ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಾರಕ್ಕೆ ಆರ್‌ಬಿಐ ಉತ್ತರದಾಯಿ’

ಮೀಸಲು ನಿಧಿ ಸಮಿತಿ ಅಧ್ಯಕ್ಷ ಜಲನ್‌ ಅಭಿಮತ
Last Updated 10 ಜನವರಿ 2019, 20:04 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತೀಯ ರಿಸರ್ವ್‌ ಬ್ಯಾಂಕ್‌ ಕೇಂದ್ರ ಸರ್ಕಾರಕ್ಕೆ ಉತ್ತರದಾಯಿ ಆಗಿದ್ದು, ಸರ್ಕಾರ ನಿಗದಿಪಡಿಸಿದ ಚೌಕಟ್ಟಿನೊಳಗೆ ತನ್ನ ನಿಯಮಗಳನ್ನು ರೂಪಿಸಬೇಕು’ ಎಂದು ಆರ್‌ಬಿಐ ಮೀಸಲು ನಿಧಿ ಸಮಿತಿಯ ಅಧ್ಯಕ್ಷ ಬಿಮಲ್‌ ಜಲನ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

1997 ರಿಂದ 2003ರವರೆಗೆ ಆರ್‌ಬಿಐ ಗವರ್ನರ್‌ ಆಗಿದ್ದ ಜಲನ್‌ ಅವರು, ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಮ್ಮ ನೇತೃತ್ವದಲ್ಲಿನ ಸಮಿತಿಯು ಮಾಡಬಹುದಾದ ಶಿಫಾರಸುಗಳ ಬಗ್ಗೆ ಪ್ರತಿಕ್ರಿಯಿಸಲು ಹಿಂದೇಟು ಹಾಕಿದ್ದಾರೆ.

ಆದರೆ, ಸರ್ಕಾರ ಮತ್ತು ಕೇಂದ್ರೀಯ ಬ್ಯಾಂಕ್‌ನ ಬಾಂಧವ್ಯದ ಬಗ್ಗೆ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

‘ಹಣಕಾಸು ನೀತಿಗಳ ಜಾರಿ ವಿಷಯದಲ್ಲಿ ಆರ್‌ಬಿಐ, ಕೇಂದ್ರ ಸರ್ಕಾರಕ್ಕೆ ಉತ್ತರ ನೀಡುವ ಜವಾಬ್ದಾರಿ ಹೊಂದಿದೆ. ಸ್ವಾಯತ್ತ ಸಂಸ್ಥೆ ಮತ್ತು ಸರ್ಕಾರದ ಮಧ್ಯೆ ಅನೇಕ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯಗಳು ಇರಬಹುದು. ದೇಶದ ಹಿತಾಸಕ್ತಿ ರಕ್ಷಣೆ ಉದ್ದೇಶಕ್ಕೆ ಅವುಗಳನ್ನು ಆಂತರಿಕವಾಗಿಯೇ ಬಗೆಹರಿಸಿಕೊಳ್ಳಬೇಕು. ಸರ್ಕಾರ ತನ್ನ ಧೋರಣೆಗೆ ಅನುಗುಣವಾಗಿ ಅನುಮೋದಿಸಿದ ಕಾರ್ಯಕ್ರಮಗಳನ್ನು ಜಾರಿಗೆ ತರುವುದು ಸ್ವಾಯತ್ತ ಸಂಸ್ಥೆಯ (ಆರ್‌ಬಿಐ) ಹೊಣೆಗಾರಿಕೆಯಾಗಿದೆ.

‘ಕೇಂದ್ರೀಯ ಬ್ಯಾಂಕ್‌ಗೆ ಈಗ ಹೊಸ ಗವರ್ನರ್‌ ಅಧಿಕಾರದಲ್ಲಿ ಇರುವುದರಿಂದ ಸರ್ಕಾರದ ಜತೆಗಿನ ಭಿನ್ನಾಭಿಪ್ರಾಯಗಳು ಸೌಹಾರ್ದಯುತವಾಗಿ ಇತ್ಯರ್ಥಗೊಳ್ಳಬಹುದು’ ಎಂದೂ ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.

ಆರ್‌ಬಿಐ ಬಳಿ ಇರುವ ಮೀಸಲು ನಿಧಿಯಲ್ಲಿನ ಹೆಚ್ಚುವರಿ ಹಣವನ್ನು ಸರ್ಕಾರಕ್ಕೆ ವರ್ಗಾಯಿಸುವುದಕ್ಕೆ ಸಂಬಂಧಿಸಿದ ನಿಯಮಗಳನ್ನು ರೂಪಿಸಲು ರಚಿಸಲಾಗಿರುವ ಸಮಿತಿಗೆ ಜಲನ್‌ ಅಧ್ಯಕ್ಷರಾಗಿದ್ದಾರೆ.

ಬಾಂಡ್‌ ಮತ್ತು ಕರೆನ್ಸಿ ವಹಿವಾಟಿನಿಂದ ಬರುವ ಲಾಭವನ್ನು ತನಗೆ ವರ್ಗಾಯಿಸಬೇಕು ಎನ್ನುವುದು ಕೇಂದ್ರ ಸರ್ಕಾರದ ವಾದವಾಗಿದೆ. ಚುನಾವಣೆ ಹೊಸ್ತಿಲಲ್ಲಿ ರೈತರಿಗೆ ಹಣಕಾಸು ನೆರವು ನೀಡುವ, ಸಣ್ಣ ವರ್ತಕರು ಮತ್ತು ಮಧ್ಯಮ ವರ್ಗದ ಜನರಿಗೆ ತೆರಿಗೆ ಕಡಿತ ಮಾಡುವಂತಹ ಜನಪ್ರಿಯ ಯೋಜನೆಗಳಿಗಾಗಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಹಣದ ಅಗತ್ಯ ಎದುರಾಗಿದೆ.

ಜಲನ್‌ ಅವರ ಅನಿಸಿಕೆಗಳಿಗೆ ಆರ್‌ಬಿಐನಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT