ಗುರುವಾರ , ಡಿಸೆಂಬರ್ 1, 2022
27 °C

RBI Repo Rate: ಹಬ್ಬಕ್ಕೆ ಆರ್‌ಬಿಐ ಕಹಿ ಸುದ್ದಿ, ರೆಪೊ ದರ ಶೇ 0.50 ಹೆಚ್ಚಳ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಹಬ್ಬದ ಸೀಸನ್‌ನಲ್ಲಿ ಗ್ರಾಹಕರಿಗೆ ಮತ್ತೆ ಆಘಾತ ನೀಡಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ), ರೆಪೊ ದರವನ್ನು ಮತ್ತೆ ಶೇ 0.50ರಷ್ಟು ಹೆಚ್ಚಿಸಿದೆ. ಇದರೊಂದಿಗೆ, ಸತತ ನಾಲ್ಕನೇ ಬಾರಿ ರೆಪೊ ದರ ಹೆಚ್ಚಳ ಮಾಡಿದಂತಾಗಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಶುಕ್ರವಾರ ರೆಪೊ ದರ ಹೆಚ್ಚಳದ ನಿರ್ಧಾರ ಪ್ರಕಟಿಸಿದರು. ಹಣದುಬ್ಬರ ತಡೆಯುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್‌ಬಿಐ ಹೇಳಿದೆ. ಈ ಬಾರಿಯ ಹೆಚ್ಚಳದೊಂದಿಗೆ ರೆಪೊ ದರ ಈಗ ಶೇ 5.9 ಆಗಿದೆ.

ರೆಪೊ ದರ ಹೆಚ್ಚಳದ ಪರಿಣಾಮವಾಗಿ ಗೃಹ, ವಾಹನ ಸಾಲಗಳ ಬಡ್ಡಿ ದರ ಏರಿಕೆಯಾಗಲಿದೆ. ನವರಾತ್ರಿ, ದೀಪಾವಳಿ ಸಂದರ್ಭದಲ್ಲಿ ವಾಹನ ಖರೀದಿಯ ಯೋಚನೆಯಲ್ಲಿದ್ದವರಿಗೆ ಆರ್‌ಬಿಐ ನಿರ್ಧಾರ ಆಘಾತ ನೀಡಿದೆ.

ಈ ಹಿಂದೆ ಆಗಸ್ಟ್ 5ರಂದು ರೆಪೊ ದರವನ್ನು ಶೇಕಡ 0.50ರಷ್ಟು ಹೆಚ್ಚಿಸಲಾಗಿತ್ತು. ಕಳೆದ ಬಾರಿಯ ಹೆಚ್ಚಳದೊಂದಿಗೆ ರೆಪೊ ದರ ಕೋವಿಡ್–19 ಸಾಂಕ್ರಾಮಿಕಕ್ಕಿಂತ ಮೊದಲಿನ, ಅಂದರೆ 2019ರ ಆಗಸ್ಟ್‌ನಲ್ಲಿದ್ದ ಹಂತಕ್ಕೆ ತಲುಪಿತ್ತು.

ರೆಪೊ ದರವನ್ನು ಮೇ ತಿಂಗಳಲ್ಲಿ ಶೇ 0.40 ಹಾಗೂ ಜೂನ್‌ನಲ್ಲಿ ಶೇ 0.50 ಹೆಚ್ಚಿಸಲಾಗಿತ್ತು. ಜೂನ್‌ ತಿಂಗಳಲ್ಲಿ ರೆಪೊ ದರ ಹೆಚ್ಚಳವಾದ ಬೆನ್ನಲ್ಲೇ ಹೆಚ್ಚಿನ ಬ್ಯಾಂಕ್‌ಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಬಡ್ಡಿ ದರ ಏರಿಕೆ ಮಾಡಿದ್ದವು.

ಜಿಡಿಪಿ ಬೆಳವಣಿಗೆ ದರ ಶೇ 7: ಆರ್‌ಬಿಐ

23ನೇ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆ ದರ ಶೇ 7ರಷ್ಟು ಇರಲಿದೆ ಎಂದು ಆರ್‌ಬಿಐ ಅಂದಾಜಿಸಿದೆ. ಗ್ರಾಹಕ ದರ ಸೂಚ್ಯಂಕ ಆಧಾರಿತ (ಸಿಪಿಐ) ಹಣದುಬ್ಬರ ಶೇ 6.7ರಷ್ಟು ಇರಲಿದೆ ಎಂದು ಆರ್‌ಬಿಐ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು