ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಬಿಐ: ರೆಪೊ ದರ ಏರಿಕೆ, ಸಾಲ ತುಟ್ಟಿ, ಬದಲಿಲ್ಲ ರಿವರ್ಸ್ ರೆಪೊ ದರ

ಆರ್‌ಬಿಐನಿಂದ ಹಣದುಬ್ಬರ ನಿಯಂತ್ರಣ ಉದ್ದೇಶ
Last Updated 4 ಮೇ 2022, 19:53 IST
ಅಕ್ಷರ ಗಾತ್ರ

ಮುಂಬೈ/ನವದೆಹಲಿ: ಹಣದುಬ್ಬರ ದರವನ್ನು ನಿಯಂತ್ರಿಸುವ ಉದ್ದೇಶದಿಂದ ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ರೆಪೊ ದರವನ್ನು ಶೇಕಡಾ 0.40ರಷ್ಟು ಹೆಚ್ಚಿಸಿದೆ. ಇದರಿಂದಾಗಿ ರೆ‍ಪೊ ದರವು ಶೇಕಡಾ 4.40ಕ್ಕೆ ಏರಿಕೆ ಆಗಿದೆ. ಆರ್‌ಬಿಐ ತೀರ್ಮಾನದ ಪರಿಣಾಮವಾಗಿ ಗೃಹ, ವಾಹನ ಹಾಗೂ ಇತರ ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಾಗಿ, ಸಾಲದ ತಿಂಗಳ ಕಂತಿನ ಮೊತ್ತವೂ ಹೆಚ್ಚಲಿದೆ.

ಚಿಲ್ಲರೆ ಹಣದುಬ್ಬರ ಪ್ರಮಾಣವು ದೇಶದಲ್ಲಿ ಮೂರು ತಿಂಗಳುಗಳಿಂದ ಶೇ 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಬ್ಯಾಂಕ್‌ಗಳು ಕಾಯ್ದುಕೊಳ್ಳಬೇಕಾದ ಠೇವಣಿಯ (ನಗದು ಮೀಸಲು ಅನುಪಾತ) ಪ್ರಮಾಣವನ್ನು ಶೇ 0.50ರಷ್ಟು (ಶೇ 4.5ಕ್ಕೆ) ಹೆಚ್ಚಿಸಿದೆ. ನಗದು ಮೀಸಲು ಅನುಪಾತ ಹೆಚ್ಚಳವು ಮೇ 21ರಿಂದ ಅನ್ವಯವಾಗಲಿದೆ.

ಎಂಪಿಸಿಯು ರೆಪೊ ದರವನ್ನು ಹೆಚ್ಚಿಸಿರುವುದು 2018ರ ಆಗಸ್ಟ್‌ ನಂತರ ಇದೇ ಮೊದಲು. ಹೊಂದಾಣಿಕೆಯ ಹಣಕಾಸಿನ ನಿಲುವನ್ನು ಕಾಯ್ದುಕೊಂಡು, ರೆಪೊ ದರ ಹೆಚ್ಚಿಸಲು ಎಂಪಿಸಿ ಒಕ್ಕೊರಲಿನಿಂದ ತೀರ್ಮಾನಿಸಿದೆ. ಎಂಪಿಸಿಯು ಸೋಮವಾರದಿಂದ ಬುಧವಾರದವರೆಗೆ ಸಭೆ ಸೇರಿತ್ತು.

ಏಪ್ರಿಲ್‌ ತಿಂಗಳಿನಲ್ಲಿ ಕೂಡ ಹಣದುಬ್ಬರ ಪ್ರಮಾಣವು ಹೆಚ್ಚಿನ ಮಟ್ಟದಲ್ಲಿಯೇ ಇರುವ ಸಾಧ್ಯತೆ ಇದೆ ಎಂದು ದಾಸ್ ಹೇಳಿದ್ದಾರೆ. ಹಣದುಬ್ಬರ ಪ್ರಮಾಣವು ಬಹುಕಾಲ ಹೆಚ್ಚಿನ ಮಟ್ಟದಲ್ಲಿಯೇ ಉಳಿದರೆ ಬೆಳವಣಿಗೆ ಹಾಗೂ ಹಣಕಾಸಿನ ಸ್ಥಿರತೆಗೆ ಅಡ್ಡಿಯಾಗಬಹುದು ಎಂದು ಎಚ್ಚರಿಸಿದ್ದಾರೆ.

‘ಈಕ್ವಿಟಿ ಮಾರುಕಟ್ಟೆಗಳ ಮೇಲೆ ನಕಾರಾತ್ಮಕ ಪರಿಣಾಮ ಇರಲಿದೆ. ಮುಂದಿನ ಎಂಪಿಸಿ ಸಭೆಯಲ್ಲಿ ರೆಪೊ ದರ ಹೆಚ್ಚಾಗಬಹುದು ಎಂದು ನಾವು ನಿರೀಕ್ಷಿಸಿದ್ದೆವು’ ಎಂದು ಐಸಿಐಸಿಐ ಸೆಕ್ಯುರಿಟೀಸ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಪ್ರಸೆನ್‌ಜಿತ್ ಬಸು ಹೇಳಿದ್ದಾರೆ.

ರಷ್ಯಾ–ಉಕ್ರೇನ್ ಯುದ್ಧವು ಮೇ, ಜೂನ್ ನಂತರವೂ ಮುಂದುವರಿದಲ್ಲಿ ರೆಪೊ ದರ ಇನ್ನಷ್ಟು ಹೆಚ್ಚು ಮಾಡಬೇಕಾಗಬಹುದು ಎಂದು ಬಸು ಅಂದಾಜಿಸಿದ್ದಾರೆ.

‘ನಗದು ಮೀಸಲು ಅನುಪಾತವನ್ನು ಶೇ 0.5ರಷ್ಟು ಹೆಚ್ಚಳ ಮಾಡಿರುವುದರಿಂದಾಗಿ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿನ ಸರಿಸುಮಾರು ₹ 87 ಸಾವಿರ ಕೋಟಿಯಷ್ಟು ಹಣ ಆರ್‌ಬಿಐ ಕಡೆ ಹೋಗಲಿದೆ. ಹೀಗಾಗಿ, ಬ್ಯಾಂಕ್‌ಗಳು ಹೆಚ್ಚಿನ ಬಂಡವಾಳದ ಅಗತ್ಯಕ್ಕಾಗಿ ಠೇವಣಿಗಳ ಮೇಲೆ ಹೆಚ್ಚು ಬಡ್ಡಿ ಕೊಡುವ ಸಾಧ್ಯತೆ ಇದೆ’ ಎಂದು ಅವರು ತಿಳಿಸಿದರು.

ಹಣದುಬ್ಬರ ಜಾಸ್ತಿ ಆಗಿದೆ. ಇದರಿಂದಾಗಿ ಕಂಪನಿಗಳ ಲಾಭದ ಪ್ರಮಾಣ ಕಡಿಮೆಯಾಗಬಹುದು, ಷೇರುಗಳ ಮೌಲ್ಯದಲ್ಲಿ ದೊಡ್ಡ ಮಟ್ಟದ ಏರಿಕೆ ತಕ್ಷಣಕ್ಕೆ ಸಿಗಲಿಕ್ಕಿಲ್ಲ. ಹೀಗಾಗಿ, ಹೂಡಿಕೆದಾರರು ಈಗಿನ ಸಂದರ್ಭದಲ್ಲಿ ಬಹಳ ಜಾಗರೂಕವಾಗಿ ಷೇರುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಟ್ರೇಡಿಂಗ್ ಮಾಡುವವರು ತೀರಾ ಎಚ್ಚರಿಕೆಯಿಂದ ತೀರ್ಮಾನ ತೆಗೆದುಕೊಳ್ಳುವುದು ಒಳಿತು ಎಂದು ಅವರು ಸಲಹೆ ನೀಡಿದರು.

ಹಣದುಬ್ಬರವು ನಿಯಂತ್ರಣಕ್ಕೆ ಬಂದ ನಂತರದಲ್ಲಿ ಷೇರು ಮಾರುಕಟ್ಟೆಯಲ್ಲಿನ ಗಳಿಕೆಯು ಉತ್ತಮವಾಗಬಹುದು. ಹೀಗಾಗಿ, ಮ್ಯೂಚುವಲ್‌ ಫಂಡ್‌ಗಳ ಮೂಲಕ ಮತ್ತು ನೇರವಾಗಿ ಷೇರುಗಳಲ್ಲಿ ದೀರ್ಘಾವಧಿಗೆ ಹೂಡಿಕೆ ಮಾಡುವವರು ಹೆಚ್ಚು ಚಿಂತಿಸಬೇಕಾದ ಅಗತ್ಯವಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT