ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಲ್ಲರೆ ಹಣದುಬ್ಬರ ಶೇ 4ಕ್ಕೆ ತಗ್ಗಿಸುವತ್ತ ಹೆಚ್ಚಿನ ಗಮನ: ದಾಸ್

ಹಣದುಬ್ಬರದ ಆತಂಕ: ಬಡ್ಡಿದರ ಬದಲಿಲ್ಲ
Published 7 ಅಕ್ಟೋಬರ್ 2023, 0:30 IST
Last Updated 7 ಅಕ್ಟೋಬರ್ 2023, 0:30 IST
ಅಕ್ಷರ ಗಾತ್ರ

ಮುಂಬೈ: ಆರ್ಥಿಕ ತಜ್ಞರು, ಮಾರುಕಟ್ಟೆ ನಿರೀಕ್ಷೆಯಂತೆಯೇ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಬಡ್ಡಿದರವನ್ನು ಯಥಾಸ್ಥಿತಿಯಲ್ಲಿಯೇ ಉಳಿಸಿಕೊಂಡಿದೆ. ಇದರಿಂದಾಗಿ ಗೃಹ, ವಾಹನ ಮತ್ತು ಇತರೆ ಸಾಲಗಳ ಮೇಲಿನ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.

ರೆಪೊ ದರವನ್ನು ಶೇ 6.5ರಲ್ಲಿಯೇ ಉಳಿಸಿಕೊಳ್ಳಲು ಆರ್‌ಬಿಐನ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸದಸ್ಯರು ಶುಕ್ರವಾರ ಸರ್ವಾನುಮತದ ಒಪ್ಪಿಗೆ ನೀಡಿದ್ದಾರೆ. ‘ಹೊಂದಾಣಿಕೆಯ ಹಣಕಾಸು ನೀತಿಯನ್ನು ಹಿಂಪಡೆಯುವ’ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡದಿರಲು ಸಹ ಸಮಿತಿ ನಿರ್ಧರಿಸಿದೆ.

‘ಹಣದುಬ್ಬರ ಪ್ರಮಾಣ ಗರಿಷ್ಠ ಮಟ್ಟದಲ್ಲಿ ಇರುವುದು ಆರ್ಥಿಕ ಸ್ಥಿರತೆ ಮತ್ತು ಸುಸ್ಥಿರ ಬೆಳವಣಿಗೆಗೆ ದೊಡ್ಡ ಅಪಾಯ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್‌ ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಹಣದುಬ್ಬರವನ್ನು ಶೇ 4ರಲ್ಲಿ ನಿಯಂತ್ರಿಸುವತ್ತ ಗಮನ ಹರಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

‘ಮುಂಗಾರು ಮಳೆಯು ವಾಡಿಕೆಗಿಂತಲೂ ಕಡಿಮೆ ಆಗಿರುವುದು ಹಾಗೂ ಬಿತ್ತನೆ ಇಳಿಮುಖ ಆಗಿರುವುದು ಮುಂಗಾರು ಬೆಳೆಗಳ ಉತ್ಪಾದನೆ ಮತ್ತು ದರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಆಹಾರ ಹಣದುಬ್ಬರವನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಬೇಕಿದೆ’ ಎಂದು ದಾಸ್‌ ಅಭಿಪ್ರಾಯಪಟ್ಟಿದ್ದಾರೆ.

‘ತರಕಾರಿಗಳ ಬೆಲೆ ಇಳಿಕೆ ಆಗಿರುವುದು ಮತ್ತು ಎಲ್‌ಪಿಜಿ ದರ ಕಡಿತ ಮಾಡಿರುವುದರಿಂದಾಗಿ ಅಲ್ಪಾವಧಿಯಲ್ಲಿ ಹಣದುಬ್ಬರ ತಗ್ಗುವ ನಿರೀಕ್ಷೆ ಇದೆ. ಮುಂಬರುವ ದಿನಗಳಲ್ಲಿ ಹಲವು ಅಂಶಗಳು ಹಣದುಬ್ಬರದ ಪ್ರಮಾಣವನ್ನು ನಿರ್ಧರಿಸಲಿವೆ. ಪ್ರಸಕ್ತ ತ್ರೈಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರವು ಶೇ 6ಕ್ಕಿಂತಲೂ ಕೆಳಕ್ಕೆ ಮತ್ತು ಮುಂದಿನ ತ್ರೈಮಾಸಿಕದಲ್ಲಿ ಶೇ 5.2ಕ್ಕೆ ಇಳಿಕೆ ಕಾಣುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ.

ಪ್ರಮುಖ ಅಂಶಗಳು

* ಪ್ರಸಕ್ತ ಹಣಕಾಸು ವರ್ಷಕ್ಕೆ ಜಿಡಿಪಿ ಬೆಳವಣಿಗೆ ಅಂದಾಜಿನಲ್ಲಿ (ಶೇ 6.5) ಬದಲಿಲ್ಲ

* 2023–24ಕ್ಕೆ ಹಣದುಬ್ಬರದ ಮುನ್ನೋಟವನ್ನೂ ಶೇ 5.4ರಲ್ಲೇ ಉಳಿಸಿಕೊಳ್ಳಲಾಗಿದೆ.

* ತರಕಾರಿಗಳ ಬೆಲೆ ಇಳಿಕೆ, ಎಲ್‌ಪಿಜಿ ದರ ಕಡಿತದಿಂದ ಹಣದುಬ್ಬರ ಇಳಿಮುಖ

ಚಿನ್ನದ ಸಾಲದ ಮಿತಿ ₹4 ಲಕ್ಷಕ್ಕೆ ಹೆಚ್ಚಳ

ನಗರ ಸಹಕಾರ ಬ್ಯಾಂಕ್‌ಗಳಲ್ಲಿ ಬುಲೆಟ್‌ ರಿಪೇಮೆಂಟ್‌ ಯೋಜನೆಯಡಿ ಪಡೆಯುವ ಚಿನ್ನದ ಸಾಲದ ಮಿತಿಯನ್ನು ₹2 ಲಕ್ಷದಿಂದ ₹4 ಲಕ್ಷಕ್ಕೆ ಹೆಚ್ಚಿಸಲು ನಿರ್ಧಾರ ಮಾಡಿರುವುದಾಗಿ ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಶುಕ್ರವಾರ ತಿಳಿಸಿದ್ದಾರೆ. 2023ರ ಮಾರ್ಚ್‌ 31ರ ಅಂತ್ಯಕ್ಕೆ ಆದ್ಯತಾ ವಲಯದ ಸಾಲ ನೀಡಿಕೆಯ ಗುರಿಯನ್ನು ತಲುಪಿರುವ ಸಹಕಾರಿ ಬ್ಯಾಂಕ್‌ಗಳಿಗೆ ಮಾತ್ರವೇ ಇದು ಅನ್ವಯಿಸಲಿದೆ ಎಂದು ದಾಸ್‌ ಸ್ಪಷ್ಟಪಡಿಸಿದ್ದಾರೆ. ಏನಿದು ಯೋಜನೆ: ಸಾಮಾನ್ಯವಾಗಿ ಚಿನ್ನದ ಸಾಲ ಅಥವಾ ಇನ್ಯಾವುದೇ ವಿಧದ ಸಾಲ ಪಡೆದರೆ ಅದನ್ನು ಕಂತುಗಳ ಮೂಲಕ (ಇಎಂಐ) ಪಾವತಿ ಮಾಡಲಾಗುತ್ತದೆ. ಆದರೆ ಈ ಯೋಜನೆಯಡಿ ಚಿನ್ನದ ಸಾಲ ಪಡೆದವರು ಮೂಲ ಮೊತ್ತ ಮತ್ತು ಬಡ್ಡಿ ಮೊತ್ತವನ್ನು ಸಾಲದ ಅವಧಿ ಮುಗಿಯುವ ವೇಳೆಗೆ ಪಾವತಿಸುವ ಅವಕಾಶ ನೀಡಲಾಗಿದೆ. ಪಿಐಡಿಎಫ್ ವ್ಯಾ‍ಪ್ತಿಗೆ ಪಿಎಂ ವಿಶ್ವಕರ್ಮ: ಪಾವತಿ ಮೂಲಸೌಕರ್ಯ ಅಭಿವೃದ್ಧಿ ನಿಧಿಯ (ಪಿಐಡಿಎಫ್‌) ವ್ಯಾಪ್ತಿಗೆ ಪಿಎಂ ವಿಶ್ವಕರ್ಮ ಯೋಜನೆಯನ್ನು ತರಲು ಆರ್‌ಬಿಐ ನಿರ್ಧರಿಸಿದೆ. ಕುಶಲಕರ್ಮಿಗಳಿಗೆ ಅಡಮಾನರಹಿತವಾಗಿ ಶೇ 5ರ ಬಡ್ಡಿದರದಲ್ಲಿ ₹3 ಲಕ್ಷದವರೆಗೆ ಸಾಲ ಸೌಲಭ್ಯ ಒದಗಿಸುವ ಯೋಜನೆಯೇ ಪಿಎಂ ವಿಶ್ವಕರ್ಮ. ಪಿಐಡಿಎಫ್‌ ಯೋಜನೆಯ ಅವಧಿಯನ್ನು 2025ರ ಡಿಸೆಂಬರ್‌ 31ರವರೆಗೆ ವಿಸ್ತರಿಸುವ ನಿರ್ಧಾರವನ್ನು ಸಹ ತೆಗೆದುಕೊಂಡಿದೆ.

ತಜ್ಞರ ಅಭಿಪ್ರಾಯಗಳು

ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ರೆಪೊ ದರ ಇಳಿಕೆ ಆಗುವ ನಿರೀಕ್ಷೆ ಇದೆಮದನ್‌ ಸಬ್ನವಿಸ್‌ ಬ್ಯಾಂಕ್‌ ಆಫ್‌ ಬರೋಡದ ಮುಖ್ಯ ಆರ್ಥಿಕ ತಜ್ಞ ಹಬ್ಬದ ಋತುವಿನಲ್ಲಿ ರೆಪೊ ದರ ಸ್ಥಿರವಾಗಿ ಇದ್ದರೆ ಆರ್ಥಿಕತೆಗೆ ವರವಾಗಿ ಪರಿಣಮಿಸಲಿದೆ. ಜನರ ಖರೀದಿ ಸಾಮರ್ಥ್ಯವನ್ನು ಇದು ಹೆಚ್ಚಿಸಲಿದೆ ರಾಜೀವ್ ಕಪೂರ್‌ ಸ್ಟೀಲ್‌ಬರ್ಡ್‌ ಹೆಲ್ಮೆಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಬಡ್ಡಿದರ ಸ್ಥಿರವಾಗಿದ್ದರೆ ವಿದ್ಯುತ್‌ ಚಾಲಿತ ವಾಹನ ಸಾಲ ಪಡೆಯುವುದರ ಮೇಲೆ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಜನರನ್ನು ಇ.ವಿ. ಖರೀದಿಸುವಂತೆ ಉತ್ತೇಜಿಸಲಿದೆ ಆಯುಷ್‌ ಲೋಹಿಯಾ ಲೋಹಿಯಾ ಆಟೊ ಇಂಡಸ್ಟ್ರೀಸ್‌ನ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT