ಶುಕ್ರವಾರ, ಫೆಬ್ರವರಿ 21, 2020
28 °C

'ಸಿಆರ್‌ಆರ್‌' ವಿನಾಯ್ತಿ 5 ವರ್ಷಗಳಿಗೆ ವಿಸ್ತರಣೆ: ಗೃಹ, ವಾಹನ ಖರೀದಿ ಸಾಲ ಅಗ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಗೃಹ, ವಾಹನ, ಕಿರು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ಸಾಲಕ್ಕೆ ನಗದು ಮೀಸಲು ಅನುಪಾತದಲ್ಲಿ (ಸಿಆರ್‌ಆರ್‌) ನೀಡಿರುವ ವಿನಾಯ್ತಿ ಸೌಲಭ್ಯವನ್ನು 5 ವರ್ಷಗಳವರೆಗೆ ಬಳಸಿಕೊಳ್ಳಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಅನುಮತಿ ನೀಡಿದೆ.

‘ಸಿಆರ್‌ಆರ್‌’ ವಿನಾಯ್ತಿ ವಿಸ್ತರಣೆಯಿಂದ ಬ್ಯಾಂಕ್‌ಗಳು, ಆರ್‌ಬಿಐ ಕೈಗೊಳ್ಳುವ ರೆಪೊ ಬಡ್ಡಿ ದರ ಕಡಿತದ ನಿರ್ಧಾರವನ್ನು ಗ್ರಾಹಕರಿಗೆ ವರ್ಗಾಯಿಸುವುದು ಸುಲಭವಾಗಲಿದೆ.

ಸಾಲಗಾರರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಿಸಲು ಆರ್‌ಬಿಐ ನಿಯಂತ್ರಣ ಕ್ರಮಗಳನ್ನು ಸಡಿಲಿಸಿದೆ. ಬ್ಯಾಂಕ್‌ಗಳಿಗೆ ದೀರ್ಘಾವಧಿ ನಿಧಿ ನೆರವು ರೂಪದಲ್ಲಿ  ಶೇ 5.15ರ ರಿಯಾಯ್ತಿ ಬಡ್ಡಿ ದರದಲ್ಲಿ ₹1 ಲಕ್ಷ ಕೋಟಿ  ವಿತರಿಸಲಿದೆ. ಇದರಿಂದ ಬ್ಯಾಂಕ್‌ಗಳೂ ತಮ್ಮ ಬಡ್ಡಿ ದರ ಕಡಿತಗೊಳಿಸಲು ಸಾಧ್ಯವಾಗಲಿದೆ. ಸಾಲಗಾರರ ಮಾಸಿಕ ಸಮಾನ ಕಂತಿನ (ಇಎಂಐ) ಪ್ರಮಾಣವೂ ಕಡಿಮೆಯಾಗಲಿದೆ. 

ಸದ್ಯಕ್ಕೆ ಶಾಸನಬದ್ಧ ನಗದು ಮೀಸಲು ಅನುಪಾತದ ಅನ್ವಯ, ಬ್ಯಾಂಕ್‌ಗಳು ತಾವು ಗಳಿಸಿದ ಪ್ರತಿ ₹100ಗೆ ₹4ರಂತೆ ಆರ್‌ಬಿಐನಲ್ಲಿ ಠೇವಣಿ ಇರಿಸಬೇಕಾಗುತ್ತದೆ. ಇತ್ತೀಚಿನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಆರ್‌ಬಿಐ ಈ ನಿಯಮ ಸಡಿಲಿಸಿದೆ.

ಉತ್ಪಾದನಾ ವಲಯಕ್ಕೆ ಬ್ಯಾಂಕ್‌ ಸಾಲ ನೀಡಿಕೆ ಪ್ರಮಾಣ ಹೆಚ್ಚಿಸಲು ‘ಸಿಆರ್‌ಆರ್‌’ ವಿನಾಯ್ತಿ ಘೋಷಿಸಿದೆ. ಈ ವಲಯಕ್ಕೆ ನೀಡುವ ಸಾಲಕ್ಕೆ ಪ್ರತಿಯಾಗಿ ಬ್ಯಾಂಕ್‌ಗಳು ಹೆಚ್ಚುವರಿ ‘ಸಿಆರ್‌ಆರ್‌’ ನಿರ್ವಹಿಸುವ ಅಗತ್ಯ ಇರುವುದಿಲ್ಲ. ಗೃಹ, ವಾಹನ ಖರೀದಿ ಮತ್ತು ಎಂಎಸ್‌ಎಂಇ ವಲಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡುವುದರಿಂದ ಆರ್ಥಿಕ ಬೆಳವಣಿಗೆ ಮೇಲೆ ಬಹುಬಗೆಯ ಪರಿಣಾಮ ಕಂಡು ಬರಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು