ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಪೊ ದರ ಕಡಿತಗೊಳಿಸಿದ ಆರ್‌ಬಿಐ; ಇಳಿಕೆಯಾಗಲಿದೆ ಸಾಲದ ಮೇಲಿನ ಇಎಂಐ

ರಿವರ್ಸ್‌ ರೆಪೊ ದರ ಶೇ 6
Last Updated 7 ಫೆಬ್ರುವರಿ 2019, 10:19 IST
ಅಕ್ಷರ ಗಾತ್ರ

ಮುಂಬೈ: ರಿಸರ್ವ್‌ ಬ್ಯಾಂಕ್‌ ರೆಪೊ ದರವನ್ನು ಶೇ 0.25ರಷ್ಟು ಇಳಿಸುವ ನಿರ್ಧಾರವನ್ನು ಗುರುವಾರ ಪ್ರಕಟಿಸಿದೆ. ಇದರಿಂದ ಸಾಲದ ಮೇಲಿನ ಬಡ್ಡಿ ದರ ತಗ್ಗಲಿದ್ದು, ಸಾಲಕ್ಕೆ ಪಾವತಿಸುವ ಇಎಂಐ ಪ್ರಮಾಣವೂ ಕಡಿಮೆಯಾಗಲಿದೆ. ಈ ಬದಲಾವಣೆಯ ನಂತರ ರೆಪೊ ದರವು ಶೇ 6.25ಕ್ಕೆ ಇಳಿಯಲಿದೆ.

ರಿವರ್ಸ್‌ ರೆಪೊ ದರ ಶೇ 6 ಆಗಲಿದೆ. ಆರ್‌ಬಿಐಹಣಕಾಸು ನೀತಿ ಸಮಿತಿಯು (ಎಂಪಿಸಿ) 2017ರ ಆಗಸ್ಟ್‌ನಲ್ಲಿ ರೆಪೊ ದರವನ್ನು ಶೇ 6ಕ್ಕೆ ಇಳಿಕೆ ಮಾಡಿತ್ತು. 2018–19 ಹಣಕಾಸು ವರ್ಷದ ಅಕ್ಟೋಬರ್‌ ಮತ್ತು ಡಿಸೆಂಬರ್‌ ಹಣಕಾಸು ನೀತಿ ಘೋಷಣೆಗಳಲ್ಲಿ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿತ್ತು. 2018ರ ಜೂನ್‌ ಮತ್ತು ಆಗಸ್ಟ್‌ ಎರಡೂ ಬಾರಿ ರೆಪೊ ದರವನ್ನು ಶೇ 0.25ರಷ್ಟು ಏರಿಕೆ ಮಾಡಲಾಗಿತ್ತು.

ರೆಪೊ ದರ ಇಳಿಕೆಯಿಂದಾಗಿ ಗೃಹ, ವಾಹನ ಖರೀದಿ ಮತ್ತು ಉದ್ದಿಮೆ ಸಾಲಗಳ ಬಡ್ಡಿ ದರ ಇಳಿಕೆಯಾಗಲಿದೆ. ತಿಂಗಳ ಸಮಾನ ಕಂತುಗಳ (ಇಎಂಐ) ಮೊತ್ತದಲ್ಲಿಯೂ ಇಳಿಕೆಯಾಗಲಿದೆ.ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿ (ಎಂಸಿಎಲ್‌ಆರ್‌) ಸಾಲಗಳ ಬಡ್ಡಿ ದರ ನಿಗದಿ ಮಾಡಲಾಗುತ್ತಿದೆ

ಸಾಲದ ಮೇಲಿನ ಬಡ್ಡಿ ಮತ್ತು ಇಐಎಂ ಇಳಿಕೆಗೆ ಉದಾಹರಣೆ: ಕಾರ್ಪೊರೇಟ್‌ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಗಿತಾ ಅಪಾರ್ಟ್‌ಮೆಂಟ್‌ ಖರೀದಿಗಾಗಿ ಬ್ಯಾಂಕ್‌ನಿಂದ 20 ವರ್ಷ ಅವಧಿಗೆ ₹30 ಲಕ್ಷ ಸಾಲ ಪಡೆದಿದ್ದಾರೆ. ಶೇ 8.8 ಬಡ್ಡಿ ದರದಲ್ಲಿ ತಿಂಗಳಿಗೆ (ಇಎಂಐ)₹26,607 ಪಾವತಿಸುತ್ತಿದ್ದಾರೆ. ಆರ್‌ಬಿಐ ರೆಪೊ ದರ ಶೇ 0.25ರಷ್ಟು ಇಳಿಕೆ ಮಾಡಿರುವುದರಿಂದ, ಗೃಹ ಸಾಲದ ಬಡ್ಡಿ ಶೇ 8.55 ಆಗಲಿದ್ದು, ಇಎಂಐ ಮೊತ್ತ ₹26,129 ಪಾವತಿಸಬೇಕಾಗುತ್ತದೆ. ಹೀಗಾಗಿ ಇಎಂಐನಲ್ಲಿ ₹477 ಕಡಿಮೆಯಾಗಲಿದೆ.

ರೆಪೊ ದರ ಏರಿಳಿತದಿಂದ ಬಡ್ಡಿದರ ಮೇಲೆ ಪ್ರಭಾವ, ಎಂಸಿಎಲ್‌ಆರ್‌ ಅಂದರೆ ಏನು; ಹಣಕಾಸು ನೀತಿ ಪರಾಮರ್ಶೆಗೆ ಸಂಬಂಧಿಸಿದ ಈ ಎಲ್ಲವನ್ನೂಕೇಶವ ಜಿ. ಝಿಂಗಾಡೆ ಇಲ್ಲಿ ವಿವರಿಸಿದ್ದಾರೆ–

ರೆಪೊ ಮತ್ತು ರಿವರ್ಸ್‌ ರೆಪೊ

ಅಲ್ಪಾವಧಿಯಲ್ಲಿ ಬ್ಯಾಂಕ್‌ಗಳಿಗೆ ಹಣದ ಕೊರತೆ ಎದುರಾದಾಗ ಆ ನಷ್ಟ ಭರ್ತಿ ಮಾಡಿಕೊಡಲು ಬ್ಯಾಂಕ್‌ಗಳಿಗೆ ಆರ್‌ಬಿಐ ಸಾಲ ನೀಡುತ್ತದೆ. ಈ ಸಾಲಕ್ಕೆ ವಿಧಿಸುವ ಬಡ್ಡಿ ದರವನ್ನೇ ‘ರೆಪೊ ದರ’ ಎಂದು ಕರೆಯಲಾಗುತ್ತದೆ. ರೆಪೊ ಎಂದರೆ ರೀಪರ್ಚೇಜ್‌ (ಮರು ಖರೀದಿ) ದರ ಎಂದೂ ಅರ್ಥ.

ಆರ್‌ಬಿಐ, ಹಣಕಾಸು ವ್ಯವಸ್ಥೆಯಲ್ಲಿನ ಹೆಚ್ಚುವರಿ ಹಣದ ಹರಿವಿಗೆ ಕಡಿವಾಣ ಹಾಕುವ ಉದ್ದೇಶದಿಂದ ವಾಣಿಜ್ಯ ಬ್ಯಾಂಕ್‌ಗಳಿಂದ ಪಡೆಯುವ ಸಾಲಕ್ಕೆ ಪಾವತಿಸುವ ಬಡ್ಡಿ ದರ ‘ರಿವರ್ಸ್‌ ರೆಪೊ’ ಆಗಿರುತ್ತದೆ.

ಹಣದುಬ್ಬರ ಏರುಗತಿಯಲ್ಲಿ ಇರುವಾಗ, ಬ್ಯಾಂಕ್‌ಗಳು ಆರ್‌ಬಿಐನಿಂದ ಪಡೆಯುವ ಸಾಲ ದುಬಾರಿಯಾಗಲು ರೆಪೊ ದರ ಹೆಚ್ಚಿಸಲಾಗುತ್ತಿದೆ. ಇದರಿಂದ ಆರ್ಥಿಕತೆಯಲ್ಲಿ ಹಣದ ಪೂರೈಕೆ ಕಡಿಮೆಯಾಗುತ್ತದೆ. ಹಣದುಬ್ಬರ ನಿಯಂತ್ರಿಸಲು ಸಾಧ್ಯವಾಗುತ್ತದೆ. ರೆಪೊ ಮತ್ತು ರಿವರ್ಸ್‌ ರೆಪೊ ದರಗಳು, ನಗದು ಹಣದ ಹರಿವು ಹೊಂದಾಣಿಕೆ ಮಾಡುವ ವಿಧಾನಗಳಾಗಿವೆ.

ಬಡ್ಡಿ ದರಕ್ಕೂ ರೆಪೊಗೆ ಇರುವ ಸಂಬಂಧ

ಸಾಲಗಾರರು ಬ್ಯಾಂಕ್‌ಗಳಿಂದ ಪಡೆಯುವ ಸಾಲಕ್ಕೆ ಪಾವತಿಸುವ ಬಡ್ಡಿ ದರಕ್ಕೂ ರೆಪೊ ದರಕ್ಕೂ ನೇರ ಸಂಬಂಧ ಇರುತ್ತದೆ. ಬ್ಯಾಂಕ್‌ಗಳು ರೆಪೊ ದರಕ್ಕಿಂತಲೂ ಹೆಚ್ಚಿನ ದರದಲ್ಲಿ ಸಾಲಗಾರರಿಂದ ಬಡ್ಡಿ ವಸೂಲಿ ಮಾಡುತ್ತವೆ.

ರೆಪೊ ದರ ಕಡಿಮೆ ಮಟ್ಟದಲ್ಲಿ ಇದ್ದರೆ, ಬ್ಯಾಂಕ್‌ಗಳು ಸಾಲಗಾರರಿಗೆ ವಿಧಿಸುವ ಬಡ್ಡಿ ದರಗಳನ್ನು ಕಡಿಮೆ ಮಾಡಲು ಉತ್ತೇಜನ ನೀಡುತ್ತವೆ. ಇದರಿಂದ ಸಾಲಗಳು ಕೈಗೆಟುಕುವ ಮಟ್ಟದಲ್ಲಿ ಇರುತ್ತವೆ.

ರೆಪೊ ದರ ಏರುಗತಿಯಲ್ಲಿ ಇದ್ದರೆ, ಸಾಲಗಳ ಬಡ್ಡಿ ದರಗಳೂ ಅದೇ ಹಾದಿಯಲ್ಲಿ ಸಾಗುತ್ತವೆ. ಗ್ರಾಹಕರ ಪಾಲಿಗೆ ಬಡ್ಡಿ ದರಗಳು ದುಬಾರಿಯಾಗಿ ಪರಿಣಮಿಸುತ್ತವೆ.

ನಗದು ಮೀಸಲು ಅನುಪಾತ

ಬ್ಯಾಂಕ್‌ಗಳು ಆರ್‌ಬಿಐನಲ್ಲಿ ಇರಿಸಬೇಕಾದ ಠೇವಣಿಗಳ ಅನುಪಾತ (ಸಿಆರ್‌ಆರ್‌) ಇದಾಗಿದೆ. ಉದಾಹರಣೆಗೆ ವ್ಯಕ್ತಿಯೊಬ್ಬ ಬ್ಯಾಂಕ್‌ವೊಂದರಲ್ಲಿ ₹ 1,000 ಠೇವಣಿ ಇರಿಸಿದರೆ, ಇತರರಿಗೆ ಸಾಲ ನೀಡಲು ಬ್ಯಾಂಕ್‌ ಈ ಮೊತ್ತವನ್ನು ಬಳಸಿಕೊಳ್ಳುತ್ತದೆ. ಅದಕ್ಕೂ ಮುನ್ನ, ಈ ಠೇವಣಿಯ ನಿರ್ದಿಷ್ಟ ಮೊತ್ತವನ್ನು ಆರ್‌ಬಿಐನಲ್ಲಿ ಠೇವಣಿ ಇರಿಸಬೇಕಾಗುತ್ತದೆ. ಸಿಆರ್‌ಆರ್‌ ಶೇ 5ರಷ್ಟು ನಿಗದಿಯಾಗಿದ್ದರೆ, ಬ್ಯಾಂಕ್‌ ₹ 50 ಆರ್‌ಬಿಐನಲ್ಲಿ ಠೇವಣಿ ಇರಿಸಿ, ಉಳಿದ ಮೊತ್ತವನ್ನು (ಅಂದರೆ ₹ 950) ಸಾಲ ನೀಡಿಕೆಗೆ ಬಳಸಬಹುದು.

ಈ ಮೊತ್ತ (₹ 950) ಮರುಪಾವತಿಯಾದಾಗ, ಬ್ಯಾಂಕ್‌ ಇದರಶೇ 5ರಷ್ಟನ್ನು (₹ 47.50) ಠೇವಣಿ ಇರಿಸಿ ಇನ್ನೊಬ್ಬರಿಗೆ ಸಾಲ ನೀಡುತ್ತದೆ. ಹೀಗೆ ಪ್ರತಿ ಬಾರಿ ಹಣ ಕೈ ಬದಲಾಯಿಸಿದಾಗೊಮ್ಮೆ ಆರ್ಥಿಕತೆಯಲ್ಲಿ ಹಣದ ಮೊತ್ತವು ಪರೋಕ್ಷವಾಗಿ ಹೆಚ್ಚುತ್ತ ಹೋಗುತ್ತದೆ. ಹೀಗಾಗಿ ಸಿಆರ್‌ಆರ್‌ ಶೇ 1ರಷ್ಟು ಹೆಚ್ಚಾದರೂ, ಆರ್ಥಿಕತೆಯಲ್ಲಿ ಚಲಾವಣೆಯಲ್ಲಿ ಇರುವ ಹಣ ಗಮನಾರ್ಹವಾಗಿ ಕಡಿಮೆಯಾಗುತ್ತದೆ.

ಶಾಸನಬದ್ಧ ನಗದು ಅನುಪಾತ

ಪ್ರತಿಯೊಂದು ಬ್ಯಾಂಕ್‌ ನಗದು, ಚಿನ್ನ ಮತ್ತು ಸರ್ಕಾರಿ ಬಾಂಡ್‌ಗಳ ರೂಪದಲ್ಲಿ ಇರಿಸುವ ಶಾಸನಬದ್ಧ ನಿರ್ದಿಷ್ಟ ಮೊತ್ತ (ಎಸ್‌ಸಿಆರ್‌) ಇದಾಗಿರುತ್ತದೆ. ಬ್ಯಾಂಕ್‌ಗಳ ಸಾಲ ನೀತಿ ಮೇಲೆ ನಿಯಂತ್ರಣ ಸಾಧಿಸಲು ಇದರಿಂದ ಆರ್‌ಬಿಐಗೆ ಸಾಧ್ಯವಾಗುತ್ತದೆ.

ಈ ಎಲ್ಲ ಕ್ರಮಗಳ ಒಟ್ಟಾರೆ ಪರಿಣಾಮದಿಂದ, ಹಣಕಾಸು ಮಾರುಕಟ್ಟೆಯಲ್ಲಿನ ನಗದು ಹರಿವಿನ ಮಟ್ಟ ನಿಗದಿಪಡಿಸಲು ಆರ್‌ಬಿಐಗೆ ಸಾಧ್ಯವಾಗುತ್ತದೆ. ವಿವಿಧ ಸಾಲಗಳ ಬಡ್ಡಿ ದರ ಹೆಚ್ಚಿಸಲು ಅಥವಾ ಇಳಿಸಲು ನೆರವಾಗುತ್ತದೆ.

ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ

ಆರ್‌ಬಿಐ, ಇದಕ್ಕೂ ಮೊದಲು ಪ್ರತಿ ಮೂರು ತಿಂಗಳಿಗೊಮ್ಮೆ ಹಣಕಾಸು ನೀತಿ ಪರಾಮರ್ಶಿಸುತ್ತಿತ್ತು. ಆನಂತರ ಅದನ್ನು ಪ್ರತಿ ಎರಡು ತಿಂಗಳಿಗೊಮ್ಮೆ ಬದಲಾಯಿಸಲಾಗಿದೆ. ದ್ವೈಮಾಸಿಕ ಉದರಿ ನೀತಿ ಪರಾಮರ್ಶೆಯಲ್ಲಿ ಬಡ್ಡಿ ದರಗಳನ್ನು ಪರಿಷ್ಕರಿಸಲಾಗುತ್ತದೆ.

ಎಂಸಿಎಲ್‌ಆರ್‌ ಅಂದರೆ–

ಈ ಮೊದಲು, ಬ್ಯಾಂಕ್‌ಗಳು ಠೇವಣಿಗಳ ಮೇಲಿನ ಬಡ್ಡಿ ದರಗಳ ಸರಾಸರಿ ವೆಚ್ಚ ಆಧರಿಸಿ ಮೂಲ ದರ ನಿಗದಿಪಡಿಸುತ್ತಿದ್ದವು. ಈಗ ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿ (ಎಂಸಿಎಲ್‌ಆರ್‌) ಸಾಲಗಳ ಬಡ್ಡಿ ದರ ನಿಗದಿ ಮಾಡಲಾಗುತ್ತಿದೆ.ಅಂದರೆ, ಬ್ಯಾಂಕ್‌ಗಳು ಠೇವಣಿಗಳು ಮತ್ತು ಆರ್‌ಬಿಐನಿಂದ ಪಡೆಯುವ ಸಾಲಕ್ಕೆ ನೀಡುವ ಬಡ್ಡಿ ದರ ಆಧರಿಸಿ ತಮ್ಮ ಸಾಲಗಳ ಮೇಲಿನ ಬಡ್ಡಿ ದರ ನಿಗದಿ ಮಾಡುತ್ತವೆ. ಎಂಸಿಎಲ್‌ಆರ್‌– ಬ್ಯಾಂಕ್‌ಗಳ ಕನಿಷ್ಠ ಬಡ್ಡಿ ದರವಾಗಿದೆ. ಇದಕ್ಕಿಂತ ಕಡಿಮೆ ಮೊತ್ತಕ್ಕೆ ಬಡ್ಡಿದರ ನಿಗದಿ ಮಾಡಲು ಬರುವುದಿಲ್ಲ. ಎಂಸಿಎಲ್‌ಆರ್‌ ಏರಿಳಿತ ಆಧರಿಸಿ ಗೃಹ, ವಾಹನ ಖರೀದಿ ಮತ್ತಿತರ ಸಾಲಗಳ ಬಡ್ಡಿ ದರಗಳೂ ಬದಲಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT