ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಬಿಐ | ರೆಪೊ ದರ ಕಡಿತ, ಶೇ 4 ನಿಗದಿ; ಇಎಂಐ ಪಾವತಿಗೆ ಮತ್ತೆ 3 ತಿಂಗಳು ಅವಕಾಶ

Last Updated 22 ಮೇ 2020, 6:15 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ ಶುಕ್ರವಾರ ರೆಪೊ ದರ (ಆರ್‌ಬಿಐ ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ) ಪ್ರಕಟಿಸಿದ್ದು, ಹಿಂದಿನ ದರದಲ್ಲಿ 40 ಅಂಶಗಳನ್ನು ಕಡಿತಗೊಳಿಸುವ ಮೂಲಕ ಶೇ 4 ನಿಗದಿ ಪಡಿಸಿದೆ.

ರಿವರ್ಸ್‌ ರೆಪೊ ದರ ಸಹ ಕಡಿತಗೊಳಿಸಲಾಗಿದ್ದು, ಶೇ 3.75ರಿಂದ ಶೇ 3.35 ನಿಗದಿ ಪಡಿಸಿರುವುದಾಗಿ ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ.

ಕೋವಿಡ್‌–19 ಬಿಕ್ಕಟ್ಟಿನಿಂದಾಗಿ ಮಾರ್ಚ್‌ನಲ್ಲಿ ದೀರ್ಘಾವಧಿ ಸಾಲಗಳ ಮಾಸಿಕ ಕಂತು ಪಾವತಿಯನ್ನು 3 ತಿಂಗಳ ವರೆಗೂ ಮುಂದೂಡುವ ಅವಕಾಶ ಪ್ರಕಟಿಸಿದ್ದ ಆರ್‌ಬಿಐ, ಮತ್ತೆ ಮೂರು ತಿಂಗಳ ವರೆಗೂ ಆ ವ್ಯವಸ್ಥೆ ಮುಂದುವರಿಸಿದೆ. ಎಲ್ಲ ಬ್ಯಾಂಕ್‌ಗಳು ಇಎಂಐ ಪಾವತಿಗೆ 3 ತಿಂಗಳ ಅವಕಾಶ ನೀಡಲು ಆರ್‌ಬಿಐ ಅನುಮತಿ ನೀಡಿದೆ. ಆಗಸ್ಟ್‌ 31ರ ವರೆಗೂ ಪಾವತಿ ಅವಧಿ ವಿಸ್ತರಿಸಲಾಗಿದೆ.

ಕಳೆದ ತಿಂಗಳು ರೆಪೊ ದರದಲ್ಲಿ 75 ಅಂಶಗಳನ್ನು ಕಡಿತಗೊಳಿಸುವ ಮೂಲಕ ಶೇ 4.4 ನಿಗದಿ ಪಡಿಸಲಾಗಿತ್ತು. ರಿವರ್ಸ್‌ ರೆಪೊ ದರ 90 ಅಂಶ ಕಡಿತಗೊಳಿಸಿ, ಶೇ 4ರಷ್ಟು ನಿಗದಿ ಪಡಿಸಿತ್ತು. ಮಧ್ಯಂತರದಲ್ಲಿ ರಿವರ್ಸ್‌ ರೆಪೊ ಶೇ 0.25ರಷ್ಟು ಕಡಿತಗೊಳಿಸಿ ಶೇ 3.75ಕ್ಕೆ ನಿಗದಿ ಮಾಡಲಾಗಿತ್ತು.

ಕೋವಿಡ್–19 ತಡೆಗಾಗಿ ಜಗತ್ತಿನಾದ್ಯಂತ ಲಾಕ್‌ಡೌನ್‌ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯಿಂದಾಗಿ ಜಾಗತಿಕ ಆರ್ಥಿಕ ಚಟುವಟಿಕೆಗಳು ಬಹುತೇಕ ತಟಸ್ಥಗೊಂಡಿರುವುದರಿಂದ, ದೇಶದ ಆರ್ಥಿಕತೆಗೂ ತೀವ್ರ ಹೊಡೆತ ಬಿದ್ದಿದೆ. ಬಿಕ್ಕಟ್ಟಿನ ನಡುವೆಯೂ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಹಾಗೂ ಸಾರ್ವಜನಿಕರಲ್ಲಿ ನಗದು ಹರಿವು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಆರ್‌ಬಿಐ ಹಲವು ಕ್ರಮಗಳನ್ನು ಘೋಷಿಸಿದೆ.

2020–21ನೇ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ವೃದ್ಧಿ ದರ (ಜಿಡಿಪಿ) ನಕಾರಾತ್ಮವಾಗಿಯೇ ಉಳಿಯುವ ಸಾಧ್ಯತೆಗಳಿದ್ದು, ದ್ವಿತೀಯಾರ್ಧದಲ್ಲಿ ಚೇತರಿಕೆ ಕಾಣಬಹುದಾಗಿದೆ. ಹಣಕಾಸು ಹಾಗೂ ಆಡಳಿತದಲ್ಲಿನ ಕ್ರಮಗಳಿಂದಾಗಿ ಈ ಸಾಲಿನ ಎರಡನೇ ಹಂತದಲ್ಲಿ ಚೇತರಿಕೆಯ ಭರವಸೆ ಮೂಡಲಿದೆ ಎಂದು ಆರ್‌ಬಿಐ ಅಂದಾಜಿಸಿದೆ.

ದೇಶದಲ್ಲಿ ಬಹುತೇಕ ವಲಯಗಳಲ್ಲಿನ ಬೇಡಿಕೆ ತೀವ್ರ ಕುಸಿದಿದೆ. ವಿದ್ಯುತ್‌, ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ಖಾಸಗಿ ವಲಯದಲ್ಲಿ ಕೋವಿಡ್‌–19 ಬೇಡಿಕೆ ಇಲ್ಲವಾಗಿದೆ. ಉದ್ಯಮ ವಿಸ್ತರಣೆಗೆ ಹೂಡಿಕೆಯ ಬೇಡಿಕೆ ಅವಕಾಶಗಳೂ ಇಲ್ಲವಾಗಿವೆ ಎಂದು ಆರ್‌ಬಿಐ ಹೇಳಿದೆ.

ಏಪ್ರಿಲ್‌ ಮಾಹಿತಿ ಆಧರಿಸಿ, ತೈಲ ಬೆಲೆ ಕಡಿಮೆ ಮಟ್ಟದಲ್ಲಿಯೇ ಇರಲಿದೆ, ಆಹಾರ ಪದಾರ್ಥಗಳ ಮೇಲಿನ ದರ ಒತ್ತಡ ಹೆಚ್ಚಿದೆಎಂದು ಹೇಳಿದೆ.

ಇತರೆ ಮುಖ್ಯಾಂಶಗಳು:

* ನಗರ ಮತ್ತು ಗ್ರಾಮೀಣ ಭಾಗ ಎರಡೂ ಕಡೆಯು ಬೇಡಿಕೆ ಕುಸಿದಿದೆ. ಕೈಗಾರಿಕೆ ಉತ್ಪಾದನೆ ಮಾರ್ಚ್‌ನಲ್ಲಿ ಶೇ 17ರಷ್ಟು ಕಡಿಮೆಯಾಗಿದ್ದು, ತಯಾರಿಕೆ ಚಟುವಟಿಕೆಗಳು ಶೇ 21ರಷ್ಟು ಇಳಿಕೆಯಾಗಿದೆ.

* ಭಾರತದ ರಫ್ತು–ಆಮದು ಬ್ಯಾಂಕ್‌ಗೆ (ಎಕ್ಸಿಮ್‌ ಬ್ಯಾಂಕ್‌) ನಗದು ಹರಿವಿಗಾಗಿ ₹15,000 ಕೋಟಿ ಸಾಲವನ್ನು 90 ದಿನಗಳ ವರೆಗೂ ವಿಸ್ತರಿಸಲಾಗಿದೆ. ಅಮೆರಿಕನ್‌ ಡಾಲರ್‌ ವಿನಿಮಯ ಸೌಲಭ್ಯಕ್ಕೆ ಸಹಕಾರಿಯಾಗಲು ಈ ಕ್ರಮ ಕೈಗೊಂಡಿದೆ.

* ಕೃಷಿ ಮತ್ತು ಕೃಷಿ ಆಧಾರಿತ ಚಟುವಟಿಕೆಗಳು ದೇಶಕ್ಕೆ ಭರವಸೆಯ ಬೆಳಕಾಗಿದೆ.

* ಕೋವಿಡ್‌–19 ಬಿಕ್ಕಟ್ಟಿನ ಸಮಯದಲ್ಲಿ ದವಸ–ಧಾನ್ಯಗಳ ಬೆಲೆ ಏರಿಕೆಯಾಗಿದೆ. ಮುಕ್ತ ಮಾರುಕಟ್ಟೆ ಮಾರಾಟಗಳಿಂದ ದರ ಇಳಿಕೆ ಸಾಧ್ಯವಾಗಿಸಬಹುದು ಎಂದು ಸಲಹೆ ನೀಡಿದೆ.

* ದೇಶದಿಂದ ರಫ್ತು ಪ್ರಮಾಣದಲ್ಲಿ ಶೇ 60.5ರಷ್ಟು ಕಡಿಮೆಯಾಗಿದೆ. ಈ ವರ್ಷ ಏಪ್ರಿಲ್‌ 1ರಿಂದ ವಿದೇಶಿ ವಿನಿಮಯ ಮೀಸಲು 9.2 ಬಿಲಿಯನ್‌ ಡಾಲರ್‌ನಷ್ಟು ಏರಿಕೆಯಾಗಿದೆ.

* ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್‌ಗೆ (ಎಸ್‌ಐಡಿಬಿಐ) ಮತ್ತೆ 90 ದಿನಗಳ ವರೆಗೂ ₹15,000 ಕೋಟಿ ಬಿಡುಗಡೆ ಮಾಡಲು ಆರ್‌ಬಿಐ ನಿರ್ಧರಿಸಿದೆ.

* ಇವತ್ತಿನ ಪ್ರಕಟಣೆಗಳನ್ನು ಆರ್‌ಬಿಐ 4 ಭಾಗಗಳಾಗಿ ವಿಂಗಡಿಸಲಾಗಿತ್ತು;
1. ಮಾರುಕಟ್ಟೆಗಳ ಕಾರ್ಯಾಚರಣೆ ಉತ್ತಮ ಪಡಿಸುವುದು
2. ರಫ್ತು ಮತ್ತು ಆಮದು ಕಾರ್ಯಾಚರಣೆಗಳಿಗೆ ಸಹಕಾರ
3. ಸಾಲದ ಹೊರೆಯ ಒತ್ತಡ ಕಡಿಮೆ ಮಾಡುವುದು
4. ರಾಜ್ಯ ಸರ್ಕಾರಗಳು ಎದುರಿಸುತ್ತಿರುವ ಹಣಕಾಸು ಒತ್ತಡ ನಿವಾರಿಸುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT