ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಂದ್ರಕ್ಕೆ ದಾಖಲೆ ಲಾಭಾಂಶ: ರಿಸರ್ವ್‌ ಬ್ಯಾಂಕ್‌ ಒ‍ಪ್ಪಿಗೆ

₹2.11 ಲಕ್ಷ ಕೋಟಿ ಪಾವತಿಗೆ ಆರ್‌ಬಿಐ ಒಪ್ಪಿಗೆ
Published 22 ಮೇ 2024, 16:00 IST
Last Updated 22 ಮೇ 2024, 16:00 IST
ಅಕ್ಷರ ಗಾತ್ರ

ಮುಂಬೈ: 2023–24ನೇ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರಕ್ಕೆ ₹2.11 ಲಕ್ಷ ಕೋಟಿ ಲಾಭಾಂಶ ಪಾವತಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಒ‍ಪ್ಪಿಗೆ ನೀಡಿದೆ.  

ಗವರ್ನರ್‌ ಶಕ್ತಿಕಾಂತ ದಾಸ್‌ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಆರ್‌ಬಿಐ ನಿರ್ದೇಶಕರ ಸಭೆಯಲ್ಲಿ ಇದಕ್ಕೆ ಸಮ್ಮತಿ ನೀಡಲಾಗಿದೆ. 

2022–23ನೇ ಆರ್ಥಿಕ ವರ್ಷದಲ್ಲಿ ಕೇಂದ್ರಕ್ಕೆ ₹87,416 ಕೋಟಿ ಲಾಭಾಂಶ ಪಾವತಿಸಲಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ದಪ್ಪಟ್ಟಾಗಿದೆ. 2018-19ರಲ್ಲಿ ನೀಡಿದ್ದ ₹1.76 ಲಕ್ಷ ಕೋಟಿ ಲಾಭಾಂಶವೇ ಇಲ್ಲಿಯವರೆಗಿನ ದಾಖಲೆಯ ಮೊತ್ತವಾಗಿತ್ತು.

2024–25ನೇ ಆರ್ಥಿಕ ವರ್ಷದಲ್ಲಿ ಸರ್ಕಾರದ ವರಮಾನ ಹಾಗೂ ವೆಚ್ಚದ ನಡುವಿನ ಅಂತರವಾಗಿರುವ ವಿತ್ತೀಯ ಕೊರತೆಯ ಮೊತ್ತವನ್ನು ₹17.34 ಲಕ್ಷ ಕೋಟಿಗೆ ನಿಗದಿಪಡಿಸಲಾಗಿದೆ. ಒಟ್ಟಾರೆ ವಿತ್ತೀಯ ಕೊರತೆಯನ್ನು ದೇಶದ ಒಟ್ಟು ಜಿಡಿಪಿಯ ಶೇ 5.1ರಷ್ಟು ಕಾಯ್ದುಕೊಳ್ಳಲು ಕೇಂದ್ರವು ನಿರ್ಧರಿಸಿದೆ.

ಅಲ್ಲದೆ, 2024–25ನೇ ಸಾಲಿನ ಬಜೆಟ್‌ನಲ್ಲಿ ಆರ್‌ಬಿಐ ಹಾಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಂದ ₹1.04 ಲಕ್ಷ ಕೋಟಿ ಲಾಭಾಂಶದ ಗುರಿ ನಿಗದಿಪಡಿಸುವ ನಿರೀಕ್ಷೆಯಿದೆ.  

ನಿರ್ದೇಶಕರ ಮಂಡಳಿಯು ಜಾಗತಿಕ ಮತ್ತು ದೇಶದ ಆರ್ಥಿಕತೆಯ ಚಿತ್ರಣವನ್ನು ಪರಾಮರ್ಶೆ ನಡೆಸಿತು. 2023–24ನೇ ಆರ್ಥಿಕ ವರ್ಷದ ವಾರ್ಷಿಕ ವರದಿ ಹಾಗೂ ಹಣಕಾಸಿಗೆ ಸಂಬಂಧಿಸಿದ ಹೇಳಿಕೆಗಳಿಗೆ ಸಭೆಯು ಅನುಮೋದನೆ ನೀಡಿದೆ.  

ಬಿಮಲ್‌ ಜಲನ್‌ ಸಮಿತಿಯ ಶಿಫಾರಸು ಏನು?

ಬಿಮಲ್‌ ಜಲನ್‌ ಅಧ್ಯಕ್ಷತೆಯ ಪರಿಣತರ ಸಮಿತಿ ನೀಡಿರುವ ಶಿಫಾರಸ್ಸಿನ ಅನ್ವಯ 2019ರಿಂದ ಆರ್ಥಿಕ ಬಂಡವಾಳದ ಚೌಕಟ್ಟನ್ನು (ಇಸಿಎಫ್‌) ಅಳವಡಿಸಿಕೊಳ್ಳಲಾಗಿದೆ. ಇದರ ಆಧಾರದ ಮೇಲೆ ಲಾಭಾಂಶ ನೀಡಲಾಗುತ್ತಿದೆ ಎಂದು ಆರ್‌ಬಿಐ ಹೇಳಿದೆ.  ಆರ್‌ಬಿಐನ ಬ್ಯಾಲೆನ್ಸ್‌ ಶೀಟ್‌ಗೆ ಅನುಗುಣವಾಗಿ ಅನಿರೀಕ್ಷಿತ ಹಣಕಾಸು ಪರಿಸ್ಥಿತಿಯನ್ನು ಎದುರಿಸಲು ಇರುವ ತುರ್ತು ನಿಧಿಯ ಪ್ರಮಾಣವನ್ನು ಶೇ 5.5ರಿಂದ ಶೇ 6.5ರ ಮಿತಿಯಲ್ಲಿ ಕಾಯ್ದುಕೊಳ್ಳುವಂತೆ ಸಮಿತಿಯ ಶಿಫಾರಸು ಮಾಡಿದೆ.  2018–19ರಿಂದ 2021–22ರ ವರೆಗೆ ಸ್ಥೂಲ ಆರ್ಥಿಕ ಪರಿಸ್ಥಿತಿ ಹಾಗೂ ಕೋವಿಡ್‌ ಸಾಂಕ್ರಾಮಿಕದಿಂದಾಗಿ ತುರ್ತು ನಿಧಿಯ ಪ್ರಮಾಣವನ್ನು ನಿರ್ದೇಶಕರ ಮಂಡಳಿಯು ಶೇ 5.50ಕ್ಕೆ ನಿಗದಿಪಡಿಸಿತ್ತು. 2022–23ರಲ್ಲಿ ಆರ್ಥಿಕತೆಯ ಬೆಳವಣಿಗೆ ಸುಧಾರಿಸಿದ್ದರಿಂದ ಈ ನಿಧಿಯ ಪ್ರಮಾಣವನ್ನು ಶೇ 6ಕ್ಕೆ ಹೆಚ್ಚಿಸಲಾಗಿತ್ತು.ದೇಶದ ಆರ್ಥಿಕತೆಯು ಚೇತರಿಕೆ ಕಂಡಿದ್ದರಿಂದ 2023–24ನೇ ಆರ್ಥಿಕ ವರ್ಷಕ್ಕೆ ತುರ್ತು ನಿಧಿಯ ಪ್ರಮಾಣವನ್ನು ಶೇ 6.50ಕ್ಕೆ ಹೆಚ್ಚಿಸಲಾಗಿತ್ತು ಎಂದು ಆರ್‌ಬಿಐ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT