ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ₹ 2 ಲಕ್ಷ ಪಿಎಫ್‌ ಪಡೆಯಲು ಸಲಹೆ

Last Updated 26 ಮೇ 2020, 19:45 IST
ಅಕ್ಷರ ಗಾತ್ರ

ಹನುಮಂತಪ್ಪ, ದಾವಣೆಗೆರೆ

ವೃತ್ತಿಯಲ್ಲಿ ವಾಹನ ಚಾಲಕ. ತಿಂಗಳ ಸಂಬಳ ₹ 32 ಸಾವಿರ. ನನಗೆ 8 ವರ್ಷದ ಮಗಳಿದ್ದಾಳೆ. ಕೇಂದ್ರ ಸರ್ಕಾರ ಪಿಎಫ್‌ ಹಣ ವಾಪಸ್‌ ಪಡೆಯಲು ಅನುಮತಿ ನೀಡಿರುವುದರಿಂದ ₹ 2 ಲಕ್ಷ ಪಿಎಫ್‌ ಪಡೆಯಲು ನಿಮ್ಮ ಸಲಹೆ ಬೇಕಾಗಿದೆ. ವಾಪಸ್‌ ಪಡೆದರೆ ಎಲ್ಲಿ ಹೂಡಿಕೆ ಮಾಡಲಿ?

ಉತ್ತರ: ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಕೊಡುವ ಉದ್ದೇಶದಿಂದ ಜನರ ಕೈಯಲ್ಲಿ ಹೆಚ್ಚಿನ ಹಣ ಚಲಾವಣೆಯಾಗಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳಲ್ಲಿ ಪಿಎಫ್‌ ಹಿಂದೆ ಪಡೆಯುವುದು ಕೂಡಾ ಒಂದಾಗಿರುತ್ತದೆ. ಸಂಕಷ್ಟದಲ್ಲಿ ಇರುವವರಿಗೆ ಇದು ಉಪಯುಕ್ತವಾಗಲಿದೆ. ಆದರೆ, ನಿಮ್ಮ ಇಂದಿನ ಸ್ಥಿತಿಯಲ್ಲಿ ಎಂದಿಗೂ ನೀವು ಪಿಎಫ್‌ ಹಿಂದೆ ಪಡೆಯುವುದು ಸೂಕ್ತವಲ್ಲ. ಪಿಎಫ್‌ ಎನ್ನುವುದು ಓರ್ವ ನೌಕರನ ಜೀವಾಳ. ಹಾಸಿಗೆ ಇದ್ದಷ್ಟು ಕಾಲು ಚಾಚುವುದನ್ನು ಬಿಟ್ಟು ಸೇವಾವಧಿ ಮಧ್ಯದಲ್ಲಿ ಪಿಎಫ್‌ ಹಿಂಪಡೆದರೆ ನಿವೃತ್ತಿಯ ಬಾಳು ಗೋಳಾಗುವುದರಲ್ಲಿ ಸಂಶಯವಿಲ್ಲ. ದಯಮಾಡಿ ನಿವೃತ್ತಿ ತನಕ ನಿಮ್ಮ ಹಾಗೂ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಈ ನಿಧಿ ಮುಟ್ಟದಿರಿ. ಅಂತಹ ಪ್ರಯತ್ನವನ್ನೂ ಮಾಡದಿರಿ.

***

ರಾಗಿಣಿ, ಧಾರವಾಡ

ನಾನು ಗೃಹಿಣಿ. ವಯಸ್ಸು 56. ನನ್ನ ಪತಿ ಸರ್ಕಾರಿ ನೌಕರಿಯಿಂದ ನಿವೃತ್ತರಾಗಿತಿಂಗಳಿಗೆ ₹ 32 ಸಾವಿರ ಪಿಂಚಣಿ ಪಡೆಯುತ್ತಿದ್ದಾರೆ. ಮಗ ಬೆಂಗಳೂರಿನಲ್ಲಿ ನೌಕರಿಯಲ್ಲಿದ್ದಾನೆ. ಅವನ ತಿಂಗಳ ಸಂಬಳ ₹ 25 ಸಾವಿರ. ನನಗೆ ಇನ್ನಿಬ್ಬರು 25 ಹಾಗೂ 27 ವರ್ಷದ ಹೆಣ್ಣು ಮಕ್ಕಳಿದ್ದಾರೆ. ಮೂವರೂ ಮಕ್ಕಳ ಮದುವೆ ಆಗಿಲ್ಲ. ನನ್ನೊಡನೆ ₹ 50 ಲಕ್ಷ ಹಣವಿದೆ. ಬೆಂಗಳೂರಿನ ರಾಜಾಜಿ ನಗರದಲ್ಲಿ ಮನೆ ಮಾರಾಟಕ್ಕಿದೆ. ಬೆಲೆ ₹ 80 ಲಕ್ಷ. ನನಗೆ ₹ 30 ಲಕ್ಷ ಗೃಹ ಸಾಲ ಬೇಕು. ಮನೆ ಕೊಳ್ಳುವ ವಿಚಾರದಲ್ಲಿ ಸಾಲ ಪಡೆಯಲು ತುಂಬಾ ಗೊಂದಲವಿದೆ. ದಯಮಾಡಿ ಸಲಹೆ ನೀಡಿ.

ಉತ್ತರ: ಮನೆ ಕೊಳ್ಳುವಾಗ ರಿಜಿಸ್ಟ್ರೇಷನ್‌, ಮುದ್ರಾಂಕ ಹಾಗೂ ಇನ್ನಿತರ ಖರ್ಚಿನ ರೂಪದಲ್ಲಿ 10–12 ಲಕ್ಷ ಬರಬಹುದು. ಹಳೆಮನೆ ದುರಸ್ತಿ–ನವೀಕರಣ ಹೀಗೆ 15–20 ಲಕ್ಷ ಬರಬಹುದು. ಬೆಂಗಳೂರು ಮನೆ ಕೊಳ್ಳಲು ಗೃಹ ಸಾಲ ₹ 30 ಲಕ್ಷ ಸಾಕಾಗಲಾರದು. ಕನಿಷ್ಠ ₹ 50 ಲಕ್ಷ ಬೆಕಾಗುತ್ತದೆ. ನಿಮ್ಮ ಪತಿ ವಯಸ್ಸು, ಆದಾಯ ಮಗನ ಆದಾಯ ಲೆಕ್ಕ ಹಾಕುವಾಗ ಗೃಹ ಸಾಲ ₹ 50 ಲಕ್ಷ ಪಡೆದರೆ ತಿಂಗಳಿಗೆ ₹ 50 ಸಾವಿರ ಸಾಲದ ಕಂತು ಬಡ್ಡಿ ಕಟ್ಟಬೇಕಾಗುತ್ತದೆ. ಹೀಗೆ ಪ್ರತಿ ತಿಂಗಳೂ ಇಪ್ಪತ್ತು ವರ್ಷಗಳ ತನಕ ಕಟ್ಟಬೇಕು. ಒಟ್ಟಿನಲ್ಲಿ ನಿಮಗೆ ಗೃಹ ಸಾಲ ಬ್ಯಾಂಕ್‌ನಿಂದ ದೊರೆಯುವುದಿಲ್ಲ. ನಿಮ್ಮ ಹೆಣ್ಣುಮಕ್ಕಳ ಮದುವೆಗೆ ಆದ್ಯತೆ ನೀಡಿ. ಮನೆ ಕೊಳ್ಳುವ ವಿಚಾರ ಮುಂದೂಡಿರಿ. ಇದರಿಂದ ನೀವು ಜೀವನದ ಸಂಜೆಯಲ್ಲಿ ಆರಾಮಾಗಿ ಜೀವಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT