಲಕ್ಷ ಗೃಹ ಸಾಲ ಬೇಕಾಗಿದೆ. ಸಾಲ ದೊರೆಯುವುದೇ. ಜಿಪಿಎಫ್‌ನಲ್ಲಿ ₹ 3 ಲಕ್ಷ ಇದೆ.

ಉತ್ತರ: ನಿಮಗೆ ₹ 15 ಲಕ್ಷ ಗೃಹ ಸಾಲವನ್ನು, ನೀವು ಸಂಬಳ ಪಡೆಯುವ ಬ್ಯಾಂಕ್‌ನಲ್ಲಿಯೇ ಕೊಡುತ್ತಾರೆ. ಗೃಹ ಸಾಲ 20 ರಿಂದ 30 ವರ್ಷಗಳ ಕಾಲ ಮರು ಪಾವತಿಸಲು ಅವಕಾಶವಿದೆ. ಆದರೆ ನಿಮ್ಮ ಸೇವಾವದಿ ಅಷ್ಟು ಕಾಲ ಇರಬೇಕಾಗುತ್ತದೆ.

₹ 1 ಲಕ್ಷ ಗೃಹ ಸಾಲಕ್ಕೆ ಮಾಸಿಕ ಕಂತು 20 ವರ್ಷಗಳ ಅವಧಿಯಾದಲ್ಲಿ ₹1,000 ಬರುತ್ತದೆ. ನೀವು ₹ 15 ಲಕ್ಷ ಗೃಹ ಸಾಲ ಪಡೆದಲ್ಲಿ ₹ 15,000 ಮಾಸಿಕ ಕಂತು ಬರಲಿದೆ. ಇದನ್ನು ಪಾವತಿಸಲು ನಿಮಗೆ ಸಾಧ್ಯವಾಗಲಿದೆ. ಜತೆಗೆ ವಾರ್ಷಿಕ ಇನ್‌ಕ್ರಿಮೆಂಟ್‌, ಅರ್ಧವಾರ್ಷಿಕ ಡಿ.ಎ. ಇದರಿಂದಾಗಿ ನಿಮ್ಮ ವಾರ್ಷಿಕ ಆದಾಯ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತದೆ. ತಕ್ಷಣ ₹15 ಲಕ್ಷ ಗೃಹ ಸಾಲ ಪಡೆದು ಮನೆ ಕಟ್ಟಿಸಿಕೊಳ್ಳಿ. ಹಣದುಬ್ಬರದಿಂದಾಗಿ ಮುಂದೆ ಈ ಸಾಹಸಕ್ಕೆ ಕೈಹಾಕಿದರೆ, ಮನೆಕಟ್ಟಲು ಇನ್ನೂ ಹೆಚ್ಚಿನ ವೆಚ್ಚ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT